More

    ಮಳೆ ಸವಾಲು ಎದುರಿಸಲು ಸಿದ್ಧರಾಗಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

     ರಾಮನಗರ
    ಹಿಂಗಾರು ಮಳೆ ಸುರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸನ್ನದ್ಧರಾಗಿರಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರ ಎಚ್ಚರಿಕೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ಭಾರಿ ಮಳೆ/ಪ್ರವಾಹ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುನ್ನೆಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ಅಸಾಧ್ಯ. ಯಾವುದೇ ಸಿದ್ಧತೆ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು ಎಂದರು.

    ರಾಮನಗರ ಜಿಲ್ಲೆಯಲ್ಲಿ ಈ ಹಿಂದೆ ಭಾರಿ ಮಳೆ/ಪ್ರವಾಹದಿಂದ ತೊಂದರೆಯಾಗಿದ್ದ ಪ್ರದೇಶಗಳನ್ನು ಪರಿಶೀಲಿಸಿ, ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಮಂಚನಬೆಲೆ ಡ್ಯಾಂ ಹಾಗೂ ಅರ್ಕಾವತಿ ನದಿಯ ಸುತ್ತಮುತ್ತ ನದಿ ಪಾತ್ರಗಳಲ್ಲಿ ಸಮಸ್ಯೆ ಎದುರಾಗುವಬಹುದು. ಜನರ ಸ್ಥಳಾಂತರಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಅವಿನಾಶ್ ಮೆನನ್ ರಾಜೇಂದ್ರನ್ ಸೂಚಿಸಿದರು.

    ಕಂಟ್ರೋಲ್ ರೂಂ
    ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ದಿನದ 24 ಗಂಟೆ ಕೆಲಸ ನಿರ್ವಹಿಸಬೇಕು. ಜೀವಹಾನಿ, ಬೆಳೆ ಹಾನಿಯಾದ ಬಗ್ಗೆ ಮಾಹಿತಿ ಬಂದಲ್ಲಿ ಸಂಬಂಧಪಟ್ಟ ತಹಸೀಲ್ದಾರ್ ಪರಿಶೀಲಿಸಬೇಕು. 24 ಗಂಟೆಯೊಳಗೆ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಜಿಲ್ಲೆಯಲ್ಲಿನ ಕೆರೆಗಳ ದಂಡೆಗಳನ್ನು ಪರೀಕ್ಷಿಸಿ ಸೋರಿಕೆ ಇದ್ದರೆ ತಕ್ಷಣ ಸರಿಪಡಿಸಬೇಕು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗದಂತೆ ಎಚ್ಚರಿಕೆ ವಹಿಸಬೇಕು. ಚರಂಡಿ, ಚಾನಲ್‌ಗಳನ್ನು ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ಸುಸ್ಥಿತಿಯಲ್ಲಿಡಬೇಕು. ಯಾವುದೇ ದುರಸ್ತಿಯಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳು ಮಳೆಯಿಂದ ಸೋರುವುದನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದರು.

    ಬೆಸ್ಕಾಂ
    ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದು, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳ ಕುರಿತು ತಪಾಸಣೆ ಮಾಡಿ, ವಿದ್ಯುತ್ ಅವಘಡ ಆಗದಂತೆ ಕ್ರಮ ವಹಿಸಬೇಕು. ಅಪಾಯಕಾರಿ ಮರಗಳಿದ್ದಲ್ಲಿ, ವಿದ್ಯುತ್ ಕಂಬಗಳ ಅಕ್ಕಪಕ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಿ ವಿದ್ಯುತ್ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಹಾಯವಾಣಿ ಸಂಖ್ಯೆ: 1912ಕ್ಕೆ ದಿನದ 24 ಗಂಟೆಯೂ ಕರೆ ಮಾಡಬಹುದು ಎಂದರು.

    ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಕ್ರಮ
    ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹಿಂದೆ ಭಾರಿ ಮಳೆಯಿಂದ ನೀರು ಸಂಗ್ರಹವಾಗುತ್ತಿದ್ದ ಸ್ಥಳಗಳನ್ನು ಗುರುತಿಸಿ ಮಳೆ ನೀರು ಸರಾಗವಾಗಿ ಹೋಗುವಂತೆ ದುರಸ್ತಿ ಮಾಡಲಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಅಗತ್ಯ ದೋಣಿ, ಮುಳುಗು ತಜ್ಞರು ಹಾಗೂ ಅಗತ್ಯ ಪರಿಕರಗಳೊಂದಿಗೆ ಪರಿಸ್ಥಿತಿ ನಿಭಾಯಿಸಲು ಸಿದ್ಧರಿರಬೇಕು ಎಂದು ಅವಿನಾಶ್ ಮೆನನ್ ರಾಜೇಂದ್ರನ್ ಸೂಚಿಸಿದರು.

    ಯಾವ ಹಾನಿ ಎಷ್ಟು ಪರಿಹಾರ?
    ಮಳೆಯಿಂದ ಉಂಟಾಗುವ ಅವಘಡಗಳಲ್ಲಿ ಒಂದು ವೇಳೆ ಜೀವಹಾನಿಯಾದಲ್ಲಿ 5 ಲಕ್ಷ ರೂ. ಪರಿಹಾರ ಮೊತ್ತವನ್ನು 24 ಗಂಟೆಯೊಳಗೆ ವಿತರಿಸುವಂತೆ ಸೂಚಿಸಿದ ಅವಿನಾಶ್ ಮೆನನ್ ರಾಜೇಂದ್ರನ್, ತೋಟಗಾರಿಕೆ ಬೆಳೆ ನಷ್ಟವಾದಲ್ಲಿ ಪ್ರತಿ ಎಕರೆಗೆ 25ರಿಂದ 28 ಸಾವಿರ ರೂ.ಗಳವರೆಗೆ ಪರಿಹಾರ ಮೊತ್ತವನ್ನು ಗರಿಷ್ಠ 2 ಎಕರೆಗೆ ಹಾಗೂ ಗರಿಷ್ಠ 50 ಸಾವಿರ ರೂ. ವಿತರಿಸಲಾಗುವುದು. ಪ್ರತಿ ತೆಂಗಿನ ಮರಕ್ಕೆ 280 ರೂ. ಪರಿಹಾರ ನೀಡಲಾಗುವುದು ಎಂದರು.

    ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾದರೆ ಪ್ರತಿ ಎಕರೆಗೆ 6,800 ರೂ.ಗಳಿಂದ 13,000 ರೂ.ವರೆಗೆ ಗರಿಷ್ಠ 2 ಎಕರೆಗೆ ಪರಿಹಾರ ನೀಡಲಾಗುವುದು.

    ಹಸು, ಎತ್ತು, ಎಮ್ಮೆ ಜೀವ ಹಾನಿಯಾದಲ್ಲಿ ಗರಿಷ್ಠ 37 ಸಾವಿರದಿಂದ ಗರಿಷ್ಠ 3 ದೊಡ್ಡ ಪ್ರಾಣಿಗಳಿಗೆ ಪರಿಹಾರ ಮೊತ್ತ, ಕುರಿ, ಮೇಕೆ ಸೇರಿ ಪ್ರತಿ ಚಿಕ್ಕ ಪ್ರಾಣಿಗಳಿಗೆ ಗರಿಷ್ಠ 4 ಸಾವಿರ ರೂ.ಪರಿಹಾರ ಮೊತ್ತ ಗರಿಷ್ಠ 30 ಪ್ರಾಣಿಗಳಿಗೆ ನೀಡಲಾಗುವುದು. ಕೋಳಿ, ಪಕ್ಷಿಗಳಿಗೆ ಗರಿಷ್ಠ 100 ರೂ.ಗಳಂತೆ 100 ಸಂಖ್ಯೆಯ ಪಕ್ಷಿಗಳಿಗೆ ನೀಡಲಾಗುವುದು ಎಂದರು.

    ಮಳೆಯಿಂದಾಗಿ ಹಾನಿಗೀಡಾದ ಮನೆಗಳಿಗೆ ಸಂಪೂರ್ಣ ಹಾನಿಗೆ ಗರಿಷ್ಠ 1 ಲಕ್ಷದ 20 ಸಾವಿರ ರೂ., ಸಣ್ಣ ಪುಟ್ಟ ಹಾನಿಯಾಗಿದಲ್ಲಿ 6500 ರೂ. ಪರಿಹಾರ ನೀಡಲಾಗುವುದು. ಮೀನು ಹೊಂಡಗಳಿಗೆ ಪ್ರತಿ ಎಕರೆಗೆ ಗರಿಷ್ಠ 8200 ರೂ. ಪರಿಹಾರ ನೀಡಲಾಗುವುದು. ಕೆರೆಗಳಲ್ಲಿ ಮೀನು ಹಿಡಿಯಲು ಬಳಸುವ ದೋಣಿ ಹಾಗೂ ಬಲೆಗಳಿಗೆ ಪರಿಹಾರ ನೀಡಲಾಗುವುದು ಎಂದು ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts