ಚಿತ್ರರಂಗದಲ್ಲಿ ‘ತ್ಯಾಗಮಯಿ’, ‘ಲವರ್ ಬಾಯ್’ ಎಂಬುದನ್ನು ಕೇಳಿದರೆ ಥಟ್ ಅಂಥ ನೆನಪಾಗುವುದು ನಟ ರಮೇಶ್ ಅರವಿಂದ್. ಆದರೆ ಅವರು ಗಡ್ಡ ಬಿಟ್ಟು ನಾಯಿಯನ್ನು ಕರೆದುಕೊಂಡು, ಕೈಯಲ್ಲಿ ಭೂತಗನ್ನಡಿ ಹಿಡಿದು ಸುತ್ತಿದ್ದಾರೆ. ಅಂದರೆ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ನಟ ರಮೇಶ್ ಇಂಥದ್ದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಪತ್ತೇದಾರಿ ಕಥೆ ಆಧಾರಿತ ಈ ಚಿತ್ರದಲ್ಲಿ ರಮೇಶ್ 2 ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಫೆ. 21ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ‘ಅಂಜನಾದ್ರಿ ಸಿನಿ ಕ್ರಿಯೇಷನ್ಸ್’ ನಿರ್ವಣದ ಈ ಚಿತ್ರಕ್ಕೆ ನಿರ್ದೇಶಕ ಆಕಾಶ್ ಶ್ರೀವತ್ಸ ಆಕ್ಷನ್-ಕಟ್ ಹೇಳಿದ್ದು, ಕೆ.ಎನ್. ರೇಖಾ ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.
ನಿರ್ದೇಶಕ ಆಕಾಶ್ ಮತ್ತು ವೈ.ಆರ್.ಅಭಿಜಿತ್ ಸೇರಿ ಚಿತ್ರಕಥೆ ರಚಿಸಿದ್ದಾರೆ. ‘ಚಿತ್ರದಲ್ಲಿ ಎರಡು ವಿಭಿನ್ನ ಕಾಲ ಘಟ್ಟಗಳಿವೆ. ಒಂದು ಪ್ರಸ್ತುತ ನಡೆಯುವ ಕಥೆ, ಮತ್ತೊಂದು ಗತ ಕಾಲದ ಕಥೆ. ರಮೇಶ್ ಅವರ ಶಿವಾಜಿ ಪಾತ್ರವೇ ವಿಭಿನ್ನ. ಪೊಲೀಸ್ ಅಧಿಕಾರಿ ಆಗಿ ನಗುನಗುತ್ತಲೇ ಸತ್ಯವನ್ನು ಹೊರಗೆಳೆಯುವ ಅವರ ಮಾತುಗಾರಿಕೆ ಎಲ್ಲರನ್ನೂ ಬೆರಗುಗೊಳಿಸುತ್ತದೆ.
ಚಿತ್ರದ ಉದ್ದಕ್ಕೂ ಸಸ್ಪೆನ್ಸ್ ಇರಲಿದೆ’ ಎನ್ನುತ್ತಾರೆ ನಿರ್ದೇಶಕರು. ‘ರಂಗಿತರಂಗಿ’ ಖ್ಯಾತಿಯ ರಾಧಿಕಾ ನಾರಾಯಣ್ ಲಾಯರ್ ಆಗಿ ಶಿವಾಜಿ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರೋಹಿ ನಾರಾಯಣ್ ಮನೋವೈದ್ಯೆಯಾಗಿ ಅಭಿನಯಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ಪಿಡಿ ಸತೀಶ್, ರಾಘು ರಮಣಕೊಪ್ಪ, ರೋಹಿತ್ ಭಾನುಪ್ರಕಾಶ್, ವಿನಯ್ ಗೌಡ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದು, ನಾಲ್ಕು ಹಾಡುಗಳಿವೆ. ಜಯಂತ ಕಾಯ್ಕಿಣಿ, ಆಕಾಶ್ ಶ್ರೀವತ್ಸ, ಗುರುಪ್ರಸಾದ್ ಪಂಚೆನ್ಬೆಟ್ಟು ಸಾಹಿತ್ಯಕ್ಕೆ ಗಾಯಕರಾದ ವಿಜಯ್ ಪ್ರಕಾಶ್, ಶ್ರೇಯಾ ಸುಂದರ್ ಅಯ್ಯರ್, ಸಂಚಿತ್ ಹೆಗಡೆ, ವೈ.ಆರ್. ಅಭಿಜಿತ್ ದನಿಗೂಡಿಸಿದ್ದಾರೆ. ಶ್ರೀಕಾಂತ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.