ಬೆಂಗಳೂರು: ಕನ್ನಡದ ‘ಜೋಶ್’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಟ ರಾಕೇಶ್ ಅಡಿಗ. ಬಳಿಕ ‘ಅಲೆಮಾರಿ’, ‘ಪರಿ’, ‘ಡವ್’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ‘ಬಿಗ್‌ಬಾಸ್ ಕನ್ನಡ ಸೀಸನ್-9’ನ ಸ್ಪರ್ಧಿಯಾಗಿದ್ದ ರಾಕೇಶ್ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದರು. ಇದೀಗ ನಾಗರಾಜ್ ಸೋಮಯಾಜಿ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ನಟಿಸಿದ್ದು, ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ.
ತಮ್ಮ ಪಾತ್ರದ ಕುರಿತು ರಾಕೇಶ್, ‘ಈ ಸಿನಿಮಾ ರಿಯಾಲಿಸ್ಟಿಕ್ ಅಂಶಗಳನ್ನು ಹೊಂದಿರುವುದರಿಂದ ಮೊದಲ ಭೇಟಿಯಲ್ಲಿಯೇ ಸಿನಿಮಾವನ್ನು ಒಪ್ಪಿಕೊಂಡೆ. ಮೊದಲಿಗೆ ಸ್ಕ್ರೀನ್ ಟೆಸ್ಟ್ ನಡೆಸಲಾಯಿತು. ಇದರಲ್ಲೂ ಪಾಸಾದೆ. ಬಳಿಕ ತಂಡಕ್ಕೆ ಸೇರ್ಪಡೆ ಮಾಡಲಾಯಿತು. ನನ್ನದು ಯುವ ರಾಜಕಾರಣಿಯ ಪಾತ್ರ. ರಾಜಕೀಯದಲ್ಲಿ ಸಾಧನೆ ಮಾಡಬೇಕು ಎಂಬುದು ಅಭಿಲಾಷೆ. ಈತರ ಜನಗಳನ್ನು ಹತ್ತಿರದಿಂದ ನೋಡಿರುವುದರಿಂದಾಗಿ ನಾನು ಈ ಪಾತ್ರದಲ್ಲಿ ಜೀವಿಸಲು ಸಾಧ್ಯವಾಯಿತು. ಇನ್ನು ಈ ಚಿತ್ರದಲ್ಲಿ ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಶೈನ್ ಶೆಟ್ಟಿ ತಾರಾಗಣದಲ್ಲಿದ್ದು, ಎಲ್ಲರೂ ತೂಕವಾಗಿ ನಟಿಸಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಬದುಕುವುದೇ ಜೀವನದ ನಿಜವಾದ ಮರ್ಯಾದೆ ಪ್ರಶ್ನೆ’ ಎನ್ನುತ್ತಾರೆ. ರಾಕೇಶ್ ಅಡಿಗ ‘ನಾನು ಮತ್ತು ಗುಂಡ-2’ ದಲ್ಲಿ ಅಭಿನಯಿಸಿದ್ದಾರೆ. ಜತೆಗೆ ಮತ್ತೊಂದು ಹೊಸ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಚಿತ್ರದ ಮಾಹಿತಿ ಸದ್ಯದಲ್ಲಿ ಸಿಗಲಿದೆಯಂತೆ.