ದಲೈಲಾಮಾ ಹತ್ಯೆಗೆ ಸಂಚು

ಬೆಂಗಳೂರು: ರಾಮನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಲೆಗೆ ಬಿದ್ದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶಿ(ಜೆಎಂಬಿ) ಸಂಘಟನೆಯ ಉಗ್ರ ಮುನೀರ್ ಶೇಖ್ ಅಲಿಯಾಸ್ ಕೌಸರ್, ಕರ್ನಾಟಕಕ್ಕೆ ಬರುವ ಮೊದಲೇ ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಸಂಚು ರೂಪಿಸಿದ್ದನೆಂಬ ಸ್ಪೋಟಕ ಮಾಹಿತಿ ಎನ್​ಐಎ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

2018ರ ಜ.19ರಂದು ಬಿಹಾರದ ಬೋಧಗಯಾಕ್ಕೆ ದಲೈಲಾಮಾ ಮತ್ತು ಬಿಹಾರ ರಾಜ್ಯಪಾಲರು ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ವೇಳೆ ಬಾಂಬ್ ಸ್ಪೋಟಿಸಲು ಉಗ್ರರ ತಂಡವೊಂದು ಬೋಧಗಯಾ ದೇಗುಲ ಸಂಕೀರ್ಣದಲ್ಲಿ ಸುಧಾರಿತ ಬಾಂಬ್(ಐಇಡಿ) ಅಳವಡಿಸಿ ವಿಫಲವಾಗಿತ್ತು. ಬಳಿಕ ಇದೇ ಪ್ರದೇಶದ ಕಾಲಚಕ್ರ ಮೈದಾನದಲ್ಲೂ ಜನರೇಟರ್ ಬಳಿ ಐಇಡಿ ಪತ್ತೆಯಾಗಿದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿಯ ಎನ್​ಐಎ ತಂಡ ಎಫ್​ಐಆರ್ ದಾಖಲಿಸಿ ಪಶ್ಚಿಮ ಬಂಗಾಳದ ಪೈಗಂಬರ್ ಶೇಖ್ ಅಲಿಯಾಸ್ ಅಬ್ದುಲ್ ಹಝಿ, ಅಹ್ಮದ್ ಆಲಿ ಅಲಿಯಾಸ್ ಕಾಲು ಮತ್ತು ನೂರ್ ಅಲಂ ಮೊಮೈನ್ ಎಂಬುವವರನ್ನು ಬಂಧಿಸಿತ್ತು. ಬಾಂಬ್ ಸ್ಫೋಟ ಯತ್ನದ ಸಂಚುಕೋರರಾದ ಮುನೀರ್ ಶೇಖ್ ಮತ್ತು ಆತನ ಬಲಗೈ ಬಂಟ ಆದಿಲ್ ಶೇಖ್ ಕೋಲಾರದ ಮಾಲೂರಿಗೆ ಬಂದು ತಲೆಮರೆಸಿಕೊಂಡಿದ್ದರು.

ಇದಾದ ಬಳಿಕ ಆಗಸ್ಟ್​ನಲ್ಲಿ ಕೇರಳದ ಮಲ್ಲಪುರಂನಲ್ಲಿ ಪಶ್ಚಿಮ ಬಂಗಾಳದ ಮುಸ್ತ್​ಪೈಝುರ್ ರೆಹಮಾನ್ ಮತ್ತು ಆರೀಫ್ ಹುಸೇನ್ ಎಂಬುವರು ಸೆರೆಸಿಕ್ಕರು. ವಿಚಾರಣೆ ವೇಳೆ ಇವರು ಕೊಟ್ಟ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎನ್​ಐಎ ತಂಡ ರಾಮನಗರದಲ್ಲಿ ಮುನೀರ್ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಆದಿಲ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆದರೆ, ಮತ್ತೊಬ್ಬ ಶಂಕಿತ ಆರೀಫ್ ಹುಸೇನ್ ಬಗ್ಗೆ ಸುಳಿವು ಸಿಕ್ಕಿಲ್ಲ. ಈಗ ತನಿಖೆ ಪೂರ್ಣಗೊಳಿಸಿರುವ ಅಧಿಕಾರಿಗಳು ಸೆ.27ರಂದು ಪಟನಾ ವಿಶೇಷ ಕೋರ್ಟ್ ನಲ್ಲಿ ಪೈಗಂಬರ್, ಅಹ್ಮದ್ ಮತ್ತು ನೂರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಹಲವು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಬೌದ್ಧರೇಕೆ ಉಗ್ರಗಾಮಿಗಳ ಟಾರ್ಗೆಟ್?

ಮ್ಯಾನ್ಮಾರ್​ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದು ಆಕ್ರೋಶಗೊಂಡಿದ್ದ ಮುನೀರ್ ಈ ಸಂಬಂಧ ಬೌದ್ಧಧರ್ವಿುಯರನ್ನು ಟಾರ್ಗೆಟ್ ಮಾಡಿದ್ದ. ಬಿಹಾರದ ಬೋಧಗಯಾ ಬುದ್ಧ ಮಂದಿರಕ್ಕೆ ದೇಶ, ವಿದೇಶಗಳಿಂದ ಬೌದ್ಧರು ಬರುವುದರಿಂದ ಅವರನ್ನು ಗುರಿಯಾಗಿಸಿಕೊಂಡು 2013 ಜು.7ರಂದು ಸರಣಿ ಬಾಂಬ್ ಸ್ಪೋಟಿಸಿದ್ದ. ಭಾರತದಿಂದ ರೊಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಕೆರಳಿದ್ದ ಮುನೀರ್ ಬೌದ್ಧರ ಜತೆಯಲ್ಲೇ ಹಿಂದುಗಳನ್ನೂ ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ.

ಮುನೀರ್ ಲೀಡರ್

ರಾಮನಗರದಲ್ಲಿ ಸೆರೆಸಿಕ್ಕ ಮುನೀರ್ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶಿ (ಜೆಎಂಬಿ) ಸಂಘಟನೆ ಮುಖ್ಯಸ್ಥನಾದರೆ ಮುಸ್ತ್​ಫೈಝುರ್ ರೆಹಮಾನ್ ಪ್ರಮುಖ ಜವಾಬ್ದಾರಿ ಹೊತ್ತಿದ್ದ. ಉಳಿದವರು ಮುನೀರ್ ಸಹಚರರಾಗಿದ್ದರು. ಬೋಧಗಯಾದಲ್ಲಿ ಶಾಂತಿ ಕದಡಲು ಹಾಗೂ ದಲೈಲಾಮಾ ಹತ್ಯೆಗೆ 3 ಐಇಡಿ ಮತ್ತು 2 ಹ್ಯಾಂಡ್ ಗ್ರೆನೇಡ್ ಅಳವಡಿಸಿದ್ದರು.

ರಾಜ್ಯದಲ್ಲೂ ಸಂಚು?

ದಲೈಲಾಮಾ ಆಗಾಗ ಪಿರಿಯಾಪಟ್ಟಣದ ಬೈಲುಕುಪ್ಪೆ ಧಾರ್ವಿುಕ ಕೇಂದ್ರ ಹಾಗೂ ಮೈಸೂರು ರಸ್ತೆ ಹೆಜ್ಜಾಲ ಬಳಿಯ ಶಿಕ್ಷಣ ಸಂಸ್ಥೆಗೆ ಭೇಟಿ ಕೊಡುವ ವಿಷಯ ತಿಳಿದಿದ್ದ ಮುನೀರ್, ಈ ಎರಡು ಪ್ರದೇಶಗಳಲ್ಲೂ ದಲೈಲಾಮಾ ಹತ್ಯೆಗೆ ಯತ್ನ ನಡೆಸಲು ರಾಮನಗರದಲ್ಲಿ ಆಶ್ರಯ ಪಡೆದಿದ್ದ ಎಂಬ ಅನುಮಾನವೂ ಇಮ್ಮಡಿಗೊಂಡಿದೆ.

ಬೋಧಗಯಾದಲ್ಲಿ ಹಿಂದಿನ ಪ್ರಕರಣವೊಂದರ ಕುರಿತು ಕೆಲವರನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ ದಲೈಲಾಮಾ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ ಯಾವುದೇ ವರದಿ ಬಂದಿಲ್ಲ.

| ಎಚ್.ಡಿ. ಕುಮಾರಸ್ವಾಮಿ ಸಿಎಂ

ದಲೈಲಾಮಾ ಹತ್ಯೆಗೆ ಬೆಂಗಳೂರಿನಲ್ಲಿ ಸಂಚು ರೂಪಿಸಲಾಗಿತ್ತೆಂಬುದು ಸತ್ಯಕ್ಕೆ ದೂರವಾದ ಸಂಗತಿ. ಜನವರಿಯಲ್ಲಿ ಬೋಧಗಯಾದಲ್ಲಿ ನಡೆದಿದ್ದ ಸಂಚನ್ನೇ ಯಾರೋ ತಪ್ಪಾಗಿ ಅರ್ಥೈಸಿದ್ದಾರೆ.

| ಡಾ.ಜಿ.ಪರಮೇಶ್ವರ್ ಗೃಹ ಸಚಿವ