More

    ಕೃಷಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ; ಶಾಸಕ ಪ್ರಕಾಶ ಕೋಳಿವಾಡ ಸೂಚನೆ

    ರಾಣೆಬೆನ್ನೂರ: ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ವಿತರಣೆ ಮಾಡಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ಗೊಬ್ಬರ ದಾಸ್ತಾನು ಮಾಡಬೇಕು. ಒಂದು ವೇಳೆ ಸರ್ಕಾರದಿಂದ ಗುತ್ತಿಗೆ ಪಡೆದವರು ರೈತ ಸಂಪರ್ಕ ಕೇಂದ್ರಗಳಿಗೆ ಬೀಜ, ಗೊಬ್ಬರ ಪೂರೈಕೆ ಮಾಡುವಲ್ಲಿ ವಿಳಂಬ ಮಾಡಿದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
    ನಗರದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ತಾಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕಳೆದ ಬಾರಿ ಬೀಜ, ಗೊಬ್ಬರ ಕೊರತೆಯಿಂದ ರೈತರು ಸಂಕಷ್ಟ ಎದುರಿಸುವ ಸ್ಥಿತಿ ಎದುರಾಗಿತ್ತು. ಆದ್ದರಿಂದ ಈ ಬಾರಿ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ರೈತರು ಕೃಷಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸಿದರೆ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಸೌಲಭ್ಯಗಳನ್ನು ನೀಡಬೇಕು. ಸರಿಯಾದ ಸಮಯಕ್ಕೆ ಬೀಜ ಹಾಗೂ ಗೊಬ್ಬರ ಹಾಕದೆ ಹೋದರೆ ರೈತರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಳುವರಿ ಕುಂಠಿತವಾಗಿ ರೈತರಿಗೆ ನಷ್ಟವಾಗುತ್ತದೆ ಎಂದರು.
    ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಮಾತನಾಡಿ, ಕಳೆದ ಬಾರಿ ರಸಗೊಬ್ಬರ ಪೂರೈಕೆ ಮಾಡಲು ಟೆಂಡರ್ ಪಡೆದವರು ವಿಳಂಬ ಮಾಡಿದ್ದರಿಂದ ಕೇಂದ್ರ ಸರ್ಕಾರದ ಸಬ್ಸಡಿ ಹಣವನ್ನು ಅವರಿಗೆ ಕಡಿತ ಮಾಡಿದೆ. ಈ ಬಾರಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
    ಹಲಗೇರಿ ರಸ್ತೆ ಸರಿಪಡಿಸಿ…
    ಲೋಕೋಪಯೋಗಿ ಇಲಾಖೆಯಿಂದ ಹಲಗೇರಿ ಕ್ರಾಸ್‌ನಿಂದ ಹೆದ್ದಾರಿಯವರೆಗೆ ಚತುಷ್ಪದ ರಸ್ತೆ ನಿರ್ಮಿಸಲಾಗಿದೆ. 10 ಕೋಟಿ ರೂ. ಖರ್ಚು ಮಾಡಿ ರಸ್ತೆ ನಿರ್ಮಿಸಿದ್ದರೂ ರಸ್ತೆಯ ಮಧ್ಯೆದ 9 ಕಡೆ ಮ್ಯಾನಹೋಲ್‌ಗಳು ಕೆಳಗೆ, ಮೇಲೆ ಆಗಿವೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಕೂಡಲೇ ಗುತ್ತಿಗೆದಾರು ಹಾಗೂ ನಗರಸಭೆ ಅಧಿಕಾರಿಗಳು ಸೇರಿಕೊಂಡು ಮ್ಯಾನಹೋಲ್‌ಗಳನ್ನು ಕೂಡಲೇ ಮುಚ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಕಾಶ ಕೋಳಿವಾಡ, ಲೋಕೋಪಯೋಗಿ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
    ಅಡಕೆ ಬೆಳೆಯದಂತೆ ಜಾಗೃತಿ ಮೂಡಿಸಿ…
    ತಾಲೂಕಿನಲ್ಲಿ ಅಡಕೆ ಬೆಳೆ ಕ್ಷೇತ್ರದ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಶಾಸಕ ಪ್ರಕಾಶ ಕೋಳಿವಾಡ, ನಾನು ಕೂಡ ಅಡಕೆ ಬೆಳೆದಿದ್ದೇನೆ. ಆದರೆ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಳುವರಿ ಬಂದಂತೆ ಇಲ್ಲಿ ಬರಲಿಲ್ಲ. ನಮ್ಮದು ಬಯಲುಸೀಮೆ ಇಲ್ಲಿ ಅಡಕೆ ಬೆಳೆದರೆ ಅದು ಅವೈಜ್ಞಾನಿಕವಾಗಲಿದೆ. ಆದ್ದರಿಂದ ಅಧಿಕಾರಿಗಳು ಅಡಕೆ ಬೆಳೆಯುತ್ತಿರುವ ರೈತರಿಗೆ ಮನವೊರಿಕೆ ಮಾಡಿ ಬೇರೆ ಬೇರೆ ತೋಟಗಾರಿಕೆ ಬೆಳೆಯಲು ಅರಿವು ಮೂಡಿಸಬೇಕು. ಇಲ್ಲವಾದರೆ ಮುಂದೊಂದು ದಿನ ಅಡಕೆ ಬೆಳೆದ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನೂರಅಹ್ಮದ್, ರೈತರು ಕೂಲಿ ಕಾರ್ಮಿಕರ ಕೊರತೆ ನೆಪ ಹೇಳಿ ಅಡಕೆ ಬೆಳೆಯುತ್ತಿದ್ದಾರೆ. ನಾವು ಅಡಿಕೆ ಬದಲು ತಾಳೆ ಸೇರಿ ಇತರ ಬೆಳೆ ಬೆಳೆಯಲು ಮನವಿ ಮಾಡುತ್ತಿದ್ದೇವೆ. ರೈತರು ಮಾತ್ರ ಕೇಳುತ್ತಿಲ್ಲ. ಈಗಾಗಲೇ 8 ಸಾವಿರ ಹೆಕ್ಟೇರ್ ಅಡಕೆ ಬೆಳೆದಿದ್ದಾರೆ. ರಾಣೆಬೆನ್ನೂರ ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಯಾದರೆ, ಅಡಿಕೆ ಕ್ಷೇತ್ರ ಮತ್ತಷ್ಟು ಹೆಚ್ಚಳವಾಗಲಿದೆ ಎಂದರು.
    ಸೈಟು ಖರೀದಿಸುವವರಿಗೆ ಮೋಸ ಬೇಡ…
    ನಗರದಲ್ಲಿ ಡೆವಲಪರ್‌ಗಳು ಲೇಔಟ್‌ಗಳಿಗೆ ಪೂರ್ಣ ಸೌಲಭ್ಯ ನೀಡುವ ಮುನ್ನವೇ ಹಾಗೂ ನಗರ ಯೋಜನಾ ಪ್ರಾಧಿಕಾರದಿಂದ ಪರವಾನಗಿ ಪಡೆಯುವ ಮುನ್ನವೆ ಸೈಟು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಜನತೆ ಎಷ್ಟೋ ವರ್ಷಗಳ ಕಾಲ ಕೂಡಿಟ್ಟ ಹಣದಿಂದ ಸೈಟು ಖರೀದಿ ಮಾಡುತ್ತಿರುತ್ತಾರೆ. ಆದರೆ, ಅವರಿಗೆ ಡೆವಲಪರ್‌ಗಳು ಇಂಥ ಸೈಟುಗಳನ್ನು ಮಾರಾಟ ಮಾಡಿ ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಇಲ್ಲಂಘಿಸಿ ಸೈಟು ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ ಕೋಳಿವಾಡ, ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
    ತಹಸೀಲ್ದಾರ್ ಗುರುಬಸವರಾಜ, ತಾಪಂ ಇಒ ಸುಮಲತಾ ಎಸ್.ಟಿ., ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಬಿಇಒ ಎಂ.ಎಚ್. ಪಾಟೀಲ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts