ಬಿಜೆಪಿಗೆ ಅಣ್ತಮ್ಮ ಶಾಕ್

<< ಬದಲಾದ ಉಪಸಮರ ಲೆಕ್ಕಾಚಾರ | ರಾಮನಗರ ಅಭ್ಯರ್ಥಿ ನಿವೃತ್ತಿ >>

ಬೆಂಗಳೂರು: ಆಪರೇಷನ್ ಹಸ್ತ, ಬಿಜೆಪಿ ಅಸ್ತವ್ಯಸ್ತ! ಇದು ರಾಜ್ಯ ಉಪಚುನಾವಣೆ ಕಣದ ತಾಜಾ ವರದಿ. ಕಾಂಗ್ರೆಸ್, ಜೆಡಿಎಸ್​ನ ಭದ್ರಕೋಟೆ ರಾಮನಗರಕ್ಕೆ ನುಗ್ಗಿ ಆಪರೇಷನ್ ಕಮಲದ ಮೂಲಕ ಹಸ್ತಪಡೆಯ ಪ್ರಬಲ ನಾಯಕನ ಪುತ್ರನನ್ನು ಕರೆತಂದು ಕಣಕ್ಕಿಳಿಸಿ ಬೀಗಿದ್ದ ಬಿಜೆಪಿ ಮತದಾನಕ್ಕೆ 48 ಗಂಟೆ ಇರುವಾಗಲೇ ರನೌಟ್ ಆಗಿದೆ. ಗುರುವಾರ ಏಕಾಏಕಿ ಕಾಂಗ್ರೆಸ್ ಕೋಟೆಯಲ್ಲಿ ಪ್ರತ್ಯಕ್ಷರಾದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣೆ ನಿವೃತ್ತಿ ಘೋಷಿಸಿ ಶಾಕ್ ನೀಡಿದರು. ಡಿಕೆಶಿ ಸಹೋದರರ ಮಾಸ್ಟರ್​ಸ್ಟ್ರೋಕ್​ಗೆ ಬೆಚ್ಚಿಬಿದ್ದ ರಾಜ್ಯ ಕಮಲ ಪಡೆ ಕಾಲಮಿಂಚಿದ ಮೇಲೆ ಕೈಕೈ ಹಿಸುಕಿಕೊಳ್ಳಲಾರಂಭಿಸಿದೆ.

ಮುಖ್ಯಮಂತ್ರಿ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿದಿರುವ ಹೈ ಪ್ರೊಫೈಲ್ ರಾಮನಗರ ವಿಧಾನಸಭೆ ಕ್ಷೇತ್ರ ಈ ಬಾರಿ ಹತ್ತಾರು ಬೆಳವಣಿಗೆ, ನಿರೀಕ್ಷೆಗಳೊಂದಿಗೆ ಗಮನ ಸೆಳೆದಿದೆ. ಜೆಡಿಎಸ್ ಅಭ್ಯರ್ಥಿ ವಿರುದ್ಧ ಆ ಪಕ್ಷದೊಳಗೇ ಮಡುಗಟ್ಟಿರುವ ಅಸಮಾಧಾನ, ಕಾಂಗ್ರೆಸ್​ನೊಳಗಿನ ಅತೃಪ್ತಿಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ ನಾಯಕರು ಸ್ಥಳೀಯ ಪ್ರಭಾವಿ, ಕಾಂಗ್ರೆಸ್ ಎಂಎಲ್​ಸಿ ಸಿಎಂ ಲಿಂಗಪ್ಪ ಪುತ್ರನನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿದ್ದರು. ಆದರೆ ಕೊಂಚವೂ ಸುಳಿವು ನೀಡದೆ ಡಿಕೆಶಿ ಬೀಸಿದ ಬಲೆಗೆ ಬಿದ್ದಿರುವ ಚಂದ್ರಶೇಖರ್ ಕಮಲ ನಾಯಕರ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿದ್ದಾರೆ.

ವಾರದ ಮೊದಲೇ ಖೆಡ್ಡಾ: ಚಂದ್ರಶೇಖರ್ ತಮ್ಮನ್ನು ಬುಧವಾರ ರಾತ್ರಿ 8 ಗಂಟೆಗೆ ಸಂರ್ಪಸಿದರೇ ಹೊರತು ಅದಕ್ಕೂ ಮುನ್ನ ಯಾವುದೇ ಬೆಳವಣಿಗೆ ನಡೆದಿರಲಿಲ್ಲ ಎಂದು ಸಂಸದ ಹಾಗೂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸ್ಪಷ್ಟನೆ ನೀಡಿದ್ದಾರಾದರೂ ಬಿಜೆಪಿ ಅಭ್ಯರ್ಥಿ ಆಪರೇಷನ್​ಗೆ ವಾರದ ಹಿಂದೆಯೇ ಖೆಡ್ಡಾ ಸಿದ್ಧಪಡಿಸಲಾಗಿತ್ತೆಂಬ ವಿಚಾರಗಳು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೊಳಪಟ್ಟಿದೆ. ಈ ಸಂಗತಿ ತಿಳಿದಿದ್ದರೂ ಬಿಜೆಪಿ ತನ್ನ ಅಭ್ಯರ್ಥಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಆಸಕ್ತಿ ತೋರದಿದ್ದರಿಂದಾಗಿಯೇ ಚಂದ್ರಶೇಖರ್ ಕಮಲಕ್ಕೆ ಕೈಕೊಟ್ಟಿದ್ದಾರೆಂದೂ ಹೇಳಲಾಗುತ್ತಿದೆ.

ನ.1ರ ಸಸ್ಪೆನ್ಸ್!: ನ.1ರಂದು ಮಹತ್ವದ ಸುದ್ದಿಗೋಷ್ಠಿ ನಡೆಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ನಾಲ್ಕು ದಿನದ ಹಿಂದೆ ಹೇಳಿಕೆ ನೀಡಿದ್ದರು. ಈ ವಿಚಾರವಾಗಿಯೇ ಡಿಕೆಶಿ ಹೇಳಿದ್ದರೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಣದಿಂದ ಹಿಂದೆ ಸರಿದ ಚಂದ್ರಶೇಖರ್ ‘ಬಿಜೆಪಿ ಬಾವುಟ ಕೊಟ್ಟು ನನ್ನನ್ನು ಬೀದಿಯಲ್ಲಿ ಬಿಟ್ಟಿತು.. ಚುನಾವಣೆ ಖರ್ಚುವೆಚ್ಚ ನೋಡಿಕೊಳ್ಳುತ್ತೇವೆಂದವರು ಪ್ರಚಾರಕ್ಕೂ ಬರಲಿಲ್ಲ. ಇದರಿಂದ ಬೇಸತ್ತು ಕಣದಿಂದ ನಿವೃತ್ತನಾಗುತ್ತಿದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಮಲಕ್ಕೆ ಪಾಠ: ಕಾಂಗ್ರೆಸ್, ಜೆಡಿಎಸ್ ಒಳಗಿನ ಬಂಡಾಯದ ಲಾಭ ಪಡೆದು ರಾಮನಗರದಲ್ಲಿ ಪಕ್ಷ ಬಲಪಡಿಸಲು ಸಿಕ್ಕ ಅವಕಾಶ, ಅದೃಷ್ಟವನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಜಿಲ್ಲಾಧ್ಯಕ್ಷ ರುದ್ರೇಶ್ ಹಲವು ತಿಂಗಳ ಹಿಂದೆಯೇ ಚುನಾವಣೆಗೆ ಸಿದ್ಧತೆ ಮಾಡಿಕೊಂಡು, ಸಂಘಟನೆ ಕಾರ್ಯ ಆರಂಭಿಸಿದ್ದರು, ಆದರೆ ನಾಯಕರ ತಪ್ಪಿದ ಲೆಕ್ಕಾಚಾರದಿಂದಾಗಿ ಚುನಾವಣೆಗೆ ಮೊದಲೇ ಅಭ್ಯರ್ಥಿ ಇಲ್ಲದಂತಾಗಿದೆ. ರುದ್ರೇಶ್ ಅಥವಾ ಸ್ಥಳೀಯ ನಾಯಕರಿಗೆ ಟಿಕೆಟ್ ಕೊಟ್ಟಿದ್ದರೆ ಭವಿಷ್ಯದಲ್ಲಾದರೂ ಜಿಲ್ಲೆಯಲ್ಲಿ ಕಮಲ ನೆಲೆ ಕಂಡುಕೊಳ್ಳಲು ಅವಕಾಶ ಸಿಗುತ್ತಿತ್ತು. ಆದರೆ ಬಿಜೆಪಿಗರ ಅಸಡ್ಡೆ, ವಿಫಲ ಕಾರ್ಯತಂತ್ರ ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ನಾಯಕರಿಗೆ ಪಶ್ಚಾತ್ತಾಪ: ‘ನಾವು ತಪ್ಪು ಮಾಡಿಬಿಟ್ಟೆವು, ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಡುವ ಬದಲು ಈ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದರೆ ಚುನಾವಣೆಯಲ್ಲಿ ಸೋತರೂ ಮರ್ಯಾದೆ ಉಳಿಯುತ್ತಿತ್ತು. ಮುಂದೆಯಾದರೂ ಇಂಥ ಸಂಪ್ರದಾಯಕ್ಕೆ ಕಡಿವಾಣ ಹಾಕಲೇಬೇಕು’ ಎಂದು ಬಿಜೆಪಿ ನಾಯಕರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಬಲು ಅಪರೂಪ: ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆ ಕಣದಿಂದ ಅಭ್ಯರ್ಥಿಯನ್ನು ಹಿಂದೆ ಸರಿಸುವ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಅಪರೂಪ. ಕಳೆದ ಎರಡು ದಶಕದಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯನ್ನು ಹೊರಕಳಿಸಿದ ನಿದರ್ಶನವೇ ಇಲ್ಲ.

ಕಾಂಗ್ರೆಸ್​ನಲ್ಲಿ ಅಸಮಾಧಾನ: ಜೆಡಿಎಸ್ ಪರವಾಗಿ ಎದುರಾಳಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಲು ಡಿ.ಕೆ.ಸಹೋದರರು ನಡೆಸಿದ ಪ್ರಯತ್ನಕ್ಕೆ ಕಾಂಗ್ರೆಸ್​ನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ತಮ್ಮ ಸಾಮರ್ಥ್ಯ ತೋರಿಸಲು ಈ ರೀತಿ ಮಾಡಿದ್ದರಿಂದ ಪಕ್ಷಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಯೋಗೇಶ್ವರ್​ಗೆ ಹಿನ್ನಡೆ

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಸಲು ದಂಡನಾಯಕನ ರೀತಿ ನಿಯೋಜನೆಗೊಂಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ಗೆ ಈ ಬೆಳವಣಿಗೆ ದೊಡ್ಡ ಪೆಟ್ಟು ನೀಡಿದೆ. ಜೆಡಿಎಸ್-ಕಾಂಗ್ರೆಸ್ ಸೇರಿ ಹಿಂದೆ ಚನ್ನಪಟ್ಟಣದಲ್ಲಿ ಸೋಲಿನ ರುಚಿ ತೋರಿಸಿದ್ದು, ಈಗ ಎರಡನೇ ಬಾರಿ ಒಟ್ಟಾಗಿ ಪೆಟ್ಟುಕೊಟ್ಟಿವೆ.

ಕಾಂಗ್ರೆಸ್​ಗೇನು ಲಾಭ?

  • ಅಭ್ಯರ್ಥಿ ಕಣಕ್ಕಿಳಿಸದಿದ್ದರೂ, ನಿರ್ಣಾಯಕ ಪಾತ್ರ ವಹಿಸಿದ ಹೆಮ್ಮೆ
  • ಅನಿತಾ ಗೆಲುವಿಗೆ ನಾವೂ ಕಾರಣ ಎಂದು ಮಿತ್ರಪಕ್ಷ ಜೆಡಿಎಸ್ ಅನ್ನು ಮುಲಾಜಿಗೆ ಸಿಲುಕಿಸುವುದು
  • ಡಿಕೆಶಿ ಸಹೋದರರ ಪವರ್ ಶೋ
  • ಮೈತ್ರಿ ಅನಿವಾರ್ಯ ಎಂಬುದನ್ನು ದೋಸ್ತಿಗೆ ಮನವರಿಕೆ ಮಾಡುವುದು

ಬಿಜೆಪಿ ಮುಂದೇನು?

  • ರಾಮನಗರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
  • ಪಕ್ಷದ ಅಭ್ಯರ್ಥಿಯನ್ನು ಹೈಜಾಕ್ ಮಾಡಲಾಗಿದ್ದು ಚುನಾವಣೆ ರದ್ದುಗೊಳಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಮೊರೆ

ದಳದೊಳಗೆ ತಳಮಳ

  • ರಾಮನಗರ ಪಕ್ಷದ ಭದ್ರಕೋಟೆ, ಸುಲಭವಾಗಿ ಕ್ಷೇತ್ರ ಉಳಿಸಿಕೊಳ್ಳುವ ಅವಕಾಶವಿತ್ತು. ಆದರೂ ಕೊನೆ ಹಂತದಲ್ಲಿ ಕ್ರೆಡಿಟ್ ಕಾಂಗ್ರೆಸ್ ಪಾಲು
  • ಬಿಜೆಪಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದು ಡಿಕೆ ಸಹೋದರರು. ಇಲ್ಲಿ ಜೆಡಿಎಸ್ ಗೆದ್ದರೂ ಗೆಲುವಿನ ಲಾಭ ಕಾಂಗ್ರೆಸ್​ಗೇ ಹೆಚ್ಚು.
  • ರಾಮನಗರದ ಮೂಲಕ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಮ್ಮ ಪಾರಮ್ಯವೇ ಹೆಚ್ಚೆಂದು ಕಾಂಗ್ರೆಸ್ ರವಾನಿಸಿರುವ ಸಂದೇಶ