ಮೊಳಗುತ್ತಿದೆ ಜನಾಗ್ರಹದ ದನಿ!

ವಿವಾದಿತ ಬಾಬ್ರಿ ಕಟ್ಟಡ ಧ್ವಂಸಗೊಂಡು ಇಂದಿಗೆ 26 ವರ್ಷ. ಈ ಅವಧಿಯಲ್ಲಿ ಅಯೋಧ್ಯೆ ಸಾಕಷ್ಟು ಬದಲಾಗಿದೆ. ರಾಮ ಮಂದಿರ ನಿರ್ಮಾಣ ಆಗಬೇಕು ಎಂಬ ಜನಾಗ್ರಹದ ಕೂಗು ಅನುರಣಿಸುತ್ತಿದೆ. ಸಾಧು-ಸಂತರು, ನಾಗಾ ಸಾಧುಗಳು ಮತ್ತೆ ಮಂದಿರ ನಿರ್ವಣಕ್ಕಾಗಿ ಸಂಕಲ್ಪ ತಳೆದಿದ್ದಾರೆ. ಅಯೋಧ್ಯೆಯ ಭೌಗೋಳಿಕ ಚಿತ್ರಣವೂ ಪ್ರಫುಲ್ಲಿತಗೊಂಡಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯ ಆರ್ಥಿಕತೆ ಅಭಿವೃದ್ಧಿಯ ವೇಗ ಪಡೆದುಕೊಂಡಿದೆ.

ಸರಯೂ ನದಿತೀರದಲ್ಲಿ ತಲೆ ಎತ್ತಲಿದೆ ರಾಮನ ಬೃಹತ್ ಪ್ರತಿಮೆ

‘ನೋಡಿ, ಎಲ್ಲೆಲ್ಲೂ ರಾಮನಾಮದ ಅನುರಣನವಾಗುತ್ತಿದೆ. ಸರಯೂ ನದಿತೀರದಲ್ಲಿಯೂ ನಾಮಸ್ಮರಣೆಯ ನಿನಾದ ಕೇಳಿಬರುತ್ತಿದೆ. ಇಷ್ಟೊಂದು ದೀಪಗಳು ಅಂಧಕಾರ ತೊಲಗಿಸಿ ರಾಮಪ್ರಭೆಯನ್ನು ಮತ್ತೆ ದೇದೀಪ್ಯಮಾನವಾಗಿಸುತ್ತಿವೆ. ಭವ್ಯ ರಾಮಮಂದಿರ ತಲೆ ಎತ್ತುವುದು ಖಚಿತ.’-ದೀಪಾವಳಿಯ ಪಾಡ್ಯ ದಿನದಂದು ಅಯೋಧ್ಯೆಯ ಸರಯೂ ನದಿತೀರದಲ್ಲಿ ದೀಪೋತ್ಸವಕ್ಕೆ ಸಾಕ್ಷಿಯಾಗಿ ಸಾಧು-ಸಂತರು ಈ ಮಾತು ಹೇಳುತ್ತಿದ್ದರೆ ನೆರೆದವರು ರೋಮಾಂಚನಗೊಳ್ಳುತ್ತಿದ್ದರು. ರಾಮ ಮಂದಿರ ನಿರ್ವಣವಾಗಿ, ಅದನ್ನು ನೋಡುವ ಭಾಗ್ಯದ ಬಗ್ಗೆ ಪುಳಕಗೊಳ್ಳುತ್ತಿದ್ದರು.

ಈ ಬಾರಿ ರಾಮಮಯ ವಾತಾವರಣ ನಿರ್ವಣವಾಗಿದೆ. ಅಯೋಧ್ಯೆಯ ಸ್ಥಳೀಯ ಮುಸಲ್ಮಾನರು ಸಹ ಮಂದಿರ ನಿರ್ವಣವಾಗಿ ಬಿಡಲಿ, ಇದರಿಂದ ದೀರ್ಘಕಾಲಿನ ಸಮಸ್ಯೆ ಅಂತ್ಯಗೊಂಡು ನೆಮ್ಮದಿ ನೆಲೆಸುತ್ತದೆ ಎನ್ನುತ್ತಿದ್ದಾರೆ. ಶಿಯಾ ಮುಸಲ್ಮಾನರ ಹಲವು ಸಂಘಟನೆಗಳೂ ಮಂದಿರ ನಿರ್ವಣದ ಪರವಾಗಿವೆ. ಅಲ್ಲದೆ, ಸವೋಚ್ಚ ನ್ಯಾಯಾಲಯ ರಾಮ ಜನ್ಮಭೂಮಿ ಸಂಬಂಧ ಪ್ರಕರಣದ ವಿಚಾರಣೆಯನ್ನು ಮತ್ತೆ ಮುಂದೂಡಿರುವ ಪರಿಣಾಮ ಸುಗ್ರೀವಾಜ್ಞೆ ಜಾರಿಗೆ ತರಲು ಸಾಧು-ಸಂತರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಇದಕ್ಕಾಗಿ, ದೆಹಲಿಯಿಂದ ಬೆಂಗಳೂರು, ಉಡುಪಿಯವರೆಗೂ ಜನಾಗ್ರಹ ರ್ಯಾಲಿಗಳು ನಡೆದಿವೆ. ಈ ಜನಾಗ್ರಹದಿಂದ ಹೊಮ್ಮಿರುವ ದನಿಯೊಂದೇ-ಮಂದಿರ ನಿರ್ವಣದ ಪ್ರಕ್ರಿಯೆ ಇನ್ನೂ ತಡವಾಗಬಾರದು. ಇದಕ್ಕಾಗಿ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಬೇಕು ಎಂಬುದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ್ ಅವರು ಕೂಡ ಇದೇ ಭಾವನೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಮಂದಿರ ನಿರ್ವಣಕ್ಕೆ ಅಗತ್ಯವಾದ ಭೂಮಿಕೆ ಸದ್ದಿಲ್ಲದೆ ಸಿದ್ಧವಾಗುತ್ತಿದೆ. 2017ರ ಜೂನ್ 21ಕ್ಕೆ ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತ ಎರಡು ಲಾರಿಗಳು ಅಯೋಧ್ಯೆಯತ್ತ ಬಂದಾಗ ಕೆತ್ತನೆ ಕಾಮಗಾರಿಗಳು ವೇಗ ಪಡೆದವು. ಅದಾದ ಹದಿನೈದಿಪ್ಪತ್ತು ದಿನಗಳಲ್ಲಿ ಮತ್ತಷ್ಟು ಲಾರಿಗಳು ಬಂದವು. ವಿಶ್ವ ಹಿಂದೂ ಪರಿಷತ್ ಮುಖಂಡರ ಪ್ರಕಾರ, ‘ಸದ್ಯಕ್ಕೆ ನೆಲ ಅಂತಸ್ತಿನ ಮಂದಿರ ನಿರ್ವಣಕ್ಕೆ ಬೇಕಾಗಿರುವಷ್ಟು ಕಂಬಗಳು ಅಲ್ಲಿ ಸಂಗ್ರಹವಾಗಿವೆ. ಮೇಲ್ಛಾವಣಿ ಮತ್ತು ಮೊದಲ ಅಂತಸ್ತಿಗೆ ಬೇಕಾದ ಕಲ್ಲುಗಳ ಸಂಗ್ರಹಕಾರ್ಯ ನಡೆಯುತ್ತಿದೆ. ಈಗಾಗಲೇ 11 ಲಕ್ಷ ಕ್ಯುಬಿಕ್ ಅಡಿಗಳಷ್ಟು ಕಲ್ಲು ಸಿಂಗಾರಗೊಂಡು ಅಯೋಧ್ಯೆಯ ಕಾರ್ಯಶಾಲೆಯಲ್ಲಿ ಸಿದ್ಧವಾಗಿವೆ. ಇನ್ನೂ ಕನಿಷ್ಠಪಕ್ಷ 70,000 ಕ್ಯುಬಿಕ್ ಅಡಿಗಳಷ್ಟು ಕಲ್ಲುಗಳ ಅವಶ್ಯಕತೆಯಿದೆ. ಒಟ್ಟಾರೆ ವೇಗದ ಸಿದ್ಧತೆ ನೋಡಿದರೆ ಮಂದಿರ ನಿರ್ವಣದ ಸೂಚನೆ ದೊರೆತ ಕೆಲವು ತಿಂಗಳಲ್ಲೇ ನೆಲ ಅಂತಸ್ತು ನಿರ್ವಣವಾಗಿಯೇ ಬಿಡುತ್ತದೆ.’

ಯೋಗಿ ಸರ್ಕಾರದ ಸಿದ್ಧತೆ: ಯೋಗಿ ಆದಿತ್ಯನಾಥ 2017ರ ಮಾರ್ಚ್​ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳಲ್ಲಿ ರಾಮ ಮಂದಿರ ನಿರ್ವಣದ ಕನಸು ಮತ್ತೆ ಚಿಗುರೊಡೆಯಿತು. ಆದರೆ, ರಾಮ ಮಂದಿರ ಕುರಿತಂತೆ ಎಲ್ಲೂ ಆರ್ಭಟ, ಆವೇಶದ ಮಾತುಗಳನ್ನಾಡದ ಯೋಗಿ ಮಂದಿರ ನಿರ್ವಣಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಸದ್ದಿಲ್ಲದೆ ಕೆಲಸ ಮಾಡತೊಡಗಿದರು. ಈ ವರ್ಷದ ಜೂನ್​ನಲ್ಲಿ ಅಯೋಧ್ಯೆಯ ರಾಮ ಮಂದಿರ ಪರಿಸರಕ್ಕೆ ಹೋಗಿ ಪೂಜೆ ಸಲ್ಲಿಸಿದ ಅವರು ಅಯೋಧ್ಯೆಯನ್ನು ಯಾತ್ರಾಕ್ಷೇತ್ರವಾಗಿ ಅಭಿವೃದ್ಧಿಪಡಿಸಲು 350 ಕೋಟಿ ರೂಪಾಯಿ ಯೋಜನೆ ಘೋಷಿಸಿದರು. ಕಳೆದ ತಿಂಗಳು ಅಯೋಧ್ಯೆ ದೀಪೋತ್ಸವದಲ್ಲಿ ಪಾಲ್ಗೊಂಡು, ರಾಮನಾಮ ಜಪಿಸಿದರು. ‘ನ್ಯಾಯ ಸರಿಯಾದ ವೇಳೆಗೆ ನೀಡಿದರೆ ಅದು ಪ್ರಶಂಸಿಸಲ್ಪಡುತ್ತದೆ, ಆದರೆ, ವಿಳಂಬ ನ್ಯಾಯ ನ್ಯಾಯ ನಿರಾಕರಿಸಿದಂತೆ’ ಎಂಬ ಆದಿತ್ಯನಾಥರ ಮಾತು ರಾಮ ಮಂದಿರದ ನಿರ್ಮಾಣ ಬೇಗನೇ ಆಗಬೇಕು ಎಂಬ ದನಿಯನ್ನು ಹೊರಡಿಸಿದೆ.

ಹಲವು ಯೋಜನೆಗಳಿಗೆ ವೇಗ: ಗುಜರಾತಿನ ನರ್ಮದಾ ನದಿತೀರದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ ತಲೆಎತ್ತಿದ ಬೆನ್ನಲ್ಲೇ, ಅಯೋಧ್ಯೆಯಲ್ಲಿ 100 ಮೀಟರ್ ಎತ್ತರದ ರಾಮ ಪ್ರತಿಮೆಯನ್ನು ನಿರ್ವಿುಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ. 330 ಕೋಟಿ ರೂಪಾಯಿ ವೆಚ್ಚದಲ್ಲಿ ಸರಯೂ ನದಿತೀರದಲ್ಲಿ ತಲೆ ಎತ್ತಲಿರುವ ಈ ಪ್ರತಿಮೆ ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವ ಜತೆಗೆ ಮಂದಿರ ನಿರ್ವಣಕ್ಕೂ ದಿಕ್ಸೂಚಿ ಎಂದು ಭಾವಿಸಲಾಗಿದೆ. ಇದಲ್ಲದೆ, ಅಯೋಧ್ಯೆ ರೈಲ್ವೆ ನಿಲ್ದಾಣವನ್ನು ಪ್ರಸ್ತಾವಿತ ರಾಮಮಂದಿರ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ರಾಮ ಜನ್ಮಭೂಮಿ ಪ್ರದೇಶದಿಂದ 15 ಕಿಲೋಮೀಟರ್ ದೂರದಲ್ಲಿ 25 ಎಕರೆ ಜಮೀನಿನಲ್ಲಿ ರಾಮಾಯಣ ಸಂಗ್ರಹಾಲಯಕ್ಕೆ ಅಡಿಗಲ್ಲು ಹಾಕಿರುವ ಸಿಎಂ, ಈ ಯೋಜನೆಗೆ 154 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಇದನ್ನು ನಿರ್ವಿುಸುವ ಉದ್ದೇಶ ಹೊಂದಲಾಗಿದೆ. ಈ ಮ್ಯೂಸಿಯಂ ನಿರ್ವಣಕ್ಕಾಗಿ ಕೇಂದ್ರ ಸರ್ಕಾರ 150 ಕೋಟಿ ರೂಪಾಯಿ ನೀಡಲಿದೆ. ರಾಮಲೀಲಾ ಥೀಮ್ಾರ್ಕ್ ಕೂಡ ನಿರ್ವಣಗೊಳ್ಳಲಿದೆ. ಅಂದರೆ, ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮಂದಿರ ನಿರ್ವಣಕ್ಕೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ.

ಇಂದು ಶೌರ್ಯ ದಿನ

ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಇಂದು (ಡಿ.6) ದೇಶಾದ್ಯಂತ ಶೌರ್ಯ ದಿನ ಆಚರಿಸುತ್ತಿದ್ದು, ರಾಮಮಂದಿರ ನಿರ್ವಣದ ಬಗ್ಗೆ ಜನಜಾಗೃತಿ ಮೂಡಿಸಲಿವೆ. ಈ ನಿಟ್ಟಿನಲ್ಲಿ ಬಹಿರಂಗ ಸಭೆಗಳು, ಶೋಭಾಯಾತ್ರೆಗಳು ಆಯೋಜಿಸಲ್ಪಟ್ಟಿದ್ದು ಸಂತ-ಮಹಂತರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ವಿಶೇಷ ಹೋಮ-ಹವನ ನಡೆಯಲಿದೆ. ಅಲ್ಲದೆ, ಹುತಾತ್ಮರಾದ ಕರಸೇವಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ಮಂದಿರ ನಿರ್ವಣಕ್ಕೆ ಭರದ ಸಿದ್ಧತೆ

ಹಿಂದೂ ಸಂಘಟನೆಗಳು ಅಯೋಧ್ಯೆಯಲ್ಲಿ ಮಂದಿರ ನಿರ್ವಣಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಕಲ್ಲಿನ ಕೆತ್ತನೆ, ಕಂಬಗಳ ನಿರ್ವಣ, ಇಟ್ಟಿಗೆ ತಯಾರಿ ಸೇರಿದಂತೆ ವಿವಿಧ ಕಾರ್ಯಗಳು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಮುಂದುವರಿದಿವೆ. ಕಳೆದ 25 ವರ್ಷಗಳಿಂದ ಅಯೋಧ್ಯೆಯ ರಾಮಘಾಟ್ ಎಂಬಲ್ಲಿ ಮಂದಿರದ ಕಂಬಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಈಗ ಅಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದೆ. ಮಂದಿರ ನಿರ್ಮಾಣ ವಿಚಾರ 1989ರಲ್ಲಿ ವೇಗ ಪಡೆದುಕೊಂಡಾಗ ವಿ.ಹಿಂ.ಪ. ಹಾಗೂ ಹಲವು ಹಿಂದುಪರ ಸಂಘಟನೆಗಳು ದೇಶದ ಎಲ್ಲಾ ರಾಜ್ಯಗಳ ಹಳ್ಳಿ-ಹಳ್ಳಿಗಳಿಂದ ಶ್ರೀರಾಮನ ಹೆಸರನ್ನು ಬರೆದ ಇಟ್ಟಿಗೆಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದವು. ಪರಿಣಾಮವಾಗಿ, ಸುಮಾರು 3-4 ಲಕ್ಷ ಇಟ್ಟಿಗೆಗಳು ರಾಮಘಾಟ್​ನಲ್ಲಿ ಸಂಗ್ರಹಗೊಂಡವು. ‘ಶ್ರೀರಾಮ’ ಎಂದು ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಬರೆದ ಇಟ್ಟಿಗೆಗಳು ಈಗಲೂ ಇಲ್ಲಿವೆ.

ಮಂದಿರದ ನೀಲಿನಕ್ಷೆ

ಮಂದಿರಕ್ಕೆ ಬೇಕಾದ ಶೇಕಡ 85ರಷ್ಟು ಕಲ್ಲಿನ ಕೆತ್ತನೆ ಕಾರ್ಯಗಳು ಪೂರ್ಣಗೊಂಡಿವೆ. ಮಂದಿರದ ಈಗಿನ ನಕ್ಷೆ ಪ್ರಕಾರ ಇಲ್ಲಿ ಒಟ್ಟು 212 ಕಲ್ಲಿನ ಕಂಬಗಳನ್ನು ನಿರ್ಮಾಣ ಮಾಡಲಾಗುತ್ತದೆ. ಎದುರು ಭಾಗದಲ್ಲಿ 16 ಅಡಿ ಎತ್ತರ, 6 ಇಂಚು ಅಗಲದ 106 ಕಂಬಗಳ ಪ್ರತಿಷ್ಠಾಪನೆ, ಎರಡನೇ ಹಂತದಲ್ಲಿ 14 ಅಡಿ ಉದ್ದದ 6 ಇಂಚು ಅಗಲದ 116 ಕಂಬಗಳ ಸ್ಥಾಪನೆ ಮತ್ತು ಪ್ರತ್ಯೇಕ ಕಂಬಗಳಲ್ಲಿ ರಾಮನ ಮೂರ್ತಿ ಕೆತ್ತಲಾಗುತ್ತದೆ. ಕಲ್ಲಿನ ಕಂಬಗಳನ್ನು ರಾಜಸ್ಥಾನದ ‘ದೇವ್​ಪುರಿ ಕಲ್ಲು’ಗಳಿಂದ ತಯಾರು ಮಾಡಲಾಗುತ್ತಿದ್ದು, ದೆಹಲಿಯ ಅಕ್ಷರಧಾಮ ದೇವಾಲಯ ನಿರ್ವಣಕ್ಕೂ ಇದೇ ಕಲ್ಲುಗಳನ್ನು ಬಳಲಾಗಿದೆ.

ಮುಗಿಯದ ವಿಚಾರಣೆ

ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಆಡ್ವಾಣಿ, ಜೋಷಿ ಸಮೇತ ಬಿಜೆಪಿಯ ಹಲವು ನಾಯಕರ ವಿರುದ್ಧದ ಆರೋಪಗಳನ್ನು ಕೈಬಿಡಲು ಸಾಧ್ಯವಿಲ್ಲ ಎಂದಿದ್ದ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಮುಗಿಸಲು ಎರಡು ವರ್ಷಗಳ ಗಡುವನ್ನು ವಿಧಿಸಿದೆ. ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ.

ಜಾಗ ಮೂರು ಭಾಗ

ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ಇದರ ಪ್ರಕಾರ ವಿವಾದಿತ 2.77 ಎಕರೆ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಸದ್ಯದ ಸ್ಥಿತಿಗತಿ ಹೀಗಿದೆ.

# ಹಿಂದೂ ಮಹಾಸಭಾದವರಿಗೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸಿರುವ ಮಧ್ಯದ ಗರ್ಭಗುಡಿ ಪ್ರದೇಶ.

# ರಾಮಚಬೂತ್ರ, ಸೀತಾ ಕಿ ರಸೋಯಿ, ಭಾಂದರ್ ಪ್ರದೇಶಗಳು ನಿಮೋಹಿ ಅಖಾಡದ ವಶಕ್ಕೆ.

# ಉಳಿದಿರುವ ಜಾಗ ಸುನ್ನಿ ವಕ್ಪ್ ಮಂಡಳಿಗೆ.

ಅಂದೇನಾಯಿತು?

