More

  ರಾಮನಗರ ಜಿಲ್ಲಾಸ್ಪತ್ರೆಗೆ ಬೇಕಿದೆ ಚಿಕಿತ್ಸೆ ಪರಿಹಾರ ಕಾಣದ ಸಿಬ್ಬಂದಿ ಕೊರತೆ

  ಗಂಗಾಧರ್ ಬೈರಾಪಟ್ಟಣ ರಾಮನಗರ

  ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದರೂ, ಜಿಲ್ಲೆಯ ಜನ ಬೇರೆ ಆಸ್ಪತ್ರೆಗಳಿಗೆ ಹೋಗುವುದು ಮಾತ್ರ ತಪ್ಪಿಲ್ಲ.

  ಹಲವಾರು ವರ್ಷಗಳ ಹಿಂದೆಯೇ ಕಾರ್ಯಾರಂಭ ಮಾಡಬೇಕಿದ್ದ ಆಸ್ಪತ್ರೆ, ಕಳೆದ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಂಡಿತು. ಸುಮಾರು 374 ಹಾಸಿಗೆಗಳ ಸೌಲಭ್ಯದ ಆಸ್ಪತ್ರೆ ಇದಾಗಿದ್ದು, ಈ ಆಸ್ಪತ್ರೆಯಿಂದ ಜಿಲ್ಲೆಯ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಬಹುದು ಎಂದು ಭಾವಿಸಲಾಗಿತ್ತು. ದೊಡ್ಡ ಕಟ್ಟಡ ನಿರ್ಮಾಣ ಮಾಡಲಾಗಿದೆ.

  ಆದರೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ಒದಗಿಸದ ಈ ಆಸ್ಪತ್ರೆಗಳಿಗೆ ಬರುವ ರೋಗಿಗಳು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ನೆರೆಯ ಮಂಡ್ಯ ಜಿಲ್ಲಾಸ್ಪತ್ರೆ ಇಲ್ಲವೇ ಬೆಂಗಳೂರಿಗೆ ಕಳಿಸಲಾಗುತ್ತಿದೆ.

  ರಾಮನಗರ ಜಿಲ್ಲಾಸ್ಪತ್ರೆಗೆ ಬೇಕಿದೆ ಚಿಕಿತ್ಸೆ ಪರಿಹಾರ ಕಾಣದ ಸಿಬ್ಬಂದಿ ಕೊರತೆ

  ರೋಗಿಗಳ ಪ್ರವಾಹ

  ನೂತನ ಆಸ್ಪತ್ರೆ ಉದ್ಘಾಟನೆಗೊಂಡ ನಂತರ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಆಗಿ, ವಾರದ ಮೊದಲ ನಾಲ್ಕು ದಿನ ಸರಾಸರಿ 2 ಸಾವಿರ ಮತ್ತು ಕೊನೆಯ ಎರಡು ದಿನ 1500 ರೋಗಿಗಳು ಚಿಕಿತ್ಸೆಗೆ ಒಪಿಡಿಗೆ ( ಹೊರರೋಗಿಗಳ ವಿಭಾಗ) ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಶುಶ್ರೂಷಕಿಯರು ಸೇರಿ ಪ್ರಮುಖ ಹುದ್ದೆಗಳು ಖಾಲಿ ಇವೆ. ಮಂಜೂರಾದ ಒಟ್ಟು 149 ಹುದ್ದೆಗಳಲ್ಲಿ ತಜ್ಞ ವೈದ್ಯರ 17 ಹುದ್ದೆ, ಶುಶ್ರೂಷಕಿಯರ 49 ಹಾಗೂ ಗ್ರೂಪ್ ಡಿ – 33 ಸೇರಿ ಒಟ್ಟು 99 ಹುದ್ದೆಗಳು ಖಾಲಿ ಇವೆ. ಸದ್ಯಕ್ಕೆ ಎನ್‌ಎಚ್‌ಎಂ ಅಡಿಯಲ್ಲಿ ಕೆಲವು ಸಿಬ್ಬಂದಿ ಭರ್ತಿ ಮಾಡಲಾಗಿದೆ. ಆದರೂ ಇದು ಸಾಲದಾಗಿದೆ.

  ಬೇಕಿದೆ ಹೆಚ್ಚುವರಿ ತಜ್ಞರು

  ಜಿಲ್ಲಾಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕಿದ್ದರೆ ಈ ಮಂಜೂರಾಗಿರುವ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುವ ಜೊತೆಗೆ, ಫೊರೆನ್ಸಿಕ್ ತಜ್ಞರು, ಮೂಳೆ ರೋಗ ತಜ್ಞರು, ಗೈನಕಾಲಜಿಸ್ಟ್, ಯುರಾಲಜಿಸ್ಟ್, ನರರೋಗ ತಜ್ಞರು, ಹೃದ್ರೋಗ ತಜ್ಞ ವೈಧ್ಯರ ಅಗತ್ಯವಿದೆ. ಅಲ್ಲದೆ, ಐಸಿಯೂಗಳ ನಿರ್ವಹಣೆಗೆ ಇನ್‌ಟೆನ್ಸಿವಿಸ್ಟ್ ಗಳ ಅಗತ್ಯವಿದೆ.

  ಗಮನ ಹರಿಸಬೇಕಿದೆ

  ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸಲು ಬೇಕಾದ ಬಹುತೇಕ ಎಲ್ಲಾ ಸೌಲಭ್ಯ ಇದ್ದರೂ ಇವು ಸಾರ್ವಜನಿಕರಿಗೆ ಸಮರ್ಪಕವಾಗಿ ದೊರೆಯಬೇಕಾದರೆ ಅಗತ್ಯ ಸಿಬ್ಬಂದಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಸರ್ಕಾರ ಕೂಡಲೇ ಕ್ರಮವಹಿಸಿ ಜಿಲ್ಲಾಸ್ಪತ್ರೆಗೆ ಬೇಕಾದ ಸಿಬ್ಬಂದಿಯನ್ನು ಒದಗಿಸಿಕೊಡಬೇಕಿದೆ. ಮಂಡ್ಯ ಸೇರಿದಂತೆ ಇತರೆ ಊರುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಿ ಎಂದು ವೈದ್ಯರು ಹೇಳಿದಾಗಲೆಲ್ಲಾ, ರೋಗಿಗಳು ಮತ್ತು ಅವರ ಕುಟುಂಬಸ್ಥರು ಶಾಪಾ ಹಾಕಿ ಹೋಗುವುದನ್ನು ತಪ್ಪಿಸಬೇಕಿದೆ.

  ಭರವಸೆ ನೀಡಿದ್ದ ಸಚಿವರು

  ರಾಮನಗರ ಜಿಲ್ಲಾಸ್ಪತ್ರೆಗೆ ಬೇಕಿದೆ ಚಿಕಿತ್ಸೆ ಪರಿಹಾರ ಕಾಣದ ಸಿಬ್ಬಂದಿ ಕೊರತೆ

  ರಾಮನಗರಕ್ಕೆ ಸೆ.27ರಂದು ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇಡೀ ರಾಜ್ಯದ ಸಮಸ್ಯೆ ಆಗಿದೆ. ಹಿಂದಿನಿಂದಲೂ ನೇಮಕಾತಿ ನಡೆಯದ ಕಾರಣದಿಂದಾಗಿ ಸಮಸ್ಯೆ ಉಲ್ಭಣಿಸಿದೆ. ಕಲ್ಯಾಣ ಕರ್ನಾಟಕಕ್ಕೆ 200 ಸೇರಿದಂತೆ ಒಟ್ಟು 800 ಫಾರ್ಮಸಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

