ಮಂಡ್ಯ: ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿ ಇಂದಿನಿಂದ ಓಪನ್ ಆಗುತ್ತೆ ಎಂಬ ಸುದ್ದಿ ಕಿವಿಗೆ ಬಿದ್ದದ್ದೇ ತಡ ಮಂಡ್ಯದಲ್ಲಿ ಮದ್ಯ ಖರೀದಿಸಲು ಸಾಮಾಜಿಕ ಅಂತರವೂ ಇಲ್ಲದೇ ತಾ ಮುಂದು, ನಾ ಮುಂದು ಎಂಬಂತೆ ಕ್ಯೂ ನಿಂತಿರುವ ದೃಷ್ಯ ಎಲ್ಲೆಡೆ ಕಾಣಿಸುತ್ತಿದೆ. ನಗರದಲ್ಲಿ ಎಂಎಸ್ಐಎಲ್ ಮಳಿಗೆಯೊಂದರ ಬಾಗಿಲು ತೆಗೆದದ್ದೇ ತಡ ನೂರಾರು ಮಂದಿ ಕಿಕ್ ಏರಿಸಿಕೊಳ್ಳುವ ಧಾವಂತದಲ್ಲಿ ಒಮ್ಮೆಲೆ ಓಡೋಡಿ ಬಂದು ಅಂಗಡಿ ಮುಂದೆ ಜಮಾಯಿಸಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತ್ತು. ಇನ್ನು ಮೊದಲು ಮದ್ಯ ಖರೀದಿಸಿದ ಹಲವರು ವಿಜಯದ ಸಂಕೇತ ತೋರಿಸಿ ನಗೆ ಬೀರುವ ಮೂಲಕ ಸಂಭ್ರಮಿಸಿದರು.
ಮಂಡ್ಯ ನಗರದ ಮಧುಲೋಕ ವೈನ್ ಸ್ಟೋರ್ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗ್ರಾಹಕರು ನಿಂತಿದ್ದರಿಂದ ಅಂತಿಮವಾಗಿ ಮದ್ಯದಂಗಡಿ ಸಿಬ್ಬಂದಿ 3 ಅಡಿ ಅಂತರಕ್ಕೆ ನಿಲ್ಲಿಸಿ ಮದ್ಯಕೊಡುವ ವ್ಯವಸ್ಥೆ ಮಾಡಿದರು. ಇನ್ನು ಹಳ್ಳಿಯಲ್ಲೂ ನಶೆ ಏರಿಸಿಕೊಳ್ಳಲು ಮುಂದಾದ “ಎಣ್ಣೆ”ಪ್ರಿಯರಿಂದ ನೂಕುನುಗ್ಗಲು ಏರ್ಪಟ್ಟಿತ್ತು. ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಮದ್ಯದಂಗಡಿ ಎದುರು ಜನಜಂಗುಳಿ ಕಂಡುಬಂತು. ಹಲವೆಡೆ ಮದ್ಯದಂಗಡಿ ಬಳಿಯ ರಸ್ತೆಯುದ್ದಕ್ಕೂ ಗ್ರಾಹಕರು ಬಿಸಿಲನ್ನೂ ಲೆಕ್ಕಿಸದೆ ಸಾಲುಗಟ್ಟಿ ನಿಂತಿದ್ದಾರೆ. ಇನ್ನು ಮಂಡ್ಯ ನಗರದ ಮದ್ಯದಂಗಡಿ ಬಳಿಗೆ ನೂರಾರು ‘ಎಣ್ಣೆ’ಪ್ರಿಯರು ಓಡಿ ಬರುತ್ತಿದ್ದ ಸಖತ್ ವೈರಲ್ ಆಗಿದೆ.
https://www.instagram.com/p/B_wTylEHS3s/?igshid=1l5nn9c7evob8
ಮದ್ಯನಶೆ ಏರಿಸಿಕೊಳ್ಳುವ ಭರದಲ್ಲಿ ಗ್ರಾಹಕರು ಕರೊನಾ ಸೋಂಕಿನ ಭೀತಿಯನ್ನೂ ಮರೆತು ಮದ್ಯ ಖರೀದಿಸಲು ತಾ ಮುಂದು-ನಾ ಮುಂದು ಎಂಬಂತೆ ವರ್ತಿಸಿದ್ದು ಸ್ಥಳೀಯರಲ್ಲೂ ಆತಂಕ ಹೆಚ್ಚುವಂತೆ ಮಾಡಿದೆ. ಒಟ್ಟಾರೆ ಮದ್ಯದಂಗಡಿ ಮುಂದೆ ನಿಯಮ ಉಲ್ಲಂಘಿಸಿ, ಅಂತರ ಮರೆತು ಮುಗಿಬಿದ್ದ ಮದ್ಯಪ್ರಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನಿಯಮ ಉಲ್ಲಂಘಿಸಿದವರಿಗೆ ಬಿತ್ತು ಏಟು: ಬೈಕ್, ಸ್ಕೂಟರ್‌ನಲ್ಲಿ ಇಬ್ಬರು ಕುಳಿತು ಸಂಚರಿಸುವಂತಿಲ್ಲ ಎಂಬ ನಿಯಮ ಇದ್ದರೂ ಪೊಲೀಸ್ರ ಕಣ್ತಪ್ಪಿಸಿ ಓಡಾಡಬಹುದು ಎಂದು ಬರುತ್ತಿರುವ ಜನತೆಗೆ ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಖಾಕಿಪಡೆ ಬಿಸಿ ಮುಟ್ಟಿಸುತ್ತಿದೆ. ಇಬ್ಬರಿರುವ ದ್ವಿಚಕ್ರ ವಾಹನಗಳನ್ನು ತಡೆದು ಒಬ್ಬರನ್ನು ಕೆಳಗಿಳಿಸಿ ಕಳಿಸಲಾಗುತ್ತಿದೆ. ಇದಾಗ್ಯೂ ಯಾಮಾರಿಸಿ ಹೋಗುತ್ತಿರುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಇದನ್ನೂ ಓದಿ ತುಮಕೂರಲ್ಲಿ ಮದ್ಯಪ್ರಿಯರಿಗೆ ನಿರಾಸೆ