ಬಿಜೆಪಿಯಲ್ಲಿ ಗೆಳೆಯರಿದ್ದು, ಅವರ ಮನೆಗೆ ಹೋದರೆ ಅದು ಆಪರೇಷನ್ ಕಮಲವಲ್ಲ: ರಮೇಶ್​ ಜಾರಕಿಹೊಳಿ

ಬೆಂಗಳೂರು: ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಆದರೆ, ಪಕ್ಷ ವಿರೋಧಿ ಕೆಲಸವನ್ನು ನಾನು ಮಾಡಿಲ್ಲ ಎಂದು ಗೋಕಾಕ್​ನ ಕಾಂಗ್ರೆಸ್​​ ಶಾಸಕ ರಮೇಶ್​ ಜಾರಕಿಹೊಳಿ ಅವರು ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದ ರಮೇಶ್​ ಜಾರಕಿಹೊಳಿ ಅವರು ಬುಧವಾರ ವಿಧಾನಸೌಧದಲ್ಲಿ ಕಾಣಿಸಿಕೊಂಡರು. ಬಜೆಟ್​ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಬಿಜೆಪಿಯಲ್ಲಿ ಬಹಳಷ್ಟು ಗೆಳೆಯರಿದ್ದಾರೆ. ಅವರ ಮನೆಗೆ ಹೋದರೆ ಅದು ಆಪರೇಷನ್ ಕಮಲ ಅಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

ನಾವು ಬಂದ ಉದ್ದೇಶ ಇಷ್ಟೇ. ನಮಗೆ ಪಕ್ಷದಲ್ಲಿ ಅಸಮಾಧಾನ ಇದೆ ನಿಜ. ಆದರೆ, ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಮತ್ತೆ ಸಂಜೆ ಮುಂಬೈಗೆ ಹೋಗುತ್ತೇನೆ. ನನ್ನ‌ ಮಗಳ ಮದುವೆ ಇರುವ ಸಂಬಂಧ ನಾನು ಇಷ್ಟು ದಿನ ಮುಂಬೈನಲ್ಲಿದ್ದೆ ಎಂದು ಸ್ಪಷ್ಟನೆ ನೀಡಿದರು.

ನಾನು ಕಾಂಗ್ರೆಸ್​ನಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಾನು ನಮ್ಮ ನಾಯಕರ ಜತೆ ಮಾತುಕತೆ ನಡೆಸುತ್ತೇನೆ. ಆನಂತರ ನನ್ನ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು.

ಕುತೂಹಲ ಮೂಡಿಸಿದ ಡಿನ್ನರ್​ ಪಾರ್ಟಿ
ಶಾಸಕ ರಮೇಶ್​ ಜಾರಕಿಹೊಳಿ, ಇಂದು ರಾತ್ರಿ ನಗರದ ಏಟ್ರಿಯಾ ಹೋಟೆಲ್​ನಲ್ಲಿ ಡಿನ್ನರ್ ಪಾರ್ಟಿ ಇಟ್ಟುಕೊಂಡಿದ್ದು, 100 ಮಂದಿಗೆ ಊಟದ ವ್ಯವಸ್ಥೆಯನ್ನು ಬುಕ್ ಮಾಡಿದ್ದಾರೆ. ಜಾರಕಿಹೊಳಿ ಪರವಾಗಿ ಆಪ್ತ ಅನಿಲ್​ಕುಮಾರ್ ಹೆಸರಿನಲ್ಲಿ ಡಿನ್ನರ್ ಪಾರ್ಟಿ ಬುಕ್​ ಮಾಡಲಾಗಿದೆ. ಪಕ್ಷಾತೀತವಾಗಿ ಶಾಸಕರನ್ನು ಆಹ್ವಾನಿಸಿದ್ದು, ಅತೃಪ್ತ ಶಾಸಕರ ಮುಂದಿನ ನಡೆ ಕೂತುಹಲ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)