ರಾಮ ಮಂದಿರ ನಿರ್ಮಾಣ ನಮ್ಮ ಅಜೆಂಡಾ ಅಲ್ಲ ಎಂದ ಬಿಜೆಪಿ ಮಿತ್ರ ಪಕ್ಷ ಜೆಡಿಯು

ಪಟನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರ ನಮ್ಮ ಪಕ್ಷದ ಅಜೆಂಡಾದಲ್ಲಿ ಇಲ್ಲ ಎಂದು ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಸಂಯುಕ್ತ ಜನತಾದಳ ( ಜೆಡಿಯು) ಸ್ಪಷ್ಟಪಡಿಸಿದೆ.

ಅಲ್ಲದೆ, ಆಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ನೀಡಲಿರುವ ಅಂತಿಮ ತೀರ್ಪಿಗೆ ಜೆಡಿಯು ಬದ್ಧವಾಗಿರುವುದಾಗಿಯೂ ಹೇಳಿಕೊಂಡಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜೆಡಿಯುನ ವಕ್ತಾರ, ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರ ಆಪ್ತ ಬಳಗದ ಮುಖಂಡ ಸಂಜಯ್​ ಸಿಂಗ್​, ” ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ನಮ್ಮ ಪಕ್ಷದ ಅಜೆಂಡಾದಲ್ಲಿ ಇಲ್ಲ. ಸದ್ಯ ರಾಮ ಮಂದಿರ ನಿರ್ಮಿಸಬೇಕು ಎಂದು ಹೇಳಲಾಗುತ್ತಿರುವ ಜಾಗ ವಿವಾದಿತ. ಈ ವಿಚಾರದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ. ರಾಮ ಮಂದಿರಕ್ಕೆ ಸಂಬಂಧಿಸಿದಂತೆ ನಾವು ಯಾರನ್ನೂ ಬೆಂಬಲಿಸುವುದಿಲ್ಲ, ಯಾರ ಹಿಂದೆಯೂ ನಿಲ್ಲುವುದಿಲ್ಲ” ಎಂದು ಹೇಳಿದ್ದಾರೆ.

ಈ ನಡುವೆ 2019ರ ಜನವರಿಯಲ್ಲಿ ರಾಮಮಂದಿರ ವಿವಾದದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್​ ಇಂದು ತಿಳಿಸಿದೆ.
ರಾಮ ಮಂದಿರದ ವಿವಾದದಲ್ಲಿ ಬಿಜೆಪಿಯೊಂದಿಗೆ ತನ್ನದೇನೂ ಪಾತ್ರವಿಲ್ಲ ಎಂದು ಜೆಡಿಯು ಹಿಂದಿನಿಂದೂ ಹೇಳುತ್ತಲೇ ಬರುತ್ತಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದನ್ನು ಪ್ರತಿಪಾದಿಸುತ್ತಾ ಬಂದಿರುವ ಬಿಜೆಪಿಗೆ ಬಿಹಾರದಲ್ಲಿ ಜೆಡಿಯು ಮಿತ್ರ ಪಕ್ಷ. ಸದ್ಯ ಬಿಹಾರದಲ್ಲಿ ಜೆಡಿಯು-ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದ್ದು, 2019ರ ಲೋಕಸಭೆ ಚುನಾವಣೆಗೂ ಸಮಪಾಲಿನ ಮೈತ್ರಿ ಏರ್ಪಟ್ಟಿದೆ. ಆದರೆ, ಜೆಡಿಯುನ ಈ ನಿಲುವು ಮಿತ್ರ ಪಕ್ಷ ಬಿಜೆಪಿಯ ನಿಲುವಿಗೆ ವ್ಯತಿರಿಕ್ತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.