Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ರಾಜಕಾರಣಿಗಳ ನಂಬಿಕೆ ಹಾಗೂ ಪರಿಣಾಮದ ಸುತ್ತ…

Saturday, 16.06.2018, 3:05 AM       No Comments

ಚ್.ಡಿ.ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದ ಸಂದರ್ಭ. ಇಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾದರು. ಆದರೆ ವಾಸ್ತು ಪ್ರಕಾರ ಬಹಳ ಚೆನ್ನಾಗಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಗೌಡರ ಹಿರಿಯ ಮಗ ಎಚ್.ಡಿ.ರೇವಣ್ಣ ಉಳಿಸಿಕೊಂಡರು. ಅದು ಸಿಎಂ ನಿಯೋಜಿತ ನಿವಾಸ ಎಂದರೂ ರೇವಣ್ಣ ಜಗ್ಗಲಿಲ್ಲ. ಬೇರೆ ದಾರಿ ಕಾಣದ ಪಟೇಲರು ಮತ್ತೊಂದು ನಿವಾಸದಲ್ಲಿ ವಾಸ್ತವ್ಯ ಹೂಡಬೇಕಾಯಿತು. ಹೋಮ, ಹವನ, ವಾಸ್ತು, ಶಕುನ, ಹಸ್ತ ಸಾಮುದ್ರಿಕಾ, ಜ್ಯೋತಿಷ, ಭವಿಷ್ಯ ಮುಂತಾದವುಗಳಲ್ಲಿ ನಂಬಿಕೆ ಇಲ್ಲದವರಾಗಿದ್ದರು ಪಟೇಲ್. ನಂಬುವವರ ವಿಚಾರದಲ್ಲಿ ಆಗೊಂದು ಈಗೊಂದು ಜೋಕ್ ಸಿಡಿಸಿ ನಗುವಂತೆ ಮಾಡುತ್ತಿದ್ದರೇ ಹೊರತೂ ವಿರೋಧಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಇನ್ನೊಬ್ಬರ ನಂಬಿಕೆಯನ್ನು ಗೌರವಿಸುವ ಜನತಂತ್ರವಾದಿ ಅವರಾಗಿದ್ದರು. ಹೀಗಿದ್ದ ಪಟೇಲರ ಬದುಕಿನಲ್ಲಿ ಎಂಥ ವಿರೋಧಾಭಾಸ ಘಟಿಸಿತೆಂದರೆ ಅವರೇ ಜೀರ್ಣಿಸಿಕೊಳ್ಳಲು ಕಷ್ಟವಾದ ಘಟನೆಯೊಂದು ವಾಸ್ತು ಹೆಸರಿನಲ್ಲಿ ನಡೆದು ಹೋಯಿತು.

ರೇವಣ್ಣ ಮನೆ ಬಿಡಲಿಲ್ಲವೆಂದು ಬೇರೆ ನಿವಾಸಕ್ಕೆ ಹೋದ ಪಟೇಲರ ಮನಸ್ಸನ್ನು ಮನೆ ಮುಂದಿನ ಆವರಣದಲ್ಲಿ ಸೊಗಸಾಗಿ ಬೆಳೆದು ನಿಂತಿದ್ದ ಭಾರಿ ಮರವೊಂದನ್ನು ಕಡಿಸಲು ಒಪ್ಪಿಸಲಾಯಿತು. ವಾಸ್ತು ಪ್ರಕಾರ ಆ ಮರ ಅಲ್ಲಿದ್ದರೆ ಒಳಿತಾಗದು ಎನ್ನುವುದು ಮುಖ್ಯಮಂತ್ರಿಯ ಮನವೊಲಿಕೆಗೆ ಬಳಸಿದ ನೆಪವಾಗಿತ್ತು. ಆದರೆ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಅವರೂ ಸೋತರು, ಆಡಳಿತಾರೂಢ ಜನತಾ ದಳವೂ ಸೋತಿತು. ವಾಸ್ತು ಪ್ರಕಾರ ಚೆನ್ನಾಗೇ ಇದ್ದ ಮನೆಯಲ್ಲಿದ್ದುಕೊಂಡೇ ಅವರು ಚುನಾವಣೆ ಎದುರಿಸಿದರು. ಆದರೆ ವಾಸ್ತು ಮಾತ್ರ ಅವರ ನೆರವಿಗೆ ಬರಲಿಲ್ಲ, ಮಾತ್ರವಲ್ಲ ಸಿಎಂ ಸ್ಥಾನದಲ್ಲಿ ಅವರು ನಾಲ್ಕು ವರ್ಷವೂ ಬಾಳಲಿಲ್ಲ. ಅತ್ತ ವಾಸ್ತು ಪ್ರಕಾರ ಬಹಳ ಚೆನ್ನಾಗಿದ್ದ ಮನೆಯಲ್ಲಿ ಉಳಿದುಕೊಂಡ ರೇವಣ್ಣನವರೂ ಆ ಚುನಾವಣೆ ನಂತರದಲ್ಲಿ ಅಧಿಕಾರ ನೋಡಲಿಲ್ಲ.

ವಾಸ್ತು ವಿಚಾರ ತೆಗೆದುಕೊಂಡರೆ ಕರ್ನಾಟಕದಲ್ಲಿ ಮೊದಲಿಗೆ ದೇವೇಗೌಡರೇ ನೆನಪಾಗುತ್ತಾರೆ. ಅವರು ಪೂಜಿಸದ ದೇವರಿಲ್ಲ, ಮಾಡದ ಹೋಮ ಹವನಗಳಿಲ್ಲ. ತಮ್ಮ ಆಪ್ತ ಜ್ಯೋತಿಷಿಯೊಂದಿಗೆ ಸಮಾಲೋಚಿಸಿದ ಬಳಿಕವೇ ಗೌಡರ ತೀರ್ಮಾನ ಹೊರಬರುತ್ತದೆ ಎನ್ನುವುದು ಎಲ್ಲರೂ ಬಲ್ಲ ಸಂಗತಿ. ಹಾಗೆ ನೋಡಿದರೆ ಗೌಡರದು ನಂಬಿಕೆ ವಿಚಾರದಲ್ಲಿ ಒಳಗೊಂದು ಹೊರಗೊಂದು ಇಲ್ಲ. ತಾವು ನಂಬಿರುವುದನ್ನು ಇತರರ ಮೇಲೆ ಅವರು ಹೇರುವುದೂ ಇಲ್ಲ. ಈ ವಿಚಾರದಲ್ಲಿ ರೇವಣ್ಣ, ತಂದೆಗೆ ತಕ್ಕ ಮಗ. ವಾಸ್ತುವನ್ನು ಪ್ರತಿಪಾದಿಸುವವರ ರೀತ್ಯ, ವಾಸ್ತುಶಾಸ್ತ್ರಜ್ಞರ ಪ್ರಕಾರ ವಾಸ್ತು ಶಾಸ್ತ್ರ ಪಾಲಿಸಿದವರಿಗೆ ಎಲ್ಲವೂ ಒಳಿತಾಗುತ್ತದೆ. ಆದರೆ ವಾಸ್ತುವನ್ನು ನೂರಕ್ಕೆ ನೂರರಷ್ಟು ನಂಬಿರುವ ಗೌಡರು ಮುಖ್ಯಮಂತ್ರಿಯಾಗೂ ಪೂರ್ಣಾವಧಿ ಪೂರೈಸಲಿಲ್ಲ, ಪ್ರಧಾನಿಯಾಗೂ ಪೂರ್ಣಾವಧಿ ಅಧಿಕಾರದಲ್ಲಿರಲಿಲ್ಲ. ಗೌಡರೇ ಹೇಳಿಕೊಂಡಂತೆ ದೇವರ ಕೃಪೆಯಿಂದ ಒಲಿದ ಪ್ರಧಾನಿ ಸ್ಥಾನ (ಸೀತಾರಾಮ) ಕೇಸರಿ ಕಾರಣವಾಗಿ ಕೈತಪ್ಪಿ ಹೋಯಿತು. ಹಾಗೆಂದ ಮಾತ್ರಕ್ಕೆ ಗೌಡರ ನಂಬಿಕೆ ಅವತ್ತಿಗೂ ಸೈ ಇವತ್ತಿಗೂ ಸೈ, ಅಲ್ಲಾಡಿಲ್ಲ.

ಗೌಡರು ಮತ್ತು ರೇವಣ್ಣನವರಿಗೆ ಹೋಲಿಸಿದರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಷ್ಟೆಲ್ಲ ಅಪರಂಪಾರ ಮಾಡಿದ್ದು ವರದಿಯಾಗಿಲ್ಲ. ಆದರೆ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಅವರು ರಾಜ್ಯದ ಉದ್ದಗಲಕ್ಕೆ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸಿ ವಿವಿಧ ದೇವಾಲಯ, ಮಠಗಳಿಗೆ ಪತ್ನಿಸಮೇತ ಭೇಟಿ ನೀಡಿದರು. ಹೆಲಿಕಾಪ್ಟರ್ ವೆಚ್ಚವನ್ನು ಸರ್ಕಾರ ಭರಿಸಿತೋ, ಕುಮಾರಸ್ವಾಮಿಯವರೇ ಭರಿಸಿದರೋ ಗೊತ್ತಿಲ್ಲ. ಮುಖ್ಯಮಂತ್ರಿ ಆದ ನಂತರದಲ್ಲಿ ಅವರು ಕಚೇರಿಗೆ ಎಂದು ಯಾವ ಮುಹೂರ್ತದಲ್ಲಿ ಕಾಲಿಡಬೇಕು ಎನ್ನುವುದನ್ನು ನಿರ್ಧರಿಸಿದ್ದು ರೇವಣ್ಣ. ತಮಗೆ ಇಂಥದೇ ದಿಕ್ಕಿಗೆ ಮುಖ ಮಾಡಿರುವ, ವಾಸ್ತು ಪ್ರಕಾರ ಸರಿಯಾಗಿರುವ ಕೊಠಡಿಯೇ ಬೇಕೆಂದು ಪಟ್ಟು ಹಿಡಿದು ಸಾಧಿಸಿಕೊಂಡವರು ಕೂಡ ರೇವಣ್ಣನವರೇ. ಅಂದಹಾಗೆ ಸಚಿವರ ಪ್ರಮಾಣವಚನದ ಸಮಯವನ್ನು ನಿಗದಿ ಮಾಡಿದ್ದು ಕೂಡ ಅವರೇ. ರೇವಣ್ಣನವರಾದರೆ ರಾಜಕೀಯದಲ್ಲಿರುವವರು. ಅವರಿಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಸಾಹಿತಿಗಳು…? ಒಂದೆರಡು ದಶಕದ ಹಿಂದೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ರಾಹುಕಾಲದ ನೆಪದಲ್ಲಿ ಮುಂದಕ್ಕೆ ಹಾಕಿದ್ದಕ್ಕೆ ನಾಡು ಸಾಕ್ಷಿಯಾಯಿತು.

ಓಟು ಹಾಕುವಾಗಲೂ ರೇವಣ್ಣನವರು ಮತಯಂತ್ರದ ದಿಕ್ಕನ್ನು ವಾಸ್ತು ಪ್ರಕಾರ ತಿರುಗಿಸಿ ಹೊಂದಿಸಿಕೊಂಡಿದ್ದು 2013ರ ಚುನಾವಣೆಯಲ್ಲೂ ಸುದ್ದಿ ಆಗಿತ್ತು. ಈ ಸಲವೂ ಅದರ ಪುನರಾವರ್ತನೆಯಾಯಿತು. ಗೌಡರ ಕುಟುಂಬದ ರೀತಿ-ರಿವಾಜು ಇದು. ದೈವನಿಷ್ಠೆ, ಆಗಮಿಕ ಮುಂತಾದ ಶಾಸ್ತ್ರ, ಹೋಮ-ಹವನ, ಜ್ಯೋತಿಷ, ಭವಿಷ್ಯವೇ ಮುಂತಾದವುಗಳಲ್ಲಿ ಗೌಡರಿಗಿರುವ ಅಚಲ ನಂಬಿಕೆಗಳನ್ನು ‘ದೇವರೇ ಇಲ್ಲ’ ಎನ್ನುವ ಉಭಯ ಕಮ್ಯೂನಿಸ್ಟ್ ಪಕ್ಷಗಳೂ ಗೌರವಿಸಿ, ಮಾನ್ಯ ಮಾಡಿವೆ ಎಂದಾದ ಮೇಲೆ ಅದಕ್ಕೆ ಅಪೀಲೇ ಇಲ್ಲ. ಆದರೆ ಈಗೀಗ ಇಂಥ ನಂಬಿಕೆಗಳಿಗೆ ಒಲಿಯುತ್ತಿರುವ ತಥಾಕಥಿತ ಬುದ್ಧಿಜೀವಿ ರಾಜಕಾರಣಿಗಳ ಕಥೆ ಏನು…?

ದೇವರು ದಿಂಡರು ಎನ್ನುವುದೇನೂ ಇಲ್ಲ ಎನ್ನುತ್ತಿದ್ದ, ಮಠ-ಮಂದಿರಗಳಿಗೆ ಹೋಗಲೊಲ್ಲೆ ಎನ್ನುತ್ತಿದ್ದ ಸಿದ್ದರಾಮಯ್ಯ ಇದೀಗ ಗೌಡರ ಹಾದಿಗೆ ಬಂದಿದ್ದಾರೆನ್ನಲು ಸಾಂರ್ದಭಿಕ ಸಾಕ್ಷ್ಯಗಳಿವೆ. ಸಿದ್ದರಾಮಯ್ಯ ಮನಃಪರಿವರ್ತನೆಯ ನಾಂದಿ 2013ರ ಚುನಾವಣೆಗೆ ಮೊದಲೇ ಆಯಿತು. ಆಗ ದೆಹಲಿ ಸಮೀಪದ ದರ್ಗಾವೊಂದಕ್ಕೆ ಸಿದ್ದರಾಮಯ್ಯನವರನ್ನು ಸಿ.ಎಂ. ಇಬ್ರಾಹಿಂ ಕರೆದೊಯ್ದಿದ್ದರು. ಅಲ್ಲಿ ಚಾದ್ದರ್ ಹೊದಿಸಿ ಹರಕೆ ಹೊತ್ತರೆ ಬಯಸಿದ್ದು ಈಡೇರುತ್ತದೆ ಎನ್ನುವುದು ನಂಬುವವರ ನಂಬಿಕೆ. ಸಿದ್ದರಾಮಯ್ಯ ನಂಬಿ ಹೋದರೋ, ಇಬ್ರಾಹಿಂರ ಒತ್ತಡಕ್ಕೆ ಮಣಿದು ಹೋದರೋ ಗೊತ್ತಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರ ಬಹುದೊಡ್ಡ ಕನಸೊಂದು ನನಸಾಯಿತು. ಕರ್ನಾಟಕ ಭೂಪಟದಲ್ಲೂ ತಾವು ನೋಡಿರದ ದೇವಾಲಯ, ಗುಡಿ, ಗುಂಡಾರ, ಮಠ, ದರ್ಗಾ, ಇಗರ್ಜಿಗಳಿಗೆ 2018ರ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಭೇಟಿ ನೀಡಿ ತೀರ್ಥ, ಪ್ರಸಾದ ಸ್ವೀಕರಿಸಿದರು. ಹರಸಿಕೊಂಡರೋ ಬಿಟ್ಟರೋ ಗೊತ್ತಿಲ್ಲ, ಅವರ ಪಕ್ಷ ಬಹುಮತ ಪಡೆಯಲಿಲ್ಲ, ಪುನಃ ಸಿಎಂ ಆಗುವ ಆಸೆಯೂ ಕೈಗೂಡಲಿಲ್ಲ. ಆದರೆ ಅವರೊಂದಿಗೆ ದೇವಾಲಯ, ದರ್ಗಾ ಸುತ್ತದೆ ದೂರವೇ ಉಳಿದ ಇಬ್ರಾಹಿಂಗೆ ವಿಧಾನ ಪರಿಷತ್ ಸದಸ್ಯತ್ವ ಪುನಃ ಒಲಿಯಿತು.

ರಾಹುಲ್ ಗಾಂಧಿಯವರಿಗೆ ತಾವು ಬ್ರಾಹ್ಮಣ ಎನ್ನುವುದು ಮತ್ತು ಜನಿವಾರ ಹಾಕಿಕೊಂಡರೆ ಮಾತ್ರವೇ ಬ್ರಾಹ್ಮಣನಾಗಿ ಕಾಣಿಸುತ್ತೇನೆನ್ನುವ ಅಂಶ ಹೊಳೆಯುವುದಕ್ಕೆ ಕೆಲವು ತಿಂಗಳ ಹಿಂದೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯೇ ಬರಬೇಕಾಯಿತು. ದೇವರು, ದೇವಸ್ಥಾನ, ಆರತಿ, ತೀರ್ಥ-ಪ್ರಸಾದ ಸ್ವೀಕಾರವೂ ಓಟು ಗಳಿಸುವ ತಂತ್ರದ ಭಾಗ ಎನ್ನುವುದು ಅರಿವಿಗೆ ಬಂತು. ದರ್ಶನ ಮತ್ತು ಪ್ರದರ್ಶನ ಬೇರೆ ಬೇರೆ. ಜನಿವಾರವನ್ನು ಹೊರಗೆ ಕಾಣಿಸದಂತೆ ಒಳಗೇ ಧರಿಸುವುದು ದರ್ಶನವೇನೂ ಅಲ್ಲ. ಆದರೆ ಹೊರಕ್ಕೆ ಎಲ್ಲರಿಗೂ ಕಾಣಿಸುವಂತೆ ಧರಿಸುವುದು ಮಾತ್ರ ಖಂಡಿತವಾಗಿಯೂ ಪ್ರದರ್ಶನ. ರಾಹುಲ್​ರಿಗೆ ಪ್ರದರ್ಶನ ಬೇಕಾಗಿತ್ತು, ಅದರ ಹಿಂದೆ ಮತಗಳಿಕೆಯ ಆಸೆಯೂ ಇತ್ತು. ತಾವು ಧರಿಸಿದ ವಸ್ತ್ರದ ಮೇಲೆ ಎದ್ದು ಕಾಣುವಂತೆ ಜನಿವಾರ ಧರಿಸುವುದಕ್ಕೆ ರಾಹುಲ್​ಗೆ ಪ್ರೇರಣೆಯಾದವರು ತಂದೆ ರಾಜೀವ ಗಾಂಧಿ. ಇಂದಿರಾ ಗಾಂಧಿ ಹತ್ಯೆ ನಂತರದಲ್ಲಿ ತಾಯಿಯ ಶವಸಂಸ್ಕಾರ ಮಾಡುವಾಗ ರಾಜೀವ್, ಬುಲೆಟ್ ಪೂ›ಫ್ ಜಾಕೀಟಿನ ಮೇಲೆ ಜನಿವಾರ ಧರಿಸಿದ್ದರು!

ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಧಾನಸೌಧದ ತಮ್ಮ ಕೊಠಡಿ ಪ್ರವೇಶಕ್ಕೆ ಮೊದಲು ಅಧಿಕಾರಾವಧಿ ಉದ್ದಕ್ಕೂ ಯಾವುದೇ ಅನಿಷ್ಟವೂ ಎದುರಾಗದಂತೆ ತಡೆಯುವ ಅಷ್ಟ ದಿಗ್ಬಂಧನದ ಪೂಜಾ ಕೈಂಕರ್ಯವನ್ನೂ ಮಾಡಿಸಿಕೊಂಡಿದ್ದು ಅವರಿಗೆ ಬೇಡವಾಗಿದ್ದರೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೇ ಆಯಿತು. ಪೂಜೆ ನಡೆದ ಸಮಯದಲ್ಲಿ ವಿಧಾನಸೌಧಕ್ಕೆ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆಯೂ ಹೋಗಿತ್ತು. ಇದರಲ್ಲಿ ಮುಚ್ಚುಮರೆ ಯಾಕೋ ಅರ್ಥವಾಗುತ್ತಿಲ್ಲ.

ಸಿಪಿಎಂನ ಮೇರುನಾಯಕ ಇ.ಎಂ.ಎಸ್. ನಂಬೂದರಿಪಾದರು ಪತ್ನಿಯನ್ನು ದೇವರ ದರ್ಶನಕ್ಕೆ ಗುರುವಾಯೂರು ದೇವಾಲಯಕ್ಕೆ ಕರೆದೊಯ್ದಿದ್ದು ಭಾರಿ ಸುದ್ದಿಯೂ ಅವರ ರಾಜಕೀಯ ವಿರೋಧಿಗಳ ಟೀಕೆಗೆ ಬಹುದೊಡ್ಡ ಅಸ್ತ್ರವೂ ಆಗಿತ್ತು. ‘ಪತ್ನಿಯ ಭಾವನೆಯನ್ನು ಗೌರವಿಸುವುದು ಪತಿಯಾದವನ ಕರ್ತವ್ಯ, ನಾನು ನಂಬಿರುವ ಸಿದ್ಧಾಂತವನ್ನು ದಾಂಪತ್ಯದಲ್ಲಿ ಹೇರಲಾಗದು’ ಎಂದು ಆಗ ಅವರು ಸಮರ್ಥಿಸಿಕೊಂಡಿದ್ದರು. ಒಳಗೊಂದು ಹೊರಗೊಂದು ಇಲ್ಲವಾದರೆ ಇವೆಲ್ಲವೂ ಸಲೀಸಾಗುತ್ತದೆ. ದೇವರಾಜ ಅರಸು ಸಂಪುಟದಲ್ಲಿ ಬಿ.ಬಸವಲಿಂಗಪ್ಪ ಸಚಿವರಾಗಿದ್ದಾಗ ಅವರ ಅಧಿಕೃತ ನಿವಾಸಕ್ಕೆ ಹೋಗುವ ಪ್ರಮೇಯ ಬಂತು. ಆ ಮನೆಯ ಹೆಬ್ಬಾಗಿಲ ಮೇಲೆ ತಿರುಪತಿ ವೆಂಕಟರಮಣನ ದೊಡ್ಡ ಫೋಟೋ ಇತ್ತು; ಅದಕ್ಕೆ ಅಂದೇ ಹಾಕಿದ ಹಾರವೂ ಕಾಣಿಸುತ್ತಿತ್ತು. ಸಹಜವಾಗಿಯೇ ನನ್ನ ಮತ್ತು ಜೊತೆಗಿದ್ದ ಗೆಳೆಯನ ಕಣ್ಣು ಅದರ ಮೇಲೆ ಹೋಯಿತು. ಅದನ್ನು ಅರ್ಥ ಮಾಡಿಕೊಂಡವರಂತೆ ಸಚಿವರು, ‘ಇದು ಈ ಮೊದಲು ಇದ್ದ ಸಚಿವರು ಹಾಕಿದ್ದು. ತೆಗೆಯುವುದು ಬೇಡ, ಅಲ್ಲೇ ಇರಲಿ ಎಂದು ಪತ್ನಿ ಹೇಳಿದ್ದರಿಂದ ಹಾಗೇ ಉಳಿದುಕೊಂಡಿದೆ’ ಎಂದರು. ಅವರ ಮುಖದಲ್ಲಿ ಯಾವುದೋ ಮಾಡಬಾರದ್ದನ್ನು ಮಾಡಿಬಿಟ್ಟಿದ್ದೇನೆಂಬ ಭಾವ ಇರಲಿಲ್ಲ. ಇಎಂಎಸ್ ತಮ್ಮ ಪತ್ನಿಯನ್ನು ಗೌರವಿಸಿದ ರೀತಿಯೇ ಇಲ್ಲೂ ಕಾಣಿಸಿತು.

ಕರ್ನಾಟಕದ ರಾಜಕಾರಣದಲ್ಲಿ ಜ್ಯೋತಿಷಿಗಳು, ಭವಿಷ್ಯ ನುಡಿಯುವವರ ಸಂಖ್ಯೆ ಹೆಚ್ಚಾಗಿದ್ದು ದೇವರಾಜ ಅರಸು ಕಾಲದಲ್ಲಿ. ಅವರಿಗಿಂತ ಮುಂಚೆ ಇದ್ದ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ ಮಂಜಪ್ಪ, ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿಯವರಿಗೆ ಇದರ ಹಾವಳಿ ತಾಕಿರಲಿಲ್ಲ. ಅರಸು ನಂತರ ಗುಂಡೂರಾವ್, ಹೆಗಡೆ, ಬೊಮ್ಮಾಯಿ ಅವರಿಗೂ ಕಾಡಿರಲಿಲ್ಲ. ಆದರೆ ಆ ನಂತರದಲ್ಲಿ ಶುರುವಾದ ಹಾವಳಿ ನಿಂತಿಲ್ಲ, ನಿಲ್ಲುವ ಸೂಚನೆಯೂ ಇಲ್ಲ. ಅಂದಹಾಗೆ ಅರಸು ಒಬ್ಬ ಜ್ಯೋತಿಷಿಯನ್ನು ಬಹುವಾಗಿ ಅವಲಂಬಿಸಿದ್ದರು. ಪ್ರತಿ ಹಂತದಲ್ಲೂ ಆ ಜ್ಯೋತಿಷಿಯೊಂದಿಗೆ ಸಮಾಲೋಚಿಸಿಯೇ ಮುಂದಿನ ಹೆಜ್ಜೆ ಇಡುತ್ತಿದ್ದರು. ಇಂದಿರಾ ಗಾಂಧಿಯೊಂದಿಗೆ ಸಂಬಂಧ ಕಡಿದುಕೊಂಡು ಬೇರೆ ಪಕ್ಷ ಸ್ಥಾಪಿಸಲು ಹೊರಟಿದ್ದ ಅರಸು, ಇದೇ ಜ್ಯೋತಿಷಿಯನ್ನು ಕೇಳಿ ಮುಂದುವರಿದಿದ್ದರು. ಪಕ್ಷ ಮೂರಾಬಟ್ಟೆಯಾಯಿತು. ರಾಜಕೀಯವಾಗಿ ಸೋತಂತೆ ಕಂಡುಬಂದ ಅರಸುಗೆ ಅವರ ಚಿಂತೆಯೇ ಮುಳುವಾಯಿತು. ಅಕಾಲದಲ್ಲಿ ಅವರು ಸಾವನ್ನಪ್ಪಿದರು, ‘ಈ ಸಾವಿನ ಭವಿಷ್ಯ ನುಡಿಯಲೂ ಆ ಜ್ಯೋತಿಷಿ ವಿಫಲರಾದರು’ ಎಂದು ಜೆ.ಎಚ್.ಪಟೇಲರು ಹೇಳಿದ್ದು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top