ವಿಜಯಪುರ : ಸಿ.ವಿ. ರಾಮನ್ ಸಂಶೋಧಿಸಿದ ರಾಮನ್ ಎಫೆಕ್ಟ್ ವಿಶ್ವಕ್ಕೆ ಅದ್ಭುತ ಕೊಡುಗೆ. ಅದು ವಿಜ್ಞಾನ ಕ್ಷೇತ್ರದ ಜತೆಗೆ ಮನುಕುಲದ ಉದ್ಧಾರಕ್ಕೆ ಹೆಚ್ಚು ಸಹಕಾರಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಸರ್ ಸಿ.ವಿ. ರಾಮನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ ಸಿ.ವಿ. ರಾಮನ್ ವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುವ ಮೂಲಕ ದೇಶದ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ. ವಿಜ್ಞಾನದ ಅರಿವು ಎಲ್ಲರಿಗೂ ಅತ್ಯಗತ್ಯ ಎಂದು ಹೇಳಿದರು.
ಶಿಕ್ಷಕ ಎಸ್.ಆರ್. ಚಾಳೇಕರ ಮಾತನಾಡಿ, ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವಿಭಾಗದಲ್ಲಿ ಸರಕುಗಳ ಪರಿವೀಕ್ಷಣೆ ಮಾಡಲು, ಅಲರ್ಜಿಗೆ ಕಾರಣವಾದ ಹಾನಿಕಾರಕ ವಸ್ತುಗಳ ಬಗ್ಗೆ ತಿಳಿಯುವ ಜತೆಗೆ ಅನೇಕ ಕ್ಷೇತ್ರದಲ್ಲಿ ರಾಮನ್ ಎಫೆಕ್ಟೃ್ ಆವಿಷ್ಕಾರ ಸದ್ಯ ಬಳಕೆಯಾಗುತ್ತಿದೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿದರು. ಗ್ರಾಮದ ಹಣಮಂತ ವಾಲೀಕಾರ, ರಾಜು ಕತ್ನಳ್ಳಿ, ಪ್ರವೀಣ ಅರಕೇರಿ, ಪ್ರಕಾಶ ಹೊಸಟ್ಟಿ, ಸಚಿನ ಹಳ್ಳಿ, ಭರತೇಶ ಅರಕೇರಿ ಮತ್ತಿತರರಿದ್ದರು.