More

    ಅದಕ್ಕೇ ಹೇಳಿದ್ದು, ಸ್ವಲ್ಪ ಗಮನ ಕೊಡಿ ಸಾರ್…; ಸ್ಫೂರ್ತಿಯಿಂದ ರಮೇಶ್ ಅರವಿಂದ್…

    ಅದಕ್ಕೇ ಹೇಳಿದ್ದು, ಸ್ವಲ್ಪ ಗಮನ ಕೊಡಿ ಸಾರ್...; ಸ್ಫೂರ್ತಿಯಿಂದ ರಮೇಶ್ ಅರವಿಂದ್...ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ಹೈಸ್ಕೂಲ್ ಮಕ್ಕಳಿಗೆ ಅಂತ ಆರ್360 ಎಂಬ ಕಾರ್ಯಕ್ರಮ ಮಾಡಿದ್ದೆ. ಎಲ್ಲ ವಿದ್ಯಾರ್ಥಿಗಳಲ್ಲೂ ವಿಶೇಷ ಶಕ್ತಿ ಇರುತ್ತದೆ. ಕ್ಲಾಸ್​ನಲ್ಲಿ ಮೊದಲ ರ್ಯಾಂಕ್ ಪಡೆಯುವ ವಿದ್ಯಾರ್ಥಿ ಮಾತ್ರ ಗ್ರೇಟ್ ಅಲ್ಲ, ಕೊನೆಯ ರ್ಯಾಂಕ್ ಪಡೆಯುವ ವಿದ್ಯಾರ್ಥಿ ಸಹ ಗ್ರೇಟ್. ಅವನಲ್ಲೂ ಏನೋ ಒಂದು ಪ್ಲಸ್​ಪಾಯಿಂಟ್ ಇರುತ್ತದೆ. ಅದನ್ನು ಗುರುತಿಸಿ, ಸರಿಯಾದ ದಿಕ್ಕಿನಲ್ಲಿ ಅವನು ನಡೆಯೋಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿತವಾಗಿತ್ತು.

    ಕಾರ್ಯಕ್ರಮ ಗಂಭೀರವಾಗಿ, ಕೆಲವೊಮ್ಮೆ ತಮಾಷೆಯಾಗಿ ನಡೆಯುತ್ತಿತ್ತು. ಟೀಚರ್ ಒಬ್ಬರು ವಿದ್ಯಾರ್ಥಿಯನ್ನ ತೋರಿಸಿ, ‘ಇವ್ನು ಕ್ಲಾಸ್​ಗೆ ಯಾವಾಗ್ಲೂ ಲೇಟ್ ಆಗಿ ಬರ್ತಾನೆ, ಏನಾದ್ರೂ ಮಾಡಿ ಸಾರ್’ ಎಂದರು. ಆ ಹುಡುಗನನ್ನು ಸ್ಟೇಜ್ ಮೇಲೆ ಕರೆದು ಮಾತನಾಡಿಸಿದೆ. ‘ಯಾಕಪ್ಪ ಲೇಟ್ ಆಗಿ ಬರ್ತೀಯಂತೆ?’ ಅಂತ ಕೇಳಿದೆ. ಆ ಹುಡುಗ ಸರಿಯಾಗಿ ಉತ್ತರ ನೀಡಲಿಲ್ಲ. ನನ್ನ ಕೈಯಲ್ಲಿರೋ ದುಬಾರಿ ವಾಚ್ ಬಿಚ್ಚಿ, ಅವನ ಕೈಗೆ ಹಾಕಿ, ‘ಇನ್ಮುಂದೆ ಲೇಟ್ ಆಗಿ ಬರಬಾರದು’ ಎಂದೆ. ಅಷ್ಟೇ ಅಲ್ಲ, ‘ಲೇಟ್ ಆಗಿ ಬರಲ್ಲ ಅಂತ ಎಲ್ಲರ ಮುಂದೆ ಹೇಳು’ ಎಂದೆ. ಅವನು ಕಂಗಾಲಾದ. ಒಮ್ಮೆ ವಾಚ್ ನೋಡಿದ. ನಂತರ ನನ್ನ ನೋಡಿದ. ಕೊನೆಗೆ ನೆರೆದಿದ್ದ ಜನರನ್ನ ನೋಡಿ, ‘ಇನ್ಮುಂದೆ ಲೇಟ್ ಆಗಿ ಬರುವುದಿಲ್ಲ’ ಎಂದ. ಜನ ಚಪ್ಪಾಳೆ ಹೊಡೆದರು.

    ಇದಾಗಿ ಒಂದೂವರೆ ವರ್ಷಗಳ ನಂತರ ಆ ಟೀಚರ್ ಫೋನ್ ಮಾಡಿದ್ದರು. ‘ಆವತ್ತು ನೀವು ವಾಚ್ ಕೊಟ್ರಲ್ಲ, ಆ ನಂತರ ಆ ಹುಡುಗ ಒಂದು ದಿನವೂ ಲೇಟ್ ಆಗಿ ಬಂದಿಲ್ಲ. ನಮಗೆಲ್ಲ ಬಹಳ ಆಶ್ಚರ್ಯ ಆಯ್ತು ಸಾರ್’ ಎಂದರು. ಅವರ ಮಾತು ಕೇಳಿ ಸಾರ್ಥಕವೆನಿಸಿತು. ನಿಜ ಹೇಳಬೇಕೆಂದರೆ, ಅಂದು ನಾನು ಕೊಟ್ಟಿದ್ದು ವಾಚ್ ಅಲ್ಲ, ಗಮನ ಅಷ್ಟೇ. ಅವನಿಗೆ ಸಿಕ್ಕಂತಹ ಒಂದು ಕ್ಷಣದ ಗಮನ, ಅವನ ಇಡೀ ಜೀವನವನ್ನು ಬದಲಾಯಿಸಿತ್ತು. ಹಲವು ಯುವಕ-ಯುವತಿಯರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಗಮನದ ಕೊರತೆಯೂ ಒಂದು. ಅವರ ಕುಟುಂಬದಲ್ಲೋ, ಕ್ಲಾಸ್​ರೂಮ್ಲ್ಲೋ ಅಥವಾ ಮೈದಾನದಲ್ಲೋ ಅವರಿಗೆ ಸಿಗಬೇಕಾದ ಗಮನ ಸಿಗುತ್ತಿಲ್ಲ. They are invisible. ಅವರು ಮಾಡುವ ಒಂದು ಸಣ್ಣ ಕೆಲಸವನ್ನು ನೀವು ಮೆಚ್ಚಿಬಿಟ್ಟರೆ, ಅವರ ಬೆಳವಣಿಗೆಗೆ ಮಾಡುವ ದೊಡ್ಡ ಉಪಕಾರವಾಗುತ್ತದೆ. ಡಿಪ್ರೆಶನ್ ಮತ್ತು ಹಲವು ಮಾನಸಿಕ ಸಮಸ್ಯೆಗಳಿಗೆ ಕಾರಣ, ಗಮನದ ಕೊರತೆ ಅಂತ ಮನಶ್ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ಬಾಲ್ಯದಲ್ಲಿ ಹಲವರು ಈ ಸಮಸ್ಯೆಯಿಂದ ಬಳಲಿರುತ್ತಾರೆ.

    ಆರ್360ಯ ಉದ್ದೇಶವೇ ಇದಾಗಿತ್ತು. ನನ್ನ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಒಂದಲ್ಲ ಒಂದು ರೀತಿಯಲ್ಲಿ ಸ್ಪೆಷಲ್. ಹಾಗಾಗಿ ಕಾರ್ಯಕ್ರಮದ ಆರಂಭದಲ್ಲಿ, ಎಲ್ಲ ವಿದ್ಯಾರ್ಥಿಗಳಿಗೂ I am Special ಅಂತ ಕೂಗಬೇಕು ಎಂದು ಹೇಳುತ್ತಿದ್ದೆ. ಅವರೆಲ್ಲರೂ ಬಹಳ ಖುಷಿಯಿಂದ I am Special, I am Special ಅಂತ ಕೂಗುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಗೆಲುವು, ಸೋಲು ಅಂತ ಇಲ್ಲದೆ ಎಲ್ಲರೂ ಆಡುವಂತಹ ಒಂದು ಆಟವನ್ನು ಡಿಸೈನ್ ಮಾಡಿದ್ದೆ. ಅಲ್ಲಿಂದ ಹೋಗಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿ ಕೈಯಲ್ಲೂ ಒಂದು ಸರ್ಟಿಫಿಕೆಟ್ ಇರುತ್ತಿತ್ತು. ಎಲ್ಲರೂ ಕಾರ್ಯಕ್ರಮದಲ್ಲಿ ಖುಷಿಯಿಂದ ಭಾಗವಹಿಸಿ, ಖುಷಿಯಿಂದ ಹೋಗುತ್ತಿದ್ದರು.

    ಇದು ಬರೀ ಶಾಲೆಯಲ್ಲಿ ಮಾತ್ರವಲ್ಲ, ಎಲ್ಲ ಕಡೆ ಅನ್ವಯಿಸುವಂತಹ ವಿಚಾರ. ಹೋಟೆಲ್​ನಲ್ಲಿ ನೀವು ವೇಯ್ಟರ್ ಮುಖ ನೋಡದೇ, ಬರೀ ಮೆನು ನೋಡಿ ಆರ್ಡರ್ ಮಾಡಿದಾಗ ಅವನು ಕೊಡುವ ಸರ್ವೀಸ್​ಗೂ, ನೀವು ಆ ವೇಯ್ಟರ್​ನ ಕಣ್ಣಲ್ಲಿ ಕಣ್ಣಿಟ್ಟು, ಪ್ರೀತಿಯಿಂದ ಮಾತನಾಡಿದಾಗ ಸಿಗುವ ಸರ್ವೀಸ್​ಗೂ ಬಹಳ ವ್ಯತ್ಯಾಸವಿದೆ. ಒಂದು ಮುಗುಳ್ನಗೆ ಜತೆಗೆ ಆರ್ಡರ್ ಮಾಡುವಾಗ, ಸಿಗುವ ಪ್ರತಿಕ್ರಿಯೆಯೇ ಬೇರೆ. ತಮ್ಮ ಜೀವನದಲ್ಲಿ ಬೇರೆಯವರ ಜತೆಗೆ ಬಹಳ ರೂಡ್ ಆಗಿ ನಡೆದುಕೊಂಡಿರುವ ವ್ಯಕ್ತಿಗಳು, ನನ್ನ ಜತೆಗೆ ಬಹಳ ಹಿತವಾಗಿ ಮತ್ತು ಸ್ವೀಟ್ ಆಗಿ ನಡೆದುಕೊಂಡಿರುವುದನ್ನು ನೋಡಿದ್ದೀನಿ. ಅದಕ್ಕೆ ಕಾರಣ, ನಾವು ಹೇಗಿರುತ್ತೀವೋ, ಪ್ರಪಂಚ ಸಹ ಹಾಗೆಯೇ ಇರುತ್ತದೆ. Life is a wall, you are the rubber ball ಅಂತಾರಲ್ಲ, ಅದು ಬಹಳ ನಿಜ. ಗೋಡೆಗೆ ಬಾಲ್ ಹೊಡೆದರೆ ಅದು ಹೇಗೆ ಬೌನ್ಸ್ ಆಗುತ್ತದೋ, ಅದೇ ತರಹ ನೀವು ಪ್ರೀತಿಯನ್ನು ಕೊಟ್ಟರೆ, ಅದು ಪ್ರೀತಿಯಾಗಿ ನಿಮಗೆ ವಾಪಸ್ಸು ಬರುತ್ತದೆ. ನೀವು ದ್ವೇಷ ಬಿಸಾಕಿದರೆ, ಬೌನ್ಸ್ ಆಗಿ ಬರೋದು ಆ ದ್ವೇಷವೇ.

    ಇನ್ನೊಂದು ಆಶ್ಚರ್ಯಕರ ವಿಷಯ ಏನೆಂದರೆ, ಒಂದು ಮಾವಿನ ಬೀಜ ಬಿತ್ತಿದರೆ, ಅದರಿಂದ ಒಂದಲ್ಲ, ಸಾವಿರ ಹಣ್ಣುಗಳು ಬರುತ್ತವೆ. ಅದೇ ರೀತಿ ಒಂದು ಪ್ರೀತಿಯ ಮಾತು ಸಾವಿರಾರು ಪ್ರಶಂಸೆಯ ಹಣ್ಣುಗಳನ್ನು ನೀಡುತ್ತದೆ. ಒಂದು ನೆಗೆಟಿವ್ ಯೋಚನೆ, ಅನಗತ್ಯ ಜಗಳ, ಒಂದು ಅನಗತ್ಯ ಕೋಪ ನೂರಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಗೋಲ್​ಗುಂಬಜ್ ಒಳಗೆ ಹೋಗಿ ಒಂದು ಬಾರಿ ಕೂಗಿದರೆ, ಏಳು ಬಾರಿ ಕೇಳುತ್ತದೆ ಅಂತಾರಲ್ಲ, ಅದೇ ತರಹ ಒಂದು ಸಣ್ಣ ಪ್ರೀತಿಯನ್ನು, ಮುಗುಳ್ನಗೆಯನ್ನು ಪ್ರಪಂಚಕ್ಕೆ ಕೊಟ್ಟರೆ, ಅದು multiply ಆಗಿ ನಿಮಗೆ ಪ್ರತಿಧ್ವನಿಯಾಗಿ ಕೇಳಿಸುತ್ತದೆ.

    ಅದಕ್ಕೇ ಹೇಳಿದ್ದು, ಸ್ವಲ್ಪ ಗಮನ ಕೊಡಿ ಸಾರ್...; ಸ್ಫೂರ್ತಿಯಿಂದ ರಮೇಶ್ ಅರವಿಂದ್...

    ನಮ್ಮ ಲೈಫ್​ನಲ್ಲಿ ಪ್ರತಿದಿನ ಹಲವು ಘಟನೆಗಳು ನಡೆಯುತ್ತವೆ. ಅವೆಲ್ಲ ನಮ್ಮ ನೆನಪಲ್ಲಿ ಉಳಿಯೋದಿಲ್ಲ. ಆದರೆ, ಯಾರೋ ಒಬ್ಬರು ಪ್ರೀತಿಯಿಂದ ಬೆನ್ನುತಟ್ಟಿದ್ದು, ಸರಿಯಾದ ಸಮಯದಲ್ಲಿ ಸಹಾಯ ಮಾಡಿದ್ದು, ನಮ್ಮ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಡುತ್ತದೆ. ಅದೇ ತರಹ ನಮ್ಮ ಜತೆ ಅನಗತ್ಯ ಜಗಳ ಆಡಿದೋರು, ನಮ್ಮನ್ನು ಅವಮಾನ ಮಾಡಿದೋರು, ಅನ್ಯಾಯ ಮಾಡಿದೋರು ಸಹ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ಹಾಗಾಗಿ ನೆನಪುಗಳು ಬರೀ ನೆನಪುಗಳಲ್ಲ, ಭಾವನೆಗಳ ಜತೆಗೆ ಉಳಿದು ಬಿಡುತ್ತವೆ. ನೀವು ಇನ್ನೊಬ್ಬರ ನೆನಪಲ್ಲಿ ಒಂದು ಹಿತವಾದ ಭಾವನೆ ಜತೆಗೆ ಉಳಿಯೋದು ಬಹಳ ಮುಖ್ಯ. ನಿಮ್ಮನ್ನು ನೆನಪಿಸಿಕೊಂಡರೆ ಅವರ ಮುಖದಲ್ಲಿ ಒಂದು ಮುಗುಳುನಗೆ ಬರಬೇಕು. ನೀವು ಫೋನ್ ಮಾಡಿದಾಗ, ಹೆಸರು ನೋಡಿದ ತಕ್ಷಣ ಅವರು ಫೋನ್ ಎತ್ತಬೇಕು. ನಿಮ್ಮ ಜತೆಗೆ ಮಾತನಾಡಬೇಕು ಅಂತ ಅವರಿಗೆ ಅನಿಸಬೇಕು. ಆ ತರಹ ಸಂಬಂಧಗಳನ್ನ ಹಿತವಾಗಿ ಇಟ್ಟುಕೊಂಡರೆ ಜೀವನ ಬಹಳ ಸುಲಭ, ಬಹಳ ಸುಂದರ.

    ಒಂದು ಕಥೆ ನೆನಪಾಗುತ್ತಿದೆ. ‘ನಾಳೆ ದೇವರು ಪ್ರತ್ಯಕ್ಷವಾಗುತ್ತಿದ್ದಾನೆ, ಅವನಿಗೆ ಇಷ್ಟವಾಗುವ ಉಡುಗೊರೆಯನ್ನು ಕೊಟ್ಟರೆ ವರ ಸಿಗುತ್ತದೆ’ ಅಂತ ಊರೊಂದರಲ್ಲಿ ಡಂಗೂರ ಹೊಡೆಸಿದರು. ಹೇಳಿದಂತೆ ದೇವರು ಪ್ರತ್ಯಕ್ಷವಾದ. ಮೊದಲನೇ ಮನೆಯ ರಾಮ, ಬೆಳ್ಳಿ ತಟ್ಟೇಲಿ ಬೆಳ್ಳಿ ಪಾದರಕ್ಷೆ ಮತ್ತು ಬೆಳ್ಳಿ ಕೊಡವನ್ನು ಇಟ್ಟು ದೇವರಿಗೆ ಕೊಟ್ಟ. ಎರಡನೇ ಮನೆಯ ಶ್ಯಾಮ, ಚಿನ್ನದ ತಟ್ಟೇಲಿ, ಚಿನ್ನದ ಕಿರೀಟ ಮತ್ತು ಆಭರಣಗಳನ್ನು ಇಟ್ಟು ಉಡುಗೊರೆಯಾಗಿ ಕೊಟ್ಟ. ಮೂರನೇ ಮನೆಯ ಭಾಮಾ ಹತ್ತಿರ ದುಡ್ಡು ಇರಲಿಲ್ಲ. ದೇವರನ್ನ ಪ್ರೀತಿಯಿಂದ ಬರಮಾಡಿಕೊಂಡ ಆಕೆ, ‘ಪ್ರಯಾಣ ಹೇಗಿತ್ತು? ದಣಿವಾಗಿದೆಯಾ? ಊಟ ಮಾಡ್ತೀರಾ? …’ ಅಂತೆಲ್ಲ ವಿಚಾರಿಸಿಕೊಂಡಳು. ನಿಜವಾದ ಆತ್ಮೀಯತೆ ಮತ್ತು ಪ್ರೀತಿಯಿಂದ ದೇವರನ್ನು ನೋಡಿಕೊಂಡಳು. ದೇವರು ಊರು ಬಿಟ್ಟು ಹೋಗುವಾಗ, ಎಲ್ಲ ವರಗಳನ್ನು ಭಾಮಾಗೆ ಕೊಟ್ಟ. ಇದನ್ನು ನೋಡಿ ರಾಮ, ಶ್ಯಾಮರಿಗೆ ಆಶ್ಚರ್ಯವಾಯಿತು. ‘ನಾವು ಇಷ್ಟೆಲ್ಲ ಬೆಲೆ ಬಾಳುವ ಉಡುಗೊರೆಗಳನ್ನು ಕೊಟ್ಟಿದ್ದೇವೆ. ನಮಗೆ ವರವನ್ನು ಕೊಡುವುದನ್ನು ಬಿಟ್ಟು ಭಾಮಾಗೆ ಯಾಕೆ ವರ ಕೊಟ್ಟಿರಿ’ ಎಂದು ದೇವರನ್ನು ಕೇಳಿದರು. ಅದಕ್ಕೆ ದೇವರು, ‘ನೀವು ಚಿನ್ನ-ಬೆಳ್ಳಿ ಕೊಟ್ಟಿರಿ. ಆದರೆ, ಭಾಮಾ ಗಮನಕೊಟ್ಟಳು. ಅದಕ್ಕಿಂತ ಅಮೂಲ್ಯವಾದದ್ದು ಏನೂ ಇಲ್ಲ’ ಅಂತ ಹೇಳಿ ಹೊರಟುಹೋದನಂತೆ.

    ಅದಕ್ಕೇ ಹೇಳಿದ್ದು Attention is the greatest gift you can give someone ಅಂತ. ಮುಂದಿನ ಸಲ ಒಂದು ಸ್ವಲ್ಪ ಗಮನ ಕೊಡಿ ಸಾರ್!

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts