‘ಅಲ್ಲಿ-ಇಲ್ಲಿ ಎನ್ನುವುದು ಬೇಡ, ಬೇಗ ನಿರ್ಧಾರ ತೆಗೆದುಕೊಳ್ಳಲಿ…’ ಇದು ಸೋದರನಿಗೆ ಸತೀಶ್ ಜಾರಕಿಹೊಳಿ ಖಡಕ್ ಸಂದೇಶ

ಬೆಳಗಾವಿ: ರಮೇಶ್​ ಜಾರಕಿಹೊಳಿಯವರ ಬಳಿ ಮಾತನಾಡಲು ಏನೂ ಇಲ್ಲ, ಅದೊಂದು ಮುಗಿದ ಅಧ್ಯಾಯ ಎಂದು ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ರಾಜೀನಾಮೆ ನಿಕ್ಕಿ ಎಂದು ಹೇಳಿರುವ ರಮೇಶ್ ಜಾರಕಿಹೊಳಿ ಅವರಿಗೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ಕಾದಿದ್ದೇವೆ. ಗೋಕಾಕ್​ಗೆ ಜನಪ್ರತಿನಿಧಿಯೇ ಇಲ್ಲದೆ ಎಷ್ಟು ಕಷ್ಟವಾಗಿದೆ ಎಂಬುದು ನಮಗೆ ಗೊತ್ತು. ಹಾಗಾಗಿ ಈಗ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಾಗುತ್ತಿದ್ದೇವೆ ಎಂದು ಹೇಳಿದರು.

ಗೋಕಾಕ್​ಗೆ ಜನಪ್ರತಿನಿಧಿ ಬೇಕು. ಲಖನ್​ ಜಾರಕಿಹೊಳಿ ಅಂತಲ್ಲ ಯಾರಾದರೂ ಬೇಕೇಬೇಕು. ನಮಗೆ ಪಕ್ಷ ಮುಖ್ಯ. ದೊಡ್ಡದೊಡ್ಡವರೆಲ್ಲ ಕಾಂಗ್ರೆಸ್​ ತೊರೆದಿದ್ದಾರೆ. ಯಾರಿಲ್ಲದಿದ್ದರೂ ಪಕ್ಷ ನಡೆಯುತ್ತದೆ. ರಾಜೀನಾಮೆ ನೀಡುವುದು, ಬಿಡುವುದು ರಮೇಶ್​ ಜಾರಕಿಹೊಳಿಯವರಿಗೆ ಬಿಟ್ಟ ವಿಚಾರ ಎಂದರು.

ರಮೇಶ್​ ಜಾರಕಿಹೊಳಿಯವರು ಬೇಗ ನಿರ್ಧಾರ ತೆಗೆದುಕೊಳ್ಳಲಿ, ಅಲ್ಲಿ-ಇಲ್ಲಿ ಎನ್ನುವುದು ಬೇಡ. ಕಾಂಗ್ರೆಸ್​ನಲ್ಲೇ ಎರಡು ಗುಂಪುಗಳಾಗುತ್ತಿದೆ ಎಂದು ಟಾಂಗ್​ ನೀಡಿದರು.