Friday, 16th November 2018  

Vijayavani

Breaking News

ರಾಜಕಾರಣದ ಉರಿಗಾವಲಿಯಲ್ಲಿ ಚಿತ್ರ ನಗರಿ

Saturday, 18.08.2018, 3:05 AM       No Comments

ಕನ್ನಡ ಚಿತ್ರೋದ್ಯಮದ ಸರ್ವತೋಮುಖ ಬೆಳವಣಿಗೆಗೆ ಚಿತ್ರ ನಗರಿ ಅವಶ್ಯ. ಈಗ ಇದು ಕೂಡ ರಾಜಕೀಯ ಬೇಕು-ಬೇಡದ ವಿಷಯವಾಗಿ ಮಾರ್ಪಟ್ಟಿರುವುದು ವಿಪರ್ಯಾಸಕರ. ಹೈದರಾಬಾದಿನ ರಾಮೋಜಿ ರಾವ್ ಚಿತ್ರ ನಗರಿಯಂತೆ ಕರ್ನಾಟಕದಲ್ಲೂ ಇದು ಸಾಕಾರಗೊಳ್ಳಬೇಕು. ಅದಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯೂ ಕಾರ್ಯಪ್ರವೃತ್ತವಾಗಬೇಕು.

ಸಿನಿಮಾ ಎಂಬ ತಂತ್ರಜ್ಞಾನವೊಂದು ಭಾರತದಲ್ಲಿ ಬೆಳಕಿಗೆ ಬಂದ ಕಾಲದಿಂದಲೂ ಕನ್ನಡ ಚಿತ್ರಗಳ ಹುಟ್ಟು ಮದರಾಸಿನಲ್ಲೇ. ಕನ್ನಡಕ್ಕಿಂತ ತಮಿಳು ಚಿತ್ರರಂಗ ಬಹಳ ಎನ್ನಬಹುದಾದಷ್ಟು ಮುಂದುವರಿದಿದ್ದುದು ಮತ್ತು ಸಿನಿಮಾ ತಯಾರಿಕೆಗೆ ಅಗತ್ಯವಿರುವ ಪೂರಕ ಸೌಲಭ್ಯ ಅಲ್ಲಿ ಮಡುಗಟ್ಟಿದ್ದುದು ಕನ್ನಡದ ಪರಾವಲಂಬನೆಗೆ ಕಾರಣವಾಗಿತ್ತು. ಎಂಭತ್ತರ ದಶಕದಲ್ಲಿ ಕರ್ನಾಟಕಕ್ಕೆ ಕನ್ನಡ ಚಿತ್ರರಂಗವನ್ನು ಎಳೆದು ತರುವ ಯತ್ನ ನಡೆದು ಯಶಸ್ವಿಯೂ ಆಯಿತು. ಅದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ಸೇತರ ಜನತಾ ಪಕ್ಷ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಅವರ ಸಂಪುಟದ ಸದಸ್ಯರು ಹಟ ಹಿಡಿದುದರ ಫಲಿತ ಚಿತ್ರೋದ್ಯಮ ಕನ್ನಡ ನೆಲದಲ್ಲಿ ನೆಲೆಯೂರುವಂತಾಯಿತು. ಅನೇಕ ಆರ್ಥಿಕ ಬೆಂಬಲವೂ ಒಳಗೊಂಡಂತೆ ಬಗೆಬಗೆಯ ಸವಲತ್ತನ್ನು ಹೆಗಡೆ ಸರ್ಕಾರ ಸಿನಿಮಾ ಉದ್ಯಮಕ್ಕೆ ನೀಡಿತು. ಆ ನಂತರದಲ್ಲಿ ಬಂದ ಎಲ್ಲ ಸರ್ಕಾರಗಳೂ ಕನ್ನಡ ಚಿತ್ರೋದ್ಯಮ ಬೆಳೆಯುವುದಕ್ಕೆ ಸಹಾಯಹಸ್ತ ಚಾಚಿದವು. ಕೆಲವೇ ದಶಕಗಳ ಹಿಂದೆ ವರ್ಷಕ್ಕೆ ನಾಲ್ಕೈದು ಚಿತ್ರ ನಿರ್ವಣವಾಗುತ್ತಿದ್ದ ಕನ್ನಡದಲ್ಲಿ ಈಗ ನೂರರ ಗಡಿ ದಾಟುವುದು ಸಾಮಾನ್ಯ ಎಂಬಂತಾಗಿದೆ. ಈ ವರ್ಷವಂತೂ ಆಗಸ್ಟ್ ಅಂತ್ಯದ ಹೊತ್ತಿಗೆ ಅಂದರೆ ಕೇವಲ ಎಂಟು ತಿಂಗಳ ಅವಧಿಯಲ್ಲಿ 120 ಚಿತ್ರಗಳು ಕನ್ನಡದಲ್ಲಿ ನಿರ್ವಣವಾಗಿರುವುದು ನಿಜಕ್ಕೂ ಅಚ್ಚರಿಯ ಬೆಳವಣಿಗೆ.

ಪ್ರತಿ ವರ್ಷವೂ ಕೋಟ್ಯಂತರ ರೂಪಾಯಿ ಹೂಡಿಕೆಯಾಗುವ, ಲಾಭ-ನಷ್ಟದ ಪರಿವೆ ಇಲ್ಲದವರಂತೆ ಹೊಸ ಹೊಸ ನಿರ್ವಪಕರು ಮುನ್ನುಗ್ಗುತ್ತಿರುವ ಚಿತ್ರೋದ್ಯಮದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವೆನಿಸಿರುವ ಚಿತ್ರ ನಗರಿ ಇನ್ನೂ ಕನ್ನಡಿಯೊಳಗಿನ ಗಂಟೇ ಆಗಿರುವುದು ವಿಪರ್ಯಾಸ. ಹಿಂದಿ, ಮರಾಠಿ ಚಿತ್ರೋದ್ಯಮಕ್ಕೆ ಬೆನ್ನೆಲುಬಾಗಿ ನಿಂತಿರುವ ಪುಣೆ ಚಿತ್ರ ನಗರಿಯಂತೆ, ಹೈದರಾಬಾದ್ ಹೊರವಲಯದಲ್ಲಿ ತಲೆ ಎತ್ತಿ ದೇಶವಿದೇಶಗಳ ನಿರ್ವಪಕರನ್ನು ತನ್ನತ್ತ ಸೆಳೆಯುತ್ತಿರುವ ರಾಮೋಜಿರಾವ್ ಫಿಲ್ಮ್ ಸಿಟಿಯಂತೆ ಕರ್ನಾಟಕದಲ್ಲೂ ಒಂದು ಚಿತ್ರ ನಗರಿ ಬೇಕೆಂಬುದು ಹಳೆಯ ಬೇಡಿಕೆಗಳಲ್ಲಿ ಒಂದು. ಉದ್ದಕ್ಕೂ ಬಂದ ಸರ್ಕಾರಗಳು ಈ ವಿಚಾರದಲ್ಲಿ ತೋರಿಸುವ ಆಸಕ್ತಿಯನ್ನು ಬಂಡವಾಳ ಮಾಡಿಕೊಳ್ಳುವ ಗುಣದ ಕೊರತೆ ಕನ್ನಡ ಚಿತ್ರೋದ್ಯಮವನ್ನು ಕಾಡುತ್ತಿರುವುದರಿಂದಾಗಿ ಚಿತ್ರ ನಗರಿ ಎನ್ನುವುದು ಮರೀಚಿಕೆಯಾಗಿದೆ.

