ಶಾಸಕರ ಜತೆ ರಾಮ-ಆಂಜನೇಯರ ಬಾಂಧವ್ಯವಿರಲಿ

ಕಡೂರು: ಸಾರ್ವಜನಿಕರು, ಕಾರ್ಯಕರ್ತರು ಹಾಗೂ ಶಾಸಕರ ನಡುವಿನ ಸಂಬಂಧ ರಾಮ-ಆಂಜನೇಯ ನಡುವಿನ ಬಾಂಧವ್ಯದಂತೆ ಇರಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

ಎಪಿಎಂಸಿ ಆವರಣದಲ್ಲಿ ಭಾನುವಾರ ಕಾರ್ಯಕರ್ತರಿಗೆ ಅಭಿನಂದನೆ, ಮತದಾರರಿಗೆ ಕೃತಜ್ಞತೆ ಹಾಗೂ ಶಾಸಕರಿಗೆ ನಾಗರಿಕ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಮ ಅಭಿವೃದ್ಧಿ ಸಂಕೇತವಾದರೆ ಆಂಜನೇಯ ಸ್ಪೂರ್ತಿ ಸಂಕೇತ. ರಾಮ-ಆಂಜನೇಯ ಸಂಬಂಧ ಇತಿಹಾಸ ಪ್ರಸಿದ್ಧ ಮತ್ತು ಸದಾ ಕಾಲಕ್ಕೂ ಗುರುತಿಸುವಂತಹ ಪವಿತ್ರ ಬಾಂಧವ್ಯ. ಇದನ್ನು ಜನರು ಅರ್ಥ ಮಾಡಿಕೊಂಡರೆ ಉಸಿರು ಇರುವವರೆಗೆ ಶಾಸಕ, ಇಲ್ಲದಿದ್ದರೆ ಐದು ವರ್ಷ ಮಾತ್ರ ಶಾಸಕ ಎಂದರು.

ಬಿಜೆಪಿ ದೇವರ ಪಕ್ಷ. ಈ ಪಕ್ಷವು ನಾಡಿನ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸುವ ಹೊಣೆ ಹೊತ್ತಿದೆ. 18 ವರ್ಷ ಕಡೂರು ಕ್ಷೇತ್ರದ ರಾಜಕಾರಣದ ಮಗ್ಗುಲನ್ನು ಅರಿತು ಕಾರ್ಯಕರ್ತರು ಮತ್ತು ಜನರ ನಡುವೆ ಬೆಳೆಯುತ್ತಿದ್ದ ನನ್ನನ್ನು ಜನರು ಶಾಸಕನಾಗಿ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಭವಿಷ್ಯದಲ್ಲಿ ಜನರ ಪಾಲಿಗೆ ಅಪಾಯ ಎದುರಾಗಲಿದೆ ಎಂದರು.

ಬಿಜೆಪಿ ಕಡೂರು ಉಸ್ತುವಾರಿ ಸಿ.ಎಚ್. ಲೋಕೇಶ್ ಮಾತನಾಡಿ, ಬಜೆಟ್​ನಲ್ಲಿ ಘೊಷಿಸಿದ ಸಾಲ ಮನ್ನಾ ಯೋಜನೆಗೆ ನೂರೆಂಟು ಷರತ್ತುಗಳನ್ನು ಹಾಕಲಾಗಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಸಿ. ಕಲ್ಮುರಡಪ್ಪ ಮಾತನಾಡಿ, ಮತ ನೀಡಿ ಗೆಲ್ಲಿಸಿದಾಗ ಪ್ರಬುದ್ಧ ಮತದಾರರು, ಸೋಲಿಸಿದಾಗ ಮತದಾರರು ಪ್ರಬುದ್ಧರಲ್ಲ ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಮಾಜಿ ಶಾಸಕ ದತ್ತ ಕ್ಷೇತ್ರದ ಮತದಾರರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ಎಚ್.ವಿ.ಗಿರೀಶ್, ಟಿ.ಆರ್. ಲಕ್ಕಪ್ಪ, ಜಿಪಂ ಸದಸ್ಯ ಜಿ.ಎನ್. ವಿಜಯ್ಕುಮಾರ್, ಬೀರೂರು ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್ ಇದ್ದರು.