ಬಯಲಾಟ ಕಲಾವಿದೆಗೆ ಒಲಿದ ಪ್ರಶಸ್ತಿ

ಸಂತೋಷ ದೇಶಪಾಂಡೆ ಬಾಗಲಕೋಟೆ: ಬದುಕು ಒಂದು ನಾಟಕ ರಂಗ, ಅದು ಬಯಲಿನ ಆಟ ! ಶ್ರೀಕೃಷ್ಣ ಒಬ್ಬನೇ ಜಗತ್ತಿನ ಗುರು. ಜೀವನದ ಕಷ್ಟ, ಸಂಕಷ್ಟದ ನಡುವೆ ಕುರುಕ್ಷೇತ್ರ ನಾಟಕದಲ್ಲಿ ‘ಕೃಷ್ಣನ ಪಾತ್ರಧಾರಿ’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟೆ. ಸುದೀರ್ಘ ಐದು ದಶಕಗಳ ರಂಗ ಸೇವೆಗೆ ದೊಡ್ಡ ಪುರಸ್ಕಾರ ಸಿಕ್ಕಿದೆ, ಜೀವನ ಸಾರ್ಥಕವಾಯ್ತು !

ರಾಜ್ಯ ಸರ್ಕಾರದ 2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾದ ಜಿಲ್ಲೆಯ ಲೋಕಾಪುರ ಪಟ್ಟಣದ ಬಯಲಾಟ ಹಿರಿಯ ಕಲಾವಿದೆ ನಾಡೋಜ ಯಲ್ಲವ್ವ ರೊಡ್ಡಪ್ಪನವರ ‘ವಿಜಯವಾಣಿ’ ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ.

ಚೌಡಕಿ ಪದ ಹಾಡುತ್ತಿದ್ದ ಯಲ್ಲವ್ವ ರೊಡ್ಡಪ್ಪನವರ ಅವರು 13ನೇ ವಯಸ್ಸಿನಲ್ಲಿ ರಂಗಭೂಮಿಗೆ ಪದಾರ್ಪಣೆ ಮಾಡಿದರು. ಕಂದಗಲ್ಲ ಹನುಮಂತರಾಯರ ಕುರುಕ್ಷೇತ್ರ ನಾಟಕದಲ್ಲಿ ಕೃಷ್ಣನ ಪಾತ್ರಧಾರಿಯಾಗಿ ವೃತ್ತಿ ಬದುಕು ಆರಂಭಿಸಿದರು. ಮೊದಲು ಹವ್ಯಾಸಿ ಕಲಾ ಸೇವೆಯಲ್ಲಿ ತೊಡಗಿದ್ದ ಯಲ್ಲವ್ವ ಅವರಿಗೆ ಬಳಿಕ ರಂಗಭೂಮಿಯ ಗುಂಗು ಹಿಡಿಯಿತು. ದಿನ ಕಳೆದಂತೆ ಕಲೆಯೇ ಉಸಿರಾಯಿತು. ಅದುವೇ ಬದುಕಾಯಿತು. ಭಾವಪೂರ್ಣ ಅಭಿನಯದ ಮೂಲಕ ಕಲಾರಸಿಕರ ಮನಸ್ಸು ಗೆದ್ದರು.

15ನೇ ವಯಸ್ಸಿನಲ್ಲಿ ಪಾಠ: ಸಹಜ ನಟನೆ, ಗಾಯನ ಯಲ್ಲವ್ವ ಕುಟುಂಬದಿಂದ ಬಳುವಳಿಯಾಗಿ ಬಂದಿತ್ತು. ಆದರೆ, ಸಂಗೀತ, ನಾಟ್ಯದ ಬೌದ್ಧಿಕ ಕಸರತ್ತು ಆಗಿರಲಿಲ್ಲ. ಯಲ್ಲವ್ವ ಅವರ 15-16ನೇ ವಯಸ್ಸಿನಲ್ಲಿ ಲೋಕಾಪುರದ ಶ್ರೀಕೃಷ್ಣ ಪಾರಿಜಾತ ಸಂಘದ ಮಾಲೀಕರಾದ, ಹಿರಿಯ ಬಯಲಾಟ ಕಲಾವಿದ ಕೃಷ್ಣಾಜಿ ದೇಶಪಾಂಡೆ, ಲೋಕಯ್ಯ ಮಾಸ್ತರ (ಲೋಕಯ್ಯ ಹೊಳಬಸಯ್ಯ ಗಣಾಚಾರಿ) ಅವರ ಪರಿಚಯವಾಯಿತು. ನಂತರ ಅವರ ಗರಡಿಯಲ್ಲಿ ಪಳಗಿದರು.

ಹೀಂಗ ಅಭಿನಯ ಮಾಡಬೇಕು, ದಿನಾಲು ತಾಲೀಮು ಇರಬೇಕು. ತಪ್ಪು ಇದ್ದಲ್ಲಿ ತಿದ್ದಿ ಹೇಳಿದ್ರು..ಒಟ್ಟಿನಲ್ಲಿ ‘ಕಾಡ ಕಲ್ಲಿನ್ಹಾಂಗ ಇದ್ದ ನನ್ನನ್ನ ಕಟದ ಮೂರ್ತಿ ಮಾಡಿದ್ರು’ ಅಂತ ಯಲ್ಲವ್ವ ನೆನಪಿಸಿಕೊಳ್ಳುತ್ತಾರೆ. ಪಾರಿಜಾತದಲ್ಲಿ ಕೃಷ್ಣ, ರುಕ್ಮಿಣಿ, ಗೊಲ್ಲತಿ, ನಾರದ, ದೊರಸಾನಿ, ಸತ್ಯಭಾಮೆ, ಕೊರವಂಜಿ ಸೇರಿ ಅನೇಕ ಪಾತ್ರಗಳನ್ನು ಮಾಡುತ್ತ ತಮ್ಮದೆಯಾದ ಮಾತು, ಹಾಡಿನ ಶೈಲಿಯಿಂದ ಪ್ರೇಕ್ಷಕರ ಮನಗೆದ್ದರು.

ನಾಡೋಜ ಪುರಸ್ಕಾರ: ಲೋಕಾಪುರದ ಕೃಷ್ಣಾಜಿ ದೇಶಪಾಂಡೆ ನಿಧನರಾದ ನಂತರ ಅವರ ಮಾಲೀಕತ್ವದ ಶ್ರೀಕೃಷ್ಣ ಪಾರಿಜಾತ ಕಂಪನಿ ಜವಾಬ್ದಾರಿ ಯಲ್ಲವ್ವ ರೊಡ್ಡಪ್ಪನವರ ಅವರ ಹೆಗಲೇರಿತು. ಆಧುನಿಕತೆಯ ಸವಾಲುಗಳ ನಡುವೆ 21 ವರ್ಷದಿಂದ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಯಲ್ಲವ್ವ ಅವರ ಕಲಾ ಸೇವೆ ಮನ್ನಿಸಿ 2011ರಲ್ಲಿ ಹಂಪಿಯ ಕನ್ನಡ ವಿವಿ ಇವರಿಗೆ (ನಾಡೋಜ) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇದೀಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂಭ್ರಮ ಇಮ್ಮಡಿಗೊಳಿಸಿದೆ.

ಚೌಡಕಿ ಪದ ಹಾಡುತ್ತಿದ್ದ ನನಗೆ ಲೋಕಾಪುರ ದೇಶಪಾಂಡೆ ಮತ್ತು ಲೋಕಯ್ಯ ಮಾಸ್ತರ ಪಾರಿಜಾತದ ರುಚಿ ಹಚ್ಚಿಸಿದರು. ನಂತರ ನಾನಾ ಪಾತ್ರಗಳನ್ನು ಮಾಡುತ್ತ ಬಂದಿದ್ದೇನೆ. 10ಕ್ಕೂ ಹೆಚ್ಚು ಕಲಾವಿದರು ನಮ್ಮ ಕಂಪನಿಯಲ್ಲಿದ್ದಾರೆ. ಕಷ್ಟ, ನಷ್ಟದ ನಡುವೆ ಸಾಗಿ ಬಂದೆ. ಇಂದು ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ.

| ಯಲ್ಲವ್ವ ರೊಡ್ಡಪ್ಪನವರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