ಗರಿಗೆದರಿದ ಜನಭಾವನೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾಗಬೇಕೆಂಬ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದು ಕೆಲವೇ ವರ್ಷಗಳಿಂದೀಚೆಗೆ ರೂಪುಗೊಂಡ ಗ್ರಹಿಕೆಯಲ್ಲ; ಶತಮಾನಗಳ ಹೋರಾಟದ ಹಿನ್ನೆಲೆ ಇದಕ್ಕಿದೆ ಎಂಬ ಸಂಗತಿಯನ್ನು ಮರೆಯುವಂತಿಲ್ಲ. ಅಯೋಧ್ಯೆ ಶ್ರೀರಾಮನ ಜನ್ಮಭೂಮಿ ಆಗಿರುವುದರಿಂದ, ಮುಂಚೆ ಇದ್ದ ಭವ್ಯಮಂದಿರದ ಜಾಗದಲ್ಲೇ ಮತ್ತೆ ಹೊಸಮಂದಿರ ತಲೆಯೆತ್ತಬೇಕು ಎಂಬುದು ಬಹುಜನರ ಬಯಕೆ. ಈ ಸಂಬಂಧದ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿರುವುದರಿಂದ, ಸದರಿ ಚರ್ಚಾವಿಷಯಕ್ಕೆ ಅಲ್ಲೊಂದು ರ್ತಾಕ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.

ವಿಶೇಷವಾಗಿ, ಕೇಂದ್ರ ಮತ್ತು ಉತ್ತರ ಪ್ರದೇಶ ಈ ಎರಡೂ ಕಡೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ, ಮಂದಿರ ನಿರ್ಮಾಣ ಸಂಬಂಧಿತ ಪ್ರಕ್ರಿಯೆ/ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂಬುದು ಜನರ ಸಹಜ ನಿರೀಕ್ಷೆಯಾಗಿತ್ತು. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಉಭಯ ಸರ್ಕಾರಗಳಿಗೂ ಕೈಕಟ್ಟಿಹಾಕಿದಂತಾಗಿದೆ ಎಂಬುದು ವಾಸ್ತವ. ಇಷ್ಟಾಗಿಯೂ, ಧಾರ್ವಿುಕ ಆಯಾಮದ ಜತೆಜತೆಗೆ, ಅಯೋಧ್ಯೆಯನ್ನು ಪ್ರವಾಸೋದ್ಯಮದ ಕೇಂದ್ರಬಿಂದುವಾಗಿಸಲು, ರಾಮ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಸಂಗತಿ-ಸ್ವರೂಪಗಳನ್ನು (ಅಂದರೆ ರಾಮನ ಬೃಹದಾಕಾರದ ಪ್ರತಿಮೆಯ ನಿರ್ವಣ, ವಸ್ತುಸಂಗ್ರಹಾಲಯ ನಿರ್ಮಾಣ ಇತ್ಯಾದಿ) ಮತ್ತಿತರ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಮುಖ್ಯವಾಗಿ, ಕಳೆದೊಂದು ತಿಂಗಳಿಂದ ದೇಶದ ವಿವಿಧೆಡೆಗಳಲ್ಲಿ ಜನಾಗ್ರಹ ರ್ಯಾಲಿಗಳು ನಡೆಯುತ್ತಿದ್ದು, ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವ ಸಾಧು-ಸಂತರು, ಮಠಾಧೀಶರು, ಜನಸಾಮಾನ್ಯರು ಮಂದಿರ ನಿರ್ವಣಕ್ಕೆ ಒಲವು ವ್ಯಕ್ತಪಡಿಸುತ್ತಿದ್ದಾರೆಂಬುದು ಈಗಾಗಲೇ ಜಗಜ್ಜಾಹೀರು. ಅಷ್ಟೇ ಅಲ್ಲ, ಶ್ರದ್ಧಾಭಕ್ತಿ, ನಂಬಿಕೆ, ಧಾರ್ವಿುಕತೆ, ಸಂಪ್ರದಾಯಾಚರಣೆ, ಪರಂಪರೆಯೇ ಮೊದಲಾದ ಮಹತ್ವದ ಅಂಶಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯದ ನಿಲುವಿಗಿಂತ ಜನಭಾವನೆಗೇ ಆದ್ಯತೆ ಸಿಗುವಂತಾಗಬೇಕು ಎಂಬ ಆಗ್ರಹವೂ ಈ ಸಂದರ್ಭದಲ್ಲಿ ಕೇಳಿಬರುತ್ತಿರುವುದು, ಬಹುಮತಾಭಿಪ್ರಾಯದ ಪರಿಕಲ್ಪನೆಗೆ ಸಿಕ್ಕಿರುವ ಅಸೀಮ ಬಲವೂ ಹೌದು ಎಂದರೆ ಅತಿಶಯೋಕ್ತಿಯಲ್ಲ.

ಧಾರ್ವಿುಕ ಚಟುವಟಿಕೆಗಳಿಗೆ ಧರ್ಮದ ಆಯಾಮ ಮಾತ್ರವಲ್ಲದೆ, ಏಕತೆಯನ್ನು ಸಾರುವ ಶಕ್ತಿಯೂ ಇದೆ ಎಂಬುದಕ್ಕೆ ಸ್ವಾತಂತ್ರ್ಯಪೂರ್ವ ಕಾಲಘಟ್ಟವೇ ಸಾಕ್ಷಿ; ಭಾರತೀಯರ ಅಸ್ಮಿತೆ, ಒಗ್ಗಟ್ಟು, ಪರಂಪರೆಗಳಿಗೆ ಸಂಚಕಾರ ತಂದೊಡ್ಡಿದ್ದ ಬ್ರಿಟಿಷರು, ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಿಗೆ ಒಂದೆಡೆ ಸೇರಲೂ ಸಾಧ್ಯವಾಗದಂಥ ನಿರ್ಬಂಧದ ವಾತಾವರಣವನ್ನು ನಿರ್ವಿುಸಿದ್ದಾಗ, ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯನ್ನು ಪರಿಚಯಿಸಿ, ಹೋರಾಟಗಾರರ ಸಂದೇಶವನ್ನು ದೇಶಬಾಂಧವರು ಗ್ರಹಿಸುವುದಕ್ಕೆ, ತನ್ಮೂಲಕ ಒಗ್ಗಟ್ಟನ್ನು ಕಾಯ್ದುಕೊಳ್ಳುವಂತಾಗುವುದಕ್ಕೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಅನುವುಮಾಡಿಕೊಟ್ಟರು ಎಂಬುದನ್ನು ಮರೆಯಲಾಗದು. ಈ ಹಿನ್ನೆಲೆಯಲ್ಲಿ ನಂಬಿಕೆ ಮತ್ತು ಧಾರ್ವಿುಕತೆಗಳಿಗೆ ಸಂಬಂಧಪಟ್ಟಂತೆ ನ್ಯಾಯಸ್ಥಾನದ ನಿಲುವಿಗಿಂತ ಜನಭಾವನೆಗೇ ಹೆಚ್ಚು ಒತ್ತು ಸಿಗಬೇಕು ಎಂಬ ಆಗ್ರಹ ಸಹಜವಾಗೇ ಇದೆ. ದೇಶದಲ್ಲಿ ಪ್ರಸ್ತುತ ಕಾಣಬರುತ್ತಿರುವ ಸಾಮಾಜಿಕ, ಧಾರ್ವಿುಕ ಮತ್ತು ರಾಜಕೀಯ ಚಿತ್ರಣಗಳ ಪ್ರಭಾವದ ನಡುವೆ ಈ ಆಗ್ರಹ ಮತ್ತು ಗ್ರಹಿಕೆಗಳು ಯಾವ ತಿರುವನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ. ಎಲ್ಲ ಸುಸೂತ್ರವಾಗಿ ನೆರವೇರಿ ಜನದನಿಗೆ ಗೌರವ ಸಿಗಲಿ ಎಂಬುದು ಪ್ರಜ್ಞಾವಂತರ ಆಶಯ. ಕಾರಣ ‘ರಾಮ’ ಎಂಬುದು ಕೇವಲ ಒಂದು ಹೆಸರು ಅಥವಾ ವ್ಯಕ್ತಿಯಷ್ಟೇ ಅಲ್ಲ, ಅದು ಮೌಲ್ಯಯುತ ಬದುಕಿನ ಪರ್ಯಾಯರೂಪವೂ ಹೌದು.

(ಓದುಗರ ಗಮನಕ್ಕೆ: ವಿಶೇಷ ಪುಟದ ಕಾರಣ ಬಾಬು ಕೃಷ್ಣಮೂರ್ತಿಯವರ ‘ಹೋರಾಟದ ಹಾದಿ’, ಭುವನೇಶ್ವರಿ ಹೆಗಡೆ ಅವರ ‘ಮುಗುಳು’ ಅಂಕಣ ಪ್ರಕಟವಾಗಿಲ್ಲ.)