ಡಬ್ಲ್ಯುವಿ ರಾಮನ್ ಭಾರತ ಮಹಿಳಾ ಕ್ರಿಕೆಟ್​ ತಂಡದ ನೂತನ ಕೋಚ್

ಮುಂಬೈ: ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಡಬ್ಲ್ಯುವಿ ರಾಮನ್​ ಅವರನ್ನು ಭಾರತ ಮಹಿಳಾ ಕ್ರಿಕೆಟ್​ ತಂಡದ ಕೋಚ್​ ಸ್ಥಾನಕ್ಕೆ ನೇಮಿಸಲು ಶಿಫಾರಸು ಮಾಡಲಾಗಿದ್ದು, ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು ಶುಕ್ರವಾರ ಹೊಸ ಕೋಚ್​ ಹೆಸರನ್ನು ಅಧಿಕೃತವಾಗಿ ಘೋಷಿಸಲಿದೆ.

ಮುಂಬೈನಲ್ಲಿ ಇಂದು ಭಾರತ ತಂಡದ ಮಾಜಿ ನಾಯಕ ಕಪಿಲ್​ ದೇವ್​, ಅನ್ಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಂಗಸ್ವಾಮಿ ಸಂದರ್ಶನ ನಡೆಸಿ ಪ್ರಸ್ತುತ ಬೆಂಗಳೂರಿನ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯಲ್ಲಿ ಬ್ಯಾಟಿಂಗ್​ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ರಾಮನ್​ ಅವರ ಹೆಸರನ್ನು ಶಿಫಾರಸು ಮಾಡಿದೆ.

ಕೋಚ್​ ಆಗಿ 2011ರಲ್ಲಿ ಭಾರತ ತಂಡಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್​ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಸಕ್ತಿ ತೋರಿತ್ತು. ಆದರೆ ಗ್ಯಾರಿ ಕರ್ಸ್ಟನ್ ಮುಂದಿನ ಐಪಿಎಲ್ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್​ಸಿಬಿ) ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಅವರು ಆ ಹುದ್ದೆಯನ್ನು ತೊರೆಯುವ ಇಚ್ಛೆ ವ್ಯಕ್ತಪಡಿಸದ ಕಾರಣ ರಾಮನ್​ ಅವರನ್ನು ಕೋಚ್​ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ರಾಮನ್​ ಭಾರತದ ಪರ 11 ಟೆಸ್ಟ್​ ಮತ್ತು 27 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವರು ತಮಿಳುನಾಡು ಮತ್ತು ಬಂಗಾಳ ರಣಜಿ ತಂಡಗಳ ಕೋಚ್​ ಆಗಿದ್ದರು ಮತ್ತು ಭಾರತ ಅಂಡರ್​-19 ತಂಡದೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಸ್ತುತ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಕೋಚ್​ಗಳಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್​)

ಕೋಚ್ ರೇಸ್​ನಲ್ಲಿ ಗ್ಯಾರಿ, ಪವಾರ್, ಗಿಬ್ಸ್