ಕಂಪ್ಲಿ ಗಣೇಶ್​ಗೆ 14 ದಿನ ನ್ಯಾಯಾಂಗ ಬಂಧನ

ರಾಮನಗರ: ಬಿಡದಿಯ ಈಗಲ್ಟನ್​ ರೆಸಾರ್ಟ್​ನಲ್ಲಿ ಹೊಸಪೇಟೆ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್​. ಗಣೇಶ್​ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ರಾಮನಗರ ಜೆಎಂಎಫ್​ಸಿ ಕೋರ್ಟ್​ ಆದೇಶಿಸಿದೆ.

ರಾಮನಗರ ಪೊಲೀಸರು ಗಣೇಶ್​ರನ್ನು ಗುಜರಾತ್​ನ ಸೋಮನಾಥ ಪಟ್ಟಣದಲ್ಲಿ ಬಂಧಿಸಿ ಇಂದು ಬೆಳಗ್ಗೆ ರಾಜ್ಯಕ್ಕೆ ಕರೆತಂದಿದ್ದರು. ಗಣೇಶ್​ರನ್ನು ಬಿಡದಿ ಪೊಲೀಸ್​ ಠಾಣೆಗೆ ಕರೆತಂದ ತನಿಖಾಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ಬಳಿಕ ಶಾಸಕರನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು.

ಗಣೇಶ್ ರಿಗೆ ಹರ್ನಿಯಾ, ಉಸಿರಾಟದ ತೊಂದರೆ ಇದೆ. ಭೇಟಿಗೆ ಬರುವ ಮತದಾರರು, ಅಧಿಕಾರಿಗಳು ಹೆಚ್ಚು. ಹೀಗಾಗಿ‌ ವೈದ್ಯಕೀಯ ಸೌಲಭ್ಯ ಇರುವ ಪರಪ್ಪನ ಅಗ್ರಹಾರ ಅಥವಾ ಸೂಕ್ತ ಸ್ಥಳಕ್ಕೆ ಅವಕಾಶ ನೀಡುವಂತೆ ಗಣೇಶ್ ಪರ ವಕೀಲ ಡೆರಿಕ್ ಅನಿಲ್ ಅವರು ನ್ಯಾಯಾಧೀಶೆ ಅನಿತಾ ಅವರಲ್ಲಿ‌ ಮನವಿ‌ ಮಾಡಿದರು.

ರಾಮನಗರ ನ್ಯಾಯಾಲಯ ದಲ್ಲಿಯೂ ವೈದ್ಯಕೀಯ ಚಿಕಿತ್ಸೆ ನೀಡಬಹುದು. ಇದು‌ ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು ಎಂದು ಸರ್ಕಾರಿ‌ ಅಭಿಯೋಜಕಿ ನಾಗರತ್ನಾ ಹೇಳಿದರು. ಅಂತಿಮವಾಗಿ‌ ನ್ಯಾಯಾಧೀಶರು ಮಾ. 6ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು.

ನಾಳೆ ಜಾಮೀನಿಗೆ‌ ಅರ್ಜಿ: ಶುಕ್ರವಾರ ಬೆಂಗಳೂರಿನ 82ನೇ ಸಿವಿಲ್ ನ್ಯಾಯಾಲಯದಲ್ಲಿ ಸಿ.ಎಚ್. ಹನುಮಂತರಾಯಪ್ಪ‌ ನೇತೃತ್ವದಲ್ಲಿ ಆರೋಪಿಯ ಪರ ಜಾಮೀನು ಅರ್ಜಿ‌ ಹಾಕುವುದಾಗಿ‌ ಅನಿಲ್ ತಿಳಿಸಿದರು.