More

    ಮಲೆನಾಡಿನಲ್ಲಿ ರಣಜಿ ಕದನ: ಇಂದಿನಿಂದ ಕರ್ನಾಟಕಕ್ಕೆ ಮಧ್ಯಪ್ರದೇಶ ಸವಾಲು | 4ನೇ ಜಯದ ತವಕ

    ಶಿವಮೊಗ್ಗ: ಅಂತಿಮ ಎಂಟರ ಘಟ್ಟದ ಸನಿಹದಲ್ಲಿರುವ ಆತಿಥೇಯ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ 8ನೇ ಸುತ್ತಿನ ಪಂದ್ಯಕ್ಕೆ ಸಜ್ಜಾಗಿದೆ. ನವುಲೆಯ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಪ್ರವಾಸಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.

    ಟೂರ್ನಿಯಲ್ಲಿ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ತಲಾ 3 ಗೆಲುವು, ಡ್ರಾ ಸಾಧಿಸಿರುವ ಕರ್ನಾಟಕ ತಂಡ ಎ ಮತ್ತು ಬಿ ಜಂಟಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕನಿಷ್ಠ ಗೆಲುವು ದಾಖಲಿಸಿದರೂ, ಅಂತಿಮ ಪಂದ್ಯಕ್ಕೆ ಮುನ್ನವೇ ಕ್ವಾರ್ಟರ್​ಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಇದುವರೆಗೆ ಗೆಲುವು ದಾಖಲಿಸಲು ವಿಫಲವಾಗಿರುವ ಮಧ್ಯ ಪ್ರದೇಶ ವಿರುದ್ಧ ಮೇಲ್ನೋಟಕ್ಕೆ ಕರ್ನಾಟಕವೇ ಫೇವರಿಟ್ ಆಗಿದೆ.

    ಕೋಚ್ ಯರೇಗೌಡ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡದ ಆಟಗಾರರು ಸೋಮವಾರ ನೆಟ್ಸ್​ನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಹಿಂದಿನ ಪಂದ್ಯದಲ್ಲಿ ರೈಲ್ವೇಸ್ ಎದುರು ಬೋನಸ್ ಸಹಿತ ಗೆಲುವು ಸಾಧಿಸಿರುವ ಕರ್ನಾಟಕ ತಂಡದ ಆಟಗಾರರು 4ನೇ ಗೆಲುವು ದಾಖಲಿಸುವ ತವಕದಲ್ಲಿದ್ದಾರೆ. ಕರ್ನಾಟಕ ತಂಡ ಟೂರ್ನಿಯ 6 ಪಂದ್ಯಗಳಲ್ಲಿ ಒಂದೂ ಶತಕ ಕಂಡಿಲ್ಲ. ಮೈಸೂರಿನಲ್ಲಿ ಹಿ. ಪ್ರದೇಶ ವಿರುದ್ಧ ದೇವದತ್ ಪಡಿಕಲ್ 99 ರನ್ ಗಳಿಸಿರುವುದೇ ಗರಿಷ್ಠವೆನಿಸಿದೆ.

    ಮಧ್ಯಪ್ರದೇಶ ತಂಡ ಟೂರ್ನಿಯಲ್ಲಿ ಇದುವರೆಗೆ ಉತ್ತಮ ಸಾಧನೆ ತೋರಿಲ್ಲ. ಒಂದೂ ಗೆಲುವು ದಾಖಲಿಸಿಲ್ಲ. ಮಧ್ಯಪ್ರದೇಶಕ್ಕೆ ನಾಯಕ ಶುಭಂ ಶರ್ಮ, ವೇಗಿಗಳಾದ ಗೌರವ್ ಯಾದವ್, ವೆಂಕಟೇಶ್ ಅಯ್ಯರ್ ಶಕ್ತಿ ತುಂಬುವ ನಿರೀಕ್ಷೆ ಇದೆ. ಸತತ 3ನೇ ವರ್ಷವೂ ಶಿವಮೊಗ್ಗ್ಗಲ್ಲಿ ರಣಜಿ ಪಂದ್ಯ ನಡೆಯುತ್ತಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತಂದಿದೆ. ಹೀಗಾಗಿ ಪಂದ್ಯ ವೀಕ್ಷಣೆಗೆ ಜನಸಾಗರವೇ ಹರಿದುಬರುವ ಸಾಧ್ಯತೆಗಳಿವೆ.

    ನಮ್ಮ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ತಂಡ ಅತ್ಯಂತ ಸಮತೋಲಿತವಾಗಿದೆ. ಮಧ್ಯಪ್ರದೇಶ ವಿರುದ್ಧ ಗೆಲ್ಲುವುದಷ್ಟೇ ನಮ್ಮ ಗುರಿ. ಇದುವರೆಗೆ ಉತ್ತಮ ಪ್ರದರ್ಶನ ತೋರಿದ್ದೇವೆ. ಅದನ್ನು ಮುಂದುವರಿಸುತ್ತೇವೆ. ರಾಹುಲ್, ಮನೀಷ್, ಮಯಾಂಕ್ ತಂಡದಲ್ಲಿ ಇಲ್ಲದಿರುವುದರಿಂದ ಒತ್ತಡವೇನಿಲ್ಲ.
    | ಕೆ.ಗೌತಮ್ ಕರ್ನಾಟಕ ತಂಡದ ಆಲ್ರೌಂಡರ್

    ಕರ್ನಾಟಕಕ್ಕೆ ನೆಚ್ಚಿನ ಪಿಚ್: ಮಲೆನಾಡಿನ ಅಂಗಳದಲ್ಲಿ ಕರ್ನಾಟಕ ತಂಡಕ್ಕಿದು 3ನೇ ರಣಜಿ ಪಂದ್ಯವಾಗಿದೆ. 2017ರಲ್ಲಿ ನಡೆದ ಮೊದಲ ರಣಜಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಹಾಗೂ 2018ರಲ್ಲಿ ರೈಲ್ವೇಸ್ ಗೆಲುವು ದಾಖಲಿಸಿತ್ತು. ಕೆಎಲ್ ರಾಹುಲ್, ಮನೀಷ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ರಾಷ್ಟ್ರೀಯ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವುದರಿಂದ ಸ್ಥಳೀಯರಿಗೆ ಸ್ಟಾರ್ ಆಟಗಾರರ ನಿರ್ವಹಣೆ ಕಣ್ತುಂಬಿಕೊಳ್ಳುವ ಅವಕಾಶವಿಲ್ಲದಂತಾಗಿದೆ. ಆರಂಭಿಕರಾದ ಸಮರ್ಥ್, ಪಡಿಕಲ್ ಉತ್ತಮ ಫಾಮರ್್​ನಲ್ಲಿದ್ದರೆ, ನಾಯಕ ಕರುಣ್ ನಾಯರ್, ಕೆವಿ ಸಿದ್ಧಾರ್ಥ್ ಲಯ ಕಂಡುಕೊಳ್ಳಬೇಕಿದೆ. ಆಲ್ರೌಂಡರ್ ಕೆ. ಗೌತಮ್ ರೈಲ್ವೇಸ್ ಎದುರು ಬ್ಯಾಟಿಂಗ್​ನಲ್ಲಿ ಉತ್ತಮ ಕಮ್ ಬ್ಯಾಕ್ ಮಾಡಿದರೆ, ಮೊದಲ ಪಂದ್ಯದಿಂದಲೂ ತಂಡದಲ್ಲಿರುವ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ವಿಫಲರಾಗುತ್ತಿದ್ದಾರೆ. ರೈಲ್ವೇಸ್ ಎದುರು ಗೆಲುವು ತಂದುಕೊಟ್ಟ ವೇಗಿಗಳಾದ ಅನುಭವಿ ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರತೀಕ್ ಜೈನ್ ಮತ್ತೊಮ್ಮೆ ಮಿಂಚುವ ತವಕದಲ್ಲಿದ್ದಾರೆ.

    ಪ್ರಸಕ್ತ ಋತುವಿನ ನಿರ್ವಹಣೆ: ಕರ್ನಾಟಕ: 6 ಪಂದ್ಯ, 3 ಗೆಲುವು, 3 ಡ್ರಾ, 24 ಅಂಕ, ಮಧ್ಯಪ್ರದೇಶ: 6 ಪಂದ್ಯ, 2 ಸೋಲು, 4 ಡ್ರಾ, 8 ಅಂಕ
    ಉಭಯ ತಂಡಗಳು ರಣಜಿ ಟ್ರೋಫಿಯಲ್ಲಿ 5 ವರ್ಷಗಳ ಬಳಿಕ ಎದುರಾಗುತ್ತಿವೆ. 2014-15ರಲ್ಲಿ ಇಂದೋರ್​ನಲ್ಲಿ ಕಡೇ ಬಾರಿಗೆ ಎದುರಾಗಿದ್ದವು. ಕರ್ನಾಟಕ ಇನಿಂಗ್ಸ್ ಮುನ್ನಡೆ ಸಾಧಿಸಿದ್ದ ಪಂದ್ಯ ಡ್ರಾಗೊಂಡಿತ್ತು.
    ಮುಖಾಮುಖಿ: 7
    ಕರ್ನಾಟಕ: 2
    ಮಧ್ಯಪ್ರದೇಶ: 1
    ಡ್ರಾ: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts