ರಾಮಮಂದಿರವನ್ನು 100 ಕೋಟಿ ಹಿಂದುಗಳ ‘ಎದೆಗಾರಿಕೆ’ಯಿಂದ ನಿರ್ಮಿಸಲಾಗುತ್ತದೆ: ಗಿರಿರಾಜ್‌ ಸಿಂಗ್‌

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಆದ್ಯತೆಯ ವಿಚಾರವಾಗಿರುವ ರಾಮಮಂದಿರ ನಿರ್ಮಾಣ ವಿಚಾರವಾಗಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಮೀರತ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಹಂಗಿನಲ್ಲಿ ರಾಮಮಂದಿರವನ್ನು ನಿರ್ಮಿಸುವುದಿಲ್ಲ. ಬದಲಿಗೆ 100 ಕೋಟಿ ಹಿಂದುಗಳ ಎದೆಗಾರಿಕೆಯ ಬೆಂಬಲದಿಂದ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಭೂಮಿಯನ್ನು ಎರಡು ಬಾರಿ ಅಗೆಯಲಾಯಿತು. ಆದರೆ ಯಾರೊಬ್ಬರು ಆ ಬಗ್ಗೆ ಮಾತನಾಡಲಿಲ್ಲ. ಈಗ ಮತ್ತೆ ರಾಮ ಮಂದಿರವನ್ನು ನಿರ್ಮಿಸಲಾಗುವುದು. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿಕೆಗೆ ಕಿಡಿಕಾರಿರುವ ಅವರು, ಮಂದಿರವನ್ನು ಎಲ್ಲಿ ಬೇಕಾದರೂ ಕಟ್ಟಬಹುದು ಎಂದಿದ್ದಾರೆ ಆದರೆ ಅವರು ಹಜ್‌ನ್ನು ಬಿಟ್ಟು ಬೇರೆಲ್ಲಿಗಾದರೂ ಹೋಗಬಹುದೇ ಎಂದು ಕೇಳುತ್ತೇನೆ ಎಂದರು.

ಈ ಮೊದಲು ಮಾತನಾಡಿದ್ದ ಗಿರಿರಾಜ್‌, ರಾಮಮಂದಿರ ವಿವಾದದಿಂದಾಗಿ ಹಿಂದೂಗಳೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಅವರ ತಾಳ್ಮೆಯ ಕಟ್ಟೆ ಹೊಡೆಯುವ ಸಮಯ ಮಾತ್ರ ಇದೆ ಎಂದಿದ್ದರು. (ಏಜೆನ್ಸೀಸ್)