Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಇತಿಹಾಸದ ಪಾಠ ಮತ್ತು ವರ್ತಮಾನದ ತಾಕಲಾಟ

Saturday, 19.05.2018, 3:03 AM       No Comments

| ಎಂ. ಕೆ. ಭಾಸ್ಕರ ರಾವ್​

ಸ್ವಾತಂತ್ರೊ್ಯೕತ್ತರ ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ರಾಜಕೀಯ ವಿದ್ಯಮಾನಗಳಿಗೆ ಮೇ 15ರಂದು ಹೊರಬಿದ್ದ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಅತಂತ್ರ ವಿಧಾನಸಭೆ ಎಂದರೆ ಹೇಗಿರುತ್ತದೆ ಮತ್ತು ಅದರಿಂದ ಅನುಭವಿಸಬೇಕಾಗಿ ಬರುವ ಪಡಿಪಾಟಲುಗಳು ಹೇಗೆಲ್ಲ ಚುರುಕು ಮುಟ್ಟಿಸುತ್ತದೆ ಎನ್ನುವುದಕ್ಕೂ ಈ ಫಲಿತಾಂಶ ತೋರು ಬೆರಳಾಗಿದೆ. ಹಿಂದೆಂದೂ ನಮ್ಮ ಶಾಸನಸಭೆ ಅತಂತ್ರವಾಗಿರಲಿಲ್ಲ ಎಂದೇನೂ ಅಲ್ಲ. ಆದರೆ ಈ ಸಲ ಮಹಾಜನತೆ ಅತಂತ್ರ ವಿಧಾನಸಭೆ ರೂಪದಲ್ಲಿ ರಾಜಕಾರಣಕ್ಕೆ ಕೊಟ್ಟಿರುವ ಪೆಟ್ಟಿನ ಉರಿ ಮತ್ತು ಗಾಯ ಸುಲಭಕ್ಕೆ ಮರೆತುಹೋಗುವಂಥದಲ್ಲ; ಮಾಯವಾಗುವಂಥದೂ ಅಲ್ಲ. ಜನರ ತೀರ್ಪನ್ನು ತಮಗೆ ಬೇಕಾದಂತೆ ತಿರುಚಿಸಿಕೊಳ್ಳಬಹುದು ಎಂಬುದು ರಾಜಕಾರಣದಲ್ಲಿ ಸುಲಭವಾಗಿ ಕೇಳಿಬರುವ ಮಾತು. ಅದು ಸಾರ್ವಕಾಲಿಕವಲ್ಲ ಎನ್ನುವುದನ್ನು ಮತದಾರರು ನೇರ ನಿಚ್ಚಳ ಭಾಷೆಯಲ್ಲಿ ಹೇಳಿದ್ದಾರೆ. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಸಮ್ಮಿಶ್ರ ಫಲಿತಾಂಶವನ್ನು ಕೊಟ್ಟಿದ್ದವು. ಬಿಜೆಪಿಗೆ 103-107 ಸ್ಥಾನ ಸಿಗುತ್ತದೆಂಬ ನಿಖರವಾದ, ವಾಸ್ತವಕ್ಕೆ ಹತ್ತಿರವಾದ ವರದಿಯನ್ನು ಕೊಟ್ಟಿದ್ದು ವಿಜಯವಾಣಿ ಮತ್ತು ದಿಗ್ವಿಜಯ ಟಿವಿ ವಾಹಿನಿ ಎನ್ನುವುದು ಅಭಿನಂದನೆಗೆ ಪಾತ್ರವಾಗಿರುವ ಬೆಳವಣಿಗೆ.

ಕಾಂಗ್ರೆಸ್ಸೇ ಮತ್ತೆ ಅಧಿಕಾರಕ್ಕೆ ಬರುತ್ತದೆ, ತಾವೇ ಮುಂದೆಯೂ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದ ಸಿದ್ದರಾಮಯ್ಯ, ಮಿಷನ್-150ರ ಗುರಿಯಿಂದ ಕೆಳಕ್ಕಿಳಿದು 120-130ರ ಆಸುಪಾಸಿನಲ್ಲಿ ನಿಂತು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಸರಳ ಬಹುಮತ (113 ಸ್ಥಾನ) ಪಡೆದು ಯಾರ ಹಂಗೂ ಇಲ್ಲದೆ ಸರ್ಕಾರ ರಚಿಸುವುದಾಗಿಯೂ ಕಿಂಗ್ ಮೇಕರ್ ಆಗದೆ ತಾವೇ ಕಿಂಗ್ ಆಗುವುದಾಗಿಯೂ ನಂಬಿಕೊಂಡಿದ್ದ ಜೆಡಿಎಸ್​ನ ಎಚ್.ಡಿ. ಕುಮಾರಸ್ವಾಮಿ ಇವರೆಲ್ಲ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಆಘಾತಕ್ಕೆ ಒಳಗಾಗಿದ್ದು ಸತ್ಯ. ಯಾಕೆ ಹೀಗಾಯಿತು, ಎಲ್ಲಿ ಹೇಗೆ ಏನು ಎಡವಟ್ಟಾಯಿತು ಎನ್ನುವುದೇ ಗೊತ್ತಾಗದ ಸ್ಥಿತಿಯಲ್ಲಿ ಮೂವರನ್ನೂ ಅಯೋಮಯ ಕಾಡುತ್ತಿರುವುದೂ ಅಷ್ಟೇ ಸತ್ಯ. ಹೌದು, ಜನ ಬೇಸತ್ತರೆ ಅವರು ಕೊಡುವ ಪೆಟ್ಟು ಮೂರು ಮೂರು ಜನ್ಮಕ್ಕೂ ಸಾಕುಬೇಕೆನಿಸುವಷ್ಟಿರುತ್ತದೆ.

104 ಸ್ಥಾನ ಪಡೆದು ಅತಿದೊಡ್ಡ ಪಕ್ಷವೆನಿಸಿರುವ ಬಿಜೆಪಿ ಸರ್ಕಾರ ರಚಿಸಿದೆ. ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲೆಂದೇ ಫಲಿತಾಂಶೋತ್ತರ ಮೈತ್ರಿ ಮಾಡಿಕೊಂಡಿರುವ 78 ಸ್ಥಾನದ ಕಾಂಗ್ರೆಸ್ ಹಾಗೂ 37 (ಎಚ್.ಡಿ. ಕುಮಾರಸ್ವಾಮಿ ಗೆದ್ದಿರುವ ಎರಡರಲ್ಲಿ ಒಂದು ಸ್ಥಾನ ಹೊರತುಪಡಿಸಿ) ಸ್ಥಾನ ಪಡೆದಿರುವ ಜೆಡಿಎಸ್ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಿದ್ದಾರೆಂದು ರಾಜ್ಯಪಾಲರ ವಿರುದ್ಧ ಆರೋಪ ಮಾಡಿ ಸುಪ್ರೀಂ ಕೋರ್ಟ್​ನ ಮೆಟ್ಟಿಲನ್ನೇರಿವೆ. ಅದು ಈಗಾಗಲೇ ನೀಡಿರುವ ಮಧ್ಯಂತರ ಆದೇಶದ ಪ್ರಕಾರ ಯಡಿಯೂರಪ್ಪ ವಿಶ್ವಾಸಮತವನ್ನು ಶನಿವಾರ ಸಾಬೀತುಪಡಿಸಬೇಕಿದೆ. ಕೋರ್ಟ್​ನ ಅಂತಿಮ ತೀರ್ಪು ಹೀಗೆ…. ಹೀಗೆ ಬರುತ್ತದೆಂದು ಊಹಿಸಬಹುದೇ ಹೊರತಾಗಿ ಹೀಗೇ ಬರುತ್ತದೆಂದು ಹೇಳಲಾಗದು. ಸರ್ಕಾರ ರಚನೆಗೆ ಅವಕಾಶ ಪಡೆದ ಪಕ್ಷ/ಪಕ್ಷಗಳಿಗಿಂತ ವಿಧಾನಸಭೆಯಲ್ಲಿ ಬಹುಮತ ಪಡೆದ ಪಕ್ಷ/ಪಕ್ಷಗಳು ಹೆಚ್ಚಿಗಿರುವ ಆದರೆ ಬೇರೆ ಬೇರೆ ಕಾರಣಗಳಿಗಾಗಿ ಅವಕಾಶ ಸಿಗದ ನಿದರ್ಶನ ನಮ್ಮ ಜನತಂತ್ರ ಇತಿಹಾಸದಲ್ಲಿವೆ. ಇದು ಸರಿಯೋ ತಪ್ಪೋ ಎನ್ನುವ ವಿಚಾರದಲ್ಲಿ ಸಂವಿಧಾನದ ಆಶಯ ಏನೆನ್ನುವುದನ್ನು ಸುಪ್ರೀಂ ಕೋರ್ಟ್ ವಿಶ್ಲೇಷಣೆ ಮಾಡುವ ನಿರ್ಣಾಯಕ ಘಟ್ಟದಲ್ಲಿ ಇರುವ ಕಾರಣ ತೀರ್ಪು ದೀರ್ಘಕಾಲೀನ ಪರಿಣಾಮ ಬೀರುವುದು ಖಚಿತ. ಈ ಮಾತಿಗೆ ಉದಾಹರಣೆಯಾಗಿ ಎಸ್.ಆರ್. ಬೊಮ್ಮಾಯಿ ಪ್ರಕರಣದ ಐತಿಹಾಸಿಕ ತೀರ್ಪು ನಮ್ಮ ಮುಂದಿದೆ.

ಯಾವ ಪಕ್ಷಕ್ಕೂ ಸರಳ ಬಹುಮತವೂ ಇರದ ಸಂದರ್ಭದಲ್ಲಿ ಅತ್ಯಧಿಕ ಸ್ಥಾನ ಗಳಿಸಿರುವ ಪಕ್ಷವನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಸೂಚಿಸಬಹುದು. ಹಾಗೆ ಸರ್ಕಾರ ರಚಿಸಿದ ಪಕ್ಷದ ಶಾಸಕಾಂಗ ನಾಯಕ(ಮುಖ್ಯಮಂತ್ರಿ) ರಾದವರು ರಾಜ್ಯಪಾಲರು ನಿಗದಿಪಡಿಸಿದ ಸಮಯದ ಒಳಗಾಗಿ ಸದನದಲ್ಲಿ ತನಗಿರುವ ಬಹುಮತವನ್ನು ಸಾಬೀತು ಪಡಿಸಬೇಕು. ಮುಖ್ಯಮಂತ್ರಿಗೆ ಬಹುಮತ ಇದೆಯೇ ಇಲ್ಲವೇ ಎನ್ನುವುದನ್ನು ಶಾಸನಸಭೆ ತೀರ್ವನಿಸಬೇಕೇ ಹೊರತೂ ರಾಜಭವನದ ಹುಲ್ಲುಗಾವಲಲ್ಲ ಎನ್ನುವುದು ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ತಿರುಳು. ಈ ತೀರ್ಪು ಬಂದ ನಂತರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ದ್ವೇಷದಿಂದಲೋ, ಅಸಹನೆಯಿಂದಲೊ, ವಿರೋಧ ಪಕ್ಷ ಸರ್ಕಾರ ನಡೆಸಬಾರದು ಎಂಬ ಮನಃಸ್ಥಿತಿಯಲ್ಲೋ ಸಂವಿಧಾನದ 356 ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಚುನಾಯಿತ ಸರ್ಕಾರಗಳನ್ನು ವಜಾ ಮಾಡುವ ಅನಿಷ್ಟ ಪರಂಪರೆಗೆ ಪೂರ್ಣವಿರಾಮ ಬಿತ್ತು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮೊದಲ ಅಲ್ಪಸಂಖ್ಯಾತ ಸರ್ಕಾರ ಬರುವುದಕ್ಕೆ ಕಾರಣವಾಗಿ ಅತಂತ್ರ ಎನ್ನಬಹುದಾದ ವಿಧಾನಸಭೆ ಅಸ್ತಿತ್ವಕ್ಕೆ ಬಂದುದು 1983ರಲ್ಲಿ. ತುರ್ತಪರಿಸ್ಥಿತಿ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವೂ ಒಳಗೊಂಡಂತೆ ಅವರದೇ ಪಕ್ಷ ಅಧಿಕಾರದಲ್ಲಿದ್ದ ಬಹುತೇಕ ರಾಜ್ಯಗಳು ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋದವು. ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾತ್ರವೇ ಈ ಮಾತಿಗೆ ಅಪವಾದವಾದವು. ದೇವರಾಜ ಅರಸು ನೀಡಿದ ಜನಪರ ಆಡಳಿತ ಇಲ್ಲಿ ಪಕ್ಷದ ಮರ್ಯಾದೆಯನ್ನು ಉಳಿಸಿತು. ಆದರೆ ನಂತರದ ಬೆಳವಣಿಗೆಯಲ್ಲಿ ಅರಸು ತಮ್ಮದೇ ಪಕ್ಷದ ಒಳತಂತ್ರದ ಕಾರಣವಾಗಿ ಪದಚ್ಯುತರಾಗಿ ಸಂಜಯ್ ಗಾಂಧಿಗೆ ಆಪ್ತರಾಗಿದ್ದ ಆರ್. ಗುಂಡೂರಾವ್ ಮುಖ್ಯಮಂತ್ರಿಯಾದರು. ಮುಂದೆ 1983ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಅದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಯಾವ ಪಕ್ಷಕ್ಕೂ ಸರಳ ಬಹುಮತ ಬಂದಿರಲಿಲ್ಲ. ಕರ್ನಾಟಕದ ಮಟ್ಟಿಗೆ ಅದು ಮೊದಲ ಅತಂತ್ರ ವಿಧಾನಸಭೆ. (ಹಂಗ್ ಅಸೆಂಬ್ಲಿ). ಜನತಾ ಪಕ್ಷ ನೇತೃತ್ವದ ಅಲ್ಪಸಂಖ್ಯಾತ ಸರ್ಕಾರವನ್ನು ಕಾಂಗ್ರೆಸ್ ತಂತ್ರದ ವಿರುದ್ಧ ತೇಲಿಸಿಕೊಂಡೊಯ್ಯಬೇಕಾದ ಹೊಣೆ ಶಾಸಕರಲ್ಲದ ರಾಮಕೃಷ್ಣ ಹೆಗಡೆ ಹೆಗಲನ್ನೇರಿತು. ಆ ಚುನಾವಣೆಯಲ್ಲಿ ಕ್ರಾಂತಿರಂಗ ಒಳಗೊಂಡಂತೆ ಜನತಾ ಪಕ್ಷ 95; ಕಾಂಗ್ರೆಸ್ 82; ಬಿಜೆಪಿ 18; ಉಭಯ ಕಮ್ಯೂನಿಸ್ಟ್ ಪಕ್ಷ 6; ಪಕ್ಷೇತರರು 22 ಸ್ಥಾನ ಗಳಿಸಿದ್ದರು. ಕಾಂಗ್ರೆಸ್ ದುರಾಡಳಿತವನ್ನು ಕೊನೆಗೊಳಿಸುವ ಯತ್ನದ ಭಾಗವಾಗಿ ಕಮ್ಯೂನಿಸ್ಟರು, ಬಿಜೆಪಿಯವರು, ಪಕ್ಷೇತರರು ಜನತಾ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡ ಪರಿಣಾಮವೇ ಮೊದಲ ಕಾಂಗ್ರೆಸ್ಸೇತರ ಆಡಳಿತ. ಪಕ್ಷೇತರರಲ್ಲಿ ಕೆಲವರು ಮಂತ್ರಿಗಳಾದರು; ಇನ್ನು ಕೆಲವರು ಮಂಡಳಿ, ನಿಗಮಗಳ ಅಧ್ಯಕ್ಷರಾದರು. ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಮಾತ್ರ ಯಾವ ಅಧಿಕಾರವನ್ನೂ ಬಯಸದೆ ಬಾಹ್ಯ ಬೆಂಬಲ ನೀಡಿದವು. ಬಿಜೆಪಿ ಮನಸ್ಸು ಮಾಡಿದ್ದರೆ ಅಂದೇ ಸರ್ಕಾರದ ಭಾಗವಾಗಬಹುದಿತ್ತು. ವಿಧಾನಸಭೆಯಲ್ಲಿ ಬಿಜೆಪಿ ಗುಂಪಿನ ನಾಯಕರಾಗಿದ್ದ ವಿ.ಎಸ್.ಆಚಾರ್ಯರೋ, ಅಥವಾ ಸುಬ್ಬಯ್ಯನವರೋ ಉಪ ಮುಖ್ಯಮಂತ್ರಿಯಾಗಲೂ ಅವಕಾಶ ಇತ್ತು.

ಇಲ್ಲಿ ಇನ್ನೊಂದು ವಿಷಯದ ಪ್ರಸ್ತಾಪ ಅನುಚಿತವೆನಿಸದು. ಹೆಗಡೆ ನೇತೃತ್ವದಲ್ಲಿ ರಚನೆಯಾಗಲಿರುವ ಸರ್ಕಾರಕ್ಕೆ ಬೆಂಬಲ ಸೂಚಿಸಲು ಅಂದಿನ ಬಿಜೆಪಿಯ ರಾಜ್ಯಘಟಕ ಒಲವು ಹೊಂದಿರಲಿಲ್ಲ. ಆಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎ.ಕೆ. ಸುಬ್ಬಯ್ಯ ಈ ಮಾತನ್ನು ಕಡ್ಡಿಮುರಿದಂತೆ ಹೇಳಿದ್ದರು. ಆದರೆ ಹೆಗಡೆಯವರು, ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಹೊಂದಿದ್ದ ಸಂಬಂಧ, ಸ್ನೇಹ ಸುಬ್ಬಯ್ಯ ಮಣಿಯುವಂತೆ ಮಾಡಿತು. ರಾಜಕೀಯ ಶತ್ರುತ್ವದಲ್ಲಿ ಹಾವು-ಮುಂಗುಸಿಯಂತಿರುವ, ಸಂಬಂಧದಲ್ಲಿ ಎಣ್ಣೆ-ಸೀಗೇಕಾಯಿಯಂತಿರುವ ಕಮ್ಯೂನಿಸ್ಟ್ ಮತ್ತು ಬಿಜೆಪಿ ಹೆಗಡೆ ಹಿಂದೆ ಒಂದಾಗಿ ನಿಂತುದು ಮಾತ್ರ ಸಾಮಾನ್ಯ ಬೆಳವಣಿಗೆ ಆಗಿರಲಿಲ್ಲ.

ಹೆಗಡೆ ಸರ್ಕಾರ ಇಂದು ಉರುಳುತ್ತದೆ, ನಾಳೆ ಉರುಳುತ್ತದೆನ್ನುವುದು ಕಾಂಗ್ರೆಸ್​ನ ನಿತ್ಯಜಪವಾಗಿತ್ತು. ಆಗ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರಾಗಿದ್ದ ಎಚ್.ಎನ್. ನಂಜೇಗೌಡರು ರಾಜಭವನಕ್ಕೆ ತೆರಳಿ ಸರ್ಕಾರ ವಜಾ ಮಾಡುವುದಕ್ಕೆ ಬೇಕಾದ ಎಲ್ಲ ಮಾಹಿತಿಯನ್ನೂ ರಾಜ್ಯಪಾಲರಿಗೆ ತಲುಪಿಸುವ ಮುಹೂರ್ತವನ್ನು ನಿಗದಿ ಮಾಡುವುದು; ಅದನ್ನು ತಿಳಿದ ವರದಿಗಾರರು ರಾಜಭವನಕ್ಕೆ ದೌಡಾಯಿಸಿ ಫುಟ್​ಪಾತಿನ ಮೇಲೆ ದಿನವನ್ನೆಲ್ಲ ಕಳೆಯುವುದು ನಿತ್ಯಕಾಯಕವಾಗಿತ್ತು. ಇದಕ್ಕೆ ಕಾರಣ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ. ವಿರೋಧ ಪಕ್ಷದ ಯಾವುದೇ ಸರ್ಕಾರವನ್ನೂ ಸಹಿಸದ ಇಂದಿರಾರಿಗೆ ಇಲ್ಲಿನ ಜನತಾ ಸರ್ಕಾರವನ್ನು ಸಹಿಸಿಕೊಳ್ಳುವುದು ಆಗದ ಮಾತಾಗಿತ್ತು. ಆದರೆ ಇಂದಿರಾ ಮತ್ತು ಕಾಂಗ್ರೆಸ್​ಗೆ,

ಜನತಾ ಸರ್ಕಾರವನ್ನು ಉರುಳಿಸುವುದು ಸಾಧ್ಯವಾಗಲಿಲ್ಲ. ಈ ಸೇಡನ್ನು ಅವರು ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತೀರಿಸಿಕೊಂಡರು. ಜನತಾ ಪಕ್ಷದೊಳಗೆ ಎದ್ದ ಬಂಡಾಯವನ್ನು ಬಳಸಿಕೊಂಡ ಕೇಂದ್ರ ಸರ್ಕಾರ, ಸಂವಿಧಾನದ 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು. ಬಹುಮತವನ್ನು ಸಾಬೀತುಗೊಳಿಸಲು ಅವಕಾಶ ಕೋರಿದ ಬೊಮ್ಮಾಯಿಯವರ ಮನವಿಯನ್ನು ರಾಜ್ಯಪಾಲರು ಮಾನ್ಯ ಮಾಡಲಿಲ್ಲ. ಬೊಮ್ಮಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಗೆದ್ದರು. ಬೊಮ್ಮಾಯಿಯವರಿಗೆ ತಾವು ಅನ್ಯಾಯವಾಗಿ ಕಳೆದುಕೊಂಡ ಮುಖ್ಯಮಂತ್ರಿ ಪಟ್ಟ ಪುನಃ ಒಲಿಯಲಿಲ್ಲ. ಆದರೇನಂತೆ ದೇಶದಲ್ಲಿ ಸಂವೈಧಾನಿಕ ಆಡಳಿತ ವ್ಯವಸ್ಥೆ ಜೀವಂತವಿರುವವರೆಗೂ ಬೊಮ್ಮಾಯಿ ಪ್ರಕರಣ ದಾರಿದೀಪವಾಗಿರುತ್ತದೆ.

2008ರಲ್ಲಿ ಬಿಜೆಪಿ 110 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದ ಸಮಯದಲ್ಲೂ ಕರ್ನಾಟಕ ತ್ರಿಶಂಕು ವಿಧಾನಸಭೆಯನ್ನು ನೋಡಿತು. ಬಹುಮತಕ್ಕೆ ಮೂರು ಸ್ಥಾನ ಕಡಿಮೆ ಬಿದ್ದಾಗ ಆಪರೇಷನ್ ಕಮಲ ನಡೆಯಿತು. ಬೇರೆ ಪಕ್ಷಗಳಿಂದ ಆಯ್ಕೆಯಾದ ಕೆಲವು ಸದಸ್ಯರ ರಾಜೀನಾಮೆ ಪಡೆದು ಬಹುಮತ ಕಾಯ್ದುಕೊಳ್ಳಲಾಯಿತು. ಆಗಲೂ ಈಗಲೂ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿ. ಶಾಸನಸಭೆಯಲ್ಲಿ ಬಹುಮತ ಸಾಬೀತುಗೊಳಿಸಲು ಅವರಿಗೆ ರಾಜ್ಯಪಾಲರು ನೀಡಿದ್ದ 15 ದಿವಸದ ಗಡುವನ್ನು ಮೊಟಕುಗೊಳಿಸಿರುವ ಸವೋಚ್ಚ ನ್ಯಾಯಾಲಯ, 24ರಿಂದ 36 ತಾಸಿನ ಒಳಗಾಗಿ ಬಹುಮತ ಸಾಬೀತು ಪಡಿಸುವಂತೆ ತಾಕೀತು ಮಾಡಿದೆ. ಈ ಕಾರಣವಾಗಿ ಇಂದು ಶನಿವಾರ ಎಲ್ಲರ ಚಿತ್ತ ವಿಧಾನಸೌಧದತ್ತ ಎನ್ನುವಂತಾಗಿದೆ. ಮೊದಲು 20:20 ಸೂತ್ರದನ್ವಯ ಸಿಎಂ ಆಗಿದ್ದ ಯಡಿಯೂರಪ್ಪ ಏಳೇ ದಿವಸದಲ್ಲಿ ಮಾಜಿ ಆಗಿದ್ದರು. 2008ರಲ್ಲಿ ಮುಖ್ಯಮಂತ್ರಿಯಾಗಿ ಮೂರು ಮೂರೂವರೆ ವರ್ಷ ಅಧಿಕಾರದಲ್ಲಿದ್ದ ಅವರು ರಾಜೀನಾಮೆ ಕೊಡಬೇಕಾಗಿ ಬಂತು. ಈಗ ಮೂರನೇ ಬಾರಿಯ ಅವರ ಪ್ರಮಾಣವಚನದ ಅವಧಿ ಎಷ್ಟು ದಿವಸ, ತಿಂಗಳು, ವರ್ಷ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *

Back To Top