ಚಿಟಗುಪ್ಪ: ರಾಂಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಶುಕ್ರವಾರ ನಸುಕಿನ ಜಾವ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ವೈಭವದ ರಥೋತ್ಸವ ನೆರವೇರಿತು.
ದೇವಸ್ಥಾನದಿಂದ ಗುರುವಾರ ರಾತ್ರಿ ಶುರುವಾದ ಪಲ್ಲಕ್ಕಿ ಉತ್ಸವ ಥೇರ್ ಮೈದಾನದವರೆಗೆ ಸಾಗಿತು. ವೀರಗಾಸೆ, ಡೊಳ್ಳು ಕುಣಿತ ಭಜನೆ, ಪುರವಂತಿಕೆ ಸೇರಿ ಜನಪದ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ರಾಜ್ಯ ಸೇರಿ ಮಹಾರಾಷ್ಟ್ರ, ತೆಲಗಾಂಣದಿಂದ ಆಗಮಿಸಿದ ಅಪಾರ ಭಕ್ತಾದಿಗಳ ಮಧ್ಯೆ ಜೈ ಶ್ರೀರಾಮ ಘೋಷಣೆ, ಬಣ್ಣ ಬಣ್ಣದ ಪಟಾಕಿಗಳ ಸದ್ದಿನೊಂದಿಗೆ ರಥೋತ್ಸವ ಜರುಗಿತು. ನಂತರ ಪೈಲ್ವಾನರ ಜಂಗಿ ಕುಸ್ತಿ ನಡೆದವು.
ಪಲ್ಲಕಿ ಉತ್ಸವಕ್ಕೂ ಮುನ್ನ ನಡೆದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಹುಡಗಿಯ ಶ್ರೀ ಚನ್ನಮಲ್ಲ ಶಿವಾಚಾರ್ಯ, ತ್ರಿಪುರಾಂತದ ಶ್ರೀ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷರಾದ ಸೊಲ್ಲಾಪುರದ ಮಾಜಿ ಶಾಸಕ ವಿಶ್ವನಾಥ ಚಕೋತೆ ಮಾತನಾಡಿ, ರಾಂಪುರದ ರಾಮಲಿಂಗೇಶ್ವರ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ದೇವಸ್ಥಾನದ ಅಭಿವೃದ್ಧಿಗೆ ಸದಾ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸುರೇಶ ಮಾಶೆಟ್ಟಿ, ಕಾರ್ಯದರ್ಶಿ ಅಪ್ಪಣ್ಣಾ ಹಳಕೇರಿ, ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್, ಅರ್ಚಕರಾದ ಸಿದ್ದಯ್ಯ, ಬಸಯ್ಯ ಇತರರಿದ್ದರು.
ರಾಮನವಮಿ ದಿನ ತೊಟ್ಟಿಲೋತ್ಸವ: ರಾಮಲಿಂಗೇಶ್ವರ ದೇವರ ಜಾತ್ರೆ ನಿಮಿತ್ತ ಆರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ರಾಮನವಮಿ ದಿನ ಬುಧವಾರ ವಿಶೇಷವಾಗಿ ಶ್ರೀ ರಾಮಲಿಂಗೇಶ್ವರ ತೊಟ್ಟಿಲೋತ್ಸವ ಜರುಗಿತು. ಕುಂಭ ಮೆರವಣಿಗೆ, ರುದ್ರಾಭಿಷೇಕ ಪೂಜೆ, ಉಚಿತ ಆರೋಗ್ಯ ತಪಾಸಣೆ, ಬೀದರ್‌ನ ನಾಟ್ಯಶ್ರೀ ನೃತ್ಯಾಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.