More

    ನಮ್ಮಲ್ಲೂ ಶಕ್ತಿ ಇದೆ, ನಾವೂ ಸೂಪರ್​ಮ್ಯಾನ್​ಗಳೇ…; ಸ್ಫೂರ್ತಿಯಿಂದ ರಮೇಶ್ ಅರವಿಂದ್…

    ನಮ್ಮಲ್ಲೂ ಶಕ್ತಿ ಇದೆ, ನಾವೂ ಸೂಪರ್​ಮ್ಯಾನ್​ಗಳೇ...; ಸ್ಫೂರ್ತಿಯಿಂದ ರಮೇಶ್ ಅರವಿಂದ್...ನಾವು ಮಾಡುವ ಕೆಲಸದಲ್ಲಿ ನೂರಕ್ಕೆ ನೂರು ಏಕಾಗ್ರತೆ ಇದ್ದರೆ ಅದ್ಭುತವನ್ನೇ ಸಾಧಿಸಬಹುದು. ಎಲ್ಲರಿಗೂ ಇರುವುದು 24 ಗಂಟೆಗಳು ಮಾತ್ರ. ಅದರ ಪ್ರತಿಕ್ಷಣವನ್ನೂ ಸರಿಯಾಗಿ ಬಳಸಿದರೆ, ಸದುಪಯೋಗಪಡಿಸಿಕೊಂಡರೆ ದೊಡ್ಡ ಸಾಧಕರಾಗಬಹುದು.

    ಹನುಮಂತ ಸಂಜೀವಿನಿ ಬೆಟ್ಟವನ್ನು ಅಂಗೈಯಲ್ಲಿ ಹಿಡಿದು ಸಮುದ್ರವನ್ನ ದಾಟಬಲ್ಲ. ಅಂಥ ಸೂಪರ್​ಪವರ್ ಹನುಮಂತನಿಗಿದೆ. ಸೂಪರ್​ಮ್ಯಾನ್​ಗೆ ಕಾಂಕ್ರೀಟ್ ಗೋಡೆ ಆಚೆ ಇರುವ ವಸ್ತುಗಳು ಕಾಣುತ್ತವಂತೆ. ಎಕ್ಸ್​ರೇ ವಿಷನ್ ಎನ್ನುವ ಸೂಪರ್​ಪವರ್ ಆ ಸೂಪರ್​ಮ್ಯಾನ್​​ಗಿದೆ. ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹಾರಬಲ್ಲ ಸೂಪರ್​ಪವರ್ ಐರನ್​ಮ್ಯಾನ್​​ಗಿದೆ. ಹೀಗೆ ಬೇರೆಬೇರೆ ಸೂಪರ್​ಪವರ್​ಗಳಿರುವ ಸೂಪರ್​ಮ್ಯಾನ್​​ಗಳನ್ನು ನಾವು ಸಿನಿಮಾಗಳಲ್ಲಿ, ಕಾಮಿಕ್​ಗಳಲ್ಲಿ, ಪುರಾಣಗಳಲ್ಲಿ ನೋಡಿದ್ದೇವೆ ಕೇಳಿದ್ದೇವೆ. ಆದರೆ, ನನ್ನ ನಿಮ್ಮಂಥ ಸಾಮಾನ್ಯ ಮನುಷ್ಯರಲ್ಲೂ ಕೆಲವು ಸೂಪರ್​ಪವರ್​ಗಳಿವೆ.

