More

    ಮೇಯರ್ ಸ್ಥಾನಕ್ಕೆ ರಾಮಪ್ಪ-ಬೀರಪ್ಪ ಪೈಪೋಟಿ

    ಸಂತೋಷ ವೈದ್ಯ ಹುಬ್ಬಳ್ಳಿ

    ಬಿಜೆಪಿ ಆಡಳಿತವಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ (ಜೂನ್ 29) ನಿಗದಿಯಾಗುತ್ತಿದ್ದಂತೆ ಆಕಾಂಕ್ಷಿಗಳು ಪೈಪೋಟಿಗೆ ಇಳಿದಿದ್ದಾರೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

    ಮೇಯರ್ ಆಗಲು 30ನೇ ವಾರ್ಡ್​ನ ಸದಸ್ಯ ರಾಮಪ್ಪ ಬಡಿಗೇರ ಹಾಗೂ 43ನೇ ವಾರ್ಡ್​ನ ಸದಸ್ಯ ಬೀರಪ್ಪ ಖಂಡೇಕಾರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ರಾಮಪ್ಪ ಬಡಿಗೇರ ಸತತ 4ನೇ ಬಾರಿ ಪಾಲಿಕೆ ಸದಸ್ಯರಾಗಿದ್ದು ಒಮ್ಮೆಯೂ ಮೇಯರ್ ಆಗಿಲ್ಲ. ಹಿಂದೊಮ್ಮೆ ಎರಡು ಬಾರಿ (ಡಿ.ಕೆ. ಚವ್ಹಾಣ ಹಾಗೂ ಸುಧೀರ ಸರಾಫ್ ಮೇಯರ್ ಆಗಿದ್ದಾಗ) ಮೇಯರ್ ಸ್ಥಾನದ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ರಾಜಕೀಯ ಅನಿವಾರ್ಯತೆಯಲ್ಲಿ ಅವಕಾಶ ಕೈ ತಪ್ಪಿತ್ತು. ಈಗ ಮತ್ತೊಮ್ಮೆ ಅವಕಾಶದ ಬಾಗಿಲ ಬಳಿ ನಿಂತಿದ್ದಾರೆ.

    ಒಮ್ಮೆಯಾದರೂ ಮೇಯರ್ ಆಗಲೇಬೇಕೆಂಬ ಕಾರಣಕ್ಕೆ ರಾಮಪ್ಪ ಬಡಿಗೇರ ಎರಡು ಬಾರಿ ಉಪ ಮೇಯರ್ ಆಗುವ ಅವಕಾಶವನ್ನು ತ್ಯಜಿಸಿದ್ದಾರೆ. ಆಗ ಚಂದ್ರಶೇಖರ ಮನಗುಂಡಿ ಹಾಗೂ ಸತೀಶ ಹಾನಗಲ್ ಉಪ ಮೇಯರ್ ಆಗುವ ಅವಕಾಶ ಪಡೆದರು. ಉಪ ಮೇಯರ್ ಆಗಿದ್ದಾರೆ ಎಂಬ ಕಾರಣಕ್ಕೆ ಮೇಯರ್ ಸ್ಥಾನ ತಪ್ಪಿಸುವ ಪ್ರಯತ್ನಗಳು ರಾಜಕೀಯದಲ್ಲಿ ಸಾಮಾನ್ಯ. ಪಕ್ಷದಲ್ಲಿ ಮುಖಂಡರ ಬೆಂಬಲ ಇದ್ದರೆ ಮಾತ್ರ ಒಮ್ಮೆ ಉಪ ಮೇಯರ್ ಆದವರು ಮೇಯರ್ ಆಗಬಹುದು. ಮುಖಂಡರ ಬೆಂಬಲ ಹಾಗೂ ಸ್ವಂತ ವರ್ಚಸ್ಸಿನಿಂದ ಎರಡೆರಡು ಬಾರಿ ಮೇಯರ್ ಆದವರೂ ಇದ್ದಾರೆ. 3ನೇ ಬಾರಿ ಪಾಲಿಕೆ ಸದಸ್ಯರಾಗಿರುವ ಬೀರಪ್ಪ ಖಂಡೇಕಾರ ಮೇಯರ್ ಸ್ಥಾನಕ್ಕೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಪಾಲಿಕೆ ಇತಿಹಾಸದಲ್ಲಿ ಕುರುಬ ಸಮಾಜಕ್ಕೆ ಮೇಯರ್ ಸ್ಥಾನ ಸಿಕ್ಕಿಲ್ಲ ಎಂಬುದು ಅವರ ವಾದವಾಗಿದೆ. ಇದೇ ವಿಷಯವನ್ನು ಅವರು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದಾರೆ.

    See also  ಲೋಕಸ್ಪಂದನದಿಂದ ಪೊಲೀಸ್ ಇಲಾಖೆ ಜನಸ್ನೇಹಿ

    ಕ್ಷೇತ್ರ ಲೆಕ್ಕಾಚಾರ: ಮೀಸಲಾತಿಗೆ ಅನುಗುಣವಾಗಿ ಮೇಯರ್ ಸ್ಥಾನದಲ್ಲಿ ಯಾರನ್ನು ಕುಳ್ಳರಿಸಬೇಕು ಎಂಬುದು ಬಿಜೆಪಿಯಲ್ಲಿ ವಿಧಾನಸಭಾ ಕ್ಷೇತ್ರಗಳ ಲೆಕ್ಕಾಚಾರವನ್ನು ಅವಲಂಬಿಸಿರುತ್ತದೆ. ಪಾಲಿಕೆಯಲ್ಲಿ ಹಾಲಿ ಬಿಜೆಪಿ ಅಧಿಕಾರದಲ್ಲಿರುವ ಮೊದಲ ವರ್ಷದಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಈರೇಶ ಅಂಚಟಗೇರಿ, 2ನೇ ವರ್ಷದಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವೀಣಾ ಬರದ್ವಾಡ ಮೇಯರ್ ಆಗಿದ್ದರು. ಈ ಬಾರಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಬಿಜೆಪಿಯ ವರಿಷ್ಠರು ನಿರ್ಧರಿಸಿದರೆ ರಾಮಪ್ಪ ಬಡಿಗೇರ ಮೇಯರ್ ಆಗುವುದು ಖಚಿತ. ಬೀರಪ್ಪ ಖಂಡೇಕಾರ ಹು-ಧಾ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಾರೆ.

    ಉಪ ಮೇಯರ್ ಸ್ಥಾನದ ಪೈಪೋಟಿಯಲ್ಲಿ 56ನೇ ವಾರ್ಡ್ ಸದಸ್ಯೆ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್​ನ ದುರ್ಗಮ್ಮ ಬಿಜವಾಡ ಮುಂಚೂಣಿಯಲ್ಲಿದ್ದಾರೆ. ಇಬ್ಬರೂ ಪಕ್ಷೇತರರಾಗಿ ಚುನಾ ಯಿತರಾಗಿ ಬಳಿಕ ಬಿಜೆಪಿಗೆ ಸೇರಿದ್ದಾರೆ. ಮೇಯರ್-ಉಪ ಮೇಯರ್ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿ ಯನ್ನಾಗಿಸಬೇಕು ಎಂಬುದನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ರ್ಚಚಿಸಿ ನಿರ್ಧರಿಸುತ್ತಾರೆ. ಈ ಕುರಿತು ಕೋರ್ ಕಮಿಟಿ ಸಭೆ ಜೂ. 28ರಂದು ನಿಗದಿಯಾಗಿದೆ.

    ಪಕ್ಷಗಳ ಬಲಾಬಲ

    ಪಾಲಿಕೆಯಲ್ಲಿ ಬಿಜೆಪಿ 38 ಚುನಾಯಿತ ಸದಸ್ಯರು, ಜೆಡಿಎಸ್, ಪಕ್ಷೇತರ ಹಾಗೂ ಪದನಿಮಿತ್ತ ಸದಸ್ಯರ ಬೆಂಬಲದಿಂದ 48 ಮತಗಳನ್ನು ಹೊಂದಿದೆ (ಸರಸ್ವತಿ ಧೋಂಗಡಿಗೆ ಮತ ಚಲಾಯಿಸಲು ಪ್ರಾದೇಶಿಕ ಆಯುಕ್ತರು ಅವಕಾಶ ನೀಡಿದರೆ 49 ಆಗಲಿದೆ). ವಿರೋಧ ಪಕ್ಷ ಕಾಂಗ್ರೆಸ್ ಬಲ 41ಕ್ಕೆ ಬಂದು ನಿಲ್ಲುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts