Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಲಕ್ಷ ಲಕ್ಷ ಕೋಟಿ ವಕ್ಪ್ ಆಸ್ತಿ ಅತಿಕ್ರಮಣ, ತನಿಖೆ ನಾಸ್ತಿ

Saturday, 24.03.2018, 3:05 AM       No Comments

| ಎಂ. ಕೆ. ಭಾಷ್ಕರ ರಾವ್​

ಹಗರಣಗಳ ಪ್ರವಾಹದಲ್ಲಿ ದೇಶ, ರಾಜ್ಯಗಳು ಕೊಚ್ಚಿಹೋಗುತ್ತಿರುವ ಪರಿಸ್ಥಿತಿ ಈಗ ನಮ್ಮ ದೇಶದಲ್ಲಿದೆ. ಯಾವ ಸರ್ಕಾರದ ಅವಧಿಯಲ್ಲಿ ಅತಿಹೆಚ್ಚು ಹಗರಣ ನಡೆದಿದೆ ಎನ್ನುವ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಪುಂಖಾನುಪುಂಖವಾಗಿ ಸಾಗಿದೆ. ಬ್ಯಾಂಕುಗಳಿಗೆ ದೊಡ್ಡ ದೊಡ್ಡ ಉದ್ಯಮಿಗಳು ಮಾಡಿದ ಮೋಸದಲ್ಲಿ ಬಡ ಭಾರತೀಯರ ಕನಸುಗಳು ಕಮರುತ್ತಿವೆ.

ಈಗಂತೂ ನೀರವ್ ಮೋದಿಯದೇ ಮಾತು. ಯುಪಿಎ ಸರ್ಕಾರದ ಅವಧಿಯಲ್ಲಿ ಸದ್ದುಮಾಡಿದ್ದು ಹಗರಣಗಳು. ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕದಲ್ಲಿ ಹಗರಣಗಳು ಇಲ್ಲ ಎಂದು ಸಮಾಧಾನಪಟ್ಟುಕೊಳ್ಳುತ್ತಿರುವಾಗಲೇ ರಾಷ್ಟ್ರೀಕೃತ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನೀರವ್ ಮೋದಿ ಎಂಬ ವಜ್ರಪಡಿ ವ್ಯಾಪಾರಿ 11 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಟೋಪಿಹಾಕಿ ವಿದೇಶಕ್ಕೆ ಹಾರಿದ ಸುದ್ದಿ ಬಂತು. ದೇಶದ ಖಜಾನೆಗೆ ಕನ್ನಹಾಕುತ್ತಿರುವ ಉಳ್ಳವರ ವಿರುದ್ಧ ಜನ ಮೆಚ್ಚುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಆಡಳಿತಾಂಗವಿದೆ.

ಹಣದ ವಿಚಾರದಲ್ಲಿ ವಂಚನೆ ಮಾಡುವುದನ್ನೇ ಹಗರಣ ಎಂದು ತಿಳಿಯುವ, ಇತರ ವಂಚನೆಗಳನ್ನು ನಿರ್ಲಕ್ಷಿಸಿಬಿಡುವ ಅಪಾಯಕಾರಿ ಮನಃಸ್ಥಿತಿಯೊಂದು ನಮ್ಮಲ್ಲಿದೆ. ಆಸ್ತಿಪಾಸ್ತಿ ವಿಚಾರವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಭಾರತದಲ್ಲಿರುವ ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಆಸ್ತಿಪಾಸ್ತಿ ಇದೆ. ಬ್ಯಾಂಕ್​ಗಳಲ್ಲಿ ಮೋಸ ವಂಚನೆ ತಡೆಯುವುದಕ್ಕೆ ವ್ಯವಸ್ಥೆ ಇರುವಂತೆ ಮತ್ತು ಆ ವ್ಯವಸ್ಥೆಯೇ ಅವ್ಯವಸ್ಥೆಯಾಗಿರುವ ರೀತಿ ಧಾರ್ವಿುಕ ಆಸ್ತಿ ಸಂರಕ್ಷಣೆಯ ವಿಚಾರದಲ್ಲೂ ಆಗಿದೆ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಎದ್ದುಕಂಡ ನಿದರ್ಶನವೆಂದರೆ ಮುಸ್ಲಿಂ ಸಮುದಾಯದ ವಕ್ಪ್ ಆಸ್ತಿ ಅತಿಕ್ರಮಣ ಪ್ರಕರಣ. ಇಡೀ ದೇಶದ ಲೆಕ್ಕಾಚಾರ ತೆಗೆದುಕೊಂಡರೆ ಅತಿಹೆಚ್ಚಿನ ಆಸ್ತಿ ಇರುವುದು ಭಾರತೀಯ ಸೇನೆ ವಶದಲ್ಲಿ. ನಂತರದ ಸ್ಥಾನ ಭಾರತೀಯ ರೈಲ್ವೆಯದು. ಮೂರನೇ ಸ್ಥಾನದಲ್ಲಿರುವುದು ವಕ್ಪ್. ಕರ್ನಾಟಕಕ್ಕೆ ಸೀಮಿತಗೊಳಿಸಿ ನೋಡಿದರೆ ಇಲ್ಲಿ ಅತ್ಯಧಿಕ ಆಸ್ತಿ ಇರುವುದು ವಕ್ಪ್ ವಶದಲ್ಲಿ.

ವಕ್ಪ್ ಮಂಡಳಿ ಮೂಲಗಳ ಪ್ರಕಾರ ಕರ್ನಾಟಕದಲ್ಲಿ 54 ಸಾವಿರ ಎಕರೆಗೂ ಅಧಿಕ ಆಸ್ತಿ ಮಂಡಳಿಯ ಹೆಸರಿನಲ್ಲಿದೆ. ಅದರಲ್ಲಿ ಅಲ್ಪಸ್ವಲ್ಪ ಕಬಳಿಕೆ ಆಗಿರುವುದನ್ನೂ ಈ ಮೂಲಗಳು ದೃಢೀಕರಿಸುತ್ತವೆ. ಆದರೆ ಕಬಳಿಸಲ್ಪಟ್ಟ ಆಸ್ತಿಯ ನಿಶ್ಚಿತ ಪ್ರಮಾಣವನ್ನಾಗಲೀ ಅದು ಒಳಗೊಂಡಿರುವ ಹಣದ ಮೊತ್ತವನ್ನಾಗಲೀ ಮೂಲಗಳು ಬಯಲುಮಾಡುವುದಿಲ್ಲ. ಮುಸ್ಲಿಂ ಸಮುದಾಯದಲ್ಲಿರುವ ಸಂವೇದನಾಶೀಲರಿಗೆ ಅನ್ಯಾಯವಾಗಿರುವುದು ಗೊತ್ತಿದ್ದೂ ಏನನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದ ಸಮಯದಲ್ಲಿ ಬಂದುದು ಅನ್ವರ್ ಮಾನಿಪ್ಪಾಡಿ ವರದಿ. ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಮಾನಿಪ್ಪಾಡಿ ನೇಮಕಗೊಂಡಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ; ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ. ಇಡೀ ರಾಜ್ಯದ ಮಾಹಿತಿ ಸಂಗ್ರಹಿಸಿ 7,000 ಪುಟಗಳ ಬೃಹತ್ ವರದಿಯನ್ನು ಆಯೋಗ ಸಿದ್ಧಪಡಿಸುವ ವೇಳೆಗೆ ಯಡಿಯೂರಪ್ಪ ಬದಲಾಗಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು. ನಂತರ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ವರದಿಯನ್ನು ಮಂಡಿಸುವ ತೀರ್ವನವಾಯಿತಾದರೂ ತಾಂತ್ರಿಕ ಕಾರಣಕ್ಕಾಗಿ ನನೆಗುದಿಗೆ ಬಿತ್ತು. ನಂತರದಲ್ಲಿ ಬಂದುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.

ರಾಷ್ಟ್ರಮಟ್ಟದ ಇಂಗ್ಲಿಷ್ ನಿಯತಕಾಲಿಕಗಳಲ್ಲಿ ಮಾನಿಪ್ಪಾಡಿ ವರದಿ ಸಾದ್ಯಂತ ಪ್ರಕಟವಾಗಿರುವಂತೆ ಕರ್ನಾಟಕದಲ್ಲಿ ಕಬಳಿಕೆ ಆಗಿರುವ ವಕ್ಪ್ ಆಸ್ತಿ ಪ್ರಮಾಣ ಕಮ್ಮಿ ಎಂದರೂ 25ರಿಂದ 27 ಸಾವಿರ ಎಕರೆಯಷ್ಟು. ಸರ್ಕಾರ ನಿಗದಿ ಪಡಿಸಿರುವ ಭೂದರದ ರೀತ್ಯ ಆಕ್ರಮಿತ ಆಸ್ತಿಯ ಮೌಲ್ಯ 2.40 ಲಕ್ಷ ಕೋಟಿ ರೂಪಾಯಿ. ಇದೇ ಆಸ್ತಿಯ ಮಾರುಕಟ್ಟೆ ಮೌಲ್ಯ ಮೂರು, ನಾಲ್ಕು, ಕೆಲವೆಡೆ ಐದಾರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿದೆ. ಒಂದು ಅಂದಾಜಿನ ಪ್ರಕಾರ ಕಬಳಿತ ವಕ್ಪ್ ಆಸ್ತಿಯ ಮಾರುಕಟ್ಟೆ ಮೌಲ್ಯ 18ರಿಂದ 20 ಲಕ್ಷ ಕೋಟಿ ರೂ. ಎನ್ನಲಾಗುತ್ತಿದೆ. ಈ ಪಾಟಿ ಮೊತ್ತದ ಆಸ್ತಿಯನ್ನು ಕಬಳಿಸಿದ್ದಾದರೂ ಯಾರು…? ಮಾನಿಪ್ಪಾಡಿ ವರದಿಯಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಪ್ರಭಾವಿ ಮುಸ್ಲಿಂ ರಾಜಕಾರಣಿಗಳು, ಶ್ರೀಮಂತರು, ಉದ್ಯಮಿಗಳು, ವಕ್ಪ್ ಮಂಡಳಿಯಲ್ಲಿದ್ದ ಕೆಲವು ಅಧಿಕಾರಿಗಳು, ಮುಸ್ಲಿಮರಲ್ಲದ ರಾಜಕಾರಣಿಗಳು ಕೂಡ ವಕ್ಪ್ ಆಸ್ತಿ ನುಂಗಿರುವುದನ್ನು ವರದಿ ಹೇಳುತ್ತದೆ. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳು, ಪಂಚತಾರಾ ಹೋಟೆಲುಗಳು ಕೂಡಾ ವಕ್ಪ್ ಆಸ್ತಿಯಲ್ಲಿ ಅಕ್ರಮವಾಗಿ ತಲೆ ಎತ್ತಿರುವುದನ್ನೂ ವರದಿ ಉಲ್ಲೇಖಿಸಿದೆ. ಅವರ ಪ್ರಕಾರ- ಇದೊಂದು ಧರ್ವತೀತ ಅಕ್ರಮ.

ವಕ್ಪ್ ಆಸ್ತಿ ಇರುವುದು ಆ ಸಮುದಾಯದ ಮುಖ್ಯವಾಗಿ ಬಡ ಅಸಹಾಯಕ ಮುಸ್ಲಿಂರ ಕಲ್ಯಾಣಕ್ಕೆ. ಕಾಲಾನುಕ್ರಮದಲ್ಲಿ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶ ವಕ್ಪ್​ಗಿತ್ತು. ಮುಸ್ಲಿಮರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಲ್ಲಿ ಕೆಲವರು ಈ ಗುರಿಗೆ ಭಿನ್ನವಾಗಿ ಆಸ್ತಿಯನ್ನು ಸ್ವಂತಕ್ಕೆ ಬಳಸಿಕೊಳ್ಳಲು ಮುಂದಾಗಿದ್ದರ ಪರಿಣಾಮವೇ ಅತಿಕ್ರಮಣ. ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಹುದಾಗಿದ್ದ ವರದಿಯನ್ನು ಬಿಜೆಪಿ ಸರ್ಕಾರ ವಿಧಾನ ಮಂಡಲದಲ್ಲಿ ಮಂಡಿಸಲಿಲ್ಲವೇಕೆ…? ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಂಡು ಆಸ್ತಿಯನ್ನು ವಕ್ಪ್ ಮಂಡಳಿ ವಶಕ್ಕೆ ಮರಳಿಸುವುದಕ್ಕೆ ಮುಂದಾಗಲಿಲ್ಲವೇಕೆ..? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗೇ ಏಳುತ್ತವೆ. ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ಮುಂದಾದಾಗ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುವುದು ಸೂಕ್ತ ಎಂಬ ಅಭಿಪ್ರಾಯ ಬಂದು ಅದನ್ನು ಸರ್ಕಾರ ಒಪ್ಪಿಕೊಂಡಿತು. ಮತ್ತೊಂದು ಅಧಿವೇಶನ ಆ ಸರ್ಕಾರದ ಪಾಲಿಗೆ ಬರಲೇ ಇಲ್ಲ. ಹಾಗಂತ ಸರ್ಕಾರ ಸುಮ್ಮನೆ ಕೂತಿತೆಂದೇನೂ ಅಲ್ಲ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚನೆಯಾಯಿತು. ಆಯಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳ ರಚನೆಯೂ ಆಯಿತು. ಆಕ್ರಮಿತ ವಕ್ಪ್ ಆಸ್ತಿಯನ್ನು ಸರ್ವೆ ಮಾಡಿಸಿ ವಶಕ್ಕೆ ಪಡೆಯಬೇಕು; ಬೇಲಿಯನ್ನೋ ಕಾಂಪೌಂಡನ್ನೋ ಹಾಕಿ ಮತ್ತೆ ಅತಿಕ್ರಮಣವಾಗದಂತೆ ಕ್ರಮ ಕೈಗೊಳ್ಳಬೇಕು; ಇದು ವಕ್ಪ್ ಆಸ್ತಿ, ಅತಿಕ್ರಮಣ ಸಲ್ಲದು ಎನ್ನುವ ಫಲಕಗಳನ್ನು ಹಾಕುವುದಲ್ಲದೆ ಪುನಃ ಅತಿಕ್ರಮಣದ ವಿರುದ್ಧ ಎಚ್ಚರಿಕೆಯನ್ನು ನೀಡಬೇಕೆಂಬ ಕೋರ್ಟ್ ಆದೇಶವನ್ನು ಜಾರಿಗೆ ತರಲು ಸಮಿತಿಗಳಿಗೆ ನಿರ್ದೇಶಿಸಲಾಯಿತು. ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಆನಂದ್ ಮತ್ತು ವಿ.ಎನ್.ಖರೆ ಅವರಿದ್ದ ದ್ವಿಸದಸ್ಯ ಪೀಠ ನೀಡಿದ ‘ಒಮ್ಮೆ ವಕ್ಪ್ ಆಸ್ತಿ ಎನಿಸಿದ್ದು ಸದಾಕಾಲಕ್ಕೂ ವಕ್ಪ್ ಆಸ್ತಿ’ ಎಂಬ ತೀರ್ಪು ಈ ಸಮಿತಿಗಳ ರಚನೆಗೆ ಒತ್ತಾಸೆಯಾಗಿತ್ತು. ಭೂಹೀನ ದಲಿತರಿಗೆ ಸರ್ಕಾರ ಕೊಡುವ ಭೂಮಿಯನ್ನು ಅನ್ಯರು ಕೊಳ್ಳಲು ಅವಕಾಶವಿಲ್ಲ, ಸ್ವತಃ ಭೂಮಿ ಹೊಂದಿರುವ ದಲಿತರೂ ಮಾರಲು ಬರುವುದಿಲ್ಲ. ಇಂಥದೇ ಕಾಯ್ದೆಯಡಿ ವಕ್ಪ್ ಆಸ್ತಿಯೂ ಬರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಅತಿಕ್ರಮಿತ ವಕ್ಪ್ ಆಸ್ತಿಯನ್ನು ಮರಳಿ ಪಡೆಯುವ ಕೆಲಸಕ್ಕೆ ಚಾಲನೆ ದೊರೆಯಬೇಕಿದೆ.

ರಾಜ್ಯ ಮಟ್ಟದ ಸಮಿತಿಯಾಗಲೀ ಜಿಲ್ಲಾ ಮಟ್ಟದ ಬಹುತೇಕ ಸಮಿತಿಗಳಾಗಲೀ ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡುತ್ತಿಲ್ಲ ಎನ್ನುವುದು ಮುಸ್ಲಿಂ (ವಕ್ಪ್) ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಾಸಭಾದ ಅಭಿಮತ. ಇದೇ ಫೆಬ್ರವರಿ 3ನೇ ವಾರ ಬೆಂಗಳೂರಿನಲ್ಲಿ ಮಹಾಸಭಾದ ಆಶ್ರಯದಲ್ಲಿ ಸಮಾವೇಶಗೊಂಡಿದ್ದ ಮುಸ್ಲಿಂ ಪ್ರತಿನಿಧಿಗಳ ಒಕ್ಕೊರಳ ಆಕ್ರೋಶದ ಮೂಲ ಇದೇ ಆಗಿತ್ತು. ರಾಜ್ಯದ ಅನೇಕ ಕಡೆಗಳಲ್ಲಿ ಸದರಿ ಮುಕ್ತಿ ಮಹಾಸಭಾದ ಅಭಿಯಾನ ಇದೀಗ ನಡೆದಿದೆ. ಸ್ಥಳಿಯ ಅಧಿಕಾರಿಗಳಿಗೆ ಸುಪ್ರೀಂ ಮತ್ತಿತರ ಕೋರ್ಟ್​ನ ಆದೇಶ, ಸರ್ಕಾರಿ ಸುತ್ತೋಲೆಯನ್ನು ಮುಟ್ಟಿಸಿ ಅವರಿಂದ ಅತಿಕ್ರಮಣ ತೆರವುಗೊಳಿಸುವ ಕೆಲಸವನ್ನು ಮಹಾಸಭಾ ನಡೆಸಿದ್ದು ಕೆಲವು ಕಡೆಗಳಲ್ಲಿ ಅದು ಯಶಸ್ವಿಯೂ ಆಗಿದೆ. ಈ ವರದಿಯನ್ನು ಸದನದಲ್ಲಿ ಮಂಡಿಸುವಂತೆ ವಿಧಾನ ಪರಿಷತ್​ನಲ್ಲಿ ನಡೆದ ಕೋಲಾಹಲಕಾರಿ ಚರ್ಚೆ, ಒಂದು ಹಂತದಲ್ಲಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಆಗಿನ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಖಮರುಲ್ ಇಸ್ಲಾಂ ಹೇಳಿದ್ದು, ಅವರ ಹೇಳಿಕೆ ಸತ್ಯದೂರ ಎಂಬ ವಾದದ ಹಿನ್ನೆಲೆಯಲ್ಲಿ ಹಕ್ಕುಚ್ಯುತಿ ಮಂಡನೆಯಾಗಿದ್ದು, ವರದಿಯನ್ನು ಮಂಡಿಸುವಂತೆ ಸಭಾಪತಿ ಸರ್ಕಾರಕ್ಕೆ ತಾಕೀತು ಮಾಡಿದ್ದು, ಈ ಸಂಬಂಧದ ಪ್ರಕರಣದಲ್ಲಿ ಕೋರ್ಟ್​ಗೆ

ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟು ಮರೆತಿದ್ದು, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದ್ದು….ಹೀಗೆ ಆಗಿರುವ ಬೆಳವಣಿಗೆಗಳನ್ನು ಗಮನಿಸಿದರೆ ಪ್ರರಕಣ ನಿಗೂಢವಾಗುತ್ತಿದೆ. ಶ್ರೀಮಂತರು, ಬಲಾಢ್ಯ ರಾಜಕಾರಣಿಗಳು ಇದರ ಹಿಂದಿದ್ದಾರೆಂಬ ಕಾರಣವೇ ಸರ್ಕಾರದ ಕೈಗಳನ್ನು ಕಟ್ಟಿ ಹಾಕಿರಬಹುದೇ ಎಂಬ ಅನುಮಾನವೂ ಬೆಳೆಯುತ್ತಿದೆ.

Leave a Reply

Your email address will not be published. Required fields are marked *

Back To Top