ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ಕೃಷ್ಣಮೃಗ (ಕರಿಜಿಂಕೆ)ಗಳನ್ನು ಹೊಂದಿರುವ ರಾಣೆಬೆನ್ನೂರ ಕೃಷ್ಣಮೃಗ ಅಭಯಾರಣ್ಯ ನೋಡಲು ಪ್ರವಾಸಿಗರ ಅನುಕೂಲಕ್ಕಾಗಿ ಅರಣ್ಯ ಇಲಾಖೆಯಿಂದ ಜಂಗಲ್ ಸಫಾರಿ ಆರಂಭಿಸಲಾಗಿದೆ.
ಅರಣ್ಯ ಇಲಾಖೆಯಿಂದ 14 ಲಕ್ಷ ರೂ. ವೆಚ್ಚದಲ್ಲಿ ಜಂಗಲ್ ಸಫಾರಿ ವಾಹನ ಸಿದ್ಧಪಡಿಸಲಾಗಿದೆ. ನಿತ್ಯವೂ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ಹಾಗೂ ಸಂಜೆ 4ರಿಂದ 6.30ರವರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನ ಪ್ರವಾಸಿಗರನ್ನು ಜಂಗಲ್ ಒಳಗೆ ಕರೆದುಕೊಂಡು ಹೋಗಿ ಸುತ್ತಾಡಿಸಲಿದೆ.
ಅಭಯಾರಣ್ಯದಲ್ಲಿ ಸಫಾರಿ ಕೈಗೊಳ್ಳುವ ಪ್ರೇಕ್ಷಕರು ಕೃಷ್ಣಮೃಗ, ಜಿಂಕೆ, ಮೊಲ, ನವಿಲು, ಮುಳ್ಳುಹಂದಿ, ಕಾಡುಹಂದಿ, ಮುಂಗುಸಿಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಅಲ್ಲದೆ ಆಗಾಗ ಚಿರತೆಗಳು ಕಾಣಸಿಗುತ್ತಿದ್ದು, ಸಫಾರಿ ಸಮಯದಲ್ಲಿ ಚಿರತೆಗಳ ದರ್ಶನವೂ ಆಗಬಹುದು. ಇದರಿಂದ ರಾಣೆಬೆನ್ನೂರ ಸೇರಿ ಜಿಲ್ಲೆಯ ಜನರಿಗೆ ಅಭಯಾರಣ್ಯ ಮಹತ್ವದ ಪ್ರವಾಸಿ ತಾಣವಾಗಲಿದೆ.
1974ರಲ್ಲಿಯೆ ಘೋಷಣೆಯಾಗಿದ್ದ ಅರಣ್ಯ…
ಕೃಷ್ಣಮೃಗಳ ಸಂರಕ್ಷಣೆ ದೃಷ್ಟಿಯಿಂದ 1974ರಲ್ಲಿಯೆ ಇದನ್ನು ಕೃಷ್ಣಮೃಗಗಳ ಅರಭಯಾರಣ್ಯವೆಂದು ಸರ್ಕಾರ ಘೋಷಿಸಿದೆ. ಅಭಯಾರಣ್ಯವು 114 ಚದುರ ಕಿ.ಮೀ. ವ್ಯಾಪ್ತಿ ಹೊಂದಿದ್ದು, ಕೆಲವಡೆ ಕೋರ್ ಮತ್ತೊಂದೆಡೆ ಬಫರ್ಕಮ್ ಪ್ರವಾಸೋದ್ಯಮ ವಲಯ ಹೊಂದಿದೆ. ಸುಮಾರು 6 ಸಾವಿರದಷ್ಟು ಕೃಷ್ಣಮೃಗಳನ್ನು ಇಲ್ಲಿ ಕಾಣಬಹುದಾಗಿದೆ. ಇವುಗಳ ಜತೆಗೆ ಕಾಡು ಪ್ರಾಣಿಗಳಿಗೆ ಇದು ನೆಲೆಯಾಗಿದ್ದು ಮಕ್ಕಳ ಸಮೇತ ಒಂದು ದಿನದ ಪ್ರವಾಸ ಕೈಗೊಳ್ಳುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ.
ಪಕ್ಷಿಗಳ ವೀಕ್ಷಣೆಗೂ ಸೂಕ್ತ ಸ್ಥಳ…
ಅಭಯಾರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ, ಬ್ಲಾಕ್ ಡ್ರೊಂಗೊ, ಸರ್ಕೀರ್ ಕೊಗಿಲೆ, ಪೀಫಲ್, ದೊಡ್ಡ ಬೂದು ಬಬ್ಲರ್ ಪಕ್ಷಿಗಳಿದ್ದು ಪ್ರವಾಸಿಗರು ಎಲ್ಲ ರೀತಿಯ ಪಕ್ಷಿಗಳನ್ನು ನೋಡಬಹುದು.
ಹಿಂದೆಯೂ ಇತ್ತು ಸಫಾರಿ…
ಅಭಯಾರಣ್ಯದಲ್ಲಿ ಈ ಹಿಂದೆ ಜಂಗಲ್ ಸಫಾರಿಗೆ ಅವಕಾಶವಿತ್ತು. ಆದರೆ, ಅರಣ್ಯ ಇಲಾಖೆಯಿಂದ ವಾಹನದ ವ್ಯವಸ್ಥೆ ಇರಲಿಲ್ಲ. ಬದಲಾಗಿ ಖಾಸಗಿ ವಾಹನಗಳನ್ನು ಬಿಡಲಾಗುತ್ತಿತ್ತು. ಅದಕ್ಕಾಗಿ ವಾಹನಕ್ಕೆ 100 ರೂ. ಹಾಗೂ ಪ್ರತಿಯೊಬ್ಬ ಪ್ರವಾಸಿಗರಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿತ್ತು. ಆದರೀಗ ಇಲಾಖೆಯಿಂದಲೇ ಸಫಾರಿ ವಾಹನದ ವ್ಯವಸ್ಥೆ ಮಾಡಲಾಗಿದೆ.
ದರ ನಿಗದಿಗೆ ಪ್ರಸ್ತಾವನೆ ಸಲ್ಲಿಕೆ…
ಈ ಹಿಂದೆ ಖಾಸಗಿ ವಾಹನ ಬಳಕೆಗೆ ದರ ನಿಗದಿಪಡಿಸಲಾಗಿತ್ತು. ಆದರೀಗ ಇಲಾಖೆಯ ಸಫಾರಿ ವಾಹನ ಸಿದ್ಧಪಡಿಸಿದ್ದರಿಂದ ಇನ್ನೂ ಬೆಲೆ ನಿಗದಿಪಡಿಸಿಲ್ಲ. ಜಂಗಲ್ನಲ್ಲಿ 4 ಕಿ.ಮೀ.ನಷ್ಟು ಸಫಾರಿ ದಾರಿಯಿದೆ. ಆದ್ದರಿಂದ ಒಂದು ರೌಂಡ್ಗೆ ಪ್ರಯಾಣಿಕರಿಗೆ ಎಷ್ಟು ದರ ನಿಗದಿಪಡಿಸಬೇಕು ಎಂಬ ಬಗ್ಗೆ ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ 15 ದಿನದೊಳಗೆ ದರ ನಿಗದಿಯಾಗಲಿದ್ದು, ಆನಂತರ ಸಫಾರಿ ಆರಂಭಗೊಳ್ಳಲಿದೆ.
ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಫಾರಿ ವಾಹನ ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಪ್ರವಾಸಿಗರ ದರ ನಿಗದಿಯಾದ ಕೂಡಲೇ ಸಫಾರಿ ಆರಂಭಿಸಲಾಗುವುದು. ಇದೊಂದು ಪ್ರವಾಸಿಗರಿಗೆ ಹೊಸ ಅನುಭವ ನೀಡುವ ತಾಣವಾಗಲಿದೆ.
| ಲಿಂಗರೆಡ್ಡಿ ಮಂಕನಿ, ಆರ್ಎಫ್ಒ, ವನ್ಯಜೀವಿ ವಿಭಾಗ, ರಾಣೆಬೆನ್ನೂರ