ಬಸವನಹಳ್ಳಿ ಕೆರೆಗೆ ಮತ್ತೆ ಅನುದಾನ

ಚಿಕ್ಕಮಗಳೂರು: ಹಲವು ಕೋಟಿ ರೂ. ವ್ಯಯ ಮಾಡಿದರೂ ಕೊಚ್ಚೆ ಗುಂಡಿಯಂತಿರುವ ಬಸವನಹಳ್ಳಿ ಕೆರೆಗೆ ಅಭಿವೃದ್ಧಿ ನೆಪದಲ್ಲಿ ಮತ್ತೆಮತ್ತೆ ಹಣ ಸುರಿಯುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟುಹಾಕಿದೆ.

ಸಣ್ಣ ನೀರಾವರಿ ಇಲಾಖೆಯ ಅನುಮತಿ ಪಡೆಯದೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತಿತರ ಇಲಾಖೆಗಳಿಂದ ಹೂಳು ತೆಗೆಯುವುದು, ಸ್ವಚ್ಛ ಮಾಡುವುದು, ಬಂಡ್ ನಿರ್ವಣ, ನಡುಗಡ್ಡೆ ನಿರ್ಮಾಣ ಮತ್ತಿತರೆ ಕಾರ್ಯಗಳಿಗೆ ಹಣ ವಿನಿಯೋಗ ಆಗುತ್ತಲೇ ಇದೆ.

ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ಹಂಚಿಕೆ ಮಾಡಿ ಮಾಲೀಕರಿಂದ ಸಂಗ್ರಹಿಸಿದ 36 ಲಕ್ಷ ರೂ. ಅಭಿವೃದ್ಧಿ ಶುಲ್ಕವನ್ನು ಕೆರೆಯ ನಡುಗಡ್ಡ್ಡೆಯಲ್ಲಿ ಬಯಲು ರಂಗಮಂಟಪ ನಿರ್ವಿುಸಲು ಮುಂದಾಗಿದೆ. ಕೆರೆ ಸ್ವಚ್ಛಗೊಳಿಸುವ ಮೊದಲು ಬಯಲು ರಂಗ ಮಂಟಪಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಅಗತ್ಯವೇನು? ಎಂಬ ಪ್ರಶ್ನೆ ಜನರಿಂದ ಕೇಳಿಬರುತ್ತಿದೆ.

ಕೆರೆಯ ಮಧ್ಯೆ ಎರಡು ವರ್ಷದ ಹಿಂದೆ ನಿರ್ವಿುಸಿದ ನಡುಗಡ್ಡೆ ಹಾಗೂ ನಿರ್ಮಾಣ ಹಂತದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆ ಇದೆ. ವಿವೇಕಾನಂದ ಪ್ರತಿಮೆ ಕುರೂಪವಾಗಿದೆ ಎಂದು ನಾಗರಿಕರು ಆಕ್ಷೇಪಿಸಿದ್ದರಿಂದ ಈಗ ಮತ್ತೊಮ್ಮೆ ರೂಪಿಸಲಾಗುತ್ತಿದೆ. ಪ್ರತಿಮೆ ಸುತ್ತ ಇರುವ ಜಾಗದಲ್ಲಿ ಬಯಲು ರಂಗ ಮಂಟಪ ಹಾಗೂ ಸುತ್ತಲು ನೆಲ ಹಾಸು ನಿರ್ಮಾಣ ಮಾಡಲು ನಗರಾಭಿವೃಧಿ್ಧ ಪ್ರಾಧಿಕಾರ 36 ಲಕ್ಷ ರೂ. ವೆಚ್ಚ ಮಾಡುತ್ತಿದೆ.

ನಿರ್ವಿುತಿ ಕೇಂದ್ರ ಕಾಮಗಾರಿಯ ಹೊಣೆ ಹೊತ್ತಿದೆ. ನಾಲ್ಕು ತಿಂಗಳಿಂದ ಕೆಲಸ ನಡೆಯುತ್ತಿದ್ದರೂ ರಂಗ ಮಂಟಪಕ್ಕೆ ಸ್ಪಷ್ಟ ರೂಪ ಬಂದಿಲ್ಲ. ಮಳೆಗಾಲದ ನೆಪ ಹೇಳಿಕೊಂಡು ನಿರ್ವಿುತಿ ಕೇಂದ್ರದ ಇಂಜಿನಿಯರ್​ಗಳು ಕಾಮಗಾರಿ ನಿಲ್ಲಿಸಿದ್ದಾರೆ.

ನಡುಗಡ್ಡೆಯಲ್ಲಿ ನಿರ್ವಿುಸುತ್ತಿರುವ ಬಯಲು ಮಂಟಪ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಆದರೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರು ಈ ಕೆರೆಗೆ ಸೇರುತ್ತದೆ. ಹೀಗಿದ್ದಾಗ ಯಾರೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಾರೆ? ಪ್ರೇಕ್ಷಕರು ದುರ್ನಾತ ಸಹಿಸಿಕೊಂಡು ಕೂರಲು ಸಾಧ್ಯವೇ? ಇದು ಜನರಿಗಾಗಿ ಮಾಡುವ ಯೋಜನೆಯೇ? ಅಥವಾ ಹಣ ಖರ್ಚು ಮಾಡಲು ಒಂದು ದಾರಿಯೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಕೆರೆಯನ್ನು ಅಭಿವೃದ್ಧಿ ಮಾಡುವ ಉದ್ದೇಶವಿದ್ದರೆ ಮೊದಲು ಕೆರೆಗೆ ಸೇರುತ್ತಿರುವ ಒಳಚರಂಡಿ ನೀರನ್ನು ನಿಲ್ಲಿಸಬೇಕು. ಕೆರೆಯ ಕೊಳಚೆ ನೀರಲ್ಲಿ ಬೆಳೆದಿರುವ ಗಿಡಗಂಟಿ, ಜೊಂಡು ಹುಲ್ಲು ತೆರವುಗೊಳಿಸಬೇಕು. ಕೆರೆ ನೀರು ಶುದ್ಧವಾದ ನಂತರವೇ ನಡುಗಡ್ಡೆ ಶೃಂಗಾರ ಮಾಡಬಹುದು.

ನಡುಗಡ್ಡೆಯಲ್ಲಿ ಬಯಲು ರಂಗ ಮಂಟಪ ಮಾಡುವುದು ಹಣ ಅಪವ್ಯಯವೇ ಸರಿ. ಇದಕ್ಕೂ ಮೊದಲು ಹಾಳಾಗಿರುವ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಸರಿಪಡಿಸಲು ಅನುದಾನ ಖರ್ಚು ಮಾಡಲಿ. ಕೊಚ್ಚೆಯಂತಿರುವ ಕೆರೆಯಲ್ಲಿ ಬಯಲು ಮಂಟಪ ಮಾಡಿದರೆ ಜನರಿಗೆ ನಯಾ ಪೈಸೆ ಉಪಯೋಗ ಇಲ್ಲ.

| ಹಿರೇಮಗಳೂರು ಪುಟ್ಟಸ್ವಾಮಿ, ನಗರಸಭೆ ಸದಸ್ಯ