  ಅದೇ ರೀತಿ ಡಿ ಗ್ರೂಪ್‌ನ ಶೇ.75ರಷ್ಟು ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಅವಕಾಶ ಇದ್ದು, ಇದನ್ನು ಶೇ.100ರಷ್ಟು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಮನವಿ ಮಾಡಲಾಗುವುದು. ವೈದ್ಯರು ಮತ್ತು ತಜ್ಞ ವೈಧ್ಯರ ಕೊರತೆಯನ್ನು ಶೀಘ್ರವೇ ನೀಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಸಚಿವರು ಜಿಲ್ಲೆಗೆ ಭೇಟಿ ನೀಡಿ ಎರಡು ತಿಂಗಳು ಕಳೆದುಹೋಗಿವೆ. ಆದರೆ ಅವರ ಕೊಟ್ಟ ಮಾತುಗಳು ಕಾರ್ಯರೂಪಕ್ಕೆ ಬಂದಿಲ್ಲ.

  ಎಲ್ಲ ಇವೆ, ಉಪಯೋಗವಿಲ್ಲ!

  ಮೊದಲ ಹಂತದಲ್ಲಿ 374 ಹಾಸಿಗೆ ಸಾಮರ್ಥ್ಯದೊಂದಿಗೆ ಹೊಸ ಆಸ್ಪತ್ರೆಯು ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ 120 ಐಸಿಯೂ ಬೆಡ್‌ಗಳಾಗಿದ್ದು, 4 ಮ್ಯಾಡುಲರ್ ಓಟಿ, ಸಾಮಾನ್ಯ ಓಟಿ, ಐಪಿಡಿ ಸೇರಿದಂತೆ ಹಲವಾರು ವಿಭಾಗಗಳು ಇವೆ. ಪ್ರತಿ ನಿಮಿಷಕ್ಕೆ 1 ಸಾವಿರ ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಾಗಿದೆ. ಜೊತೆಗೆ ಟೊಯೊಟಾ ಕಂಪನಿಯು ಸಿ.ಟಿ. ಸ್ಕ್ಯಾನ್ ಯಂತ್ರ ನೀಡಿದ್ದು, ಅದನ್ನೂ ರೋಗಿಗಳ ಉಪಯೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ.

  ಐಸಿಯು, ಎನ್‌ಐಸಿಯು ಜೊತೆಗೆ ಮಕ್ಕಳಿಗೆಂದೇ ವಿಶೇಷ ಐಸಿಯು ಸಹ ಇಲ್ಲಿವೆ. ಈ ಎಲ್ಲ ಘಟಕಗಳು ಕಾರ್ಯನಿರ್ವಹಣೆ ಮಾಡುವುದರಿಂದ ನೆರೆಯ ಬೆಂಗಳೂರು ಮತ್ತು ಮಂಡ್ಯಕ್ಕೆ ಚಿಕಿತ್ಸೆಗಾಗಿ ಹೋಗಬೇಕಾದ ಅನಿವಾರ್ಯತೆ ತಪ್ಪಲಿದೆ ಎಂದು ಭಾಸವಿಸಲಾಗಿತ್ತು. ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಮತ್ತೆ ಅತ್ತ ಮುಖ ಮಾಡುವಂತೆ ಆಗಿದೆ.

  ರಾಮನಗರ ಜಿಲ್ಲಾಸ್ಪತ್ರೆಗೆ ಬೇಕಿದೆ ಚಿಕಿತ್ಸೆ ಪರಿಹಾರ ಕಾಣದ ಸಿಬ್ಬಂದಿ ಕೊರತೆಜಿಲ್ಲಾಸ್ಪತ್ರೆಗೆ ಸಿಬ್ಬಂದಿ ಕೊರತೆ ಇದೆ. ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇರುವ ಸಿಬ್ಬಂದಿಯಲ್ಲಿಯೇ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದೇವೆ. ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

  ಡಾ.ಜಿ.ಎಲ್. ಪದ್ಮ,
  ಜಿಲ್ಲಾ ಶಸ್ತ್ರ ಚಿಕಿತ್ಸಕಿ,
  ರಾಮನಗರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts