ರಮೇಶ್​ ಜಾರಕಿಹೊಳಿಗೆ ಇನ್ನೂ ಶಮನವಾಗಿಲ್ವಾ ಡಿಕೆಶಿ ಮೇಲಿನ ಕೋಪ?

ಬೆಂಗಳೂರು: ಜಾರಕಿಹೊಳಿ ಬ್ರದರ್ಸ್​ ಮತ್ತು ಇಂಧನ ಸಚಿವ ಡಿಕೆಶಿ ಮಧ್ಯೆ ಇರುವ ಬಂಡಾಯ ಶಮನವಾಗಿದೆ ಎಂದೆನ್ನುಕೊಳ್ಳುವಷ್ಟರಲ್ಲಿಯೇ ಬಂಡಾಯದ ಬೆಂಕಿ ಇನ್ನೂ ಆರಿಲ್ಲ ಎಂದು ತಿಳಿದುಬಂದಿದೆ.

ಕೇವಲ ಮಾಧ್ಯಮದ ಮುಂದೆ ಪೋಸ್ ಕೊಡೋದಲ್ಲ. ನಾಯಕರಾದೋರು ಎದೆ ಉಬ್ಬಿಸಿಕೊಂಡು ಓಡಾಡೋದಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್​ಗೆ ಟಾಂಗ್ ನೀಡಿದ್ದಾರೆ.

ಇನ್ನು ಡಿಕೆಶಿ ಜೈಲಿಗೆ ಹೋಗುತ್ತಾರೆಂಬ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ಜೈಲಿಗೆ ಹೋಗುವುದು ಬಿಡುವುದು ಅವರವರ ನಸೀಬು ಎಂದರು.

ಬಳ್ಳಾರಿ ಲೋಕಸಭಾ ಉಪಚುನಾವಣೆ ಹತ್ತಿರವಾಗುತ್ತಿದ್ದರೂ ಭಿನ್ನಮತದ ಬೇಗುದಿ ಮಾತ್ರ ತಣ್ಣಗಾಗಿಲ್ಲ. ಸ್ವಪಕ್ಷದ ಇಬ್ಬರು ಘಟಾನುಘಟಿ ನಾಯಕರ ಮುಸುಕಿನ ಗುದ್ದಾಟ ಅಂತ್ಯ ಕಾಣದೆ, ಅಸಮಾಧಾನದ ರಾಜಕೀಯವೂ ಮುಂದುವರಿದಿದೆ.

ಇನ್ನು ವಿ.ಎಸ್. ಉಗ್ರಪ್ಪ ನಾಮಪತ್ರ ಸಲ್ಲಿಸುವ ವೇಳೆ ಸಚಿವ ರಮೇಶ್​​ ಜಾರಕಿಹೊಳಿ ಗೈರಾಗಿದ್ದು, ಆಪ್ತನಿಗೆ ಟಿಕೆಟ್​​ ಕೊಡಲು ನಿರಾಕರಿಸಿದ್ದಕ್ಕೆ ಮತ್ತೆ ರಮೇಶ್​​ ಮುನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್​​ ಸೂಚನೆಗೂ ಡೋಂಟ್​​ಕೇರ್​​ ಎಂದಿದ್ದು, ಡಿಕೆಶಿ ಜಿಲ್ಲಾ ಉಸ್ತುವಾರಿ ಆಗಿದ್ದರಿಂದಲೇ ರಮೇಶ್​ ಜಾರಕಿಹೊಳಿ ಹೊರಗುಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)