ಶಿಸ್ತು, ಬದ್ಧತೆಯ ಪ್ರತೀಕ

| ಪ್ರದ್ಯುಮ್ನ

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು ಸಾಮಾನ್ಯ. ಆದರೆ, ರಾಜಕಾರಣಿಯೊಬ್ಬರ ಮಗ ಸುಪ್ರಸಿದ್ಧ ನ್ಯಾಯವಾದಿಯಾಗಿ, ನ್ಯಾಯಮೂರ್ತಿಯಾಗಿ ಬಳಿಕ ಈ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಯಾದ ಮುಖ್ಯ ನ್ಯಾಯಮೂರ್ತಿ ಪೀಠವನ್ನು ಅಲಂಕರಿಸುವ ಹಾದಿ ವಿಶೇಷವೂ ಹೌದು, ಪ್ರೇರಕವೂ ಹೌದು. ಅಸ್ಸಾಂನ ಮಾಜಿ ಮುಖ್ಯಮಂತ್ರಿ ಕೇಶವ ಚಂದ್ರ ಗೊಗೊಯ್ ಪುತ್ರ ರಂಜನ್ ಗೊಗೊಯ್ ಈಗ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಈಶಾನ್ಯ ರಾಜ್ಯಗಳಿಂದ ಈ ಹುದ್ದೆ ಏರಿದ ಮೊದಲಿಗ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಸುಪ್ರೀಂಕೋರ್ಟ್​ನ ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ‘ಅವರು ಪ್ರಜಾಪ್ರಭುತ್ವಕ್ಕೇ ಅಪಾಯ ಒಡ್ಡಿದ್ದಾರೆ’ ಎಂದು ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ರಂಜನ್ ಕೂಡ ಒಬ್ಬರಾಗಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಹೀಗಾಗಿ, ಸಿಜೆಐ ಹುದ್ದೆಗಾಗಿ ಇವರ ಹೆಸರನ್ನು ಮಿಶ್ರಾ ಶಿಫಾರಸು ಮಾಡುವರೇ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೆ, ತಮ್ಮ ಬಳಿಕ ಹಿರಿಯ ನ್ಯಾಯಮೂರ್ತಿಯಾದ ಗೊಗೊಯ್ ಹೆಸರನ್ನು ಮಿಶ್ರಾ ಶಿಫಾರಸು ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಬಿದ್ದವು. ಸೆ.14ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ರಂಜನ್ ಹೆಸರಿಗೆ ಅಧಿಕೃತ ಮುದ್ರೆಯೊತ್ತುವ ಮೂಲಕ ಸುಪ್ರೀಂಕೋರ್ಟ್ ಶಿಸ್ತು ಮತ್ತು ಬದ್ಧತೆಯ ಪ್ರತಿರೂಪವಾದ ಮುಖ್ಯ ನ್ಯಾಯಮೂರ್ತಿಯನ್ನು ಬರಮಾಡಿಕೊಳ್ಳಲು ಸನ್ನದ್ಧವಾಗಿದೆ.

ನೇರಮಾತು, ಸರಳ ಸ್ವಭಾವ, ದಿಟ್ಟ ನಡೆ ಇದು ರಂಜನ್ ವ್ಯಕ್ತಿತ್ವದ ವಿಶೇಷ. ನ್ಯಾಯಾಂಗ ರಂಗದಲ್ಲಿ ಮಹತ್ತರ ಸುಧಾರಣೆಗಳನ್ನು ತರುವ ತುಡಿತ ಅವರಿಗಿರುವುದರಿಂದ ಗೊಗೊಯ್ ಮುಖ್ಯ ನ್ಯಾಯಮೂರ್ತಿಯಾಗಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ. ‘ಬದಲಾಗುತ್ತಿರುವ ಸಮಾಜಕ್ಕೆ ಸ್ಪಂದಿಸುವ ರೀತಿಯಲ್ಲಿ ನ್ಯಾಯಾಂಗ ಬದಲಾಗಬೇಕಿದ್ದರೆ ಬರೀ ಸುಧಾರಣೆ ಸಾಲದು, ಕ್ರಾಂತಿಯೇ ಆಗಬೇಕು’ ಎಂದು ಈ ಹಿಂದೆ ಗೊಗೊಯ್ ಅವರೇ ಬಹಿರಂಗವಾಗಿ ಹೇಳಿಕೊಂಡಿರುವುದು ಗಮನಾರ್ಹ.

ಅಸ್ಸಾಂನ ದಿಬ್ರುಗಡನಲ್ಲಿ ಜನಿಸಿದ (1954 ನವೆಂಬರ್ 18) ರಂಜನ್ ದೆಹಲಿಯಲ್ಲಿ ವ್ಯಾಸಂಗ ಕೈಗೊಂಡರು. 1978ರಲ್ಲಿ ವಕೀಲರಾಗಿ ಗುವಾಹಟಿ ಹೈಕೋರ್ಟಿನಲ್ಲಿ ವೃತ್ತಿಜೀವನ ಆರಂಭಿಸಿದರು. 2001ರ ಫೆಬ್ರವರಿ 28ರಂದು ಗುವಾಹಟಿ ಹೈಕೋರ್ಟ್​ನಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಆದರು. 2010ರ ಸೆಪ್ಟೆಂಬರ್ 9ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗೆ ವರ್ಗಾವಣೆಗೊಂಡ ಅವರು 2011ರ ಫೆಬ್ರವರಿ 12ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 2012ರ ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆಯ್ಕೆಯಾದ ರಂಜನ್ ಇದೇ ಅಕ್ಟೋಬರ್ 3ರಂದು ಸುಪ್ರೀಂಕೋರ್ಟ್​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2019ರ ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದು, 13 ತಿಂಗಳು ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಯಾರಿಗೆ ನ್ಯಾಯಾಲಯದವರೆಗೆ ಬರಲು ಸಾಧ್ಯವಿಲ್ಲವೋ ಅಂಥವರಿಗೆ ಪಿಐಎಲ್ ಅಂದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಕ್ರಿಯೆ ಉಪಯೋಗವಾಗಲಿ ಎಂಬ ಆಶಯ ಉತ್ತಮವಾದದ್ದೇ. ಆದರೆ, ಕೆಲವರು ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲು ಹೊರಟಾಗ ಗೊಗೊಯ್ ಅಂಥವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ದಂಡಾಸ್ತ್ರವನ್ನು ಪ್ರಯೋಗಿಸಿದರು. ‘ಸಿಸೇರಿಯನ್ ಹೆರಿಗೆ ಮಾಡಿಸುವುದಕ್ಕೆ ಮಾರ್ಗದರ್ಶಿಸೂತ್ರ ರೂಪಿಸಬೇಕು’ ಎಂದು ಕೋರಿ ಇತ್ತೀಚೆಗೆ ಪಿಐಎಲ್ ಸಲ್ಲಿಸಿದ್ದವರಿಗೆ ಗೊಗೊಯ್ ನೇತೃತ್ವದ ಪೀಠವು 25 ಸಾವಿರ ರೂ. ದಂಡ ವಿಧಿಸಿತು. ಸಿವಿಸಿ ಆಯುಕ್ತರಾಗಿ ಶರದ್ ಕುಮಾರ್ ನೇಮಕ ಪ್ರಶ್ನಿಸಿದ್ದ ಪಿಐಎಲ್ ಸೇರಿ ಎರಡು ಪಿಐಎಲ್​ಗಳನ್ನು ಅವರ ಪೀಠವು ಇತ್ತೀಚೆಗಷ್ಟೇ ವಜಾಮಾಡಿತು. ಅಲ್ಲದೆ, ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್​ಆರ್​ಸಿ), ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆ, ರಾಜೀವ್ ಗಾಂಧಿ ಹಂತಕರ ಶಿಕ್ಷೆ ಇಳಿಕೆ, ಲೋಕಪಾಲ ನೇಮಕದಂಥ ಮಹತ್ವದ ವಿಚಾರಗಳಲ್ಲಿ ರಂಜನ್ ತೀರ್ಪು ನೀಡಿದ್ದಾರೆ. ಜೆಎನ್​ಯುು ವಿದ್ಯಾರ್ಥಿ ಕನ್ಹಯ್ಯಾ ಕುಮಾರ್ ಮೇಲೆ 2016ರ ಫೆಬ್ರವರಿಯಲ್ಲಿ ನಡೆದ ಹಲ್ಲೆ ಪ್ರಕರಣದ ತನಿಖೆಗೆ ಎಸ್​ಐಟಿ (ವಿಶೇಷ ತನಿಖಾ ತಂಡ) ನೇಮಿಸಬೇಕು ಎಂದು ವಕೀಲೆ ಕಾಮಿನಿ ಜೈಸ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ಗೊಗೊಯ್ ಪೀಠ 2018ರ ಜ.24ರಂದು ವಜಾಗೊಳಿಸಿತು.

ಹೀಗೆ ಹಲವು ಮಹತ್ವಪೂರ್ಣ ತೀರ್ಪಗಳನ್ನು ನೀಡಿರುವ ಗೊಗೊಯ್ ಮಿತಭಾಷಿಯಾಗಿದ್ದರೂ ಅವಶ್ಯವಿದ್ದಾಗ ಮಾತಾಡಲು ಹಿಂಜರಿಯುವುದಿಲ್ಲ. ‘ಪಕ್ಷಪಾತವಿಲ್ಲದ ನ್ಯಾಯಮೂರ್ತಿಗಳು ಮತ್ತು ಸದಾ ಸದ್ದುಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಮೊದಲ ಹಂತದ ರಕ್ಷಕರು’ ಎಂಬುದು ಅವರ ಸ್ಪಷ್ಟ ನಿಲುವು.

ನ್ಯಾಯಾಂಗ ಸುಧಾರಣೆಯ ಹಾದಿಯಲ್ಲಿ ರಂಜನ್ ಅವರ ಮುಂದೆ ಗಂಭೀರ ಸವಾಲುಗಳೂ ಇವೆ. ‘ವಿವಿಧ ಪೀಠಗಳಿಗೆ ಪ್ರಕರಣಗಳ ಹಂಚಿಕೆಯನ್ನು ಮುಖ್ಯ ನ್ಯಾಯಮೂರ್ತಿಯವರು ತಮ್ಮಿಷ್ಟದಂತೆ ಮಾಡಬಾರದು. ಅದಕ್ಕಾಗಿ ಒಂದು ವ್ಯವಸ್ಥೆ ಇರಬೇಕು’ ಎಂದು ಮಿಶ್ರಾ ವಿರುದ್ಧ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗೊಗೊಯ್ ಸೇರಿ ನಾಲ್ವರು ನ್ಯಾಯಮೂರ್ತಿಗಳು ಹೇಳಿದ್ದರು. ಈಗ ಅಂಥದ್ದೊಂದು ವ್ಯವಸ್ಥೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ಇವರು ರೂಪಿಸಬಲ್ಲರೆ ಎಂಬ ಕುತೂಹಲವೂ ನೆಲೆಸಿದೆ. ಅಲ್ಲದೆ, ವಿವಿಧ ನ್ಯಾಯಾಲಯಗಳಲ್ಲಿ 3.3 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಇದ್ದು, ಇವುಗಳ ವಿಲೇವಾರಿ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಅದೆಷ್ಟೋ ಪ್ರಕರಣಗಳಂತೂ 10 ವರ್ಷಗಳಿಗಿಂತ ಹಳೆಯವು. ಅಲ್ಲದೆ, ಕ್ಷಿಪ್ರ ನ್ಯಾಯದಾನಕ್ಕೆ ತಂತ್ರಜ್ಞಾನದ ಅಳವಡಿಕೆ, ನ್ಯಾಯಾಲಯಗಳ ಸ್ಥಾಪನೆ, ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ನೇಮಕ ಸೇರಿದಂತೆ ಹಲವು ಸವಾಲುಗಳಿವೆ. ಅಲ್ಲದೆ, ನ್ಯಾಷನಲ್ ಹೆರಾಲ್ಡ್ ಪ್ರಕರಣ ಸೇರಿದಂತೆ ದೇಶದ ಗಮನ ಸೆಳೆದಿರುವ ಮಹತ್ವದ ಪ್ರಕರಣಗಳು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಯ ಹಾದಿಯಲ್ಲಿವೆ.

ಪ್ರಕರಣಗಳ ಹೊರೆ, ಸುಧಾರಣೆಗಳ ಆಶಯ, ಹೊಸದನ್ನು ತರುವ ತುಡಿತ ಈ ಎಲ್ಲವೂ ಮಿಳಿತಗೊಂಡಿರುವ ಈಗಿನ ಸನ್ನಿವೇಶದಲ್ಲಿ ಗೊಗೊಯ್ ಮುಖ್ಯ ನ್ಯಾಯಮೂರ್ತಿಯಾಗುತ್ತಿದ್ದು, ಇವರ ಅವಧಿಯಲ್ಲಿ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಂಡು, ಭರವಸೆಯ ಕಿರಣಗಳನ್ನು ಮೂಡಿಸಲಿ ಎಂಬುದೇ ಆಶಯ.