ರಾಖಿ ಸೊಂಟ ಮುರಿದ ಜಟ್ಟಿ!

ನವದೆಹಲಿ: ಒಂದಿಲ್ಲೊಂದು ವಿವಾದಿದಿಂದಲೇ ಸದಾ ಸುದ್ದಿ ಮಾಡುವ ಬಾಲಿವುಡ್ ನಟಿ ರಾಖಿ ಸಾವಂತ್ ಸೊಂಟವನ್ನು ಮಹಿಳಾ ಜಟ್ಟಿಯೊಬ್ಬರು ಮುರಿದಿದ್ದಾರೆ. ಸದ್ಯ ಅವರು ಹೊಟ್ಟೆ ಮತ್ತು ಸೊಂಟದ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಗಿದ್ದೇನು: ವೃತ್ತಿಪರ ಕುಸ್ತಿಪಟು ಗ್ರೇಟ್ ಖಾಲಿ ಪಂಚಕುಲದ ದೇವಿಲಾಲ್ ಕ್ರೀಡಾಂಗಣದಲ್ಲಿ ಕುಸ್ತಿ ಪ್ರದರ್ಶನ ಏರ್ಪಡಿಸಿದ್ದರು. ಈ ಪ್ರದರ್ಶನದಲ್ಲಿ ರಾಖಿ ಕಾರ್ಯಕ್ರಮ ನೀಡಿ ಜನರನ್ನು ರಂಜಿಸಬೇಕಿತ್ತು. ಅದರಂತೆ ಕೆಂಪು ಬಣ್ಣದ ಸಲ್ವಾರ್ ಕಮೀಜ್ ತೊಟ್ಟು, ಕುಸ್ತಿ ಅಂಕಣದಲ್ಲಿ ಹಾಡುತ್ತಾ ರಾಖಿ ಕುಸ್ತಿ ಪ್ರಿಯರನ್ನು ರಂಜಿಸುತ್ತಿದ್ದರು. ದಿಢೀರನೆ ಬಂದ ಮಹಿಳಾ ಕುಸ್ತಿಪಟು ಹಲ್ಲೆ ಮಾಡಿ, ಮೇಲೆತ್ತಿ ನೆಲಕ್ಕೆ ಅಪ್ಪಳಿಸಿದರು ಎಂದು ರಾಖಿ ಆರೋಪಿಸಿದ್ದಾರೆ.

ನನ್ನನ್ನು ಸಾಯಿಸಲು ಬಾಲಿವುಡ್ ನಟಿ ತನುಶ್ರೀ ದತ್ತಾ ಮಹಿಳಾ ಕುಸ್ತಿಪಟುಗೆ ಸುಪಾರಿ ಕೊಟ್ಟಿದ್ದರು. ಹಾಗಾಗಿ, ಆ ಕುಸ್ತಿಪಟು ದಾಳಿ ನಡೆಸಿದರು ಎಂದು ರಾಖಿ ಹೇಳಿದ್ದಾರೆ.

ತನುಶ್ರೀ ದತ್ತಾ ಬಾಲಿವುಡ್​ನ ಹಿರಿಯ ನಟ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು. ಇದು ರಾಷ್ಟ್ರದಾದ್ಯಂತ ಮೀಟೂ ಚಳವಳಿ ಆರಂಭಕ್ಕೆ ಕಾರಣವಾಗಿತ್ತು. ಆದರೆ, ತನುಶ್ರೀ ಸುಳ್ಳುಗಾರ್ತಿ ಎಂದು ರಾಖಿ ಸಾವಂತ್ ದೂರಿದ್ದರು. ಈ ಹಿನ್ನೆಲೆ ರಾಖಿ ಸಾವಂತ್ ವಿರುದ್ಧ ತನುಶ್ರೀ ದತ್ತಾ 10 ಕೋಟಿ ರೂ. ಮೊತ್ತದ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.