ಬಿಸಿಲಿಗೆ ತಳಕಂಡ ರಾಮಸಮುದ್ರ

>>

ಆರ್.ಬಿ.ಜಗದೀಶ್ ಕಾರ್ಕಳ
ಏರುತ್ತಿರುವ ಬಿಸಿಲಿನ ಝಳಕ್ಕೆ ಐತಿಹಾಸಿಕ ರಾಮಸಮುದ್ರ ಜಲ ಮಟ್ಟ ತಳ ಸೇರಿದೆ. ಇದರಿಂದ ಪುರಸಭಾ ವ್ಯಾಪ್ತಿಗೆ ನೀರಿನ ಆಸರೆಯಾಗಿದ್ದ ರಾಮಸಮುದ್ರ ಪರಿಸರದಲ್ಲಿ ಕೃಷಿಕರು ಬಳಕೆ ಮಾಡುತ್ತಿದ್ದ ಪಂಪ್‌ಗಳನ್ನು ತೆಗೆದು ಹಾಕುವಂತೆ ಜಿಲ್ಲಾಡಳಿತ ಆದೇಶ ನೀಡಿರುವುದು ರೈತರಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಕ್ರಿ.ಶ 1390ರಿಂದ 1420ರ ವರೆಗೆ ಕಾರ್ಕಳವನ್ನಾಳಿದ ವೀರಬೈರರಸನಿಗೆ ಇಬ್ಬರು ಮಕ್ಕಳು. ಮೊದಲನೆಯಾತ ವೀರಪಾಂಡ್ಯ. ನಂತರದವನು ರಾಮನಾಥ. ಸಾತ್ವಿಕ ಸ್ವಭಾವದ ರಾಮನಾಥ ತನ್ನ ತಂದೆಯ ಜೀವಿತಾವಧಿಯಲ್ಲಿಯೇ ವಿಧಿವಶನಾಗಿದ್ದನು. ಆತನ ಸ್ಮರಣಾರ್ಥವಾಗಿ ರಮಣೀಯ ಪರಿಸರದಲ್ಲಿ ರಾಮಸಮುದ್ರ ನಿರ್ಮಿಸಲಾಯಿತು. ಗೊಮ್ಮಟ ಬೆಟ್ಟಕ್ಕೆ ಮತ್ತೊಂದು ಪಾರ್ಶ್ವದಲ್ಲಿ ಕಾಣಸಿಗುವ ಈ ರಾಮಸಮುದ್ರದಲ್ಲಿ ಮಳೆಗಾಲದ ವೇಳೆಗೆ ಸಂಗ್ರಹವಾಗುವ ಮಳೆನೀರು ಯಾವುದೇ ಋತುವಿನಲ್ಲೂ ಬತ್ತಿ ಹೋಗದೆ ಇರುವುದು ಪುರಸಭೆಗೆ ವರದಾನವಾಗಿತ್ತು.

ಮುಂಡ್ಲಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುವವರೆಗೆ ಇದೇ ರಾಮಸಮುದ್ರದ ನೀರನ್ನು ಪುರಸಭಾ ವ್ಯಾಪ್ತಿಗೆ ಕುಡಿಯಲು ಉಪಯೋಗಿಸಲಾಗುತ್ತಿತ್ತು. ಮುಂಡ್ಲಿ ನೀರು ಶೇಖರಣಾ ಘಟಕದಲ್ಲಿ ಎದುರಾಗುವ ತಾಂತ್ರಿಕ ದೋಷದ ಸಂದರ್ಭ ರಾಮಸಮುದ್ರದ ನೀರನ್ನೇ ಪುರಸಭಾ ವ್ಯಾಪ್ತಿಗೆ ಸರಬರಾಜು ಮಾಡಲಾಗುತ್ತದೆ. ಗಮನಾರ್ಹವೆಂದರೆ ಮುಂಡ್ಲಿಯಲ್ಲಿ ನೀರು ಬತ್ತಿ ಹೋದ ಬಳಿಕ ಪ್ರಸಕ್ತ ದಿನಗಳಲ್ಲಿ ಇದೇ ರಾಮ ಸಮುದ್ರ ಕೆರೆಯ ನೀರು ಶುದ್ಧೀಕರಣಗೊಳಿಸಿ ಕುಡಿಯುವ ನೀರನ್ನಾಗಿ ಪೂರೈಕೆ ಮಾಡಲಾಗುತ್ತಿತ್ತು.

ಬತ್ತಿದ ಮುಂಡ್ಲಿ ಅಣೆಕಟ್ಟು: 1994ರಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ದುರ್ಗಾ ಗ್ರಾಪಂ ವ್ಯಾಪ್ತಿಯ ಮುಂಡ್ಲಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟು ಸಂಪೂರ್ಣ ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಪ್ರಸ್ತುತ ಮುಂಡ್ಲಿ ಕಿರು ಅಣೆಕಟ್ಟಿನಲ್ಲಿ ನೀರು ತಳ ಸೇರಿದ್ದು, ಎಲ್ಲಿ ನೋಡಿದರೂ ಮರಳಿನ ಗುಂಪೆಗಳೇ ಕಂಡುಬರುತ್ತಿವೆ. ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಮುಂದಾಗಿಲ್ಲ.

ಉಡುಪಿಗೂ ಆಸರೆ: ತೆಳ್ಳಾರಿನ ಮುಂಡ್ಲಿಯಲ್ಲಿ ಕಿರು ಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಸಮಗ್ರವಾಗಿ ಪೂರೈಕೆ ಮಾಡಲಾಗುತ್ತಿದೆ.

ಕೃಷಿಕರಿಗೆ ಸಹಕಾರಿ ಸ್ವರ್ಣ ನದಿ: ಪಶ್ವಿಮ ಘಟ್ಟದ ತಪ್ಪಲು ತೀರ ಪ್ರದೇಶದಲ್ಲಿ ಹುಟ್ಟಿ ಹರಿಯುವ ಸ್ವರ್ಣ ನದಿ ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ನದಿ ಬರಡಾಗಿರುತ್ತದೆ. ನೀರು ನಿಲ್ಲುವ ಪ್ರದೇಶಗಳಾದ ಮಾಳ ಕಡಾರಿಯಲ್ಲಿ ಕಿಂಡಿ ಅಣೆಕಟ್ಟು, ದುರ್ಗದ ಮುಂಡ್ಲಿಯಲ್ಲಿ ಹಾಗೂ ಹಿರಿಯಡ್ಕ ಬಜೆಯಲ್ಲಿ ಅಣೆಕಟ್ಟು ನಿರ್ಮಿಸಿ ಅದರಲ್ಲಿ ಸಂಗ್ರಹವಾಗುವ ನೀರನ್ನು ಕುಡಿಯುಲು ಉಪಯೋಗಿಸಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ರೈತರು ಪಂಪ್ ಉಪಯೋಗಿಸಿಕೊಂಡು ನೀರನ್ನು ಕೃಷಿ ಕಾಯಕಗಳಿಗೆ ಬಳಸುತ್ತಿದ್ದಾರೆ.

ರಾಮಸಮುದ್ರಕ್ಕೆ ಮಲಮಿಶ್ರಿತ ತ್ಯಾಜ್ಯ ವಿಲೀನ: ರಾಮಸಮುದ್ರ ಪರಿಸರದಲ್ಲಿ ನಕ್ಸಲ್ ನಿಗ್ರಹ ದಳ ಶಿಬಿರ ಇದೆ. ಇಲ್ಲಿನ ಸಿಬ್ಬಂದಿ ದೇಹಬಾಧೆ ತೀರಿಸಿಕೊಳ್ಳಲು ಪರಿಸರದಲ್ಲೇ ಶೌಚಗೃಹವಿದೆ. ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ಶೌಚಗೃಹ ನಿರ್ಮಾಣವಾಗದೆ ಹೋದುದರಿಂದ ಮಳೆಗಾಲ ಸಂದರ್ಭ ಸಮಸ್ಯೆ ಎದುರಾಗುತ್ತಿರುವುದು ಸಾಮಾನ್ಯವಾಗಿದೆ. ಶೌಚಗೃಹದಲ್ಲಿ ತುಂಬಿ ತುಳುಕುವ ಮಲಮಿಶ್ರಿತ ನೀರು ನೇರವಾಗಿ ರಾಮಸಮುದ್ರದಲ್ಲಿ ಲೀನವಾಗುತ್ತಿದೆ. ಹಲವು ವರ್ಷಗಳ ಹಿಂದೆಯೇ ಈ ವಿಚಾರ ಪುರಸಭಾ ಆಡಳಿತದ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಹೋದುದರಿಂದ ಸಮಸ್ಯೆ ಯಥಾಸ್ಥಿತಿಯಲ್ಲಿದೆ.

ತುಂಬಿದ ಹೂಳು: ರಾಮಸಮುದ್ರ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಕೆರೆಯ ಆಳ ಕುಗ್ಗತೊಡಗಿದೆ. ಮಿಯ್ಯರು ಗ್ರಾಪಂ-ಕಾರ್ಕಳ ಪುರಸಭೆ ಗಡಿಭಾಗದಲ್ಲಿರುವ ರಾಮಸಮುದ್ರ ಕೆರೆಯ ಹೂಳೆತ್ತುವ ಕಾಮಗಾರಿ ನಡೆದಲ್ಲಿ ಪರಿಸರದ ಇತರ ಇನ್ನೂ ಕೆಲ ಗ್ರಾಮಗಳಿಗೆ ಇದೇ ಕೆರೆಯ ನೀರನ್ನು ಸದುಯೋಗ ಪಡಿಸಲು ಅನುಕೂಲವಾಗಲಿದೆ.

ಪಂಪ್ ತೆಗೆಯಲು ಸೂಚನೆ: 35 ವರ್ಷಗಳ ಬಳಿಕ ಎದುರಾಗಿರುವ ಬರಗಾಲದಿಂದಾಗಿ ಪ್ರಸಕ್ತ ದಿನಗಳಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡಲು ರಾಮಸಮುದ್ರದ ನೀರನ್ನೇ ಬಳಕೆ ಮಾಡಲಾಗುತ್ತಿದೆ. ರಾಮಸಮುದ್ರದ ನೀರು ಕೂಡ ತಳ ಹಿಡಿದಿದ್ದು, ಇದರಿಂದ ಎಚ್ಚೆತ್ತು ಕೊಂಡಿರುವ ಜಿಲ್ಲಾಧಿಕಾರಿ, ರಾಮಸಮುದ್ರ ಪರಿಸರದಲ್ಲಿ ಕೃಷಿಕರು ಅಳವಡಿಸಿದ ಪಂಪ್‌ಗಳನ್ನು ತೆಗೆಯುವಂತೆ ತಿಳಿಸಿದ್ದಾರೆ. ತಹಸೀಲ್ದಾರ್ ಪುರಂದರ ಹೆಗ್ಡೆ ಹಾಗೂ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *