Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ರಾಮಚಂದ್ರಾಪುರ ಮಠದ ಕೈತಪ್ಪಿತು ಗೋಕರ್ಣ ದೇಗುಲ

Saturday, 11.08.2018, 3:04 AM       No Comments

ಬೆಂಗಳೂರು: ಕರ್ನಾಟಕದ ದಕ್ಷಿಣ ಕಾಶಿ, ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಮತ್ತೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ದೇಗುಲವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ 2008ರ ಆ.12ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿರುವ ನ್ಯಾಯಾಲಯ, ಮುಜರಾಯಿ ಅಧೀನದ ಅಧಿಸೂಚಿತ ದೇವಸ್ಥಾನಗಳ ಪಟ್ಟಿಯಲ್ಲಿ ಮುಂದುವರಿಸುವಂತೆ ಶುಕ್ರವಾರ ತೀರ್ಪು ನೀಡಿದೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯ ಸಮಿತಿ, ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಕುಮಾರ್ ಅವರಿದ್ದ ವಿಶೇಷ ಪೀಠ ಪ್ರಕಟಿಸಿತು.

ಉಸ್ತುವಾರಿ ಸಮಿತಿ ರಚನೆ: ದೇವಾಲಯದ ಆಡಳಿತ ಮೇಲ್ವಿಚಾರಣೆಗಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ 6 ಸದಸ್ಯರ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕುಮಟಾ ಉಪ ವಿಭಾಗಾಧಿಕಾರಿ, ಸರ್ಕಾರ ನಾಮನಿರ್ದೇಶಿಸುವ ಇಬ್ಬರು ಪ್ರತಿಷ್ಠಿತ ವ್ಯಕ್ತಿಗಳು ಅಥವಾ ವಿದ್ವಾಂಸರು ಹಾಗೂ ಜಿಲ್ಲಾಧಿಕಾರಿ ನಾಮನಿರ್ದೇಶನ ಮಾಡುವ ದೇವಸ್ಥಾನದ ಇಬ್ಬರು ಉಪಾಧಿವಂತರು ಸಮಿತಿಯಲ್ಲಿರುತ್ತಾರೆ. ಈ ಸಮಿತಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಲಹೆಗಾರರಾಗಿರುತ್ತಾರೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.

ಸುಪ್ರೀಂಕೋರ್ಟ್ ಮೊರೆ

ತೀರ್ಪು ಪ್ರಕಟವಾದರೆ ಅದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ. ಹೀಗಾಗಿ ಕೆಲದಿನಗಳವರೆಗೆ ತೀರ್ಪು ತಡೆಹಿಡಿಯುವಂತೆ ರಾಮಚಂದ್ರಾಪುರ ಮಠದ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಕಳೆದ 10 ವರ್ಷಗಳಿಂದ ದೇವಸ್ಥಾನವು ಮಠದ ಸುಪರ್ದಿಯಲ್ಲಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಹುಂಡಿಗಳ ಹಣ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಠದ ಪರ ವಕೀಲರು, ದೇವಸ್ಥಾನದ ಲೆಕ್ಕಪರಿಶೋಧನಾ ವರದಿಯನ್ನು ಕೋರ್ಟ್​ಗೆ ಒಪ್ಪಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು. ಅಂತಿಮವಾಗಿ ತೀರ್ಪು ತಡೆಹಿಡಿಯಲು ನಿರಾಕರಿಸಿದ ನ್ಯಾಯಪೀಠ, ಸುಪ್ರೀಂಕೋರ್ಟ್​ಗೆ ಹೋಗಲು ನೀವು ಸ್ವತಂತ್ರರಿದ್ದೀರಿ ಎಂದು ಮಠದ ಪರ ವಕೀಲರಿಗೆ ತಿಳಿಸಿತಲ್ಲದೆ, ಉಸ್ತುವಾರಿ ಸಮಿತಿಯು ಸೆ.10ರಿಂದ ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೆ ದೇವಸ್ಥಾನ ಮಠದ ಸುಪರ್ದಿಯಲ್ಲೇ ಇರಲಿದೆ ಎಂದು ಸ್ಪಷ್ಟಪಡಿಸಿತು. ಜತೆಗೆ, ದೇವಾಲಯದ ಸ್ಥಿರ ಮತ್ತು ಚರಾಸ್ತಿಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಎರಡು ವಾರದಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತು.

ಪ್ರಕರಣವೇನು?

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ತೀರ್ಥಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿತ್ತು.

ಈ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್​ಗೆ ಹಲವು ಪಿಐಎಲ್ ಹಾಗೂ ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ದೇವಾಲಯವನ್ನು ಮಠಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಸರ್ಕಾರ ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.


ಗೋಕರ್ಣದಲ್ಲಿ ಸಂಭ್ರಮ, ಆತಂಕ

ಗೋಕರ್ಣ: ಮಹಾಬಲೇಶ್ವರ ಮಂದಿರ ಹಸ್ತಾಂತರ ಕುರಿತಂತೆ ಹೈಕೋರ್ಟ್ ನೀಡಿದ ತೀರ್ಪು ಆಡಳಿತಪರ ಇರುವವರಲ್ಲಿ ಆತಂಕ ಮೂಡಿಸಿದರೆ, ಆಡಳಿತ ವಿರೋಧಿಸಿ ನ್ಯಾಯಾಲಯದ ಮೊರೆ ಹೋದವರಲ್ಲಿ ಸಂಭ್ರಮ ತಂದಿದೆ.

ಮಹಾಬಲೇಶ್ವರ ದೇಗುಲ ಹಸ್ತಾಂತರ ವಿರೋಧಿಸಿ ದೇವಾಲಯದ ಹಿಂದಿನ ಟ್ರಸ್ಟಿ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ಮತ್ತು ಶಿರಸಿಯ ನರಹರಿ ಹೆಗಡೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹತ್ತು ವರ್ಷಗಳಲ್ಲಿ ಮಠ, ಮಂದಿರದಲ್ಲಿ ಹಲವು ಅಭಿವೃದ್ಧಿ ಪರ ಬದಲಾವಣೆ ಮಾಡಿದೆ. ಈಗ ಹೈಕೋರ್ಟ್ ತೀರ್ಪಿನಿಂದ ಈ ಯೋಜನೆಗಳ ಗತಿ ಏನು ಎಂಬ ಆತಂಕ ಮಂದಿರ ಆಡಳಿತದಲ್ಲಿ ಮನೆ ಮಾಡಿದೆ. ತೀರ್ಪಿನ ಬಗ್ಗೆ ಮಂದಿರ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಸಂಭ್ರಮ: ಇದೇ ವೇಳೆ ಆಡಳಿತ ಹಸ್ತಾಂತರ ವಿರೋಧಿಸಿ ವಿವಿಧ ಹೋರಾಟ ನಡೆಸುತ್ತಿರುವ ಗೋಕರ್ಣ ರಕ್ಷಣಾ ಸಮಿತಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿತು. ತೀರ್ಪನ್ನು ಸ್ವಾಗತಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಗಣಪತಿ ಗಜಾನನ ಹಿರೇ, ‘ಈ ಮಂದಿರ ಬಹು ಹಿಂದಿನಿಂದಲೂ ಸಮಾಜದ ಎಲ್ಲರಿಗೆ ಸೇರಿದ ಸಾರ್ವಜನಿಕ ಮಂದಿರವಾಗಿತ್ತು. ಮಂದಿರ ಯಾವುದೇ ಖಾಸಗಿ ಆಡಳಿತಕ್ಕೆ ಒಳ ಪಡಬಾರದು ಎನ್ನುವ ನಮ್ಮ ವಾದಕ್ಕೆ ನ್ಯಾಯಾಲಯ ಪುಷ್ಟಿ ನೀಡಿದೆ’ ಎಂದಿದ್ದಾರೆ.

ವೇ.ಗಣೇಶ ಜೋಗಳೇಕರ ಪ್ರತಿಕ್ರಿಯಿಸಿ, ‘ಮಂದಿರದಲ್ಲಿ ಸ್ವಚ್ಛತೆ ಮುಂತಾದ ಬದಲಾವಣೆ ಆಗಿದ್ದರೂ ಮುಖ್ಯವಾಗಿ ಮಠ ನೇತೃತ್ವದ ಮಂದಿರ ಆಡಳಿತ ಗೋಕರ್ಣದ ಸನಾತನ ಪರಂಪರೆಗೆ ಧಕ್ಕೆ ತಂದಿದೆ. ಹಲವು ಮೂಲ ಪದ್ಧತಿಗೆ ತಡೆ ಹಾಕಲಾಗಿರುವುದು ವಿರೋಧಕ್ಕೆ ಕಾರಣವಾಗಿದೆ’ ಎಂದಿದ್ದಾರೆ.

ಮಂದಿರದಲ್ಲಿ ಅಭಿವೃದ್ಧಿ: ರಾಮಚಂದ್ರಾಪುರ ಮಠದ ಆಡಳಿತದಲ್ಲಿ ಮಂದಿರದಲ್ಲಿ ಸ್ವಚ್ಛತೆ ಮತ್ತು ಆಡಳಿತದಲ್ಲಿ ಶಿಸ್ತು ಬಂದಿದೆ. ಆಗಮಿಸುವ ಭಕ್ತರಿಗೆ ಎರಡೂ ಹೊತ್ತು ಅಮೃತಾನ್ನ ಪ್ರಸಾದ ಭೋಜನ ಏರ್ಪಾಟಾಗಿದೆ. ಮಂದಿರದ ಗರ್ಭ ಗುಡಿಯನ್ನು ಹವಾನಿಯಂತ್ರಿತವಾಗಿಸಲಾಗಿದೆ. ನಂದಿ ಮಂಟಪ ಮತ್ತು ಗರ್ಭ ಗುಡಿ ಪ್ರವೇಶ ದ್ವಾರವನ್ನು ಎರಡು ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ರಜತಮಯವಾಗಿಸಲಾಗಿದೆ. ಆತ್ಮಲಿಂಗಕ್ಕಿಂತ ಪುರಾತನವಾದ ಆದಿ ಗೋಕರ್ಣೆಶ್ವರ ಮಂದಿರವನ್ನು ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತದ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಲೋಕ ಕಲ್ಯಾಣಾರ್ಥ ಸಂಘಟಿಸಲಾದ ಬಹು ಮಹತ್ವಾಕಾಂಕ್ಷೆಯ ಕೋಟಿ ರುದ್ರ ಮಹಾ ಮಂತ್ರ ಸಮರ್ಪಣೆ ಅರ್ಧ ಹಂತ ತಲುಪಿದೆ.

Leave a Reply

Your email address will not be published. Required fields are marked *

Back To Top