ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಅಲ್ಪ ಮುನ್ನಡೆ

ಮೈಸೂರು: ಬೌಲರ್​ಗಳಿಗೆ ನೆರವು ನೀಡುತ್ತಿದ್ದ ಮಾನಸಗಂಗೋತ್ರಿಯ ಗ್ಲೇಡ್ಸ್ ಮೈದಾನದ ಪಿಚ್​ನಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರದ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ ಅಲ್ಪ ಮುನ್ನಡೆ ಗಳಿಸಿದೆ.

ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 70 ರನ್​ ಗಳಿಸಿದ್ದ ಕರ್ನಾಟಕ ತಂಡ 84.2 ಓವರ್​ಗಳಲ್ಲಿ 186 ಗಳಿಗೆ ಆಲೌಟಾಗುವ ಮೂಲಕ ಮೊದಲ ಇನಿಂಗ್ಸ್​ನಲ್ಲಿ 73 ರನ್​ಗಳ ಮುನ್ನಡೆ ಪಡೆಯಿತು. ಎರಡನೇ ಇನಿಂಗ್ಸ್​ ಆರಂಭಿಸಿದ ಮಹಾರಾಷ್ಟ್ರ ತಂಡ ಆರಂಭಿಕ ಆಘಾತ ಎದುರಿಸಿದ್ದು, ಎರಡನೇ ದಿನದಾಟದಂತ್ಯಕ್ಕೆ 34 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 48 ರನ್​ ಗಳಿಸಿದ್ದು, ಎರಡನೇ ಇನಿಂಗ್ಸ್​ನಲ್ಲಿ ಮುನ್ನಡೆ ಪಡೆಯಲು ಇನ್ನೂ 25 ರನ್​ಗಳ ಅವಶ್ಯಕತೆ ಇದೆ.

ಮೊದಲ ದಿನದಾಟದಂತ್ಯಕ್ಕೆ 32 ರನ್​ ಗಳಿಸಿದ್ದ ಡಿ. ನಿಶ್ಚಲ್​ 39 ರನ್​ ಗಳಿಸಿ ಔಟಾದರೆ, 2 ರನ್​ ಗಳಿಸಿದ್ದ ಜೆ. ಸುಚಿತ್​ 9 ರನ್​ ಗಳಿಸಿ ಔಟಾದರು. ಉಳಿದಂತೆ ಶ್ರೇಯಸ್​ ಗೋಪಾಲ್​ 40 ರನ್​ ಮತ್ತು ನಾಯಕ ವಿನಯ್​ ಕುಮಾರ್​ 26 ರನ್​ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಮಹಾರಾಷ್ಟ್ರದ ಪರ ಸತ್ಯಜಿತ್​ ಬಚಾವ್​ 43 ಕ್ಕೆ 3, ಸಮದ್​ ಫಲ್ಲಾ 35 ಕ್ಕೆ 2, ಅನುಪಮ್​ ಸಕ್ಲೇಚ 42 ಕ್ಕೆ 2 ವಿಕೆಟ್​ ಪಡೆದರು.

73 ರನ್​ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್​ ಆರಂಭಿಸಿದ ಮಹಾರಾಷ್ಟ್ರ ಬ್ಯಾಟ್ಸ್​ಮನ್​ಗಳು ರನ್​ ಗಳಿಸಲು ಪರದಾಡಿದರು. ರುತುರಾಜ್​ ಗಾಯಕ್​ವಾಡ್​ 9* ಮತ್ತು ಸತ್ಯಜೀತ್​ ಬಚ್​ದೇವ್​ 4* ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದಿರಿಸಿದ್ದಾರೆ. ಕರ್ನಾಟಕದ ಪರ ಶ್ರೇಯಸ್​ ಗೋಪಾಲ್​ 6 ಕ್ಕೆ 2 ಮತ್ತು ಅಭಿಮನ್ಯು ಮಿಥುನ್​ 19 ಕ್ಕೆ 1 ವಿಕೆಟ್​ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್​:

ಮಹಾರಾಷ್ಟ್ರ: ಮೊದಲ ಇನಿಂಗ್ಸ್​ 39.4 ಓವರ್​ಗಳಲ್ಲಿ 113 ಕ್ಕೆ ಆಲೌಟ್​ (ರುತುರಾಜ್ ಗಾಯಕ್ವಾಡ್ 39, ರೋಹಿತ್ ಮೋಟ್ವಾನಿ 34, ಸುಚಿತ್.ಜೆ 26 ಕ್ಕೆ 4, ರೋನಿತ್​ ಮೋರೆ 16 ಕ್ಕೆ 2)

ಕರ್ನಾಟಕ: ಮೊದಲ ಇನಿಂಗ್ಸ್​ 84.2 ಓವರ್​ಗಳಲ್ಲಿ 186 ಕ್ಕೆ ಆಲೌಟ್​ (ಶ್ರೇಯಸ್​ ಗೋಪಾಲ್​ 40, ಡಿ. ನಿಶ್ಚಲ್ 39, ಬಚಾವ್​ 43 ಕ್ಕೆ 3, ಸಮದ್​ ಫಲ್ಲಾ 35 ಕ್ಕೆ 2)

ಮಹಾರಾಷ್ಟ್ರ: ಎರಡನೇ ಇನಿಂಗ್ಸ್​ 34 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 48 (ರುತುರಾಜ್​ ಗಾಯಕ್​ವಾಡ್​ 9* ಮತ್ತು ಸತ್ಯಜೀತ್​ ಬಚ್​ದೇವ್​ 4*, ಶ್ರೇಯಸ್​ ಗೋಪಾಲ್​ 6 ಕ್ಕೆ 2, ಅಭಿಮನ್ಯು ಮಿಥುನ್​ 19 ಕ್ಕೆ 1)

ರಾಜ್ಯದ ದಾಳಿಗೆ ಮಹಾ ಕುಸಿತ