ಅದಷ್ಟೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ ಪತನವಾಗಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು(1991). ಕೇಂದ್ರದಲ್ಲಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಅಯೋಧ್ಯೆಯಲ್ಲಿ ಎರಡನೇ ಬಾರಿಗೆ ಕರಸೇವೆ ನಡೆಯಿತು. 1992ರ ಡಿಸೆಂಬರ್ 4ರಂದೇ ಅಯೋಧ್ಯೆಯಲ್ಲಿ ಲಕ್ಷಾಂತರ ರಾಮಭಕ್ತರು ಜಮಾಯಿಸಿದ್ದರು. ಡಿ.6ರಂದು ನಿಗದಿಯಂತೆ ಕರಸೇವೆ ನಡೆಯುತ್ತಿತ್ತು. ಅಂದು ಪೂರ್ವಾಹ್ನ 11 ಗಂಟೆಯವರೆಗೂ ಎಲ್ಲ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತಿದ್ದವು. ಅಷ್ಟೊತ್ತಿಗಾಗಲೇ ಕೆಲ ಯುವ ಕರಸೇವಕರು ವಿವಾದಿತ ಬಾಬ್ರಿ ಕಟ್ಟಡದ ಗುಂಬಜವನ್ನು ಏರಿ ನೋಡುನೋಡುತ್ತಿದ್ದಂತೆ ಗುಂಬಜ ಧ್ವಂಸಗೊಳಿಸಿದರು. ಇದರಿಂದ ಭಾವೋದ್ರೇಗಕ್ಕೆ ಒಳಗಾದ ಸಾವಿರಾರು ಕಾರ್ಯಕರ್ತರು ಕೆಲ ಹೊತ್ತಲ್ಲೇ ವಿವಾದಿತ ಕಟ್ಟಡವನ್ನು ಇಡಿಯಾಗಿ ನೆಲಸಮ ಮಾಡಿದ್ದರು. ಗುಂಬಜವೇರಿದ ರಾಮಭಕ್ತರ ಮೇಲೆ ಗುಂಡು ಹಾರಿಸಲು ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದರು. ಆದರೆ, ಇಂಡೋ-ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಜವಾನರು ಗುಂಡು ಹಾರಿಸಿದ್ದರಿಂದ ಹಲವಾರು ಕರಸೇವಕರು ಪ್ರಾಣ ಕಳೆದುಕೊಂಡರು. ಕರಸೇವೆ ಬಳಿಕ ನಡೆದ ಹಲವು ಸಂಘರ್ಷಗಳಲ್ಲಿ 50 ಕರಸೇವಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಘಟನೆಯ ಬಳಿಕ ಇಡೀ ಅಯೋಧ್ಯೆಯನ್ನು ಒಂದು ದ್ವೀಪದಂತೆ ಮಾಡಲಾಯಿತು. ಒಟ್ಟು 1.80 ಲಕ್ಷ ಜನರು ಪೊಲೀಸರಿಂದ ಬಂಧನಕ್ಕೊಳಗಾದರು. ವಿಜಯರಾಜೇ ಸಿಂಧಿಯಾ, ಉಮಾಭಾರತಿ, ಬಿ.ಎಸ್.ಯಡಿಯೂರಪ್ಪ, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಹ ಬಂಧಿಸಲ್ಪಟ್ಟರು.

ಹಬ್ಬಿದ ಹಿಂಸೆ

ಹಲವು ದಶಕಗಳಿಂದ ಹಿಂದೂಗಳ ಆಸ್ಥೆಗೆ ಬಾಧಕವಾಗಿದ್ದ ಆ ಕಟ್ಟಡ ಇನ್ನಿಲ್ಲ ಎಂಬ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ರಾಮಭಕ್ತರು ಖುಷಿಯಿಂದ ಕುಣಿದಾಡಿದರು, ಆದರೆ, ಬಾಬ್ರಿ ಧ್ವಂಸ ಘಟನೆ ಮುಸಲ್ಮಾನರನ್ನು ಕೆರಳಿಸಿತು. ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಬೇಕಾಯಿತು. ಕೋಮು ಸಂಘರ್ಷ ದೇಶದಲ್ಲೆಲ್ಲ ಹರಡಿ, 2 ಸಾವಿರ ಜನರು ಬಲಿಯಾದರು. ಮುಂಬೈ ಮಹಾನಗರವೊಂದರಲ್ಲೇ 900 ಜನರು ದಂಗೆಗಳಿಗೆ ಬಲಿಯಾದರು. ಉತ್ತರ ಪ್ರದೇಶದಲ್ಲಿ ಡಿಸೆಂಬರ್ 6ರಂದೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಡಿ.16ರಂದು ವಿಧಾನಸಭೆ ವಿಸರ್ಜಿಸಲಾಯಿತು.