    ಆಶ್ಚರ್ಯವಾಯ್ತಾ? ನಿಜ ಹೇಳ್ತಿದ್ದೀನಿ. ನಮ್ಮ-ನಿಮ್ಮಲ್ಲೂ ಸೂಪರ್​ಪವರ್​ಗಳು ಇವೆ. ಆದರೆ, ನಾವು ಆ ಬಗ್ಗೆ ಹೆಚ್ಚು ಗಮನಹರಿಸಲ್ಲ ಅಷ್ಟೇ. ಅದರಲ್ಲಿ ಮೊದಲನೆಯದು ಫೋಕಸ್. ಏಕಾಗ್ರತೆಯಿಂದ ಒಂದು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ದೊಡ್ಡ ಸೂಪರ್​ಪವರ್. ‘ರಾಮ ಶ್ಯಾಮ ಭಾಮ’ ಚಿತ್ರದಲ್ಲಿ ಒಂದು ಡೈಲಾಗ್ ಇತ್ತು. ‘ಹಾಲ್​ನ ಲೈಟ್ ಸ್ವಿಚ್ ಹಾಕಿದರೆ, ಬಾಥ್​ರೂಮ್ ಲೈಟ್ ಯಾಕೆ ಉರಿಯುತ್ತಿದೆ’ ಅಂತ. ಈ ಡೈಲಾಗ್​ನ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಹಾಲ್​ನ ಸ್ವಿಚ್ ಹಾಕಿದರೆ, ಹಾಲ್​ನ ದೀಪ ಉರಿಯಬೇಕು. ಬಾಥ್​ರೂಮ್ ಲೈಟ್ ಸ್ವಿಚ್ ಹಾಕಿದರೆ ಬಾಥ್​ರೂಮ್ ಲೈಟ್ ಉರಿಯಬೇಕು, ಅಲ್ವಾ? ಅದೇ ರೀತಿ ಒಂದು ಕೆಲಸ ಮಾಡಬೇಕಾದರೆ ನಮ್ಮ ತಲೆ ಆ ಕೆಲಸದಲ್ಲೇ ಇರಬೇಕು. ಬೇರೆ ಕೆಲಸದ ಕಡೆ ತಲೆ ಹೋಗಬಾರದು. ಮ್ಯಾಥ್ಸ್ ಹೋಂವರ್ಕ್ ಮಾಡುತ್ತಿರಬೇಕಾದರೆ, ‘ವೀಕೆಂಡ್ ವಿಥ್ ರಮೇಶ್’ ಶುರುವಾಯ್ತೋ ಏನೋ ಅಂತ ಟಿವಿ ಕಡೆ ಗಮನ ಹೋಗಬಾರದು. ‘ವೀಕೆಂಡ್ ವಿಥ್ ರಮೇಶ್’ ನೋಡಬೇಕಾದರೆ, ಮ್ಯಾಥ್ಸ್ ಕೆಲಸ ಇನ್ನೂ ಮುಗಿಸಿಲ್ಲವಲ್ಲ ಅಂತ ತಲೆ ಹೋಗಬಾರದು.

    ಬಹುತೇಕ ಸಮಯ ನಾವು ದೈಹಿಕವಾಗಿ ಇರುವ ಜಾಗದಲ್ಲಿ ಮಾನಸಿಕವಾಗಿ ಇರೋದಿಲ್ಲ. ಒಬ್ಬರ ಜತೆಗೆ ಮಾತನಾಡುವಾಗ ತಲೆ ಅಲ್ಲಾಡಿಸುತ್ತಿರುತ್ತೀವಿ. ಆದರೆ, ತಲೆಯಲ್ಲಿ ಬೇರೇನೋ ಓಡುತ್ತಿರುತ್ತದೆ. ಹೆಂಡತಿ ಆಸಕ್ತಿಯಿಂದ ಏನೋ ಒಂದು ವಿಷಯವನ್ನು ವಿವರಿಸುತ್ತಿರಬೇಕಾದರೆ, ತಲೆ ಆಡಿಸುತ್ತಲೇ ಇರುತ್ತೇವೆ. ಆದರೆ, ನಮ್ಮಆಲೋಚನೆ ನಾಳೆ ಇನ್​ಸ್ಟಾಲ್​ವೆುಂಟ್ ಹೇಗೆ ಕಟ್ಟೋದು ಎನ್ನುವುದರ ಬಗ್ಗೆ ಓಡುತ್ತಿರುತ್ತದೆ. ನಾವು ಯಾವುದರಲ್ಲೂ ಸರಿಯಾಗಿ ಫೋಕಸ್ ಮಾಡುತ್ತಿಲ್ಲ ಎನ್ನುವುದೇ ಸತ್ಯ. ಮೊದಲನೆಯದು, ಅಗತ್ಯವಾದ ವಿಷಯಗಳಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕು. ಎರಡನೆಯದು, ತೊಡಗಿಸಿಕೊಳ್ಳುವ ವಿಷಯದಲ್ಲಿ ನೂರಕ್ಕೆ ನೂರು ಫೋಕಸ್ ಮಾಡುವುದಕ್ಕೆ ಪ್ರಯತ್ನಿಸಬೇಕು. ಈ ಎರಡು ವಿಷಯಗಳನ್ನು ಸರಿಯಾಗಿ ಪಾಲಿಸಿಬಿಟ್ಟರೆ, ನಾವು ಸೂಪರ್​ವ್ಯಾನ್, ಐರನ್​ವ್ಯಾನ್ ಆಗೋದರಲ್ಲಿ ಸಂಶಯವೇ ಇಲ್ಲ.

    ಮಹಾತ್ಮ ಗಾಂಧಿ, ಮದರ್ ತೆರೇಸಾ, ಥಾಮಸ್ ಆಲ್ವಾ ಎಡಿಸನ್… ಇವರೆಲ್ಲ ಬೇರೆಬೇರೆ ಸ್ವಭಾವದವರು. ಬೇರೆಬೇರೆ ಕ್ಷೇತ್ರದವರು. ಈ ಎಲ್ಲ ದೊಡ್ಡ ಸಾಧಕರಲ್ಲಿ ಇದ್ದಂತಹ ಸಾಮಾನ್ಯ ಗುಣ, ಸಾಮಾನ್ಯ ಸೂಪರ್​ಪವರ್ ಅಂದರೆ ಅದು ಫೋಕಸ್. ಅವರೆಲ್ಲ ಏಕಾಗ್ರತೆಯಿಂದ ಕೆಲಸ ಮಾಡುತ್ತಿದ್ದರು. ನನಗೆ, ನಿಮಗೆ ಸಿಗುವಂತಹ 24 ಗಂಟೆಗಳೇ ಅವರಿಗೂ ಸಿಗುತ್ತಿದ್ದುದು. ಅಷ್ಟರಲ್ಲೇ ಅವರು ಅಪಾರವಾದ ಸಾಧನೆ ಹೇಗೆ ಮಾಡಿದರು ಅಂದರೆ, ಆ 24 ಗಂಟೆಗಳನ್ನು ಬಹಳ ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದರು ಮತ್ತು ಪ್ರತಿ ಕ್ಷಣವನ್ನೂ ಅವರು ಸರಿಯಾದ ದಿಕ್ಕಿನಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಗಾಂಧಿ ಎನ್ನುವ ಕಾರಣಕ್ಕೆ ಅವರಿಗೆ ದೇವರು ದಿನಕ್ಕೆ 48 ಗಂಟೆಗಳನ್ನು ಕೊಡಲಿಲ್ಲ. ಅವರಿಗೆ ಸಿಕ್ಕಿದ್ದೂ 24 ಗಂಟೆಗಳು ಮಾತ್ರ. ಹಾಗಾಗಿ ಇಲ್ಲಿ ಫೋಕಸ್ ಬಹಳ ಮುಖ್ಯ. ನೀವು ಮನಸ್ಪೂರ್ತಿಯಾಗಿ ಏಕಾಗ್ರತೆಯಿಂದ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಂಡರೆ, ನಿಮಗಿರುವ ಅದೇ 24 ಗಂಟೆಗಳು, 48 ಗಂಟೆಗಳಾಗಿ ಪರಿವರ್ತನೆ ಆಗಿದೆಯೇನೋ ಅಂತ ಅನಿಸುತ್ತದೆ. ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಪರಿಪೂರ್ಣವಾಗಿ ಗಮನ ವನ್ನು ಕೇಂದ್ರೀಕರಿಸುವುದು ನಮಗೆ ಇರುವ ಮೊದಲ ಸೂಪರ್​ಪವರ್.

    ಮತ್ತೊಂದು ಮುಖ್ಯವಾದ ವಿಷಯ. ನೀವು ಸ್ಟೀರಿಂಗ್ ವ್ಹೀಲ್​ನ ಬಲಕ್ಕೆ ತಿರುಗಿಸಿದರೆ ಗಾಡಿ ಹೇಗೆ ಬಲಕ್ಕೆ ತಿರುಗುತ್ತದೋ, ಅದೇ ರೀತಿ ನೀವು ಯಾವ ಕಡೆ ಗಮನ ಕೊಡುತ್ತೀರೋ ಆ ಕಡೆ ನಿಮ್ಮ ಜೀವನವೂ ತಿರುಗುತ್ತದೆ. ನಿಮ್ಮ ಗಮನ ಓದಿನ ಕಡೆ ಇದ್ದರೆ, ಒಳ್ಳೆಯ ಮಾರ್ಕ್ಸ್ ಪಡೆಯೋದು ಗ್ಯಾರಂಟಿ. ನಿಮ್ಮ ಗಮನ ಬರೀ ದುಡ್ಡು ಮಾಡುವುದರಲ್ಲಿ ಇದ್ದರೆ ಶ್ರೀಮಂತರಾಗೋದು ಸತ್ಯ. ಆದರೆ, ಸ್ಟೀರಿಂಗ್ ವ್ಹೀಲ್ ಈ ಕಡೆ ತಿರುಗಿ, ರಸ್ತೆ ಮಿಸ್ ಆಗುವ ಅವಕಾಶ ಇದೆ. ಹಾಗಾಗಿ, ಯಾವುದರ ಬಗ್ಗೆ ಗಮನ ಕೊಡಬೇಕು ಅಂತ ಗೊಂದಲ ಆಗೋದು ಸಹಜ. ಜಾಪನೀಸ್ ಕಾನ್ಸೆಪ್ಟ್ ಒಂದಿದೆ, Ikigai (ಇಕಿಗಾಯ್) ಅಂತ. ಇಲ್ಲಿ ಕೇಳುವ ಮೊದಲ ಪ್ರಶ್ನೆ ಎಂದರೆ, ನಿಮಗೇನು ಇಷ್ಟ ಅಂತ? ನನಗೆ ಹಾಡೋಕೆ ಇಷ್ಟ ಅಂತ ನೀವು ಉತ್ತರ ಕೊಟ್ಟಿರಿ ಅಂತಿಟ್ಟುಕೊಳ್ಳೋಣ. ಆಗ ಎರಡನೇ ಪ್ರಶ್ನೆ ಬರುತ್ತದೆ. ನಿಮಗೆ ಚೆನ್ನಾಗಿ ಹಾಡೋಕೆ ಬರುತ್ತದಾ ಎಂದು. ನಿಮಗೆ ಒಂದು ವಿಷಯ ಇಷ್ಟವಾದರೆ ಮಾತ್ರ ಸಾಲದು. ನಿಮಗೆ ಅದರಲ್ಲಿ ನೈಪುಣ್ಯತೆ ಇದೆಯಾ ಅಥವಾ ಮುಂದೆ ನಿಪುಣರಾಗುವ ಸಾಧ್ಯತೆ ಇದೆಯಾ? ಅದಕ್ಕೆ ಬೇಕಾದ ತಯಾರಿ ನೀವು ಮಾಡಿಕೊಂಡಿದ್ದೀರಾ? ಎಂಬ ಕಾರಣಕ್ಕೆ ಈ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೂರನೇ ಪ್ರಶ್ನೆ, ಅದಕ್ಕೆ ಮಾರ್ಕೆಟ್ ಇದೆಯಾ ಎಂದು. ಏಕೆಂದರೆ, ನೀವು ಇಷ್ಟಪಟ್ಟು, ನೈಪುಣ್ಯತೆ ಹೊಂದಿರುವ ವಿಷಯಕ್ಕೆ, ನಿಮ್ಮ ಜೀವನವನ್ನು ಮತ್ತು ನಿಮ್ಮ ಕುಟುಂಬವನ್ನು ಚೆನ್ನಾಗಿ ನಡೆಸುವಷ್ಟು ಸಂಪಾದನೆ ಇರಬೇಕು. ಇಲ್ಲವಾದರೆ ಅದು ವ್ಯರ್ಥ. ಅದಾದ ಮೇಲೆ, ಅದರ ಅಗತ್ಯ ಜಗತ್ತಿಗಿದೆಯಾ ಎಂಬ ನಾಲ್ಕನೆಯ ಪ್ರಶ್ನೆ ಬರುತ್ತದೆ.

