ಅಖಿಲೇಶ್-ಮಾಯಾ ಜಾಲ ಕೈಗೆ ಆತಂಕದ ಕಾಲ

ರಾಜಕೀಯ ಮುನಿಸು, ವೈಮನಸ್ಯ ವಿರೋಧದ ನೆಲೆಯಲ್ಲಿ ಮಾತ್ರವೇ ಅಲ್ಲದೆ ಮಿತ್ರಪಕ್ಷಗಳ ನಡುವೆಯೂ ಸಹಜ. ಸಮುದ್ರದ ಅಲೆ ದಡವನ್ನು ಒದ್ದುಹೋಗುವ ಹಾಗೆ. ಉತ್ತರಪ್ರದೇಶದ ಇತ್ತೀಚಿನ ರಾಜಕಾರಣ ಸಹಜವನ್ನೆಲ್ಲ ಅಸಹಜವನ್ನಾಗಿಸಿದೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮತ್ತು ಅಖಿಲೇಶ್ ಯಾದವ್ ಮುಖಂಡತ್ವದ ಸಮಾಜವಾದಿ ಪಕ್ಷಗಳು ತಮ್ಮ ಮಧ್ಯದ ವೈಮನಸ್ಯ ಮುನಿಸನ್ನೆಲ್ಲ ಪಕ್ಕಕ್ಕೆ ಸರಿಸಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಹೋರಾಡಲು ತೀರ್ವನಿಸಿವೆ. ಈ ಮೈತ್ರಿಯಿಂದ ಕಾಂಗ್ರೆಸ್ಸನ್ನು ದೂರವಿಡುವ ತೀರ್ವನಕ್ಕೆ ಬಂದಿರುವುದು 130 ವರ್ಷ ಹಳೆಯದಾದ ಆ ಪಕ್ಷದ ಪಾಲಿಗೆ ಆಘಾತವನ್ನು ತಂದಿದೆ. ಕಾಂಗ್ರೆಸ್​ನ ಪ್ರಶ್ನಾತೀತ ನಾಯಕಿ ಸೋನಿಯಾ ಗಾಂಧಿಯಾಗಲಿ, ಭವಿಷ್ಯದ ಪ್ರಧಾನಿ ಎಂದು ಬಿಂಬಿತವಾಗುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಾಗಲಿ ಕನಸು ಮನಸಿನಲ್ಲೂ ಎಣಿಸಿರದ ಬೆಳವಣಿಗೆ ಇದು. 80 ಲೋಕಸಭಾ ಕ್ಷೇತ್ರವುಳ್ಳ ಉತ್ತರಪ್ರದೇಶದಲ್ಲಿ ಗರಿಷ್ಠ ಸ್ಥಾನ ಗೆಲ್ಲುವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಮತ್ತು ಅಲ್ಲಿಂದ ಆ ಪಕ್ಷದಿಂದ ಆಯ್ಕೆಯಾದವರು ಪ್ರಧಾನಿಯಾಗುತ್ತಾರೆ ಎನ್ನುವುದು ಪ್ರತೀತಿ. 2014ರ ಚುನಾವಣೆಯಲ್ಲಿ 80ರಲ್ಲಿ 71 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರೂ ವಾರಾಣಸಿ ಕ್ಷೇತ್ರವನ್ನು ಉಳಿಸಿಕೊಂಡ ಮೋದಿ ಪ್ರಧಾನಿಯಾದರು. ಜವಾಹರಲಾಲ್ ನೆಹರು, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ಚರಣ್ ಸಿಂಗ್, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ಅಟಲ್ ಬಿಹಾರಿ ವಾಜಪೇಯಿ ಸಾಲಿಗೆ ಮೋದಿಯೂ ಒಂದರ್ಥದಲ್ಲಿ ‘ಯುಪಿವಾಲಾ’ ಆಗಿ ಸೇರ್ಪಡೆಯಾದವರು.

ಉತ್ತರಪ್ರದೇಶವನ್ನು ಕಬ್ಜಾಕ್ಕೆ ತೆಗೆದುಕೊಳ್ಳುವುದಕ್ಕೆ ನಡೆಯುತ್ತಿರುವ ಪೈಪೋಟಿಗೆ ಇದೇ ಕಾರಣ. ಬಿಜೆಪಿಯನ್ನು ಮಣಿಸುವುದಕ್ಕೆ ಪರಸ್ಪರ ಕೈಜೋಡಿಸದೆ ಅನ್ಯಮಾರ್ಗವಿಲ್ಲ ಎನ್ನುವುದನ್ನು ಅರಿತೇ ಮಾಯಾವತಿ ಮತ್ತು ಅಖಿಲೇಶ್ ಮುಂದಡಿ ಇರಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೆರವಾಗುವ ಬದಲಿಗೆ ಹೊರೆಯಾದೀತು ಎಂಬ ಲೆಕ್ಕಾಚಾರ ಈ ಇಬ್ಬರದಾಗಿರುವಂತಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ರಾಜ್ಯಗಳ ವಿಧಾನಸಭಾ ಚುನಾವಣೆ ಗೆದ್ದ ನಂತರದಲ್ಲಿ ಕಾಂಗ್ರೆಸ್ ನಾಯಕತ್ವದ ಮನಃಸ್ಥಿತಿ ಬದಲಾಗಿದೆ; ಯಾರು ಜತೆಗೆ ಬರದಿದ್ದರೂ ಗೆಲುವು ತಮ್ಮದೇ ಎಂಬ ಭಾವನೆಯಲ್ಲಿ ಆ ಪಕ್ಷ, ನೆಲದ ವಾಸ್ತವವನ್ನು ಮರೆತು ಗೆಳೆತನವನ್ನು ನಿರ್ಲಕ್ಷಿಸುತ್ತಿರುವುದು ಪ್ರಶ್ನಾರ್ಹ ಎನ್ನುವುದು ಬಿಎಸ್​ಪಿ, ಎಸ್ಪಿ ನಿಲುವು. ಈ ನಿಲುವಿನ ಮುಂದುವರಿದ ಅಧ್ಯಾಯವೋ ಎಂಬಂತೆ ತಮ್ಮಿಬ್ಬರ ಮೈತ್ರಿ ನಡುವೆ ಕಾಂಗ್ರೆಸ್​ಗೆ ಜಾಗ ಇಲ್ಲದಂತೆ ಮಾಡಿವೆ. 80 ಸ್ಥಾನಗಳ ಪೈಕಿ ತಲಾ 38 ಸ್ಥಾನ ಈ ಎರಡು ಪಕ್ಷಗಳಲ್ಲಿ ಹಂಚಿಕೆಯಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ 80 ಸ್ಥಾನದ ಪೈಕಿ ರಾಯ್ಬರೇಲಿ ಮತ್ತು ಅಮೇಠಿ ಕ್ಷೇತ್ರಗಳನ್ನು ಮಾತ್ರವೇ ಗೆಲ್ಲುವುದು ಕಾಂಗ್ರೆಸ್​ಗೆ ಸಾಧ್ಯವಾಗಿತ್ತು. ಆಗ ಸೋನಿಯಾ, ರಾಹುಲ್ ಗೆಲುವಿಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಇಲ್ಲವಾಗಿದ್ದುದೂ ಒಂದು ಕಾರಣವಾಗಿತ್ತು. ಇದನ್ನು ಕಾಂಗ್ರೆಸ್​ನ ಉಭಯ ನಾಯಕರೂ ಮರೆತವರಂತೆ ವರ್ತಿಸುತ್ತಿದ್ದಾರೆನ್ನುವ ದೂರು ಸಮಾಜವಾದಿ ಪಕ್ಷದ್ದು. ನಂತರದ ದಿನಗಳಲ್ಲಿ ವಿವಿಧ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಒಂದಲ್ಲ ಒಂದು ಕಡೆಯಲ್ಲಿ ಬಿಎಸ್​ಪಿ ಅಥವಾ ಎಸ್ಪಿ ನೀಡಿದ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು ಹೌದಾದರೂ ಕ್ರಮೇಣ ಕಾಂಗ್ರೆಸ್ ನಾಯಕತ್ವ ಅದನ್ನೂ ಮರೆತು ತಾನುಂಟೋ ಮೂರು ಲೋಕವುಂಟೋ ಎಂದು ಹೊರಟಿದ್ದು ಕೂಡ ಈಗಿನ ರಾಜಕೀಯ ಬೆಳವಣಿಗೆಗೆ ಕಾರಣ ಎನ್ನುವುದನ್ನು ಮರೆಯಲಾಗದು. ರಾಹುಲ್​ರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಮೊದಲಿಗರಲ್ಲಿ ಮಾಯಾವತಿಯವರೂ ಒಬ್ಬರು. ಇಷ್ಟೆಲ್ಲ ಇದ್ದರೂ ಸೋನಿಯಾ, ರಾಹುಲ್ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇರಲು ಈ ಎರಡು ಪಕ್ಷಗಳು ತೆಗೆದುಕೊಂಡ ತೀರ್ವನವನ್ನು ಭಿಕ್ಷೆ ಎಂದು ತಿರಸ್ಕರಿಸದೆ ಪ್ರಸಾದವೆಂದು ಕೈಯೊಡ್ಡಿ ಸ್ವೀಕರಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್​ಗೆ ಎದುರಾಗಿದೆ. ‘ಈ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದೇವೆ, ಉಳಿಸಿಕೊಳ್ಳಿ’ ಎಂಬ ಸಂದೇಶವೂ ಮಾಯಾವತಿ, ಅಖಿಲೇಶ್ ಕಡೆಯಿಂದ ಸೋನಿಯಾ, ರಾಹುಲ್​ಗೆ ರವಾನೆಯಾಗಿದೆ. ಕಾಂಗ್ರೆಸ್​ಗೆ ಇದು ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪ.

ಎನ್​ಡಿಎ 2014ರ ಚುನಾವಣೆಯಲ್ಲಿ 73 ಕ್ಷೇತ್ರ (ಬಿಜೆಪಿ 71, ಅಪ್ನಾ ದಳ 2) ಜೈಸಿದ್ದು ಮಾತ್ರವಲ್ಲದೆ ಚಲಾವಣೆಯಾದ ಮತದಲ್ಲಿ ಪ್ರತಿಶತ 42.3ರಷ್ಟನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಸಮಾಜವಾದಿ ಪಕ್ಷ 5 ಸೀಟು ಗೆದ್ದು ಶೇ.22.2 ಮತಗಳನ್ನು ತನ್ನದಾಗಿಸಿಕೊಂಡಿತು. ಕಾಂಗ್ರೆಸ್ 2 ಸೀಟು ಗೆದ್ದು ಕೇವಲ ಶೇ. 7.5 ಮತಗಳಿಗೆ ತೃಪ್ತಿಪಟ್ಟುಕೊಂಡಿತು. ಬಿಎಸ್ಪಿಗೆ ಒಂದು ಸೀಟನ್ನೂ ಗೆಲ್ಲಲಾಗಲಿಲ್ಲವಾದರೂ, ಶೇ.19.6 ಮತಗಳನ್ನು ಗಳಿಸಿತ್ತು. ಬಿಎಸ್ಪಿ-ಎಸ್ಪಿ ಒಂದುಗೂಡಿದರೆ ಶೇ.41ಕ್ಕಿಂತ ಅಧಿಕ ಮತಗಳನ್ನು ಪಡೆಯಬಹುದು ಎನ್ನುವುದು ಆ ಪಕ್ಷಗಳ ಸ್ಥೂಲ ಲೆಕ್ಕಾಚಾರ. ಕಳೆದ ಚುನಾವಣೆಯಲ್ಲಿ ಅಬ್ಬರದ ‘ಮೋದಿ ಹವಾ’ ಇತ್ತು. ಈಗದು ತೀವ್ರತೆ ಕಳೆದುಕೊಂಡಿದೆ. ಜಿಎಸ್​ಟಿ, ನೋಟು ಅಮಾನ್ಯೀಕರಣ, ರಿಸರ್ವ್ ಬ್ಯಾಂಕಿನಲ್ಲಿ ಕೇಂದ್ರ ಸರ್ಕಾರ ನಡೆಸಿದೆ ಎನ್ನಲಾಗಿರುವ ಹಸ್ತಕ್ಷೇಪ, ಸಿಬಿಐ ವಿದ್ಯಮಾನ ಮುಂತಾದವು ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ಮೋದಿ ವರ್ಚಸ್ಸು ಕುಂದುವಂತೆ ಮಾಡಿರುವುದು ರಾಜಕೀಯವಾಗಿ ತಮಗೆ ಲಾಭ ತಂದುಕೊಡಬಹುದೆಂದು ಈ ಮಿತ್ರಪಕ್ಷಗಳು ಭಾವಿಸಿವೆ. 2014ರಲ್ಲಿ ಬಿಜೆಪಿ/ಎನ್​ಡಿಎ ಗಳಿಸಿದ್ದ ಶೇ.42.3ರಷ್ಟಿದ್ದ ಮತಪ್ರಮಾಣ ಆಡಳಿತ ಪಕ್ಷದ ಕುಂದಿರುವ ವರ್ಚಸ್ಸಿನ ಕಾರಣವಾಗಿಯೇ ಕೆಳಗಿಳಿಯಲಿದೆ ಎನ್ನುವುದು ಮಿತ್ರಪಕ್ಷಗಳ ಈ ಭಾವನೆಗೆ ಪೂರಕವಾಗಿರುವ ಅಂಶ.

ಗುಟ್ಟುಬಿಡದೆ ಕೊಟ್ಟ ‘ಕೈ’: ಮಾಯಾವತಿ, ಅಖಿಲೇಶ್ ಗುಟ್ಟುಬಿಟ್ಟುಕೊಡದೆ ‘ಕೈ’ ಕೊಡಬಹುದೆನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷಿಸಿರಲಿಲ್ಲ. ಮಹಾಘಟಬಂಧನ್ ಕೋಟೆಯಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿರುವ ಬಿರುಕನ್ನು ಮುಚ್ಚುವ ಕೆಲಸದಲ್ಲಿ ತಲ್ಲೀನವಾಗಿದ್ದ ‘ಕೈ’ ನಾಯಕತ್ವ ತನ್ನ ಕನಸಿನ ಕೋಟೆಯ ಮಹಾದ್ವಾರವೇ ಕುಸಿದುಬಿದ್ದೀತೆಂದು ಭಾವಿಸಿರಲಿಲ್ಲ. ಉತ್ತರಪ್ರದೇಶದಲ್ಲಿ ಬಿಜೆಪಿ, ಎಸ್ಪಿ, ಬಿಎಸ್​ಪಿ ಹೊರತಾಗಿಸಿದರೆ ದೊಡ್ಡ ಪ್ರಮಾಣದಲ್ಲಿ ಮತಗಳಿಕಾ ಸಾಮರ್ಥ್ಯದ ಪ್ರಭಾವವುಳ್ಳ ಇನ್ನೊಂದು ಪಕ್ಷವಿಲ್ಲ. ಕಳೆದ ಚುನಾವಣೆಯಲ್ಲಿ 80ರ ಪೈಕಿ 2 ಸೀಟನ್ನಷ್ಟೇ ಗೆದ್ದ ಕಾಂಗ್ರೆಸ್, ಇತರ 3 ಕ್ಷೇತ್ರಗಳಲ್ಲಷ್ಟೇ 2ನೇ ಸ್ಥಾನದಲ್ಲಿತ್ತು. ಇನ್ನುಳಿದ 75 ಕ್ಷೇತ್ರಗಳಲ್ಲಿ 3 ಇಲ್ಲವೇ 4ನೇ ಸ್ಥಾನಕ್ಕೆ ಅದು ಇಳಿದಿತ್ತು. ಬಿಎಸ್​ಪಿ ಅಥವಾ ಎಸ್ಪಿ ಬೆಂಬಲವಿಲ್ಲದೆ ಕಾಂಗ್ರೆಸ್​ಗೆ ಗೆಲುವು ಅಸಾಧ್ಯ ಎನ್ನುವುದು ರಾಜ್ಯದಲ್ಲಿ ನಡೆದ ಅನೇಕ ಸ್ಥಳೀಯಸಂಸ್ಥೆ ಚುನಾವಣೆ ಫಲಿತಾಂಶದಲ್ಲಿಯೂ ವ್ಯಕ್ತವಾಗಿರುವ ಅಂಶ. ಹೀಗಿದ್ದೂ ತಮ್ಮನ್ನು ಲೆಕ್ಕಕ್ಕೆ ಇಲ್ಲ ಎಂಬಂತೆ ನೋಡುತ್ತಿರುವ ಕಾಂಗ್ರೆಸ್​ಗೆ ಪಾಠ ಕಲಿಸಲೆಂದೇ ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. 2014ರ ಲೋಕಸಭಾ ಚುನಾವಣೆಯೂ ಸೇರಿದಂತೆ ರಾಜ್ಯದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಎಲ್ಲ ಚುನಾವಣೆಯಲ್ಲೂ ಹಾವು-ಮುಂಗುಸಿಯಂತೆ ಕಚ್ಚಾಡಿ ಕಾದಾಡಿದ್ದ ಬಿಎಸ್ಪಿ-ಎಸ್ಪಿ ಅನುಕೂಲಸಿಂಧು ರಾಜಕಾರಣದ ಭಾಗವಾಗಿ ಮಿತ್ರತ್ವದ ಬೆಸುಗೆಯಲ್ಲಿ ಒಂದಾಗಿವೆ. ಈ ಅನಿವಾರ್ಯಕ್ಕೆ ಅವುಗಳಿಗಿರುವ ಕಾರಣ ಬಿಜೆಪಿ ಬಲ.

ಲೋಕಸಭಾ ಚುನಾವಣೆ ನಂತರ ಉತ್ತರಪ್ರದೇಶ ವಿಧಾನಸಭೆಗೂ 2017ರಲ್ಲಿ ಚುನಾವಣೆ ನಡೆಯಿತು. ಆ ಚುನಾವಣೆಯಲಿ ್ಲ03 ಸ್ಥಾನಗಳಲ್ಲಿ 312 ಸೀಟು ಬಿಜೆಪಿ/ಎನ್​ಡಿಎ ಪಾಲಾಯಿತು. ಮೂರನೇ ಎರಡಕ್ಕಿಂತ ಅಧಿಕ. ಮೋದಿ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ ನೀತಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಿಕಷಕ್ಕೆ ಒಳಗಾಯಿತು. ಪ್ರಚಾರದಲ್ಲಿ ವಿಪಕ್ಷಗಳು ಪ್ರಮುಖ ಅಸ್ತ್ರವಾಗಿ ಬಳಸಿದ್ದು ಇದನ್ನೇ. ಅದು ಪೂರ್ತಿಯಾಗಿ ಹುಸಿಹೋಗಲಿಲ್ಲ. ಕೇವಲ 3 ವರ್ಷದ ಹಿಂದೆ ಇದೇ ರಾಜ್ಯದಲ್ಲಿ ಶೇ. 42.3ರಷ್ಟು ಮತ ಗಳಿಸಿದ್ದ ಬಿಜೆಪಿ/ಎನ್​ಡಿಎ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದು ಶೇ.39.7 ಮತಗಳನ್ನು. ಅಂದರೆ ಶೇ.2.6ರಷ್ಟು ಕುಸಿತ. ಇಷ್ಟಾಗಿಯೂ ಬಿಜೆಪಿ ಗೆಲುವು ಅಸಾಮಾನ್ಯವಾದುದೇ. ಕಾಂಗ್ರೆಸ್ ಗೆದ್ದುದು 7 ಸೀಟನ್ನು ಮಾತ್ರ. ಅದು ಗಳಿಸಿದ ಮತಪ್ರಮಾಣ ಶೇ.6.2ರಷ್ಟು. ಅದರ ಮತಗಳಿಕೆಯೂ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.1.3ರಷ್ಟು ಕುಸಿಯಿತು. ಕಾಂಗ್ರೆಸ್​ಗೆ ಹೋಲಿಸಿದರೆ ಪ್ರಾದೇಶಿಕ ಪಕ್ಷಗಳಾಗಿರುವ ಎಸ್ಪಿ, ಬಿಎಸ್ಪಿಯ ಸಾಧನೆಯೇ ಉತ್ತಮ. ಕ್ರಮವಾಗಿ ಅವು ಗಳಿಸಿದ ಸೀಟು 47 ಮತ್ತು 19. ನಗಣ್ಯ ಎನ್ನಬಹುದಾದ ಮತಕೊರತೆಯನ್ನು ಸಮಾಜವಾದಿ ಪಕ್ಷ ಕಂಡರೆ, ಬಿಎಸ್ಪಿ ಮತಗಳಿಕೆಯಲ್ಲಿ ಶೇ.2.6ರಷ್ಟು ಏರಿಕೆಯಾಯಿತು. ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲಲಾಗದ ಬಿಎಸ್ಪಿ, ವಿಧಾನಸಭಾ ಚುನಾವಣೆಯಲ್ಲಿ 19 ಸೀಟನ್ನು ಗೆದ್ದುದಲ್ಲದೆ ಮತಗಳಿಕೆ ಪ್ರಮಾಣವನ್ನೂ ಹೆಚ್ಚಿಸಿಕೊಂಡಿದ್ದು ಪ್ರವಾಹದ ವಿರುದ್ಧ ಈಜುವ ಅದರ ಸಾಮರ್ಥ್ಯವನ್ನು ಸಾದರಪಡಿಸಿತು.

ಮನುವಾದಿ ಪಕ್ಷಗಳೆಂದು ತಾನು ಉದ್ದಕ್ಕೂ ಜರಿಯುತ್ತ ಬಂದಿರುವ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಪಾಠ ಕಲಿಸಲೆಂದೇ ಮಾಯಾವತಿ, ತನ್ನ ಆಜನ್ಮ ಶತ್ರುಪಕ್ಷ ಎಸ್ಪಿಯೊಂದಿಗೆ ಕೈಜೋಡಿಸಿದೆ. ಒಂದಾಗಿ ಹೋದರೆ ಮತ ವಿಭಜನೆಯನ್ನು ತಡೆಯುವ ಮೂಲಕ ಉತ್ತರಪ್ರದೇಶದಲ್ಲಿ ಹೊಸ ರಾಜಕೀಯ ಶಕೆಯನ್ನು ಆರಂಭಿಸಬಹುದೆಂಬ ಅವರಿಬ್ಬರ ದೂರದ ಯೋಚನೆಗೆ ಮೊದಲ ಬಲಿ ಕಾಂಗ್ರೆಸ್. ಕಾಂಗ್ರೆಸ್​ನ ಪರಂಪರಾಗತ ಮತಬ್ಯಾಂಕ್ ಎನಿಸಿರುವ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮತಕೋಟೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಈ ಪಕ್ಷಗಳು ಒಂದಾಗಿ ಒಡ್ಡಿರುವ ಸವಾಲನ್ನು ಸುಲಭವಾಗಿ ಎದುರಿಸುವುದು ಕಾಂಗ್ರೆಸ್​ಗೆ ಕಷ್ಟ. ಹೊಸ ಚುನಾವಣೆಗಾಗಿ ಹೊಸ ಮೈತ್ರಿಯಾಗಿರುವ ಬೆಳವಣಿಗೆಯನ್ನು ಗಂಭೀರವಾಗಿಯೇ ತೆಗೆದುಕೊಂಡಿರುವ ರಾಹುಲ್, ರಾಜ್ಯದ 80 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿದ್ದಾರೆ. ವಾರಾಣಸಿಯಲ್ಲಿ ನರೇಂದ್ರ ಮೋದಿ ಮತ್ತೆ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎನ್ನುವ ಚರ್ಚೆ ಒಂದೆಡೆ ಜೋರುಧ್ವನಿ ಪಡೆಯುತ್ತಿದೆ. ಅದೇ ಕಾಲಕ್ಕೆ ಬಿಎಸ್ಪಿ-ಎಸ್ಪಿ ವರ್ಸಸ್ ಕಾಂಗ್ರೆಸ್ ಜಟಾಪಟಿ ಕುತೂಹಲಕರ ತಿರುವು ಪಡೆಯಲಾರಂಭಿಸಿದೆ.

(ಲೇಖಕರು ಹಿರಿಯ ಪತ್ರಕರ್ತರು)