Friday, 16th November 2018  

Vijayavani

Breaking News

ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸುವ ಹಂಬಲ

Monday, 09.04.2018, 3:03 AM       No Comments

| ಎಂ. ಕೆ. ಭಾಷ್ಕರ ರಾವ್​

ದಶಕಗಳ ಹಿಂದಿನ ಮಾತು. ತಮಿಳುನಾಡು ರಾಜಕೀಯ ‘ಸರ್ವಂ ಎಂಜಿಆರ್ ಮಯಂ’ ಎಂಬಂತಿದ್ದ ಕಾಲ. ವಿಧಾನಸಭೆಯಲ್ಲಿ ಅಣ್ಣಾ ಡಿಎಂಕೆಗೆ ಊಹಾತೀತವಾದ ಅತ್ಯದ್ಭುತ ಸ್ಥಾನಬಲ ಪ್ರಾಪ್ತವಾಗಿತ್ತು. ವಿರೋಧ ಪಕ್ಷದ ಸಾಲಿನಲ್ಲಿ ನಾಲ್ಕಾರು ಮುಖ ಬಿಟ್ಟರೆ ಉಳಿದಂತೆ ಎಲ್ಲೆಲ್ಲೂ ಅಣ್ಣಾ ಡಿಎಂಕೆ ಸದಸ್ಯರೇ. ಆಡಳಿತ ಪಕ್ಷದ ಸದಸ್ಯರಾದ ಮಾತ್ರಕ್ಕೆ ಕುಂದುಕೊರತೆ ಇರಬಾರದು ಎಂದೇನಿಲ್ಲವಲ್ಲ. ಶಾಸಕರೊಬ್ಬರಿಗೆ ಅಧಿಕಾರಿಯೊಬ್ಬರ ವಿರುದ್ಧ ಅಸೆಂಬ್ಲಿಯಲ್ಲೇ ದೂರು ದಾಖಲಿಸುವ ಚಪಲ ಕಾಡಿತು. ಆ ಅಧಿಕಾರಿಯನ್ನು ಹೆಸರಿಸಿ, ಆತ ಜನರ ಕೆಲಸ ಮಾಡುತ್ತಿಲ್ಲ ಎಂಬ ಆಕ್ಷೇಪ ಮಂಡಿಸಿದರು. ಸದನದಲ್ಲಿ ಹಾಜರಿದ್ದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲಾಗದವರ ಹೆಸರನ್ನು ಪ್ರಸ್ತಾಪಿಸಬಾರದೆಂಬ ನಿಯಮವಿರುವುದು ಹೊಸದಾಗಿ ಚುನಾಯಿತರಾಗಿದ್ದ ಆ ಸದಸ್ಯರಿಗೆ ಗೊತ್ತಿರಲಿಲ್ಲವೋ ಅಥವಾ ಗೊತ್ತಿದ್ದೂ ಹೆಸರನ್ನು ಎಳೆದುತಂದರೋ ಗೊತ್ತಿಲ್ಲ. ಸ್ಪೀಕರ್ ಅಡ್ಡ ಬರಲಿಲ್ಲ; ಬಂದಿದ್ದು ಮುಖ್ಯಮಂತ್ರಿ ಎಂಜಿಆರ್. ಆ ಅಧಿಕಾರಿ ಮುಖ್ಯಮಂತ್ರಿಗೆ ತೀರಾ ಬೇಕಾದವರಾಗಿದ್ದರು. ಅವರನ್ನು ದೂಷಿಸಿದ್ದು ಎಂಜಿಆರ್​ಗೆ ಸರಿಬರಲಿಲ್ಲ. ಶಾಸಕರಿಗೆ ಕೂರುವಂತೆ ಕೈಸನ್ನೆ ಮಾಡಿದ ಎಂಜಿಆರ್, ‘ಸದನದ ಎಲ್ಲ ಸ್ಥಾನಗಳಿಗೂ ನಾನೇ ಆಯ್ಕೆಯಾಗಲು ಅವಕಾಶವಿದೆ. ಆದರೆ ಎಲ್ಲ ಕುರ್ಚಿಯಲ್ಲೂ ನಾನೊಬ್ಬನೇ ಕೂರಲಾಗುವುದಿಲ್ಲ ಎಂಬ ಕಾರಣಕ್ಕೆ ನೀವೂ ಸದನದ ಒಳಕ್ಕೆ ಬಂದಿದ್ದೀರಿ. ಆ ಅಧಿಕಾರಿಯ ವಿರುದ್ಧ ದೂರು ಇದ್ದಲ್ಲಿ ನನಗೆ ಹೇಳಿ, ಸದನದಲ್ಲಿ ಪ್ರಸ್ತಾಪ ಸಲ್ಲದು’ ಎಂದು ಕಡ್ಡಿ ಮುರಿದಂತೆ ಹೇಳಿ ಪ್ರಕರಣಕ್ಕೆ ತೆರೆ ಎಳೆದಿದ್ದರು.

ಎಂಜಿಆರ್ ಮಾತು ಮೇಲುನೋಟಕ್ಕೆ ದುರಹಂಕಾರದ್ದು ಎನಿಸಿದರೂ ಅವರು ಸತ್ಯವನ್ನೇ ಹೇಳಿದ್ದರು. ಜನರಿಂದ ಆಯ್ಕೆಯಾಗಬಯಸುವವರು ಎಷ್ಟು ಕ್ಷೇತ್ರದಿಂದ ಬೇಕಾದರೂ ಸ್ಪರ್ಧಿಸುವ ಅವಕಾಶವನ್ನು ಸಂವಿಧಾನ ಕೊಟ್ಟಿತ್ತು. ಸದಾಶಯದೊಂದಿಗೆ ಸಂವಿಧಾನ ಕಲ್ಪಿಸಿರುವ ಅವಕಾಶ ಇದು. ಆದರೆ ಅವಕಾಶ ಕಲ್ಪಿಸಿದ್ದೇ ತಪ್ಪಾಯಿತೇನೋ ಎಂಬಷ್ಟರ ಮಟ್ಟಿಗೆ ಎಲ್ಲ ಮಿತಿಯನ್ನೂ ಅದರ ಬಳಕೆ ಮೀರುತ್ತಿದೆ. ಅವಕಾಶವಿದೆ ಎಂಬ ಕಾರಣಕ್ಕೇ ದುರುಪಯೋಗವಾಗುತ್ತಿದೆ ಎಂದು ನಾಗರಿಕ ಸಮಾಜ ಭಾವಿಸಿದರೆ, ಆ ಅವಕಾಶವೇ ಇಲ್ಲದಂತೆ ಮಾಡಿದರೆ ಅದರಲ್ಲಿ ತಪ್ಪೇನಿದೆ…? ಎಂದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ರೂಪದಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನಮ್ಮಲ್ಲಿ ದೊಡ್ಡ ದೊಡ್ಡ ನಾಯಕರು ಎನಿಸಿದವರೆಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಎರಡೆರಡು, ಕೆಲ ಸಂದರ್ಭಗಳಲ್ಲಿ ಅದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ತಮ್ಮ ಆಯ್ಕೆಯನ್ನು ಖಚಿತ ಮಾಡಿಕೊಂಡವರೇ. ಈ ಪಟ್ಟಿಯಲ್ಲಿ ವಾಜಪೇಯಿ, ಇಂದಿರಾ ಗಾಂಧಿಯೂ ಇದ್ದಾರೆ. ಎರಡನೇ ಲೋಕಸಭೆಗೆ ಚುನಾವಣೆ ನಡೆದ 1957ರಷ್ಟು ಹಿಂದೆಯೆ ಬಲರಾಂಪುರ, ಲಖನೌ ಮತ್ತು ಮಥುರಾ ಕ್ಷೇತ್ರಗಳಿಂದ ಲೋಕಸಭೆಗೆ ವಾಜಪೇಯಿ ಸ್ಪರ್ಧಿಸಿದ್ದರು. ಲಖನೌ, ಮಥುರಾದಲ್ಲಿ ಸೋತರು. ಜನತಾ ಪ್ರಾತಿನಿಧ್ಯ ಕಾಯ್ದೆಗೆ 1996ರಲ್ಲಿ ತಿದ್ದುಪಡಿ ತಂದು ಒಬ್ಬ ಅಭ್ಯರ್ಥಿ ಒಂದು ಚುನಾವಣೆಯಲ್ಲಿ ಎರಡಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಲಾಯಿತು. ಆ ಬಳಿಕದಲ್ಲಿ ಇಂದಿರಾ ಗಾಂಧಿ, ರಾಯ್ಬರೇಲಿ ಮತ್ತು ಆಂಧ್ರಪ್ರದೇಶದ ಮೇಡಕ್​ನಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಮೇಡಕ್​ನಲ್ಲಿ ಉಪಚುನಾವಣೆ ನಡೆಯುವಂತೆ ಮಾಡಿದರು. ಎಲ್.ಕೆ. ಆಡ್ವಾಣಿ ನವದೆಹಲಿ ಮತ್ತು ಗುಜರಾತ್​ನ ಗಾಂಧಿನಗರದಲ್ಲಿ ಸ್ಪರ್ಧಿಸಿ ಎರಡೂ ಕಡೆ ಗೆದ್ದು ದೆಹಲಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸೋನಿಯಾ ಗಾಂಧಿ ನಮ್ಮದೇ ಬಳ್ಳಾರಿ ಮತ್ತು ಅಮೇಠಿಯಲ್ಲಿ ಕಣಕ್ಕಿಳಿದು ಎರಡನ್ನೂ ಗೆದ್ದರಾದರೂ ಬಳ್ಳಾರಿಯಲ್ಲಿ ಉಪಚುನಾವಣೆ ನಡೆಯುವಂತೆ ಮಾಡಿದರು. ಎಚ್.ಡಿ. ದೇವೇಗೌಡರು ಹಾಸನ ಮತ್ತು ಕನಕಪುರ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಹಾಸನ ಗೆದ್ದು ಕನಕಪುರದಲ್ಲಿ ಪರಾಭವಗೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಮತ್ತು ವಡೋದರಾದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರ ಗೆದ್ದ ನರೇಂದ್ರ ಮೋದಿ ವಾರಾಣಸಿಯನ್ನು ಉಳಿಸಿಕೊಂಡರು. ವಡೋದರಾದಲ್ಲಿ ಉಪಚುನಾವಣೆ ನಡೆಯಬೇಕಾಯಿತು. ಈ ಯಾದಿಯಲ್ಲಿ ಲಾಲು ಪ್ರಸಾದ್ ಯಾದವ್, ಅಖಿಲೇಶ್ ಯಾದವ್ ಮುಂತಾದ ಹಲವರಿದ್ದಾರೆ.

ಸುಪ್ರೀಂಕೋರ್ಟ್ ವಿಚಾರಣೆಗೆ ಎತ್ತಿಕೊಂಡಿರುವ ಪಿಐಎಲ್ ಅರ್ಜಿ, ಈ ವೈಪರೀತ್ಯವನ್ನು ಮುಖ್ಯವಾಗಿ ಪ್ರಶ್ನಿಸಿದೆ. ಎರಡು ಕ್ಷೇತ್ರದಲ್ಲೂ ಗೆದ್ದು ಒಂದರಲ್ಲಿ ಉಪಚುನಾವಣೆ ನಡೆಯುವಂತೆ ಮಾಡುವುದಕ್ಕೆ ಉದಾರವಾದ ಅವಕಾಶವಿದೆ. ಆದರೆ ಭಾರತದಂಥ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಕ್ಕೆ ಈ ಲಕ್ಷುರಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಸಂವಿಧಾನ ಅಥವಾ ಜನತಾ ಪ್ರಾತಿನಿಧ್ಯ ಕಾಯ್ದೆ ಕೊಟ್ಟಿದೆಯೇ ಎನ್ನುವುದು ಗಂಭೀರ ನೆಲೆಯಲ್ಲಿ ಚರ್ಚೆಯಾಗಬೇಕಾದ ಸಂಗತಿ. ಗೆದ್ದವರು ತೆರವುಮಾಡಿದ ಕ್ಷೇತ್ರಕ್ಕೆ 6 ತಿಂಗಳ ಒಳಗಾಗಿ ಉಪಚುನಾವಣೆ ನಡೆಯಬೇಕೆಂಬ ಕಡ್ಡಾಯ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿದೆ. ಮತ್ತೆಮತ್ತೆ ಚುನಾವಣೆ ಎಂದರೆ ಮತ್ತೆಮತ್ತೆ ಬೊಕ್ಕಸಕ್ಕೆ ಹೊರೆ. ಜನಸಾಮಾನ್ಯರು ತೆರುವ ತೆರಿಗೆಹಣ ವ್ಯರ್ಥ ಹರಿದುಹೋಗುವುದಕ್ಕೆ ಒಂದು ನಿಯಂತ್ರಣ ಹೇರಬೇಕಿದೆ ಎನ್ನುತ್ತದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಇದಕ್ಕಿಂತಲೂ ವಿಪರ್ಯಾಸವೆಂದರೆ ರಾಜಕಾರಣಿಗಳು ಜನಮನದೊಂದಿಗೆ ಆಟ ಆಡುವ ರೀತಿ. ಪದೇಪದೆ ನಡೆಯುವ ಚುನಾವಣೆಗಳು ಸಾರ್ವಜನಿಕ ಬದುಕಿನಲ್ಲಿ ಬಹುದೊಡ್ಡ ಕಿರಿಕಿರಿ ಒಡ್ಡುತ್ತವೆನ್ನುವ ಸಾಮಾನ್ಯ ಪ್ರಜ್ಞೆಯೂ ರಾಜಕಾರಣಕ್ಕೆ ಇಲ್ಲವಾಗಿದೆ. ತಾವು ಆಯ್ಕೆಯಾಗದೆ ಹೋದರೆ ನಾಡಿಗೆ ಭವಿಷ್ಯವೇ ಇಲ್ಲ ಎಂಬ ಭಾವನೆ ಅಥವಾ ಭ್ರಮೆ ನಮ್ಮ ರಾಜಕಾರಣಿಗಳದು. ಈ ಅಪಸವ್ಯಕ್ಕೆ ನಿಯಂತ್ರಣ ಹೇರಬೇಕೆಂಬ ಮೊರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿದೆ.

ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಕುಮಾರ್ ಉಪಾಧ್ಯಾಯ ಎಂಬುವವರು ಸಲ್ಲಿಸಿರುವ ಪಿಐಎಲ್ ಅರ್ಜಿಯ ವಿಚಾರಣಾ ಹಂತದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಚುನಾವಣಾ ಆಯೋಗ, ಒಬ್ಬ ಅಭ್ಯರ್ಥಿ ಒಂದು ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂದು ಮಾಡಿರುವ ಕೋರಿಕೆಯನ್ನು ಸಮರ್ಥಿಸಿದೆ. ಇದನ್ನು ನೋಡಿದರೆ ಇಂದಲ್ಲ ನಾಳೆಯಾದರೂ ಶುಭಸುದ್ದಿ ಬರಲಿದೆ ಎನ್ನುವುದರ ದೂರದ ಸೂಚನೆ ಕಾಣಿಸುತ್ತಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಾತ್ರವೇ ಈ ಚಾಳಿಯನ್ನು ತಡೆಯಬಹುದೆಂದು ಚುನಾವಣಾ ಆಯೋಗವೂ ಹೇಳಿದೆ. ರಾಷ್ಟ್ರೀಯ ಕಾನೂನು ಆಯೋಗ ತನ್ನ 255ನೇ ವರದಿಯಲ್ಲಿ ಚುನಾವಣಾ ಸುಧಾರಣೆಗೆ ನೀಡಿರುವ ಸಲಹೆಗಳಲ್ಲಿ ಯಾವುದೇ ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರದಿಂದ ಕಣಕ್ಕೆ ಇಳಿಯಬಾರದು ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಕೂಡ ಚುನಾವಣಾ ಆಯೋಗ, ಸುಪ್ರೀಂಕೋರ್ಟ್​ನ ಗಮನಕ್ಕೆ ತಂದಿದೆ. ಹಾಗೆಂದ ಮಾತ್ರಕ್ಕೆ ಜನಪರವಾದ ಆದರೆ ರಾಜಕಾರಣಕ್ಕೆ ಪಥ್ಯವಾಗದ ತಿದ್ದುಪಡಿಯನ್ನು ತರುವುದು ಹೇಳಿದಷ್ಟು ಸುಲಭದ ಕೆಲಸವಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಸಂವಿಧಾನ ಕಲ್ಪಿಸಿರುವ ಅವಕಾಶವನ್ನು ತಮ್ಮತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವುದರಿಂದ ತಿದ್ದುಪಡಿ ಜನರ ದೃಷ್ಟಿಯಲ್ಲಿ ತುರ್ತಿನದಾದರೂ ರಾಜಕಾರಣಿಗಳ ದೃಷ್ಟಿಯಲ್ಲಿ ಆದ್ಯತೆಯದಾಗಿಲ್ಲ. ಈ ಸ್ಥಿತಿಗೆ ಪರಿಹಾರ ಮಾರ್ಗವೊಂದನ್ನು ಪ್ರಸ್ತಾಪಿಸಲಾಗಿದೆ. ಉಪಚುನಾವಣೆ ನಡೆಯುವಂತೆ ಮಾಡುವ ಅಭ್ಯರ್ಥಿ ಲೋಕಸಭಾ ಕ್ಷೇತ್ರದ ಪ್ರಕರಣದಲ್ಲಾದರೆ 10 ಲಕ್ಷ ರೂಪಾಯಿ, ವಿಧಾನಸಭಾ ಕ್ಷೇತ್ರದ ಪ್ರಕರಣದಲ್ಲಾದರೆ 5 ಲಕ್ಷ ರೂಪಾಯಿಯನ್ನು ಚುನಾವಣಾ ವೆಚ್ಚವಾಗಿ ಆಯೋಗಕ್ಕೆ ಒಪ್ಪಿಸಬೇಕೆಂಬುದು ಸೂಚಿತ ಪರಿಹಾರ. ಚುನಾವಣೆ ಗೆಲ್ಲಲು 10-20 ಕೋಟಿ ಹಣವನ್ನು ಹಿಂದೆಮುಂದೆ ನೋಡದೆ ವ್ಯಯಿಸುವ ರಾಜಕಾರಣಿಗಳಿಗೆ 5-10 ಲಕ್ಷ ರೂಪಾಯಿ ಯಾವ ದೊಡ್ಡ ಮೊತ್ತ?

ಚುನಾವಣಾ ಸುಧಾರಣೆ ನಿಟ್ಟಿನಲ್ಲಿ ಚುನಾವಣೆ ಕಾಯ್ದೆಗೆ ತಿದ್ದುಪಡಿಯೂ ಒಳಗೊಂಡಂತೆ 22 ಸಲಹೆಗಳನ್ನು 2004ರಷ್ಟು ಹಿಂದೆಯೇ ಚುನಾವಣಾ ಆಯೋಗ ಸಲ್ಲಿಸಿದೆ. ಕಾನೂನು ಆಯೋಗ ಇದಕ್ಕೆ ಸಮ್ಮತಿಯನ್ನೂ ನೀಡಿದೆ. ಆದರೆ ಬಹುತೇಕ ಎಲ್ಲ ಪ್ರಮುಖ ಪಕ್ಷಗಳ ಪ್ರಾತಿನಿಧ್ಯವುಳ್ಳ ಸಂಸದೀಯ ಸ್ಥಾಯಿಸಮಿತಿ ಮಾತ್ರ ಇದನ್ನು ತಿರಸ್ಕರಿಸಿದೆ. ಸಂಸತ್ ಸದಸ್ಯರು ಸುಧಾರಣಾ ಪ್ರಸ್ತಾವಗಳನ್ನೆಲ್ಲ ಯಾಕೆ ತಿರಸ್ಕರಿಸಿದರು ಎನ್ನುವುದಕ್ಕೆ ಪ್ರತ್ಯೇಕ ವಿವರಣೆ ನೀಡುವ ಅಗತ್ಯವಿಲ್ಲ. ದೇಶದ ಪ್ರಜಾಪ್ರಭುತ್ವ ನಿಂತಿರುವುದು ಮತದಾರ ಚಲಾಯಿಸುವ ವೋಟಿನಿಂದ ಎಂದು ಎಲ್ಲ ರಾಜಕಾರಣಿಗಳೂ ಹೇಳುತ್ತಾರೆ. ಆದರೆ ಆ ಮತದಾರರಿಗೆ ಒಂದು ಕ್ಷೇತ್ರ, ಒಂದು ಮತ. ಅವರಿಂದ ಆಯ್ಕೆ ಆಗುವ ಅಭ್ಯರ್ಥಿಗೆ ಎರಡು ಕ್ಷೇತ್ರ ಯಾಕೆ ಬೇಕು ಎಂಬ ಪ್ರಶ್ನೆ ಅಶ್ವಿನ್ ಕುಮಾರ್ ಉಪಾಧ್ಯಾಯರ ಪಿಐಎಲ್​ನಲ್ಲಿದೆ. ‘ಒಬ್ಬರಿಗೆ ಒಂದು ವೋಟು; ಒಬ್ಬ ಅಭ್ಯರ್ಥಿಗೆ ಒಂದು ಕ್ಷೇತ್ರ’ ಎಂಬ ನಿಯಮವನ್ನು ಜಾರಿಗೆ ತರಬೇಕೆಂಬ ಅವರ ಒತ್ತಾಯ ದೇಶದ ಬಹುಸಂಖ್ಯಾತರ ಅಭಿಪ್ರಾಯವೂ ಆಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಏನು ಹೇಳುತ್ತದೆಂಬುದನ್ನು ಸುಪ್ರೀಂಕೋರ್ಟ್ ತಿಳಿಯಬಯಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕೆಲ ಮುಖಂಡರು ಕೂಡ ಎರಡೆರಡು ಮತಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸುವ ಹಂಬಲದಲ್ಲಿದ್ದಾರೆಂಬ ಸುದ್ದಿ ತೇಲಾಡುತ್ತಿದೆ. ವಿಚಾರಣೆಯಲ್ಲಿರುವ ಅರ್ಜಿ, ಕರ್ನಾಟಕದಲ್ಲಿ ಯಾವ ಪರಿಣಾಮವನ್ನೂ ಈ ಹಂತದಲ್ಲಿ ಮಾಡದು. ಸುಪ್ರೀಂಕೋರ್ಟ್ ವಿಚಾರಣೆ ಎಷ್ಟು ಕಾಲ ನಡೆಯುತ್ತದೋ, ತೀರ್ಪು ಯಾವ ಸ್ವರೂಪದಲ್ಲಿ ಯಾವಾಗ ಹೊರಬೀಳುತ್ತದೋ ಗೊತ್ತಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಒಂದು ಸಂಚಲನಕ್ಕೆ ಕಾರಣವಾಗಿರುವುದಂತೂ ಸತ್ಯ.

Leave a Reply

Your email address will not be published. Required fields are marked *

Back To Top