    ನಿಮಗೆ ಆಟಂ ಬಾಂಬ್ ಮಾಡುವುದರಲ್ಲಿ ಆಸಕ್ತಿ ಇರಬಹುದು. ಅದರಲ್ಲಿ ನೀವು ಎಕ್ಸ್​ಪರ್ಟ್ ಇರಬಹುದು. ಅದಕ್ಕೆ ನಿಮಗೆ ದುಡ್ಡೂ ಸಿಗಬಹುದು. ಆದರೆ, ಜಗತ್ತಿಗೆ ಅದರ ಅಗತ್ಯವಿದೆಯಾ? ಇಲ್ಲವಾದರೆ ಅದರಿಂದ ಏನು ಪ್ರಯೋಜನವಾದಂತಾಯಿತು? ಹಾಗಾಗಿ ಇಂತಹ ವಿಷಯಗಳ ಮೇಲೆ ಫೋಕಸ್ ಮಾಡಬೇಡಿ ಎಂದು Ikigai ಹೇಳುತ್ತದೆ. ನಿಮಗೆ ಒಂದು ವಿಷಯ ಬಹಳ ಇಷ್ಟವಾಗಿದ್ದು, ನೀವದರಲ್ಲಿ ನಿಪುಣರಾಗಿದ್ದು, ಅದಕ್ಕೆ ಒಂದು ಮಾರ್ಕೆಟ್ ಇದ್ದು, ಅದು ಜಗತ್ತಿಗೂ ಅಗತ್ಯವಾಗಿದ್ದು … ಅದಕ್ಕಿಂತ ಇನ್ನೊಂದು ಸಂತೋಷವಾದ ಆಯ್ಕೆ ಇನ್ನೊಂದಿರುವುದಿಲ್ಲ. ಇಂಥ ವಿಷಯಗಳ ಕಡೆ ಫೋಕಸ್ ಮಾಡಿ ಗಮನಕೊಟ್ಟರೆ, ನಿಮ್ಮ ಜೀವನವೆನ್ನುವ ಗಾಡಿ ಸಂತೋಷವೆನ್ನುವ ಹೈವೆಯಲ್ಲಿ ಸೂಪರ್​ಸ್ಪೀಡ್​ನಲ್ಲಿ ಮುಂದುವರಿಯುತ್ತದೆ.

    ನಮಗಿರುವ ಎರಡನೇ ಸೂಪರ್​ಪವರ್ ಎಂದರೆ ಅದು ಸಂಬಂಧಗಳು. ದೇವರು ಎಲ್ಲರಿಗೂ ಹಾರೋ ಶಕ್ತಿ ಕೊಟ್ಟಿದ್ದಾನಂತೆ. ಆದರೆ, ಎಲ್ಲರಿಗೂ ಕೊಟ್ಟಿರುವುದು ಒಂದೇ ರೆಕ್ಕೆ. ನಿಮಗೆ ಇನ್ನೊಂದು ರೆಕ್ಕೆ ಬೇಕೆಂದರೆ, ಇನ್ನೊಬ್ಬರ ಕೈ ಹಿಡಿಯಬೇಕು. ಅವರ ರೆಕ್ಕೆಯೂ ನಿಮ್ಮ ರೆಕ್ಕೆ ಆಗುತ್ತದೆ. ಆಗ ಇಬ್ಬರೂ ಜತೆಗೆ ಹಾರಬಹುದು ಅಂತ ಯಾರೋ ಹಿರಿಯರು ಹೇಳಿದ್ದರು. ಅದು ಸತ್ಯ. ಮನಸ್ಪೂರ್ತಿಯಾಗಿ ನಿಮ್ಮ ಹಿತ ಬಯಸುವ ಸಂಬಂಧ, ನಿಮಗೆ ಸಿಗುವಂತಹ ಅತೀ ದೊಡ್ಡ ಸೂಪರ್​ಪವರ್ ಎಂದರೆ ತಪ್ಪಿಲ್ಲ. ನಿಮಗೆ ಸಾಥ್ ನೀಡುವ ಸಂಗಾತಿ, ನಿಮ್ಮ ಐಡಿಯಾಗೆ ಬೆನ್ನು ತಟ್ಟುವ ಬಾಸ್, ನನ್ನ ಸಿನಿಮಾಗೆ ದುಡ್ಡು ಹಾಕುವ ನಿರ್ವಪಕ, ನಿಮ್ಮ ಏಳಿಗೆಗೆ ಜತೆಯಾಗುವ ಫ್ರೆಂಡ್, ನನ್ನ ಚಿತ್ರ ನೋಡಿ ಮೆಚ್ಚುವ ಅಭಿಮಾನಿ … ನಮಗಿರುವ ಅತೀ ದೊಡ್ಡ ಸೂಪರ್​ಪವರ್.

    ನಮಗಿರುವ ಮೂರನೇ ಸೂಪರ್​ಪವರ್ ಎಂದರೆ ಅದು ಆತ್ಮವಿಶ್ವಾಸ. ಇದರ ಬಗ್ಗೆ ಮುಂದಿನ ಭಾನುವಾರ ಚರ್ಚೆ ಮಾಡೋಣ್ವಾ?

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts