ಸಿನಿಮಾ

ಸರ್ಕಾರಿ ನೌಕರರ ಮೇಲೆ ರಾಜಕೀಯ ಮುಖಂಡರ ಕಣ್ಣುಅಂಚೆ ಮತಕ್ಕಾಗಿ ಹಣದ ಆಮಿಷದ ಜತೆಗೆ ಹಲವಾರು ಗಿಮಿಕ್ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ

ಗಂಗಾಧರ್ ಬೈರಾಪಟ್ಟಣ ರಾಮನಗರ
ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ತೀವ್ರ ಕುತೂಹಲ ಮೂಡಿಸಿರುವ 2023ರ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಕಣ್ಣು ಸರ್ಕಾರಿ ನೌಕರರ ಮೇಲೆ ನೆಟ್ಟಿದೆ.

ರಾಜ್ಯದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಬಹುತೇಕ ಎಲ್ಲ ಸರ್ಕಾರಿ ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವರೆಲ್ಲರ ಅಂಚೆ ಮತಗಳನ್ನು ಪಡೆದುಕೊಳ್ಳಲು, ರಾಜಕೀಯ ಪಕ್ಷಗಳ ಮುಖಂಡರು ಕಸರತ್ತು ಆರಂಭಿಸಿದ್ದಾರೆ. ಹಾಗಾಗಿ ಸರ್ಕಾರಿ ನೌಕರರಿಗೆ ಡಿಮಾಂಡ್ ಬಂದಿದ್ದು, ಸಿಬ್ಬಂದಿಯನ್ನು ತಮ್ಮತ್ತ ಸೆಳೆಯಲು ಹಣದ ಆಮಿಷದ ಜತೆಗೆ ಹಲವಾರು ಗಿಮಿಕ್‌ಗಳನ್ನು ರಾಜಕೀಯ ಪಕ್ಷಗಳ ಮುಖಂಡರು ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 4593 ಅಂಚೆ ಮತಗಳಿದ್ದು, ಮತದಾರರ ಜಾತಕ ಹುಡುಕುತ್ತಾ ಅವರ ಮತಗಳನ್ನು ಸೆಳೆಯುವ ಯತ್ನ ನಿರಂತರವಾಗಿ ಸಾಗಿದೆ. ಈಗಾಗಲೇ ಆನ್‌ಲೈನ್ ಮೂಲಕ ಮತದಾನ ಮಾಡುವ ಸಮಯ ಮುಗಿದಿದ್ದು, ಅಂಚೆ ಮೂಲಕ ಕಳುಹಿಸಲು ಕಾಲಾವಕಾಶ ಇರುವ ಕಾರಣ ಪ್ರಯತ್ನ ಸಾಗಿದೆ.

ಮನವೊಲಿಕೆ
ವಿವಿಧ ಇಲಾಖೆ ಮತ್ತು ಶಿಕ್ಷಕರನ್ನು ಒಳಗೊಂಡ 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಚುನಾವಣೆ ಕಾವು ಹೆಚ್ಚಿದೆ. ಪೈಪೋಟಿ ಹೆಚ್ಚಿರುವ ಕಾರಣದಿಂದಾಗಿ ಸಾಮೂಹಿಕವಾಗಿ ಸರ್ಕಾರಿ ಸಿಬ್ಬಂದಿಯ ಅಂಚೆ ಮತಗಳನ್ನು ಪಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ. ಸಿಬ್ಬಂದಿಯ ಜಾತಿಯಿಂದ ಆರಂಭಗೊಂಡು ಇತರ ವಿವರಗಳನ್ನು ಕಲೆ ಹಾಕುವ ಕೆಲಸ ಮಾಡಿದ್ದಾರೆ. ಅಭ್ಯರ್ಥಿಗಳು ಯಾವ ಊರು, ಯಾವ ಜಾತಿಗೆ ಸೇರಿದ್ದಾರೆ, ಅಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬ ಮಾಹಿತಿ ಕಲೆ ಹಾಕಿದ್ದು, ತಮ್ಮ ಮತ ಕ್ಷೇತ್ರಕ್ಕೆ ಒಳಪಡುವ ಸಿಬ್ಬಂದಿಯನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಸರ್ಕಾರಿ ನೌಕರರ ಹತ್ತಿರದ ಸಂಬಂಧಿಗಳನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಶಿಕ್ಷಕರಿಗೆ ಹೆಚ್ಚಿದ ಬೇಡಿಕೆ
ಚುನಾವಣೆ ಕರ್ತವ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನೇ ನಿಯೋಜನೆ ಮಾಡುವುದರಿಂದ ಈ ಬಾರಿಯ ಹೈವೋಲ್ಟೇಜ್ ಚುನಾವಣೆಯಲ್ಲಿ ಶಿಕ್ಷಕರು ಭಾರೀ ಬೇಡಿಕೆ ಪಡೆದಿದ್ದಾರೆ. ಕೆಲವು ಕಡೆ ಎಲ್ಲ ಶಿಕ್ಷಕರು ಒಂದೆಡೆ ಸೇರಿ ಯಾವ ಅಭ್ಯರ್ಥಿಗೆ ಮತ ಹಾಕುವುದು ಎನ್ನುವ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ಚರ್ಚೆ ನಡೆಸಿದ್ದರೆ, ಮತ್ತೆ ಕೆಲವೆಡೆ ಬೇಡಿಕೆಗಳು ವೈಯಕ್ತಿಕ ಮಟ್ಟಕ್ಕೆ ಇಳಿದರೆ, ಕೆಲವು ಕಡೆ ಸಾಮೂಹಿಕವಾಗಿ ಶಿಕ್ಷಕ ವೃಂದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೇಡಿಕೆಗಳನ್ನು ಈಡೇರಿಸುವ ಅಭ್ಯರ್ಥಿಗೆ ಮತ ಹಾಕುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಹೊರಗಿನವರಿಗೆ ಇಲ್ಲ ಮಣೆ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, ನಾಲ್ಕೂ ಕ್ಷೇತ್ರಗಳಿಗೆ ಸೇರದ ಮತದಾರರಲ್ಲದ ಸಿಬ್ಬಂದಿಗೆ ಮನ್ನಣೆ ನೀಡುತ್ತಿಲ್ಲ. ಹೊರಗಿನ ಸಿಬ್ಬಂದಿಯನ್ನು ಸ್ಥಳೀಯ ಸಿಬ್ಬಂದಿ ಅಭ್ಯರ್ಥಿ ಮತ್ತು ಅವರ ಆಪ್ತರಿಗೆ ಪರಿಚಯ ಮಾಡಿಸಿಕೊಟ್ಟರೂ ದೇಶಾವರಿ ನಗೆ ಬೀರಿ ಸುಮ್ಮನಾಗುವ ಕೆಲಸವನ್ನು ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮತದಾರರ ಮಾಹಿತಿ ಕಲೆ ಹಾಕಿ ಅವರನ್ನು ದೂರವಾಣಿ ಮೂಲಕ ಸೆಳೆಯುವ ಕೆಲಸಗಳು ನಿರಾತಂಕವಾಗಿ ನಡೆದಿವೆ.
ಒಟ್ಟಾರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿಯೇ ಮತದಾರರಾಗಿರುವ ಸರ್ಕಾರಿ ಸಿಬ್ಬಂದಿಗೆ ಈ ಬಾರಿಯ ಚುನಾವಣೆಯಲ್ಲಿ ಭಾರೀ ಬೇಡಿಕೆಯಂತೂ ಬಂದಿದೆ.

ದೂರು ಪ್ರತಿ ದೂರು
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧೆಯಿಂದಾಗಿ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಈಗಾಗಲೇ ಜೆಡಿಎಸ್-ಕಾಂಗ್ರೆಸ್ ನಡುವೆ ದೂರು-ಪ್ರತಿದೂರು ದಾಖಲಾಗಿದೆ. ಚನ್ನಪಟ್ಟಣದಲ್ಲಿ ಪೋಸ್ಟಲ್ ಬ್ಯಾಲೆಟ್ ವಿಚಾರವಾಗಿ ಜೆಡಿಎಸ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಪ್ರಾಂಶುಪಾಲರ ಮೇಲೆ ಹಾಗೂ ಜೆಡಿಎಸ್ ಮುಖಂಡರೊಬ್ಬರ ಮೇಲೆ ಬಿಜೆಪಿ ದೂರು ನೀಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ವಿರುದ್ಧವೂ ಜೆಡಿಎಸ್ ದೂರು ನೀಡಿರುವುದು ವಿಶೇಷ.

ತಿರಸ್ಕೃತ 

2018ರ ಚುನಾವಣೆಯಲ್ಲಿ ಒಟ್ಟು 4242 ಅಂಚೆ ಮತಗಳು ಚಲಾವಣೆಗೊಂಡಿದ್ದವು. ಇವುಗಳಲ್ಲಿ ಒಟ್ಟು 475 ಮತಗಳು ತಿರಸ್ಕೃತಗೊಂಡಿದ್ದವು. ತಿರಸ್ಕೃತಗೊಂಡ ಮತಗಳಲ್ಲಿ ಕೆಲವು ಮತಗಳು ನೋಟಾಗೂ ಚಲಾವಣೆ ಆಗಿದ್ದವು ಎನ್ನುವುದು ವಿಶೇಷ.

Latest Posts

ಲೈಫ್‌ಸ್ಟೈಲ್