ರಾಮ, ಕೃಷ್ಣನ ನುಡಿಗಳು ಧರ್ಮದ ಹಾದಿಯಲ್ಲಿ ಸಾಗಲು ದಾರಿದೀಪ

ಯಲ್ಲಾಪುರ: ರಾಮಾಯಣ ಹಾಗೂ ಭಗವದ್ಗೀತೆಗೆ ಅವಿನಾಭಾವ ಸಂಬಂಧವಿದೆ. ರಾಮನ ಜೀವನಾದರ್ಶ ಮೌಲಿಕವಾದದ್ದು. ಅತಿ ಮಾನವನಾದ ಕೃಷ್ಣನ ನುಡಿ, ನಮ್ಮನ್ನು ಉತ್ತುಂಗಕ್ಕೇರಿಸುತ್ತದೆ. ಈ ಇಬ್ಬರ ನಡೆ-ನುಡಿಗಳು ಧರ್ಮದ ಹಾದಿಯಲ್ಲಿ ಸಾಗುವುದಕ್ಕೆ ದಾರಿ ದೀಪವಾಗಿದೆ ಎಂದು ಸ್ವರ್ಣವಲ್ಲಿಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದ ಆವಾರದ ಶಾರದಾಂಬಾ ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ, ನಾರಾಯಣ ಆಚಾರ್ಯರು ರಚಿಸಿದ ರಾಮಾಯಣ ಪಾತ್ರ ಪ್ರಪಂಚ ಮತ್ತು ನಾಟೀ ವೈದ್ಯರು ಸಂಗ್ರಹಿಸಿದ ಗ್ರಾಮ ವೈದ್ಯ ಪುಸ್ತಕ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಕಳೆದ 11 ವರ್ಷಗಳಿಂದ ನಾಡಿನಾದ್ಯಂತ ಗೀತಾ ಅಭಿಯಾನ ಹಮ್ಮಿಕೊಂಡಿದ್ದೇವೆ. ಪ್ರಸಕ್ತ 12ನೇ ವರ್ಷದಲ್ಲಿ 8ನೇ ಅಧ್ಯಾಯವನ್ನು ನಿಗದಿಗೊಳಿಸಲಾಗಿದ್ದು, ಡಿಸೆಂಬರ್ 18ರಂದು ನಾಡಿನ ಎಲ್ಲೆಡೆ ಗೀತೆಯ 18 ಅಧ್ಯಾಯದ ಪಾರಾಯಣ ನಡೆಸುವಂತಾಗಬೇಕು. 19 ರಂದು ಹುಬ್ಬಳ್ಳಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನರನ್ನು ಸೇರಿಸಿ, ಗೀತಾಭಿಯಾನದ ಮಹಾ ಸಮರ್ಪಣೆಯನ್ನು ನಡೆಸಲು ಉದ್ದೇಶಿಸಲಾಗಿದೆ. ನ. 9ರಿಂದ ನಾಲ್ಕು ಹಂತಗಳಲ್ಲಿ 8ನೇ ಅಧ್ಯಾಯದ ಶ್ಲೋಕ ಪಾರಾಯಣ, ಪ್ರವಚನ, ಉಪನ್ಯಾಸಗಳು ಎಲ್ಲ ಕೇಂದ್ರಗಳಲ್ಲಿ ನಡೆಯಬೇಕು. ಇದರಿಂದ ಸಂಕಷ್ಟದಲ್ಲಿರುವ ಜನರಿಗೆ ಮಾನಸಿಕ ನೆಮ್ಮದಿ ಆರೋಗ್ಯ ಲಭಿಸುತ್ತದೆ ಎಂದರು.

ವಿದ್ವಾಂಸ ಡಾ.ಕೆ.ಎಸ್.ನಾರಾಯಣಾಚಾರ್ಯ ಮಾತನಾಡಿ, ಸಮಾಜದಲ್ಲಿಂದು ದೊಡ್ಡವರ ಆಶೀರ್ವಾದಕ್ಕೆ, ಮಾತಿಗೆ ಬೆಲೆ ದೊರೆಯುತ್ತಿಲ್ಲ. ಶುದ್ಧ ಚಾರಿತ್ರ್ಯಂತರಾಗಿ ತಪೋಬಲ ಹೊಂದಿ, ನಿಷ್ಠೆ, ಜ್ಞಾನ ಪಡೆದು ಶ್ರೇಷ್ಠತ್ವ ಗಳಿಸಿದ ಮಹಾತ್ಮರು ತೀರಾ ವಿರಳರಾಗಿದ್ದಾರೆ. ರಾಮನ ಕೌಟುಂಬಿಕ ಬದುಕು ರಾಷ್ಟ್ರಾಧಾರಿತ ಪರಿಕಲ್ಪನೆ ನೀಡುತ್ತದೆ. ಕಾಮ, ಕ್ರೋಧಗಳು ನಮ್ಮನ್ನು ಆಕ್ರಮಿಸಿ, ಜ್ಞಾನೇಂದ್ರಿಯವನ್ನು ಆವರಿಸಿ, ತಪ್ಪು ದಾರಿಗೆ ನೂಕುತ್ತದೆ. ಅಧರ್ಮದಲ್ಲಿ ಸಾಗಿದವರನ್ನು ಭಗವಾನ್ ಕೃಷ್ಣ ತಂತ್ರಗಾರಿಕೆಯಿಂದಲೇ ನಾಶ ಮಾಡಿದ್ದಾನೆ ಎಂದರು. ಪುರಾಣ ಪ್ರವಚನ ಸ್ವಾಗತ ಸಮಿತಿಯ ಸಂಚಾಲಕ ಎಸ್.ಎಲ್. ಭಟ್ಟ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಡಿ. ಶಂಕರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.