ಸಿಜೆಐ ಕೇಸ್ ಸುಪ್ರೀಂ ಗಂಭೀರ: ತನಿಖಾ ಸಂಸ್ಥೆ ಮುಖ್ಯಸ್ಥರ ಜತೆ ವಿಶೇಷ ಪೀಠದ ನ್ಯಾಯಮೂರ್ತಿಗಳ ಚರ್ಚೆ

ನವದೆಹಲಿ: ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ ಹಾಗೂ ಸುಪ್ರೀಂಕೋರ್ಟ್​ನ ಪ್ರಕ್ರಿಯೆಗಳನ್ನು ಕೆಲವರು ನಿಯಂತ್ರಣ ಮಾಡುತ್ತಿದ್ದಾರೆ ಎಂದು ವಕೀಲ ಉತ್ಸವ್ ಬೈನ್ಸ್ ಸಲ್ಲಿಸಿರುವ ಪ್ರಮಾಣಪತ್ರವನ್ನು ಸರ್ವೇಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಸಿಜೆಐ ವಿರುದ್ಧ ನಡೆದಿದೆ ಎನ್ನಲಾದ ಷಡ್ಯಂತ್ರ, ವಕೀಲ ಉತ್ಸವ್ ಆರೋಪ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐ, ಗುಪ್ತಚರ ಇಲಾಖೆ, ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಕೋರ್ಟ್ ಸೂಚನೆ ನೀಡಿದೆ. ಸಿಜೆಐ ಪ್ರಕರಣ ಕುರಿತು ರಚನೆಯಾಗಿರುವ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ತನಿಖಾ ಸಂಸ್ಥೆಗಳ ಮುಖ್ಯಸ್ಥರ ಜತೆ ಸುಮಾರು ಒಂದು ಗಂಟೆ ಗುಪ್ತ ಚರ್ಚೆ ನಡೆಸಿದ್ದಾರೆ.

ಸಿಜೆಐ ವಿರುದ್ಧ ಮಾಡಲಾಗಿರುವ ಆರೋಪ ಅತ್ಯಂತ ಗಂಭೀರವಾದದ್ದು. ಇದು ನಿಜವೇ ಆಗಿದ್ದಲ್ಲಿ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲಾಗಲಿದೆ. ಈ ಪ್ರಕರಣದ ಸಂಪೂರ್ಣ ಸತ್ಯ ಬಯಲಾಗುವ ವರೆಗೂ ವಿಚಾರಣೆ ನಡೆಸಲಾಗು ವುದು. ಇಡೀ ಪ್ರಕರಣ ಸುಪ್ರೀಂಕೋರ್ಟನ್ನು ತೀವ್ರ ವಿಚಲಿತಗೊಳಿಸಿದೆ. ಇದು ನ್ಯಾಯಾಂಗದ ಸ್ವಾತಂತ್ರ್ಯ ವನ್ನೇ ಕಳವಳದಿಂದ ನೋಡು ವಂತೆ ಮಾಡಿದೆ. ಹೀಗಾಗಿ ಆರೋಪದ ಮೂಲವನ್ನೆ ಜಾಲಾಡಬೇಕು ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ವಿಶೇಷ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಫಿಡವಿಟ್ ಸಲ್ಲಿಕೆ: ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಜೆಐ ಸಿಲುಕಿಸಲು ಯತ್ನ ನಡೆಯುತ್ತಿದೆ ಎಂದು ವಕೀಲ ಉತ್ಸವ್ ಮೂರು ದಿನಗಳ ಹಿಂದೆ ಆರೋಪ ಮಾಡಿದ್ದರು. ಬುಧವಾರ ಬೆಳಗ್ಗೆ ಸುಪ್ರೀಂಕೋರ್ಟ್​ನ ವಿಶೇಷ ಪೀಠಕ್ಕೆ ಅವರು ಮುಚ್ಚಿದ ಲಕೋಟೆಯಲ್ಲಿ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದರು. ಷಡ್ಯಂತ್ರದಲ್ಲಿ ಭೂಗತಪಾತಕಿಗಳೂ ಶಾಮೀಲಾಗಿದ್ದಾರೆ. ಸಂತ್ರಸ್ತೆ ಪರ ವಾದ ಮಂಡಿಸಲು ಅಪರಿಚಿತ ವ್ಯಕ್ತಿಯೊಬ್ಬ ಕೋಟಿಗಟ್ಟಲೆ ಹಣದ ಆಮಿಷ ಒಡ್ಡಿದ್ದ. ಇದರ ಹಿಂದೆ ಪ್ರಭಾವಿ ಉದ್ಯಮಿ ಕೈವಾಡ ಇದೆ ಎಂದು ಅಫಿಡವಿಟ್​ನಲ್ಲಿ ವಕೀಲ ಉತ್ಸವ್ ಬೈನ್ಸ್ ವಿವರಿಸಿದ್ದಾರೆ ಎನ್ನಲಾಗಿದೆ. ಆರೋಪಗಳಿಗೆ ಪೂರಕವಾಗಿ ಸಿಸಿಟಿವಿ ದೃಶ್ಯಾವಳಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಇನ್ನಷ್ಟು ಮಹತ್ವದ ಪುರಾವೆ ಇದೆ ಎಂದೂ ಬೈನ್ಸ್ ಹೇಳಿದ್ದಾರೆ. ಹೀಗಾಗಿ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿರುವ ವಿಶೇಷ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಸಾಕ್ಷ್ಯಗಳು ನಾಶವಾಗ ಬಾರದು. ಬೈನ್ಸ್​ಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ನ್ಯಾಯಪೀಠ ಪೊಲೀಸರಿಗೆ ಸೂಚಿಸಿದೆ. ಜೀವಕ್ಕೆ ಅಪಾಯವಿದೆ ಎಂದು ಅಫಿಡವಿಟ್​ನಲ್ಲಿ ಬೈನ್ಸ್ ಹೇಳಿದ್ದರು.

ಎಸ್​ಐಟಿ ತನಿಖೆಗೆ ನಕಾರ: ಸಿಜೆಐ ವಿರುದ್ಧ ಆರೋಪದ ತನಿಖೆಗೆ ನ್ಯಾಯಾಲಯದ ನಿಗಾದಲ್ಲಿ ಎಸ್​ಐಟಿ ತನಿಖೆಗೆ ಆದೇಶಿಸಬೇಕು ಎಂಬ ಮನವಿಯನ್ನು ವಿಶೇಷ ನ್ಯಾಯಪೀಠ ತಳ್ಳಿಹಾಕಿದೆ.

ಪ್ರತ್ಯೇಕ ವಿಚಾರಣೆ: ಉತ್ಸವ್ ಸಲ್ಲಿಸಿರುವ ಅಫಿಡವಿಟ್ ವಿಚಾರಣೆಗೂ ಮತ್ತು ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಕುರಿತ ತನಿಖೆಗೆ ರಚಿಸಲಾಗಿರುವ ನ್ಯಾಯ ಮೂರ್ತಿ ಎಸ್.ಎ. ಬಾಬ್ಡೆ ನೇತೃತ್ವದ ಆಂತರಿಕ ಸಮಿತಿ ಕಾರ್ಯಕ್ಕೂ ಸಂಬಂಧ ಇಲ್ಲ. ಎರಡೂ ವಿಚಾರಣೆಗಳು ಪ್ರತ್ಯೇಕವಾಗಿ ನಡೆಯಲಿದೆ ಎಂದು ವಿಶೇಷ ನ್ಯಾಯಪೀಠ ಸ್ಪಷ್ಟ ಪಡಿಸಿದೆ. ವಿಶೇಷ ನ್ಯಾಯಪೀಠದಲ್ಲಿ ನ್ಯಾ. ಅರುಣ್ ಮಿಶ್ರಾ ಜತೆಗೆ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ, ಆರ್.ಎಫ್. ನಾರಿಮನ್ ಇದ್ದಾರೆ.

ಮಾಜಿ ಸಹಾಯಕಿ ವಿರುದ್ಧ ಎಫ್​ಐಆರ್

ಸಿಜೆಐ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಸುಪ್ರೀಂಕೋರ್ಟ್​ನಿಂದ ವಜಾಗೊಂಡ ಕಿರಿಯ ಸಹಾಯಕಿ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆಪಾದನೆ ಮೇಲೆ ದೆಹಲಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಮಧ್ಯೆ, ಸುಪ್ರೀಂಕೋರ್ಟ್​ನ ಆಂತರಿಕ ಸಮಿತಿ ಸದಸ್ಯರ ಬಗ್ಗೆ ಮಾಜಿ ಕಿರಿಯ ಸಹಾಯಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾ.ರಮಣ್, ಸಿಜೆಐಗೆ ಆಪ್ತರು ಮತ್ತು ಆಂತರಿಕ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರಬೇಕು ಎಂಬ ತನ್ನದೇ ಆದೇಶವನ್ನು ಸುಪ್ರೀಂಕೋರ್ಟ್ ಪಾಲಿಸಿಲ್ಲ ಎಂದಿದ್ದಾರೆ.

ಇಂದು ನಡೆಯಲಿದೆ ಮೊದಲ ವಿಚಾರಣೆ

ಸಿಜೆಐ ವಿರುದ್ಧ ಆಪಾದನೆಯ ತನಿಖೆಗೆ ರಚಿಸಲಾಗಿರುವ ಸಮಿತಿ ಶುಕ್ರವಾರ ಮೊದಲ ವಿಚಾರಣೆ ನಡೆಸಲಿದೆ. ಈ ಸಂಬಂಧ ಆಪಾದನೆ ಮಾಡಿರುವ ಮಹಿಳೆ ಮತ್ತು ಸುಪ್ರೀಂಕೋರ್ಟ್​ನ ಮಹಾಕಾರ್ಯದರ್ಶಿ ಸಂಜೀವ್ ಕಲ್ಗಾವಂಕರ್​ಗೆ ನೋಟಿಸ್ ನೀಡಿದೆ. ನ್ಯಾಯಮೂರ್ತಿ ಬಾಬ್ಡೆ ನೇತೃತ್ವದ ಆಂತರಿಕ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ. ರಮಣ್ ಮತ್ತು ಇಂದಿರಾ ಬ್ಯಾನರ್ಜಿ ಇದ್ದಾರೆ. ಸಿಜೆಐ ವಿರುದ್ಧ ಆರೋಪ ಕುರಿತ ತನಿಖೆಗೆ ಸುಪ್ರೀಂಕೋರ್ಟ್ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಆಂತರಿಕ ಸಮಿತಿ ರಚಿಸಲಾಗಿದೆ.

ಸಿಜೆಐ ವಿರುದ್ಧ ಆರೋಪ ಮತ್ತು ಇದರ ಹಿಂದೆ ದೊಡ್ಡ ಪಿತೂರಿ ನಡೆದಿದೆ ಎಂಬ ಹೇಳಿಕೆಗಳನ್ನು ನೋಡಿದರೆ ನ್ಯಾಯಾಂಗವನ್ನೆ ದುರುಪಯೋಗ ಮಾಡಿಕೊಳ್ಳುವ ದೊಡ್ಡ ಹುನ್ನಾರ ನಡೆಯುತ್ತಿದೆ. ಇದನ್ನು ಹೀಗೆ ಬಿಟ್ಟರೆ ಸವೋಚ್ಚ ನ್ಯಾಯಾಲಯ ಮತ್ತು ಇದರ ನ್ಯಾಯಮೂರ್ತಿಗಳಿಗೆ ಉಳಿಗಾಲವಿಲ್ಲ. ಹೀಗಾಗಿ ಈ ಪ್ರಕರಣಕ್ಕೆ ರ್ತಾಕ ಅಂತ್ಯ ಕಾಣಿಸಬೇಕು

| ಸುಪ್ರೀಂಕೋರ್ಟ್​ನ ವಿಶೇಷ ನ್ಯಾಯಪೀಠ