ಚಿತ್ರೋದ್ಯಮದ ಈ ಆಗ್ರಹಕ್ಕೆ ಮೊದಲಿಗೆ ಮನ್ನಣೆ ನೀಡಿದ್ದು ರಾಮಕೃಷ್ಣ ಹೆಗಡೆ ಸರ್ಕಾರ. ಎಂಭತ್ತರ ದಶಕದಲ್ಲಿ ಅರ್ಥ ಸಚಿವ ಖಾತೆಯನ್ನೂ ಹೊಂದಿದ್ದ ಅವರು ಮಂಡಿಸಿದ ಬಜೆಟ್​ನಲ್ಲಿ ಚಿತ್ರ ನಗರಿ ನಿರ್ವಣದ ಪ್ರಸ್ತಾವವಿತ್ತು. ಹೆಸರುಘಟ್ಟ ಪ್ರದೇಶದಲ್ಲಿ ಚಿತ್ರ ನಗರಿ ನಿರ್ವಣಕ್ಕಾಗಿ ವಿಶಾಲ ಜಾಗ ಮೀಸಲಿಡುವ ಪ್ರಸ್ತಾವವೂ ಅದರಲ್ಲಿತ್ತು. ಕೊಡುವವರಿದ್ದರೂ ತೆಗೆದುಕೊಳ್ಳುವವರಿಲ್ಲ ಎನ್ನುತ್ತಾರಲ್ಲ ಹಾಗಾಯಿತು ಸರ್ಕಾರದ ಕೊಡುಗೆಯ ಕಥೆ. ಹೆಸರಘಟ್ಟ ಬಹಳ ದೂರವಾಯಿತು, ಅಷ್ಟೆಲ್ಲ ದೂರದಲ್ಲಿ ಸ್ಟುಡಿಯೋ ನಿರ್ವಿುಸಿದರೆ ಯಾವ ನಿರ್ವಪಕ, ನಿರ್ದೇಶಕ, ಕಲಾವಿದ ತಂತ್ರಜ್ಞರು ಅಲ್ಲಿಗೆ ಹೋಗುತ್ತಾರೆಂಬ ಅನುಮಾನ ಚಿತ್ರೋದ್ಯಮದೊಳಗೆ ಮೀನಮೇಷಕ್ಕೆ ಕಾರಣವಾಯಿತು. ಸರ್ಕಾರ ಕೇವಲ ಜಾಗ ನೀಡಿದರಷ್ಟೇ ಸಾಲದು, ಅಲ್ಲಿ ಸಕಲ ಸೌಲಭ್ಯ ಸಹಿತದ ಚಿತ್ರ ನಗರಿಯನ್ನು ನಿರ್ವಿುಸಿಕೊಡಬೇಕೆಂಬ ಆಗ್ರಹವನ್ನೂ ಕೆಲವರು ಮಂಡಿಸಿದರು. ಚಿತ್ರೋದ್ಯಮದ ವಿವಿಧ ವಿಭಾಗಗಳಲ್ಲಿರುವವರು ತಾವೇ ಒಂದು ಸೊಸೈಟಿ ರಚಿಸಿಕೊಂಡು ಬಂಡವಾಳ ಹೂಡಿ, ಚಿತ್ರ ನಗರಿಯನ್ನು ನಿರ್ವಿುಸುವ ಯೋಚನೆ ಅವರಲ್ಲಿ ಯಾರೊಬ್ಬರಲ್ಲೂ ಮೂಡಲಿಲ್ಲ. ಕ್ರಮೇಣ ಚಿತ್ರ ನಗರಿಗೆಂದು ಮೀಸಲಿಟ್ಟಿದ್ದ ಜಾಗದಲ್ಲಿ ಆ ಈ ಸಂಸ್ಥೆಗಳಿಗೆ ಭೂಮಿಯನ್ನು ಮಂಜೂರು ಮಾಡುವ ಮೂಲಕ ಸರ್ಕಾರವೂ ಚಿತ್ರ ನಗರಿಯನ್ನು ಮರೆಯಿತು. ಚಿತ್ರೋದ್ಯಮವೂ ಮರೆತಂತೆ ಮಲಗಿತು. ಒಂದು ವೇಳೆ ಹೆಗಡೆ ಸರ್ಕಾರ ಒದಗಿಸಿಕೊಟ್ಟಿದ್ದ ಅವಕಾಶವನ್ನು ಚಿತ್ರೋದ್ಯಮ ಬಳಸಿಕೊಂಡಿದ್ದರೆ ಈ ಹೊತ್ತಿಗೆ ಚಿತ್ರ ನಗರಿ ಒಂದು ಆದರ್ಶ ಸಂಸ್ಥೆಯಾಗಿ ಬೆಳೆಯುವ ಸಾಧ್ಯತೆ ಇತ್ತು. ಹೆಗಡೆ ಸರ್ಕಾರ ತೋರಿಸಿದ ಮಾರ್ಗದಲ್ಲಿ ರಾಮೋಜಿ ರಾವ್ ಸಾಗಿದರು. ಹೈದರಾಬಾದ್​ನ ಹೊರವಲಯದಲ್ಲಿ ಅವರು ಸ್ಥಾಪಿಸಿದ ಚಿತ್ರ ನಗರಿ ಈ ಹೊತ್ತು ನಮಗೆ ಆದರ್ಶವಾಗಿದೆ. ಕನ್ನಡದ ಬಹುತೇಕ ಚಿತ್ರಗಳ ಚಿತ್ರೀಕರಣ ಈಗ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿವೆ. ಹೈದರಾಬಾದ್​ನಿಂದ ಅದು 40 ಕಿಮೀ ದೂರದಲ್ಲಿದೆ ಎಂದು ಯಾವೊಬ್ಬ ಕನ್ನಡ ನಿರ್ವಪಕರೂ ಗೊಣಗಿದ್ದು ದಾಖಲಾಗಿಲ್ಲ.

ನಮ್ಮದು ಬೆಂಗಳೂರಿನ ಗಾಂಧಿನಗರ ಕೇಂದ್ರಿತ ಚಿತ್ರೋದ್ಯಮ. ನಿರ್ವಣ, ಹಂಚಿಕೆ, ಪ್ರದರ್ಶನ ಹೀಗೆ ಚಿತ್ರೋದ್ಯಮದ ಮೂರು ಮುಖ್ಯ ಕವಲು ಬೀಡುಬಿಟ್ಟಿರುವ ಗಾಂಧಿನಗರದ ಆಜುಬಾಜಿನಲ್ಲೇ ಚಿತ್ರ ನಗರಿ ಇರಬೇಕೆಂಬ ಅವಾಸ್ತವಿಕ ವಾದದ ಕಾರಣವಾಗಿ ಎದುರಾದ ಅವಕಾಶವನ್ನು ಚಿತ್ರೋದ್ಯಮ ಕಳೆದುಕೊಳ್ಳುತ್ತ ಬಂದಿದೆ. ಎಂಭತ್ತರ ದಶಕದ ನಂತರದಲ್ಲಿ ಚಿತ್ರ ನಗರಿಗೆಂದು ಮಂಜೂರಾದ ಜಾಗವಿದ್ದ ಹೆಸರಘಟ್ಟ ಇಂದು ರಾಜಧಾನಿ ನಗರದ ಭಾಗವಾಗಿದೆ. ಆದರೇನಂತೆ ಆ ಪ್ರದೇಶಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಚಿತ್ರ ನಗರಿ ತಲೆ ಎತ್ತಲಾಗದಂತಾಗಿದೆ. ಇಪ್ಪತ್ತು ವರ್ಷದ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರದಲ್ಲಿ ಮತ್ತೆ ಚಿತ್ರ ನಗರಿ ಪ್ರಸ್ತಾವಕ್ಕೆ ಜೀವ ಬಂತೆನ್ನುವುದು ನಾವೆಲ್ಲ ಸಂತೋಷಿಸುವ ಬೆಳವಣಿಗೆಯೇ ಆಗಿತ್ತು. ಹೆಗಡೆಯವರಂತೆ ಸಿದ್ದರಾಮಯ್ಯನವರೂ ಬಜೆಟ್​ನಲ್ಲಿ ಚಿತ್ರ ನಗರಿ ನಿರ್ವಣವನ್ನು ಪ್ರಸ್ತಾಪಿಸಿ ವಿಧಾನಸಭೆಯಲ್ಲಿ ತಾವು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ಪ್ರಕಟಿಸಿದರು. ಅದಕ್ಕಾಗಿ ನೂರು ಎಕರೆ ಭೂಮಿಯನ್ನು ಒದಗಿಸುವ ಭರವಸೆಯನ್ನೂ ನೀಡಿದರು. ಎಂದಿನಂತೆ ಚಿತ್ರೋದ್ಯಮ ಸರ್ಕಾರದ ಬೆನ್ನು ಹತ್ತಲಿಲ್ಲ. ಹೆಸರಘಟ್ಟವೇ ಬೆಂಗಳೂರಿನಿಂದ ಬಹಳ ದೂರವಾಯಿತು ಎನ್ನುತ್ತಿದ್ದ ಚಿತ್ರೋದ್ಯಮ, ಮೈಸೂರಿಗಿಂತಲೂ ದೂರದಲ್ಲಿರುವ ವರುಣಾವನ್ನು ಒಪ್ಪಿಕೊಳ್ಳುವುದಾದರೂ ಹೇಗೆ?

ಈಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಚಿತ್ರ ನಗರಿ ಪ್ರಸ್ತಾಪವನ್ನು ಮರೆತಿಲ್ಲ. ರಾಜಕಾರಣಕ್ಕೆ ಬರುವ ಪೂರ್ವದಲ್ಲಿ ಚಿತ್ರ ನಿರ್ವಪಕರೂ ಆಗಿದ್ದ ಈಗಲೂ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಚಿತ್ರ ನಗರಿ ಅಗತ್ಯದ ಬಗ್ಗೆ ಅನ್ಯರು ಮನವರಿಕೆ ಮಾಡಿಕೊಡಬೇಕಾದ ಜರೂರತು ಇಲ್ಲ. ಚಿತ್ರೋದ್ಯಮದ ಬೇಕು ಬೇಡಗಳ ಸ್ಪಷ್ಟ ಅರಿವು ಅವರಿಗಿದೆ. ಆದರೆ ಸಿದ್ದರಾಮಯ್ಯ ತಮ್ಮ ಕ್ಷೇತ್ರ ವರುಣಾಕ್ಕೆ ಚಿತ್ರ ನಗರಿಯನ್ನು ಒಯ್ಯುವ ಸಂಕಲ್ಪ ಮಾಡಿದಂತೆ ಕುಮಾರಸ್ವಾಮಿಯವರೂ ತಾವು ಆಯ್ಕೆಯಾದ ಎರಡು ಕ್ಷೇತ್ರಗಳಲ್ಲಿ ಒಂದಾಗಿರುವ ರಾಮನಗರಕ್ಕೆ ಒಯ್ಯುವ ತೀರ್ಮಾನ ಪ್ರಕಟಿಸಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ರಾಮನಗರದಲ್ಲಿ ಚಿತ್ರ ನಗರಿ ಬಂದರೆ ಸಂತೋಷವೇ. ಆಡಳಿತ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವಣ ಊರಾದ ರಾಮನಗರದಲ್ಲಿ ಹೊರಾಂಗಣ ಚಿತ್ರೀಕರಣಕ್ಕೂ ಸಾಕಷ್ಟು ಅನುಕೂಲವಿದೆ. ‘ಶೋಲೆ’ಯಂಥ ಚಿತ್ರದ ಹೊರಾಂಗಣ ಚಿತ್ರೀಕರಣ ಸಂಪೂರ್ಣವಾಗಿ ನಡೆದ ರಾಮನಗರದಲ್ಲಿ ದೃಶ್ಯ ವೈಭವದ ಸಾಕ್ಷಾತ್ಕಾರಕ್ಕೆ ಅವಕಾಶವಿದೆ.

ಮೂರಕ್ಕೆ ಮುಕ್ತಿ ಎನ್ನುವ ಮಾತಿದೆ. ಮೊದಲೆರಡು ಯತ್ನ ವಿಫಲವಾದ ನಂತರದಲ್ಲಿ ಮೂರನೆಯದು ಯಶಸ್ವಿಯಾಗುತ್ತದೆಂಬ ಅರ್ಥ ಆ ಮಾತಿನಲ್ಲಿ ಅಡಗಿದೆ. ಹೆಸರಘಟ್ಟ, ವರುಣಾ ಮುಗಿದು ಇದೀಗ ರಾಮನಗರದ ಅಂಗಳಕ್ಕೆ ಬಂದಿದೆ. ಆದರೆ ಮುಖ್ಯಮಂತ್ರಿಯ ತೀರ್ಮಾನ ಮಾಜಿ ಮುಖ್ಯಮಂತ್ರಿಗೆ ಪಸಂದ್ ಎನಿಸಿಲ್ಲ. ಸಿದ್ದರಾಮಯ್ಯನವರು ಕುಮಾರಸ್ವಾಮಿಯವರಿಗೆ ಪತ್ರ ಬರೆದು ಸ್ಥಳಾಂತರದ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಕುಮಾರಸ್ವಾಮಿ ಪ್ರತಿಕ್ರಿಯಿಸಿಲ್ಲ. ವರುಣಾ ಸೂಕ್ತ ಸ್ಥಳ ಎಂದು ಸಿದ್ದರಾಮಯ್ಯನವರಿಗೆ ಅನ್ನಿಸಲು ಕಾರಣ ಅದು ಅವರ ವಿಧಾನಸಭಾ ಕ್ಷೇತ್ರವಾಗಿದ್ದುದು. ಕುಮಾರಸ್ವಾಮಿಯವರು ಚನ್ನಪಟ್ಟಣ, ರಾಮನಗರ ಎರಡೂ ಕ್ಷೇತ್ರದಿಂದ ಗೆದ್ದು ರಾಮನಗರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಸ್ಪರ್ಧಿಸಲಿದ್ದಾರೆಂಬ ಸುದ್ದಿ ದಟ್ಟವಾಗಿದೆ. ಅದೇನೇ ಇರಲಿ, ಆ ಕ್ಷೇತ್ರ ತಮ್ಮದು ಎಂಬ ತೀರ್ವನಕ್ಕೆ ಅವರು ಬಂದಿರುವುದರಿಂದಲೇ ಅದೀಗ ಪ್ರಸ್ತಾವಿತ ಚಿತ್ರ ನಗರಿಯ ಊರಾಗಿದೆ.

ಅದೇನೇ ಇರಲಿ, ಚಿತ್ರ ನಗರಿ ವಿಚಾರದಲ್ಲಿ ಚಿತ್ರೋದ್ಯಮದ ಮೂರೂವರೆ ನಾಲ್ಕು ದಶಕಗಳ ನಿರಾಸಕ್ತಿ ಬಳಿಕ ಇದೇ ಮೊದಲ ಬಾರಿಗೆ ರಾಜಕೀಯ ಬೇಕು ಬೇಡ ನುಸುಳಿದೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಒಡಕು, ವೈಮನಸ್ಯಕ್ಕೆ ಕಾರಣವಾಗುವ ಸಂಭವವೂ ಇದೆ. ಅದು ತಾರಕಕ್ಕೆ ಹೋಗದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ ಕಾರ್ಯಪ್ರವೃತ್ತವಾಗಬೇಕಿದೆ. ಚಿತ್ರ ನಗರಿ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಿ ಚಟುವಟಿಕೆಗೆ ನಾಂದಿ ಹಾಡಲು ಅಗತ್ಯವಿರುವ ಎಲ್ಲ ಒತ್ತಡವನ್ನೂ ಉದ್ಯಮ ಹೇರಲು ಇದು ಸಕಾಲ. ಅದರ ಪಾಡಿಗೆ ಅದು ಆಗುತ್ತದೆ, ನಮಗೇಕೆ ಉಸಾಬರಿ ಎಂದು ಕುಳಿತರೆ ಚಿತ್ರ ನಗರಿ ಕನ್ನಡಿಯೊಳಗಿನ ಗಂಟಾಗಿಯೇ ಉಳಿದುಬಿಡುತ್ತದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭಾರತದ ಬಹುತೇಕ ಎಲ್ಲ ಭಾಷಾ ಚಿತ್ರಗಳ ನಿರ್ಮಾಣ ನಡೆಯುತ್ತಿದೆ. ಅನೇಕ ವಿದೇಶಿ ನಿರ್ವಪಕ ನಿರ್ದೇಶಕರಿಗೂ ಅದು ಅನಿವಾರ್ಯ ಆಗಿದೆ. ಅದೇ ಮಾದರಿಯಲ್ಲಿ ನಮ್ಮಲ್ಲೂ ಅಭಿವೃದ್ಧಿಯಾಗುವ ಅವಕಾಶ ಮುಕ್ತವಾಗಿದೆ. ಮುಂದೊಂದು ದಿವಸ ನಮ್ಮ ಚಿತ್ರ ನಗರಿ ನಮ್ಮ ಅಸ್ಮಿತೆಯ ಭಾಗವೂ ಆಗಬಲ್ಲದು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top