More

    ಮೂಟೆ ಎಷ್ಟು ಭಾರವಾದರೂ ಹೊತ್ತು ನಡೆ ಮುಂದೆ…; ಸ್ಫೂರ್ತಿಯಿಂದ ರಮೇಶ್ ಅರವಿಂದ್…

    ಮೂಟೆ ಎಷ್ಟು ಭಾರವಾದರೂ ಹೊತ್ತು ನಡೆ ಮುಂದೆ...; ಸ್ಫೂರ್ತಿಯಿಂದ ರಮೇಶ್ ಅರವಿಂದ್...ಎಷ್ಟೋ ಸಲ ನಮ್ಮ ನಡವಳಿಕೆ ನಮಗೇ ಆಶ್ಚರ್ಯ ತರುತ್ತದೆ. ನಾನ್ಯಾಕೆ ಹಾಗೆ ಮಾಡಿದೆ, ಇಷ್ಟು ಸಣ್ಣ ವಿಷಯಕ್ಕೆ ಯಾಕೆ ಕೋಪ ಮಾಡಿಕೊಂಡೆ, ಬೇಡದಿರುವ ವಸ್ತುವಿಗೆ ಯಾಕೆ ಇಷ್ಟೊಂದು ಖರ್ಚು ಮಾಡಿದೆ… ಈ ತರಹದ ಹಲವು ಪ್ರಶ್ನೆಗಳಿಗೆ ಉತ್ತರಗಳು ನಮ್ಮ ಮೂಟೆಯಲ್ಲಿರುತ್ತವೆ.

    ಸಿಟಿ ಮಾರ್ಕೆಟ್​ನಲ್ಲಿ ಕೂಲಿಗಳು ಮೂಟೆಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು. ಬೆನ್ನಮೇಲೆ ಆಲೂಗಡ್ಡೆನೋ, ಈರುಳ್ಳಿನೋ ಇತ್ತು. ಐವತ್ತು ಅರವತ್ತು ಕೆಜಿ ತೂಕ ಇರಬಹುದು. ಬೆನ್ನ ಮೇಲೆ ಇಂಥಾ ಭಾರವನ್ನು ಹೊತ್ತು ಹೇಗೆ ಹೋಗ್ತಾರೆ ಅಂತ ಯೋಚಿಸುವಾಗ, ಇನ್ನೊಂದು ಆಲೋಚನೆ ಬಂತು. ಅವರಷ್ಟೇ ಅಲ್ಲ, ನಾವು ಸಹ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೂಟೆಗಳನ್ನು ಹೊರುತ್ತಿದ್ದೇವೆ. ನಮಗೆ ಕಾಣದೇ ಇರುವ invisible, ನಾವು ಊಹಿಸಲಾರದಂತಹ ಭಾರವಾದ ಮೂಟೆ ಅದು. ಆದರೆ, ನಮ್ಮ ಮೂಟೆಯಲ್ಲಿ ಆಲೂಗಡ್ಡೆ, ಈರುಳ್ಳಿ ಇಲ್ಲ ಎನ್ನುವುದಷ್ಟೇ ವ್ಯತ್ಯಾಸ.

    ಹಾಗಾದರೆ, ನಾವು ಹೊರುತ್ತಿರುವ ಆ ಮೂಟೆಯಲ್ಲೇನಿದೆ? ಎರಡನೇ ಕ್ಲಾಸ್​ನಲ್ಲಿದ್ದಾಗ ಟೀಚರ್ ಅಂಗೈ ಮೇಲೆ ಪಟಾರ್ ಅಂತ ಹೊಡೆದಿದ್ದು, ಯಾವುದೋ ಹುಡುಗಿ ಪ್ರೇಮಪತ್ರವನ್ನು ಹರಿದು ಬಿಸಾಕಿದ್ದು, ಯಾರೋ ಹುಡುಗ ಸೋಡಾಬುಡ್ಡಿ ಅಥವಾ ಡುಮ್ಮಿ ಅಂತ ಕರೆದಿದ್ದು, ಅಪ್ಪ ಸಾಲ ತೀರಿಸೋಕೆ ಆಗದೆ ಒದ್ದಾಡಿದ್ದು, ಮೊದಲ ಸಲ ಹಾಡಿದಾಗ ಯಾರೋ ಚಪ್ಪಾಳೆ ತಟ್ಟಿದ್ದು, ನಾವು ಮಾಡಿದ ಅಡುಗೆನಾ ಯಾರೋ ಬೆರಳು ಚಪ್ಪರಿಸಿಕೊಂಡು ಆಹಾ ಅಂತ ಹೊಗಳಿ ತಿಂದಿದ್ದು, ಪಕ್ಕದಮನೆ ಕಿಟಕಿಯಿಂದ ಆ ಸುಂದರವಾದ ಹುಡುಗಿ ನೋಡಿ ನಕ್ಕಿದ್ದು… ಹೀಗೆ ನಮ್ಮ ಜೀವನದಲ್ಲಿ ನಡೆದ ಹಿತಕರ-ಅಹಿತಕರ ಎಲ್ಲ ವಿಷಯಗಳೂ ಆ ಮೂಟೆ ಒಳಗೆ ಕೂತಿರುತ್ತವೆ. ನಮ್ಮ ಅಪ್ಪ, ಅಮ್ಮ, ಸೋದರ-ಸೋದರಿಯರು, ಸಂಬಂಧಿಕರು, ಶಿಕ್ಷಕರು, ಸ್ನೇಹಿತರು, ಅಪರಿಚಿತರು ಹೀಗೆ ಎಲ್ಲರ ಜತೆ ಆದಂತಹ ಅನುಭವಗಳು ಈ ಮೂಟೆಯಲ್ಲಿ ತುಂಬಿರುತ್ತವೆ. ಈಗ ಪ್ರಸ್ತುತ ನಾವು ತೆಗೆದುಕೊಳ್ಳುವ ನಿರ್ಧಾರಗಳಿಗೂ ಆ ಮೂಟೆಯೊಳಗಿರುವ ಯಾವುದೋ ಒಂದು ಅಂಶ ಕಾರಣವಾಗಿರುತ್ತದೆ. ನಮಗೇ ಗೊತ್ತಿಲ್ಲದೆ ನಮ್ಮ ನಿರ್ಧಾರಗಳನ್ನು ಕಂಟ್ರೋಲ್ ಮಾಡುವ ರಿಮೋಟ್ ಆ ಮೂಟೆ ಒಳಗಿದೆ.

    ಇದನ್ನು ಇನ್ನೂ ಸ್ಪಷ್ಟವಾಗಿ ಅರ್ಥ ಮಾಡಿಸೋಕೆ ಒಂದು ಘಟನೆ ಹೇಳುತ್ತೇನೆ, ಕೇಳಿ. ನಾನು ಮತ್ತು ಒಬ್ಬ ನಿರ್ದೇಶಕರು ಬಹಳ ಕ್ಲೋಸ್ ಆಗಿದ್ದೆವು. ಇಬ್ಬರೂ ಆಗೆಲ್ಲ ಆಟೋ, ಬಸ್​ನಲ್ಲಿ ಒಟ್ಟಿಗೆ ಓಡಾಡುತ್ತಿದ್ದೆವು. ನಾವಿಬ್ಬರೂ ಜತೆಗೆ ಒಂದು ಚಿತ್ರ ಸಹ ಮಾಡಿದ್ದೇವೆ. ಆ ಚಿತ್ರ ಸಿಲ್ವರ್ ಜ್ಯೂಬಿಲಿ ಹಿಟ್ ಆಯಿತು. ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ಆ ನಿರ್ದೇಶಕರು ಮಾಡಿದ ಮೊದಲ ಕೆಲಸವೆಂದರೆ, ಐಷಾರಾಮಿ ಕಾರ್ ತೆಗೆದುಕೊಂಡಿದ್ದು. ಆ ಕಾರ್​ನ ಮಾಸಿಕ ಕಂತು (ಇಎಂಐ) ಕಟ್ಟೋದೇ ಬಹಳ ಕಷ್ಟ. ಹಾಗಿರುವಾಗ, ಅವರಿಗೆ ಆ ಕಾರ್ ಖರೀದಿಸಬೇಕು ಎಂದು ಅನಿಸಿದ್ದು ಯಾಕೆಂದರೆ, ಅವರ ಮೂಟೆಯಲ್ಲಿರುವ ಒಂದು ಹಳೆಯ ನೆನಪು.

    ಹೈಸ್ಕೂಲ್​ನಲ್ಲಿ ಓದುತ್ತಿದ್ದಾಗ ಅವರ ಜತೆ ಇದ್ದ ಒಬ್ಬ ಹುಡುಗ ಕಾರ್​ನಲ್ಲಿ ಓಡಾಡುತ್ತಿದ್ದನಂತೆ. ಒಂದು ದಿನ ಇವರು, ಆ ಕಾರ್​ನಲ್ಲಿ ಕುಳಿತುಕೊಂಡರಂತೆ. ಅದನ್ನು ನೋಡಿದ ಆ ಹುಡುಗನ ಅಪ್ಪ, ‘ನೀನ್ಯಾಕೆ ಕಾರ್​ನಲ್ಲಿ ಕೂತಿದ್ದೀಯಾ’ ಎಂದು ಕೆಳಗೆ ದಬ್ಬಿದ್ದಾರೆ. ಅದನ್ನು ಕಂಡು ಹುಡುಗರೆಲ್ಲಾ ನಕ್ಕಿದ್ದರಿಂದ, ಇವರಿಗೆ ಬಹಳ ಅವಮಾನವಾಗಿದೆ. ಯಶಸ್ಸು ಕಂಡಾಗ ಎಲ್ಲಕ್ಕಿಂತ ಮೊದಲು ಕಾರ್ ಖರೀದಿಸಬೇಕು ಎಂದು ಆ ಹುಡುಗನ ತಲೆಯಲ್ಲಿ ಕೂತುಬಿಟ್ಟಿದೆ. ಅವರ ಮೂಟೆಯಲ್ಲಿದ್ದ ಆ ನೆನಪು ಹಠವಾಗಿ ಬದಲಾಗಿ, ಯಶಸ್ಸನ್ನು ಕಂಡಾಗ ಕಾರ್ ಕೊಳ್ಳುವ ಹಾಗೆ ಮಾಡಿದೆ. ಹೀಗೆ ಯಾವಾಗಲೋ, ಎಲ್ಲೋ ನಡೆದ ಘಟನೆಗಳು ನಮ್ಮ invisible ಮೂಟೆ ಒಳಗೆ ಕೂತು, ನಮ್ಮ ನಿರ್ಧಾರಗಳನ್ನು ನಿರ್ಧರಿಸುತ್ತಿರುತ್ತವೆ.

    ಎಷ್ಟೋ ಸಲ ಟಿವಿಯಲ್ಲಿ ಯಾರೋ ಮಾತಾಡುವಾಗ, ಇವರು ಯಾಕೆ ಹೀಗೆ ಮಾತಾಡುತ್ತಿದ್ದಾರೆ ಅಂತಾನೋ, ಯಾಕೆ ಹೀಗಾಡುತ್ತಿದ್ದಾರೆ ಅಂತಾನೋ ನಮಗೆ ಅನಿಸಬಹುದು. ಅದಕ್ಕೆ ಕಾರಣ, ನಮಗೆ ನಮ್ಮ ಮೂಟೆಯ ಪರಿಚಯ ಮಾತ್ರ ಇದೆ. ಇನ್ನೊಬ್ಬರ ಮೂಟೆ ಮತ್ತು ಅದರಲ್ಲಿರುವ ಅಂಶಗಳ ಬಗ್ಗೆ ನಮಗೆ ಜ್ಞಾನ ಇರುವುದಿಲ್ಲ. ಒಬ್ಬರು ಒಂದು ರೀತಿ ನಡೆದುಕೊಳ್ಳೋಕೆ, ಪ್ರತಿಕ್ರಿಯೆ ನೀಡುವುದಕ್ಕೆ ಕಾರಣ ಅವರಿಗೆ ಆದ ಅನುಭವಗಳು, ಅವರ ಮನಸ್ಸಿಗೆ ಆದ ಗಾಯಗಳು. ಅವರ ಮೂಟೆಯ ಭಾರ ಅವರಿಗೆ ಮಾತ್ರ ಗೊತ್ತಿರುತ್ತದೆ. ನನ್ನ ಮೂಟೆಯ ಭಾರ ನನಗೆ ಮಾತ್ರ ಗೊತ್ತಿರುತ್ತದೆ. ನಮ್ಮ ಕುಟುಂಬದಲ್ಲಿ ನಡೆದ ಡ್ರಾಮಾ, ನಮ್ಮ ಧರ್ಮದಲ್ಲಿ ನಡೆದ ವಿಷಯಗಳು, ನಮ್ಮ ಊರಲ್ಲಿ ನಡೆದ ಅನ್ಯಾಯ, ನಮ್ಮ ಕಿವಿಗೆ ಬಿದ್ದ ವಿಷಯಗಳು, ನಾವು ಓದಿದಂತಹ ಫೇಕ್ ನ್ಯೂಸ್​ಗಳು, ನಾವು ನೋಡಿದಂತಹ ಚಿತ್ರ, ನಮ್ಮ ಒಡನಾಟದಲ್ಲಿ ಬಂದು ಹೋದಂತಹ ವ್ಯಕ್ತಿಗಳು, ನಮ್ಮ ಮೊದಲನೇ ಪ್ರೀತಿ… ಹೀಗೆ ನಮ್ಮ ಮೂಟೆಯಲ್ಲಿರುವ ಈ ಎಲ್ಲ ಅಂಶಗಳು ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ.

    ಎಷ್ಟೋ ಸಲ ನಮ್ಮ ನಡವಳಿಕೆ ನಮಗೇ ಆಶ್ಚರ್ಯ ತರುತ್ತದೆ. ನಾನ್ಯಾಕೆ ಹಾಗೆ ಮಾಡಿದೆ, ಇಷ್ಟು ಸಣ್ಣ ವಿಷಯಕ್ಕೆ ಯಾಕೆ ಕೋಪ ಮಾಡಿಕೊಂಡೆ, ಬೇಡದಿರುವ ವಸ್ತುವಿಗೆ ಯಾಕೆ ಇಷ್ಟೊಂದು ಖರ್ಚು ಮಾಡಿದೆ… ಈ ತರಹದ ಹಲವು ಪ್ರಶ್ನೆಗಳಿಗೆ ಉತ್ತರಗಳು ನಮ್ಮ ಮೂಟೆಯಲ್ಲಿರುತ್ತವೆ. ಹಾಗಾಗಿ ಯಾವಾಗಲಾದರೂ ಅವಿವೇಕಿ ತರಹ unreasonable ಆಗಿ ಆಡ್ತಿದ್ದೀನಿ ಅಂತ ನಿಮಗೆ ಅನಿಸಿದರೆ, ನಿಮ್ಮ ಬೆನ್ನ ಹಿಂದೆ ಬಚ್ಚಿಟ್ಟುಕೊಂಡು ಕೆಲಸ ಮಾಡುವ ಮೂಟೆಯನ್ನು ಒಮ್ಮೆ ಪರಿಶೀಲಿಸಿ. ನೀವು ಮಾಡಿದ ತಪ್ಪಿಗೆ ಕಾರಣ ಕಂಡರೆ, ತಿದ್ದಿಕೊಳ್ಳಬೇಕು ಅನಿಸಿದರೆ, ತಿದ್ದಿಕೊಳ್ಳಿ. ಅದೇ ತರಹ ಇನ್ನೊಬ್ಬರು ವಿಚಿತ್ರವಾಗಿ ಆಡಿದಾಗ, ಒಂದು ಕ್ಷಣ ಅವರ ಮೂಟೆಯಲ್ಲಿ ಏನಿರಬಹುದು ಎಂದು ಯೋಚನೆ ಮಾಡುವಷ್ಟು ತಾಳ್ಮೆ ಬೆಳೆಸಿಕೊಳ್ಳಿ.

    ಒಂದು ಕಡೆ, ಈ ಫ್ಲಾಶ್​ಬ್ಯಾಕ್​ಗಳು ಮತ್ತು ಮೂಟೆಯಿಂದ ನೀವು ಮಾಡುತ್ತಿರುವ ಹುಚ್ಚಾಟಗಳು ನಿಮಗೆ ಅರ್ಥವಾದರೆ, ಇನ್ನೊಂದು ಕಡೆ ಇನ್ನೊಬ್ಬರ ಬಗ್ಗೆ ಸಹಾನುಭೂತಿಯನ್ನು ಬೆಳೆಸುತ್ತದೆ. ಕರೊನಾ ಸಮಯದಲ್ಲಿ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಮಗೆ ತೊಂದರೆ ಆದರೂ, ನಮಗೆ ಸಮಾಧಾನ ಸಿಕ್ಕಿದ್ದು ಇದರಲ್ಲಿ ನಾನು ಒಂಟಿ ಅಲ್ಲ, ಇಡೀ ಪ್ರಪಂಚಕ್ಕೇ ಸಮಸ್ಯೆ ಇದೆ ಎಂಬ ವಿಷಯ ಅರಿವಾದಾಗ. ಇದು ಕರೊನಾ ಸಮಯದಲ್ಲಿ ಮಾತ್ರವಲ್ಲ ಎಲ್ಲ ಕಾಲದಲ್ಲೂ ಅನ್ವಯಿಸುತ್ತದೆ. ನಿಮ್ಮ ನೋವು ಏಕಮಾತ್ರವಲ್ಲ, ಅನನ್ಯವಲ್ಲ. ಅದೇ ನೋವನ್ನು ಅನುಭವಿಸುತ್ತಿರುವ, ನಿಮ್ಮ ಮೂಟೆಗಿಂತ ಭಾರವಾದ ಮೂಟೆಯನ್ನು ಹೊತ್ತುಕೊಂಡಿರುವ ಹಲವರು ಗೆಲ್ಲುತ್ತಿದ್ದಾರೆ. ಹಾಗಾಗಿ, ಸೋತು ಕೂರಬೇಡಿ. ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ, ಮೂಟೆ ಎಷ್ಟು ಭಾರವಾದರೂ ಹೊತ್ತು ನಡೆ ಮುಂದೆ…

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts