ಮಾಜಿ ಸಂಸದೆ ರಮ್ಯಾಗೆ 50 ಲಕ್ಷ ರೂ. ಪರಿಹಾರ

ಬೆಂಗಳೂರು: ಚಿತ್ರನಟಿ ರಮ್ಯಾ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸಿ ಮಾನ ಹಾನಿ ಮಾಡಿದ ಆರೋಪ ಸಾಬೀತಾದ್ದರಿಂದ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಏಷ್ಯಾನೆಟ್ ನ್ಯೂಸ್ ನೆಟ್​ವರ್ಕ್ ಪ್ರೖೆವೇಟ್ ಲಿಮಿಟೆಡ್ ಹಾಗೂ ಸುವರ್ಣ ನ್ಯೂಸ್ 24×7 ಸುದ್ದಿವಾಹಿನಿಗೆ ನಗರ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

2013ರಲ್ಲಿ ನಡೆದಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅನಗತ್ಯವಾಗಿ ತಮ್ಮ ಹೆಸರು ಸೇರಿಸಿದ್ದ ಸುದ್ದಿವಾಹಿನಿ ತಮ್ಮ ವಿರುದ್ಧ ಅವಹೇಳನಕಾರಿ ಕಾರ್ಯಕ್ರಮ ಪ್ರಸಾರ ಮಾಡಿದೆ. ಈ ಮೂಲಕ ಚಾರಿತ್ರ್ಯಹರಣ ಮಾಡಿದೆ ಎಂದು ಆರೋಪಿಸಿ ರಮ್ಯಾ ಸಿವಿಲ್ ದಾವೆ ಹೂಡಿದ್ದರು.

ದೂರಿನ ವಿಚಾರಣೆ ನಡೆಸಿದ್ದ ನಗರದ 8ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಾಟೀಲ ನಾಗಲಿಂಗನಗೌಡ ಅವರಿದ್ದ ಪೀಠ, ರಮ್ಯಾಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.