ಸಾಹೇಬ್ರು ದೊಡ್ಡವರು, ಅವರ ಬಗ್ಗೆ ಮಾತನಾಡಲಾಗದು: ಲಕ್ಷ್ಮಿ ಹೆಬ್ಬಾಳ್ಕರ್‌

ಬಾಗಲಕೋಟೆ: ಸಾಹೇಬ್ರು ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲು ದೊಡ್ಡವಳಲ್ಲ. ಸಚಿವ ಡಿ.ಕೆ.ಶಿವಕುಮಾರ್‌ಗೆ ನಾನೊಬ್ಬಳೆ ಬೆಂಬಲಿಗಳು ಅಲ್ಲ. ಸಾಕಷ್ಟು ಜನರು ಬೆಂಬಲಿಗರು ಇದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಪದೇ ಪದೆ ನನ್ನ ಹೆಸರು ಬಳಕೆ ಮಾಡುವುದರ ಹಿಂದಿನ ಮರ್ಮ ಗೊತ್ತಾಗುತ್ತಿಲ್ಲ. ಕಾಲಕಸ ಅಂದ್ರು. ಶೋ ಪೀಸ್ ಅಂದ್ರು. ಸ್ಲಮ್‌ನಿಂದ ಬಂದವಳು ಅಂದರು. ಆದರೆ, ನಾನು ನನ್ನ ಪಾಡಿಗೆ ಇದ್ದೇನೆ. ಅವರು ನಮ್ಮ ಜಿಲ್ಲೆಯ ದೊಡ್ಡ ನಾಯಕರು ಮತ್ತು ರಾಜ್ಯ ನಾಯಕರು. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಸಚಿವ ರಮೇಶ್‌ ಜಾರಕಿಹೊಳಿಗೆ ಹೆಸರೇಳದೆ ತಿರುಗೇಟು ನೀಡಿದ್ದಾರೆ.

ನನ್ನ ರಾಜಕೀಯ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ಯಾರಿಂದ ಯಾರಿಗೂ ಬ್ರೆಕ್ ಹಾಕಲು ಆಗಲ್ಲ. ಅದೆಲ್ಲ ದೇವರು ನಿರ್ಧಾರ ಮಾಡಿದ್ದಾನೆ. ನನ್ನ ಶ್ರಮ, ಧರ್ಮ ನನ್ನನ್ನು ಕಾಪಾಡುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಹಲ್ಲಿಲ್ಲದ ಹಾವು ಅಂದ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶೋಭಕ್ಕ ಉದ್ವೇಗದಲ್ಲಿ ಮಾತನಾಡಿದ್ದಾರೆ. ಜನ ನಮ್ಮನ್ನು ನೋಡಿರುತ್ತಾರೆ. ಅಕ್ಕ ಮಾತಾಡುವಾಗ ಉದ್ವೇಗಕ್ಕೆ ಒಳಗಾಗಬಾರದು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬುದನ್ನು ತಿಳಿದು ಮಾತನಾಡಬೇಕು ಎಂದರು.

ಮೀಟೂ ಅಭಿಯಾನ ಚುರುಕು ಪಡೆದುಕೊಳ್ಳುತ್ತಿದ್ದು, ದೇಶದಲ್ಲಿ ಜನ ಎಜುಕೇಟ್ ಆಗುತ್ತಿದ್ದಾರೆ. ನಿಜವಾಗಿಯೂ ಅಂತಹ ಘಟನೆಗಳು ನಡೆದಿದ್ದರೆ ಅದು ತಪ್ಪು ಎಂದು ತಿಳಿಸಿದರು.