ಸ್ಯಾಂಡಲ್​ವುಡ್​ ಪದ್ಮಾವತಿಗೆ ಇಂದು 36ರ ಸಂಭ್ರಮ, ಶುಭಾಶಯಗಳ ಸುರಿಮಳೆ

ಬೆಂಗಳೂರು: ಸಾಲು ಸಾಲಾಗಿ ದಿ.ಅಂಬರೀಷ್ ಅಭಿಮಾನಿಗಳ, ಮಂಡ್ಯ ಜಿಲ್ಲೆಯ ಮತದಾರರ, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗುತ್ತಿರುವ ಸ್ಯಾಂಡಲ್​ವುಡ್​ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಇಂದು 36 ನೇ ಹುಟ್ಟುಹಬ್ಬದ ಸಂಭ್ರಮ.

ಸದ್ಯ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ರಮ್ಯಾ ಸ್ಯಾಂಡಲ್​ವುಡ್​ನಿಂದ ದೂರ ಉಳಿದು ಬಹಳ ವರ್ಷಗಳು ಕಳೆದಿವೆ. ಸ್ಯಾಂಡಲ್​ವುಡ್​ನಿಂದ ದೂರ ಉಳಿಯುವುದರ ಜತೆಗೆ ಕರ್ನಾಟಕದಿಂದಲೂ ದೂರ ಉಳಿದಿರುವ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ.

ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರೊಂದಿಗೆ ಅಭಿ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದ ರಮ್ಯಾರನ್ನು ಹಿಂದಿಕ್ಕಲು ಅಂದು ಯಾವ ನಟಿಯರಿಂದಲೂ ಸಾಧ್ಯವಾಗಿರಲಿಲ್ಲ. ಗಾಂಧಿನಗರದಲ್ಲಿ ಸಾಲು ಸಾಲು ಚಿತ್ರ ಕೊಟ್ಟ ನಂತರ ರಾಜಕೀಯದತ್ತ ಮುಖ ಮಾಡಿದ ರಮ್ಯಾ ಇಂದು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಶಿವರಾಜ್​ಕುಮಾರ್​ ಜತೆ ನಟಿಸಿದ ಆರ್ಯನ್​ ಅವರ ಕೊನೆಯ ಸಿನಿಮಾ ಆಗಿತ್ತು.

ರೆಬೆಲ್​ಸ್ಟಾರ್​ ಅಂಬರೀಷ್​ ಅಂತ್ಯಕ್ರಿಯೆಗೆ ಬಾರದ ರಮ್ಯಾ ಅವರಿಗೆ ಅಂಬಿ ಅಭಿಮಾನಿಗಳು ಧಿಕ್ಕಾರ ಕೂಗಿ, ಅಣ್ಣ ಸತ್ತರೂ ನಮ್ಮ ಮನಸಿನಲ್ಲಿ ಜೀವಂತರಾಗಿರುತ್ತಾರೆ. ಆದರೆ ನೀನು ಬದುಕಿದ್ದರೂ ನಮ್ಮ ಪಾಲಿಗೆ ಸತ್ತಿರುವೆ ಎಂದು ಕೆಂಗಣ್ಣಿಗೆ ಗುರಿಯಾಗಿದ್ದರು. ಮಂಡ್ಯದ ಮಾಜಿ ಸಂಸದೆ ಆಗಿರುವ ರಮ್ಯಾ ಲೋಕಸಭೆ ಉಪಚುನಾವಣೆಯಲ್ಲಿ ಮತ ಚಲಾಯಿಸದೆ ಟೀಕೆಗೊಳಗಾಗಿದ್ದರು.

ಹುಟ್ಟುಹಬ್ಬಕ್ಕೆ ಆವರಿಸಿದ ಸೂತಕದ ಛಾಯೆ
ಮಂಡ್ಯ: ಪ್ರತಿ ವರ್ಷ ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ರಮ್ಯಾ ಹುಟ್ಟುಹಬ್ಬಕ್ಕೆ ಈ ಬಾರಿ ಸೂತಕದ ಛಾಯೆ ತಟ್ಟಿದೆ. ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗದ ರಮ್ಯಾ ವಿರುದ್ದ ಅಭಿಮಾನಿಗಳ ಬೇಸರಗೊಂಡಿದ್ದ ಹಿನ್ನೆಲೆಯಲ್ಲಿ ಇಂದು ರಮ್ಯಾ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕಿದ್ದಾರೆ. ಪ್ರತಿವರ್ಷ ಇದೇ ಅಭಿಮಾನಿಗಳು ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ನಿವಾಸದ ಬಳಿ ತೆರಳಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದರು.