ಅಭಿವೃದ್ಧಿಯಲ್ಲಿ ರಾಮತೀರ್ಥ ಮುಂದೆ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ರಾಮತೀರ್ಥ ಗ್ರಾಮ ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿದ್ದು ತಾಲೂಕಿನಲ್ಲೇ ಮಾದರಿ ಗ್ರಾಮವಾಗಿ ಹೊರಹೊಮ್ಮುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಹೇಳಿದರು.

ರಾಮತೀರ್ಥ ತಾಂಡಾದಲ್ಲಿ ಬೆಂಗಳೂರು ಹಾಗೂ ಕಲಬುರಗಿ ಜಿಲ್ಲಾ ಆಯುಷ್ ಇಲಾಖೆ, ಭೀಮನಳ್ಳಿ ಸರ್ಕಾರಿ ಯುನಾನಿ ಚಿಕಿತ್ಸಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿದ ಅವರು, ರಾಮತೀರ್ಥ ಜಿಲ್ಲೆಯಲ್ಲಿಯೇ ಅತಿ ಚಿಕ್ಕ ಗ್ರಾಮ. ಸಚಿವ ಪ್ರಿಯಾಂಕ್ ಖರ್ಗೆ ಹೆಚ್ಚಿನ ಆಸಕ್ತಿ ವಹಿಸಿ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಭೀಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಯುನಾನಿ ಚಿಕಿತ್ಸಾಲಯವಿದ್ದು, ವೈದ್ಯರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ನಾಗರತ್ನ ಚಿಮ್ಮಲಗಿ ಮಾತನಾಡಿ, ಆಯುಷ್ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಕುಡಿವ ನೀರು, ಆಹಾರ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯೋಗ, ಧ್ಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದರು.

ಗ್ರಾಪಂ ಸದಸ್ಯರಾದ ದೇವಿಂದ್ರಪ್ಪ ಜೈನ್, ಅಯ್ಯಪ್ಪ ಪವಾರ, ಡಾ. ವೇಣುಗೋಪಾಲ ಕಸ್ತೂರಿ, ಡಾ. ಮಂಜುನಾಥ, ಡಾ. ನಸೀರೋದ್ದಿನ್ ಇದ್ದರು. ಡಾ. ಸುಧೀರ ಕುಳಗೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶಕೀಲ್ ಅಹ್ಮದ್ ಸ್ವಾಗತಿಸಿದರು. ಸುರೇಶ ನಿರೂಪಣೆ ಮಾಡಿದರು.

ಚಿತ್ತಾಪುರ, ಗುರುಮಿಠಕಲ್ಗೆ ಸಂಪರ್ಕ ಕಲ್ಪಿಸುವ ರಾಜ್ಯಮಟ್ಟದ ರಸ್ತೆ ರಾಮತೀರ್ಥ ಗ್ರಾಮದಿಂದ ಹಾದು ಹೋಗಿದ್ದು, ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇನ್ನು ಗ್ರಾಮದೆಲ್ಲೆಡೆ ಸಿಸಿ ರಸ್ತೆ ನಿರ್ಮಿಸಲಾಗಿದೆ. 2 ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಿವೆ. ಬೊರ್ವೆಲ್ ಹಾಕಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ.
| ಜಗದೇವರೆಡ್ಡಿ ಪಾಟೀಲ್ ಅಧ್ಯಕ್ಷ, ತಾಲೂಕು ಪಂಚಾಯಿತಿ

Leave a Reply

Your email address will not be published. Required fields are marked *