ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್​ ಪಕ್ಷದಲ್ಲೇ ಮುಂದುವರಿಯುತ್ತಾರೆ. ಅವರ ಜತೆ ಇಂದು ಮಾತನಾಡುತ್ತೇನೆ. ಹೈಕಮಾಂಡ್​ನಿಂದಲೂ ರಮೇಶ್ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​ನಲ್ಲಿ ಕನಕದಾಸ ಜಯಂತಿ ಉತ್ಸವದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ರಮೇಶ್‌ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದಲ್ಲೇ ರಮೇಶ್ ಮುಂದುವರಿಯುತ್ತಾರೆ. ನಮಗೆ ಅವರು ಸಿಕ್ಕಿಲ್ಲ. ಅವರೊಂದಿಗೆ ಇವತ್ತು ಮಾತನಾಡುತ್ತೇನೆ.

ಹೈಕಮಾಂಡ್‌ ಕೂಡ ರಮೇಶ್ ಜಾರಕಿಹೊಳಿ ಅವರನ್ನ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ. ಅಡುಗೆ ಮನೆಗೆ ಹೋಗಿ ಕೇವಲ ಬಾಯಿ ಒರೆಸಿಕೊಂಡು ಬರುವ ಸ್ಥಿತಿಯಲ್ಲಿ‌ ನಾವಿದ್ದೇವೆ. ಆದರೆ, ಹೊರಗಿನವರಿಗೆ ನಾವು ಹೋಗಿ ಊಟ ಮಾಡಿಕೊಂಡು ಬರುತ್ತೇವೆ ಎಂಬಂತೆ ಬಿಂಬಿತವಾಗುತ್ತದೆ ಎಂದು ಸೋದರ ಲಖನ್‌ ಜಾರಕಿಹೊಳಿ ಯಾವಾಗಲೂ ಹೇಳುತ್ತಿರುತ್ತಾರೆ ಎಂದು ನೆನಪಿಸಿಕೊಂಡರು.

ನಂತರ ಮಾಧ್ಯಮದವರು ಪ್ರಶ್ನಿಸಿದ ಮೇಲೆ ಅದು ಲೋಕಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ್ದು, ರಾಜಕೀಯವಾಗಿ ಅಲ್ಲ ಎಂದು ಸಮರ್ಥಿಸಿಕೊಂಡರು.

ಎಲ್ಲದಕ್ಕೂ ಸಿದ್ದರಾಮಯ್ಯನವರೇ ಮಾಸ್ಟರ್ ಮೈಂಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲ ಹಾಗೇನೂ ಇಲ್ಲ. ಅವರು ನಮ್ಮ ಪಕ್ಷದ ಪರವಾಗಿ ಇದ್ದಾರೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೇ ಮುಂದುವರಿಯುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)