ಸಿನಿಮಾ

ಮತದಾರರ ಸಹಾಯ, ಸಹಕಾರ ವ್ಯರ್ಥವಾಗಲು ಬಿಡಲ್ಲ: ಸಂತೋಷಕುಮಾರ ಪಾಟೀಲ

ರಾಣೆಬೆನ್ನೂರ: ವಿಧಾನಸಭೆ ಚುನಾವಣೆಯಲ್ಲಿನ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುವೆ. ರಾಣೆಬೆನ್ನೂರ ಕ್ಷೇತ್ರದ ಜನತೆ ನನ್ನ ಮೇಲೆ ಅನಂತ ಪ್ರೀತಿ ಮತ್ತು ಅಭಿಮಾನವಿಟ್ಟಿದ್ದಾರೆ. ಚುನಾವಣೆಯಲ್ಲಿ ನೀವು ತೋರಿಸಿದ ಸಹಾಯ, ಸಹಕಾರ ಮತ್ತು ಅಭಿಮಾನ ವ್ಯರ್ಥವಾಗಲು ಬಿಡುವುದಿಲ್ಲ, ಮುಂದೆ ಶಾಸಕನಾಗಿ ನಿಮ್ಮ ಸೇವೆ ಮಾಡುವ ಮೂಲಕ ಋಣ ತೀರಿಸುವೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಸಂತೋಷಕುಮಾರ ಪಾಟೀಲ ಹೇಳಿದರು.
ಇಲ್ಲಿನ ಬೀರೇಶ್ವರ ನಗರದ ನವಯುಗ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಇಂದಿನ ಸೋಲು ಮುಂದಿನ ಚುನಾವಣೆಯ ಗೆಲುವಿನ ಮೆಟ್ಟಿಲನ್ನಾಗಿ ತೆಗೆದುಕೊಳ್ಳುವೆ. ಈ ಚುನಾವಣೆಯಲ್ಲಿ ಬಹಳಷ್ಟು ಕಲಿತೆ, ರೈತರ ಅನುಕೂಲತೆಗೆ ನವಯುಗ ಕಟ್ಟಿದ್ದೇವೆ. ಚುನಾವಣೆಯಲ್ಲಿ ಪ್ರತಿಯೊಬ್ಬರೂ ಹಗಲು ರಾತ್ರಿ ಎನ್ನದೆ ಚುನಾವಣೆ ಮುಗಿಯುವವರೆಗೂ, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಮ್ಮ ಪರವಾಗಿ ದುಡಿದಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ರಾಷ್ಟ್ರೀಯ ಪಕ್ಷಗಳು ಬಿ-ಫಾರ್ಮ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಕೊನೆ ಕ್ಷಣದಲ್ಲಿ ಕೈಚಲ್ಲಿದ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸಲು ಕಡಿಮೆ ಅವಧಿ ದೊರೆಯಿತು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇದ್ದು, ಖಂಡಿತವಾಗಿಯೂ ಮುಂದೆ ಅಧಿಕಾರಕ್ಕೆ ಬರುವೆ. ನಗವಯುಗ ಸಂಘಟನೆ ಮೂಲಕ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡುತ್ತೇನೆ. ನಮ್ಮ ತಂಡ ನವಯುಗದ ಪ್ರಣಾಳಿಕೆ ಮನೆ ಮನೆಗೂ ತೆರಳಿ ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಆದರೆ, ಚುನಾವಣೆಗೆ ಇನ್ನಷ್ಟು ಜನರನ್ನು ಸೇರಿಸುವ ಕೆಲಸವಾಗಬೇಕಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಮುಂದೆ ಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ನವಯುಗದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಶೋಣ ಎಂದರು.

Latest Posts

ಲೈಫ್‌ಸ್ಟೈಲ್