‘ರಾಮಮಂದಿರ’ದ ಭರವಸೆ ನೀಡಿದ್ದವರು ಅದನ್ನು ಮರೆತಿದ್ದಾರೆ: ಆರ್​ಎಸ್​ಎಸ್​ನ ಭಯ್ಯಾಜಿ ಸುರೇಶ್​ ಜೋಶಿ ಅಸಮಾಧಾನ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದ್ದವರು ಮಾತು ಉಳಿಸಿಕೊಂಡಿಲ್ಲ ಎಂದು ಭಯ್ಯಾಜಿ ಎಂದೇ ಖ್ಯಾತರಾಗಿರುವ ಆರ್​ಎಸ್​ಎಸ್​ ಮುಖಂಡ ಸುರೇಶ್​ ಜೋಶಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಎಚ್​ಪಿ ರ‍್ಯಾಲಿಯಲ್ಲಿ ಎಲ್ಲಿಯೂ ಬಿಜೆಪಿ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ಭರವಸೆ ನೀಡಿದ್ದವರು ಈಗ ಅದನ್ನು ಮರೆತಿದ್ದಾರೆ. ಜನರ ಬೇಡಿಕೆಗಳನ್ನು, ಧಾರ್ಮಿಕ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಈಡೇರಿಸಬೇಕು. ಶೀಘ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು. ನಾವು ಬೇಡುತ್ತಿಲ್ಲ, ನಮ್ಮ ಭಾವನೆಯನ್ನು ವ್ಯಕ್ತಗೊಳಿಸುತ್ತಿದ್ದೇವೆ. ನಮ್ಮ ದೇಶ ರಾಮರಾಜ್ಯವನ್ನು ಬಯಸುತ್ತಿದೆ ಎಂದರು.

ಅಯೋಧ್ಯಾ ರಾಮಮಂದಿರದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇದ್ದು, ಕೇಂದ್ರ ಸರ್ಕಾರ ಕೂಡಲೇ ಶಾಸನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ವಿಶ್ವ ಹಿಂದು ಪರಿಷತ್​ ಆಯೋಜಿಸಿದ್ದ ರ‍್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.