Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಮ್ಮಿಶ್ರ ಸರ್ಕಾರದ ಕೊನೆಯಿಲ್ಲದ ಸಂಕಷ್ಟಗಳು…

Saturday, 02.06.2018, 3:03 AM       No Comments

| ಎಂ. ಕೆ. ಭಾಸ್ಕರ ರಾವ್​

ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಹತ್ತು ದಿನಗಳಲ್ಲಿ ಅವರ ಸಂಪುಟ ರಚನೆಯ ಕಸರತ್ತು ಅರ್ಧದಷ್ಟು ಮುಗಿದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವ ಖಾತೆ ಯಾವ ಪಕ್ಷಕ್ಕೆ ಎಂಬ ಜಿಜ್ಞಾಸೆ ನಡೆದಿದ್ದು ಶುಕ್ರವಾರ ಸಂಜೆ ಹೊತ್ತಿಗೆ ಅದು ಇತ್ಯರ್ಥವಾದಂತಿದೆ. ಇನ್ನು, ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹಣಕಾಸು ಮತ್ತು ಇಂಧನ ಖಾತೆಗಳೆರಡನ್ನೂ ತೆನೆ ಹೊತ್ತ ಮಹಿಳೆ ಕೈಗೆ ಕೊಡಲು ಕಾಂಗ್ರೆಸ್ ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದೆ. ಜತೆಗೆ, ಕುಮಾರಸ್ವಾಮಿಯವರೇ ಮುಂದಿನ ಐದೂ ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆಂದು ಪ್ರಕಟಿಸಲಾಗಿದೆ. ಈ ಎರಡು ಪ್ರಮುಖ ಖಾತೆಗಳನ್ನು ಕಳೆದುಕೊಂಡ ಬೆನ್ನಲ್ಲೇ ಐದೂ ವರ್ಷ ಕಾಲ ಹಿಂದಿನ ಸೀಟಿನಲ್ಲಿ ಕೂರಬೇಕಾಗಿರುವ ಪರಿಸ್ಥಿತಿ ಕಾಂಗ್ರೆಸ್​ನೊಳಗೆ ಸಹಜ ಕುದಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಹೊರತಾಗಿ 33 ಸಚಿವರಿಗೆ ಅವಕಾಶವಿದೆ. ಕಾಂಗ್ರೆಸ್​ನ ಒಂದು ಸೀಟಿನಲ್ಲಿ ಡಾ.ಜಿ.ಪರಮೇಶ್ವರ ಉಪ ಮುಖ್ಯಮಂತ್ರಿಯಾಗಿದ್ದಾರೆ. ಉಳಿದ 33 ಸ್ಥಾನಗಳಲ್ಲಿ ಯಾರಿಗೆ ಎಷ್ಟು ಎನ್ನುವುದೂ ಒಪ್ಪಂದದಲ್ಲಿದೆ. ಯಾವ ಪಕ್ಷಕ್ಕೆ ಯಾವ ಯಾವ ಖಾತೆ ಎನ್ನುವುದೂ ಹಿಸ್ಸೆ ಆಗಿರುವುದರಿಂದ ಮುಂದೆ ಗೊತ್ತಾಗಬೇಕಿರುವುದು ಯಾವ ಖಾತೆಯಲ್ಲಿ ಯಾರು ಮಿನುಗಲಿದ್ದಾರೆನ್ನುವುದು. ಉಭಯ ಪಕ್ಷಗಳೂ ಒಂದೋ ಎರಡೋ ಸಚಿವ ಸ್ಥಾನವನ್ನು ಭರ್ತಿ ಮಾಡದೆ ಉಳಿಸಿಕೊಳ್ಳುವುದು ಖಚಿತ. ಮುಂದೆ ಪಕ್ಷದಲ್ಲಿ ಭಿನ್ನಮತ ಶಮನವಾಗದಷ್ಟು ಭುಗಿಲೆದ್ದರೆ ಸಚಿವ ಸ್ಥಾನದ ಆಮಿಷವೊಡ್ಡಿ ಬೆಂಕಿಯನ್ನು ಆರಿಸುವುದು ಎಲ್ಲ ಕಾಲದಲ್ಲೂ ಇರುವ ರಾಜಕಾರಣ.

ಹಣಕಾಸು ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಕುಮಾರಸ್ವಾಮಿ, ಇಂಧನ ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಎಚ್.ಡಿ. ರೇವಣ್ಣ ಯಶಸ್ವಿಯಾಗಿದ್ದಾರೆ. ಆ ಖಾತೆಯ ಮೇಲೆ ಮಾತ್ರವೇ ಕಣ್ಣಿಟ್ಟಿರುವ ರೇವಣ್ಣ ಮತ್ತು ಕಾಂಗ್ರೆಸ್​ನ ಡಿ.ಕೆ. ಶಿವಕುಮಾರ್ ವ್ಯಕ್ತಿಗತ ನೆಲೆಯಲ್ಲಿ ನಡೆಸಿದ ಹಣಾಹಣಿ ತೆರೆ ಹಿಂದಿನ ರೋಚಕ ಕಥೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಪರಮೇಶ್ವರ ಸಂಪುಟದೊಳಗೆ ಆರಾಮದಾಯಕ ಹುದ್ದೆಯನ್ನು ಪಡೆದು ನಿರುಮ್ಮಳ ಭಾವದಲ್ಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ಆ ‘ಅಚ್ಛೇ ದಿನ’ಗಾಗಿ ಕಾಯುತ್ತಿದ್ದಾರೆ. ಆದರೆ ಈ ಮಾತನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಚಾರದಲ್ಲಿ ಹೇಳಲಾಗದು. ಸಮಾಧಾನದಲ್ಲಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದ್ದಾರಾದರೂ ಅವರ ಮನಸ್ಸನ್ನು ಓದಲು ಸಾಧ್ಯವಿರುವವರಿಗೆ ಅವರ ವೇಗ ಆವೇಗ ಅರ್ಥವಾಗುತ್ತದೆ. ಡಿಕೆಶಿ ಸಿಟ್ಟುಗೊಂಡರೆ ಅಂಥ ಅಪಾಯವಿಲ್ಲ, ಆದರೆ ಸುಮ್ಮನಿದ್ದರೆ ದೊಡ್ಡ ಅಪಾಯ ಕಾದಿದೆ ಎಂದೇ ಅರ್ಥವೆಂದು ಅವರೊಂದಿಗೆ ದಶಕಗಳ ಒಡನಾಟ ಹೊಂದಿರುವವರು ಹೇಳುತ್ತಾರೆ.

ಸಮನ್ವಯ ಸಮಿತಿಯನ್ನು ರಚಿಸಲಾಗಿದೆಯಾದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಕಾಮನ್ ಮಿನಿಮಂ ಪೊ›ಗ್ರಾಂ) ಬಗೆಗೆ ಒಮ್ಮತ ಮೂಡಿದಂತಿಲ್ಲ. ಎರಡೂ ಪಕ್ಷಗಳ ಪ್ರಣಾಳಿಕೆಯ ಮುಖ್ಯಾಂಶಗಳನ್ನು ಮುಂದಿಟ್ಟುಕೊಂಡೇ ಈ ಕಾರ್ಯಕ್ರಮ ರೂಪು ತಳೆಯಬೇಕಾಗಿದೆ.

ವಿಧಾನಸಭೆಯಲ್ಲಿ ಬಹುಮತದ ವಿಶ್ವಾಸವನ್ನು ಸಾಬೀತುಪಡಿಸಿದ ಬಳಿಕವೂ ಸಂಪುಟ ರಚನೆಯ ಕಸರತ್ತು ಇಷ್ಟೆಲ್ಲ ವಿಳಂಬವಾಗಿರುವುದು ಅಧಿಕಾರ ಕೇಂದ್ರಿತ ರಾಜಕೀಯ (ಪವರ್ ಪಾಲಿಟಿಕ್ಸ್) ಹೇಗೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಕೆಟ್ಟ ಮಾದರಿಯಾಗಿದೆ. 78 ಸದಸ್ಯ ಬಲದ ಕಾಂಗ್ರೆಸ್ ಮುಂದಿಟ್ಟ ಬೇಷರತ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ತೀರ್ವನವಾದ ನಂತರದಲ್ಲಿ 38 ಶಾಸಕ ಬಲದ ಜೆಡಿಎಸ್ ಪಾಲಿಗೆ ಉಳಿದ ಅಡೆತಡೆ ಬರಬಾರದಾಗಿತ್ತು. ಆದರೆ ಸರ್ಕಾರ ಇಷ್ಟು ದಿವಸ ಚಕ್ರವಿಲ್ಲದ ಬಂಡಿಯಂತಾಗಿದ್ದು ತಥಾಕಥಿತ ಬೇಷರತ್ ಬೆಂಬಲ ಒಳಗೊಂಡಿರುವ ಹತ್ತಾರು ಷರತ್ತುಗಳ ಒಳಕಥೆಯನ್ನು ಹೇಳುತ್ತದೆ. ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಸೇರಿದಂತೆ ಮುಖ್ಯಮಂತ್ರಿಯಾದವರೊಬ್ಬರೇ ಪ್ರಮಾಣವಚನ ಸ್ವೀಕರಿಸಿ ನಂತರದ ಎರಡು-ಮೂರು ದಿವಸದಲ್ಲಿ ಕೆಲವಾದರೂ ಸಚಿವರನ್ನು ಸೇರಿಸಿಕೊಂಡು ಸಂಪುಟ ರಚಿಸಿ ಕಾರ್ಯ ಮುಂದುವರಿಸಿದ ಉದಾಹರಣೆಗಳಿವೆ. ಕುಮಾರಸ್ವಾಮಿಯವರೊಂದಿಗೆ ಕಾಂಗ್ರೆಸ್​ನ ಪರಮೇಶ್ವರ ಪ್ರಮಾಣವಚನ ಸ್ವೀಕರಿಸಿದರೂ ಸರ್ಕಾರದ ಆಡಳಿತ ಯಂತ್ರಕ್ಕೆ ಚಾಲನೆ ಸಿಗದ ಕಾರಣ, ಬೇಷರತ್ ಎನ್ನುವುದಕ್ಕೆ ಬ್ಲಾ್ಯಕ್​ವೆುೕಲ್ ಎಂಬ ಅರ್ಥವೂ ಇದೆಯೇ ಎಂಬ ಅನುಮಾನ ಮೂಡುವಂತಾಗಿದೆ.

ಹೊಸ ಸರ್ಕಾರ ಬಂದು ವಾರ ಸಂದು ಹೋಗಿದೆ. ವಿರೋಧ ಪಕ್ಷಕ್ಕಿಂತ ಹೆಚ್ಚು ಸ್ಥಾನಬಲ ಹೊಂದಿರುವ ಸಮ್ಮಿಶ್ರ ಆಡಳಿತ ಪಕ್ಷ ನಿರಾತಂಕ ಸ್ಥಿತಿಯಲ್ಲಿ ತಾನು ಪ್ರಕಟಿಸಿದ ಜನಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯಾವ ಅಡ್ಡಿಯೂ ಇರಬಾರದಾಗಿತ್ತು. ಎಚ್​ಡಿಕೆ ಹೇಳುತ್ತಿರುವ ಮತ್ತು ಅವರ ಪಕ್ಷದ ಪ್ರಣಾಳಿಕೆ ಹೇಳಿದಂತೆ ಅವರ ಆಶಯಗಳಲ್ಲಿ ಬಹುಮುಖ್ಯವಾದುದೆಲ್ಲ ಅಧಿಕಾರ ವಹಿಸಿಕೊಂಡ 24 ತಾಸಿನಲ್ಲಿ ಅಮಲಿಗೆ ಬರಬೇಕಿತ್ತು. ಅತಂತ್ರ ಸ್ಥಿತಿಯಲ್ಲಿ ಸರ್ಕಾರ ರಚನೆಯಾದರೆ ಮೊದಲ ಬಲಿ ನಾಗರಿಕ ಹಿತದ್ದು. ಇಲ್ಲಿಯೂ ಅದೇ ಅವಸ್ಥೆಯನ್ನು ಜನ ನೋಡಬೇಕಾಗಿದೆಯೋ ಎಂಬ ಆತಂಕ ಸಹಜವಾಗಿದೆ.

ಸರ್ಕಾರ ರಚನೆಯ ನಂತರದಲ್ಲಿ ಕಾಂಗ್ರೆಸ್ ಒಡ್ಡುತ್ತಿರುವ ಅಡೆತಡೆಯನ್ನೂ, ಕಿರಿಕಿರಿಯನ್ನೂ ನೋಡಿದರೆ ಬ್ಲಾ್ಯಕ್​ವೆುೕಲ್ ಅಲ್ಲದೆ ಬೇರೆ ಇನ್ಯಾವ ಶಬ್ದ ಬಳಸಬಹುದು ಎಂಬುದು ಗೊತ್ತಾಗಲಿಲ್ಲ. 33 ಜನರನ್ನು ಸಚಿವರನ್ನಾಗಿ ತೆಗೆದುಕೊಳ್ಳಲು ಅವಕಾಶವಿದ್ದರೂ ಮೂರು ಜನರನ್ನೂ ಒಳಗೊಳ್ಳಲು ಇನ್ನೂ ಆಗಿಲ್ಲ ಎಂದರೆ ಕಾಂಗ್ರೆಸ್ ಒಡ್ಡುತ್ತಿರುವ ಒತ್ತಡವನ್ನು ಯಾರೂ ಊಹಿಸಬಹುದಾಗಿದೆ. ಕಾಂಗ್ರೆಸ್ ಪಟ್ಟಿ ಸಿಗದ ಮಾತ್ರಕ್ಕೆ ಜೆಡಿಎಸ್ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಾವ ಅಡ್ಡಿಯೂ ಮುಖ್ಯಮಂತ್ರಿಗೆ ಇರಲಿಲ್ಲ. ಸಂಪುಟ ರಚಿಸುವುದು, ಕ್ರಮೇಣ ಅದನ್ನು ವಿಸ್ತರಿಸುವುದು ಯಾವ ಕಾಲಕ್ಕೂ ಇದ್ದದ್ದೇ. ನಾಲ್ವರೋ ಐವರೋ ಜೆಡಿಎಸ್ ಶಾಸಕರಿಗೆ ಮಂತ್ರಿಗಿರಿ ನೀಡಿ, ಸಚಿವ ಖಾತೆಯನ್ನು ನಂತರದಲ್ಲಿ ಹಂಚಲು ಅವಕಾಶವಿದ್ದರೂ ಎಚ್​ಡಿಕೆ ಆ ನಿಟ್ಟಿನಲ್ಲಿ ಯಾಕಾಗಿ ಯೋಚನೆ ಮಾಡಲಿಲ್ಲವೋ? ಸಚಿವ ಸಂಪುಟದ ವಿಸ್ತರಣೆ, ಯಾರಿಗೆ ಯಾವ ಖಾತೆಯನ್ನು ನೀಡಬೇಕು ಎನ್ನುವುದೆಲ್ಲ ಮುಖ್ಯಮಂತ್ರಿಯ ಪರಮಾಧಿಕಾರ ಎಂಬ ಮಾತು ಎಷ್ಟು ಟೊಳ್ಳು, ಬೊಗಳೆ ಎನ್ನುವುದಕ್ಕೆ ವಾರವೆಲ್ಲ ನಡೆದ ವಿದ್ಯಮಾನ ಪುಷ್ಟಿ ನೀಡುತ್ತದೆ.

ಹೌದು, ಸಮ್ಮಿಶ್ರ ಸರ್ಕಾರವನ್ನು ನಡೆಸುವುದು ಹೇಳಿದಷ್ಟು ಸುಲಭವಲ್ಲ. ಈ ಕಷ್ಟ ಈ ಮುಖ್ಯಮಂತ್ರಿಗೆ ಹೊಸದೇನೂ ಅಲ್ಲ. ಆದರೆ ಸ್ವರೂಪ ಭಿನ್ನವಾಗಿದೆ. ತಮಗೆ ತಂದೆ ಮಾರ್ಗದರ್ಶನ ಸಾಕು ಎನ್ನುತ್ತಿದ್ದ ಎಚ್​ಡಿಕೆ, ಕೈ ಹೈಕಮಾಂಡ್​ಗೆ ಜೈ ಹೇಳಬೇಕಾದ ಪ್ರಮೇಯ ಎದುರಾಗಿದೆ. ಅವರು ಅಧಿಕಾರ ಸ್ವೀಕರಿಸಿದ ನಂತರದಲ್ಲಿ ರಾಜ್ಯದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಿಂದ ಅನಾಹುತವಾಯಿತು. ಕಾರ್ಯಬಾಹುಳ್ಯದಿಂದಾಗಿ ಮುಖ್ಯಮಂತ್ರಿ ಹೋಗುವುದಾಗಲಿಲ್ಲ. ಆದರೆ ಉಪ ಮುಖ್ಯಮಂತ್ರಿಯೂ ಭೇಟಿ ನೀಡಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಮುಖ್ಯಮಂತ್ರಿ ಸೂಚಿಸಿದರೋ ಇಲ್ಲವೋ ಗೊತ್ತಿಲ್ಲ. ಇರುವುದು ಇಬ್ಬರುಳ್ಳ ಸರ್ಕಾರ. ಅದೂ ತಮ್ಮ ಪಾಲಿಗೆ ಇಲ್ಲವಾಯಿತೇ ಎಂದು ಕರಾವಳಿಯ ಜನ ಕಣ್ಣೀರು ಹಾಕಿದರೆ ಅದನ್ನು ಯಾರು ಒರೆಸಬೇಕು?

ಪರಮೇಶ್ವರ್ ತಾವಾಗೇ ಕರಾವಳಿ ಸಂಕಷ್ಟವನ್ನು ನೋಡಿಬರುವುದಾಗಿ ಮುಖ್ಯಮಂತ್ರಿಗೆ ಹೇಳಿ ಹೊರಡಬಹುದಾಗಿತ್ತು. ರೈತ ಸಮುದಾಯದೊಂದಿಗೆ ಮುಖ್ಯಮಂತ್ರಿ ನಡೆಸಿದ ಸಂವಾದದಲ್ಲಿ ಪಾಲ್ಗೊಂಡ ಅವರು ವಿಧಾನಸೌಧದಲ್ಲೇ ಉಳಿದರು. ಮುಖ್ಯಮಂತ್ರಿ ಹೇಳಲಿಲ್ಲ, ಇವರಾಗಿ ಹೊರಡಲಿಲ್ಲ. ಜೆಡಿಎಸ್​ನ ಕೆಲವರಾದರೂ ಸಂಪುಟದಲ್ಲಿದ್ದಿದ್ದರೆ ಅವರಲ್ಲಿ ಒಬ್ಬರನ್ನಾದರೂ ಮಂಗಳೂರಿಗೆ ಹೋಗಿ ಬರುವಂತೆ ಮುಖ್ಯಮಂತ್ರಿ ಸೂಚಿಸಬಹುದಾಗಿತ್ತು.

ಬೇಷರತ್ ಬೆಂಬಲ ಎಂಬ ಹುತ್ತದ ಒಳಗಿನಿಂದ ಷರತ್ತೆಂಬ ಒಂದೊಂದೇ ಹಾವು ಇಣುಕಲಾರಂಭಿಸಿರುವುದು ಸಹಜವಾಗಿಯೇ ಕುಮಾರಸ್ವಾಮಿಯವರ ತಲೆನೋವನ್ನು ಹೆಚ್ಚಿಸಿರುವ ಬೆಳವಣಿಗೆ. ‘ಪುಣ್ಯಾತ್ಮ ರಾಹುಲ್ ಗಾಂಧಿಯವರ ಕೃಪೆಯಿಂದ’ ಮುಖ್ಯಮಂತ್ರಿ ತಾನಾಗಿರುವುದಾಗಿ ಹೇಳಿಕೊಂಡಿರುವ ಕುಮಾರಸ್ವಾಮಿ ಸ್ವಾಭಿಮಾನವನ್ನು ಒತ್ತೆ ಇಡುವಂಥ ಒತ್ತಡದ ಸನ್ನಿವೇಶವನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆಯೇ ಎಂಬ ಅನುಮಾನವೂ ಬರುತ್ತಿದೆ. ಜನರ ಸೇವೆಗಾಗಿ ಶಾಸಕರಾಗಬೇಕೆಂಬ ಮಾತನ್ನು ರಾಜಕಾರಣಿಗಳು ಹೇಳುತ್ತಾರೆ. ಶಾಸಕರಾದ ನಂತರದಲ್ಲಿ ಸಚಿವರಾದರೆ ಮಾತ್ರವೇ ಜನಸೇವೆಯನ್ನು ಮಾಡಲು ಸಾಧ್ಯ ಎಂದು ಅದೇ ಜನರನ್ನು ನಂಬಿಸುತ್ತಾರೆ. ಸಚಿವರಾದ ಕ್ಷಣವೇ ಇಂಥದೇ ಖಾತೆ ಬೇಕೆಂದು ಪಟ್ಟು ಹಿಡಿಯುತ್ತಾರೆ. ಜನಸೇವೆಯೇ ಉದ್ದೇಶವಾದರೆ ಯಾವ ಖಾತೆಯಲ್ಲೂ ಅದಕ್ಕೆ ಅವಕಾಶವಿದ್ದೇ ಇದೆ. ಇಂಥ ಸನ್ನಿವೇಶದಲ್ಲಿ ರಾಜಕಾರಣಿಗಳ ಅಂತರಂಗ ಬಹಿರಂಗ ಬೇರೆ ಬೇರೆಯಾಗುತ್ತದೆ. ಇಲ್ಲಿ ಬಿ. ಬಸವಲಿಂಗಪ್ಪ ನೆನಪಾಗುತ್ತಾರೆ. ರಾಜ್ಯ ಕಂಡ ಅತ್ಯಂತ ಸಮರ್ಥ ಆಡಳಿತಗಾರರಲ್ಲಿ ಒಬ್ಬರೆನಿಸಿದ್ದು ಅವರ ಕಾರ್ಯಕ್ಷಮತೆಗಾಗಿ. 90ರ ದಶಕದಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿ. ವೀರೇಂದ್ರ ಪಾಟೀಲರ ಸಂಪುಟದಲ್ಲಿ ಪ್ರಮುಖ ಖಾತೆ ಹೊಂದಿದ್ದ ಬಸವಲಿಂಗಪ್ಪನವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಂಗಾರಪ್ಪನವರಿಗೆ ಸುತರಾಂ ಇಷ್ಟವಿರಲಿಲ್ಲ. ಹಾಗಂತ ಬಿಡುವಂತೆಯೂ ಇರಲಿಲ್ಲ. ಅತ್ಯಂತ ನೀರಸ ಎಂದು ಬಣ್ಣಿಸಲಾಗುತ್ತಿದ್ದ ಪರಿಸರ-ಅರಣ್ಯ ಖಾತೆಯನ್ನು ಅವರ ತಲೆಗೆ ಕಟ್ಟಿದರು. ಒಂದೆರಡು ತಿಂಗಳು ಖಾತೆಯ ಒಳಹೊರಗನ್ನು ಗಂಭೀರವಾಗಿ ಅಧ್ಯಯನ ಮಾಡಿದ ಬಸವಲಿಂಗಪ್ಪ, ಬಾರುಕೋಲನ್ನು ಕೈಗೆತ್ತಿಕೊಂಡರು. ಮುಖ್ಯಮಂತ್ರಿ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದ ಸಿರಿವಂತ ಉದ್ಯಮಿಗಳು ಬಿಲ್ಡರುಗಳನ್ನೆಲ್ಲ ತಮ್ಮ ಮುಂದೆ ಮಂಡಿಯೂರುವಂತೆ ಮಾಡಿದರು. ಇಂಥದೇ ಖಾತೆ ಬೇಕೆಂದು ವರಾತ ಹಾಕುವವರು ಬಸವಲಿಂಗಪ್ಪ ಮಾದರಿ ನೋಡಬೇಕು. ಈಗ ಸಂಪುಟದಲ್ಲಿ ಅತ್ಯಂತ ಬೇಡಿಕೆಯ ಖಾತೆಗಳಲ್ಲಿ ಪರಿಸರದ್ದೂ ಒಂದು!

ಸಂಪುಟ ವಿಸ್ತರಣೆಯನ್ನು ಜನ ನಂಬುವಂಥ ಕಾರಣವಿಲ್ಲದೆ ಮುಂದಕ್ಕೆ ಹಾಕುವ ಕ್ರಮ ಸರ್ಕಾರದ ವಿಶ್ವಾಸಾರ್ಹತೆಯ ಬಲಿ ಬೇಡುತ್ತದೆ. ರೈತ ಸಮುದಾಯದ ಆಕ್ರೋಶವನ್ನು ತುಸು ಮಟ್ಟಿಗಾದರೂ ಶಮನ ಮಾಡಿರುವ ಮುಖ್ಯಮಂತ್ರಿ ಅದಕ್ಕೆ ಹದಿನೈದು ದಿವಸದ ಕಾಲಾವಧಿಯನ್ನು ತೆಗೆದುಕೊಂಡಿದ್ದಾರೆ. ಅದೇ ಕಾಲಕ್ಕೆ ಚುನಾಯಿತ ಪ್ರತಿನಿಧಿಗಳ, ಶ್ರೀಮಂತರ ಸಾಲಮನ್ನಾ ಮಾಡುವುದಿಲ್ಲ ಎಂಬ ಸ್ವಾಗತಾರ್ಹ ಹೇಳಿಕೆಯನ್ನೂ ಮಾಡಿದ್ದಾರೆ. ಈ ಮಾತಿಗೆ ಅವರ ಪಕ್ಷದವರಿಂದಲೇ ವಿರೋಧ ಎದುರಾಗಬಹುದು. ಮುಖ್ಯಮಂತ್ರಿ ಈ ವಿಚಾರದಲ್ಲಿ ಕಠೋರ ನಿಲುವನ್ನು ತಾಳಿದಷ್ಟೂ ಅವರ ವಿಚಾರದಲ್ಲಿ ಜನಮಾನಸ ಹೆಚ್ಚು ಗೌರವವನ್ನು ವ್ಯಕ್ತಪಡಿಸುತ್ತದೆ.

ಅಧಿಕಾರಿಗಳ ವರ್ಗಾವಣೆ, ನಿಗಮ, ಮಂಡಳಿಗಳ ಅಧ್ಯಕ್ಷ/ಸದಸ್ಯರಿಗೆ ಸ್ಥಾನ ತೆರವು ಮಾಡಲು ಸೂಚಿಸಿರುವುದು ಮಿತ್ರಪಕ್ಷಕ್ಕೆ ಇಷ್ಟವಾಗಲಿಕ್ಕಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಶ್ನಾತೀತರೆನಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ಕೆಂಪಯ್ಯ, ಗೃಹ ಸಚಿವರ ಸಲಹೆಗಾರನಾಗಿ ಮುಂದುವರಿಯುವ ಅಗತ್ಯವಿಲ್ಲ ಎಂಬ ಕುಮಾರಸ್ವಾಮಿಯವರ ನಿಲುವು ಅಷ್ಟೆಲ್ಲ ಸುಲಭದಲ್ಲಿ ಗಾಳಿಯಲ್ಲಿ ಹೋಗುವುದಿಲ್ಲ. ಬೇರೆ ಬೇರೆ ರೂಪದಲ್ಲಿ ಅದು ಮುಂದಿನ ದಿನಗಳಲ್ಲಿ ಕಾಡಲಿದೆ.

Leave a Reply

Your email address will not be published. Required fields are marked *

Back To Top